ಚಿಪ್ಸ್‌ ಕದ್ದನೆಂದು ಬೈದ ಅಂಗಡಿ ಮಾಲೀಕ- ಮನನೊಂದು ಬಾಲಕ ಆತ್ಮಹತ್ಯೆ

ಕೋಲ್ಕತ್ತಾ:

   ಚಿಪ್ಸ್‌ ಕದ್ದನೆಂದು ಬೈದಿದ್ದಕ್ಕೆ ಮನನೊಂದು ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇಲ್ಲಿನ ಮಿಡ್ನಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಚಿಪ್ಸ್‌ ಕದ್ದಿದ್ದಾನೆಂದು ಅಂಗಡಿ ಮಾಲೀಕ ಬೈದಿದ್ದ. ಇದರಿಂದ ಮನನೊಂದ 13ವರ್ಷದ ಬಾಲಕ ಪತ್ರ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಬಾಲಕನನ್ನು ಬಾಕುಲ್ದಾ ಹೈಸ್ಕೂಲ್‌ನ ಏಳನೇ ತರಗತಿಯ ವಿದ್ಯಾರ್ಥಿ ಕೃಷ್ಣೇಂದು ದಾಸ್ ಎಂದು ಗುರುತಿಸಲಾಗಿದೆ. 

   ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಬಾಲಕ ಮುಗ್ದ ಹಾಗೂ ವಿನಯವಂತನಾಗಿದ್ದ. ಭಾನುವಾರ ಮಧ್ಯಾಹ್ನ, ಆತ ಪಕ್ಕದ ಅಂಗಡಿಗೆ ತಿಂಡಿ ತರಲು ಹೋದಾಗ ಅಂಗಡಿಯಲ್ಲಿ ಯಾರು ಇರಲಿಲ್ಲ , ಹೊರಗೆ ಇಡಲಾಗಿದ್ದ ಚಿಪ್ಸ್ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಅಂಗಡಿಯ ಮಾಲೀಕ ಸುಭಂಕರ ದೀಕ್ಷಿತ್ ಅವರು ಬೈಕಿನಲ್ಲಿ ಹಿಂಬಾಲಿಸಿ ಬಾಲಕನನ್ನು ಹಿಡಿದು, ಕಳ್ಳತನದ ಆರೋಪ ಹೊರಿಸಿದ್ದಾನೆ. ಬಾಲಕ 15 ರೂಪಾಯಿಯ ಚಿಪ್ಸಿಗೆ 20 ರೂಪಾಯಿ ನೀಡಿದರೂ , ಅಂಗಡಿ ಮಾಲೀಕ ದೀಕ್ಷಿತ್ ಅವನನ್ನು ಅಂಗಡಿಗೆ ವಾಪಸ್‌ ಕರೆದುಕೊಂಡು ಹೋಗಿ, ಸಾರ್ವಜನಿಕವಾಗಿ ಆತನನ್ನು ಹಲ್ಲೆ ಮಾಡಿ, ಕಿವಿ ಹಿಡಿದು ಕ್ಷಮೆ ಕೇಳುವಂತೆ ಮಾಡಿದ್ದ. ಈ ವಿಷಯ ತಿಳಿದ ಬಾಲಕನ ತಾಯಿ ಕೂಡ ಮಗನನ್ನು ಮತ್ತೆ ಅಂಗಡಿಗೆ ಕರೆದುಕೊಂಡು ಹೋಗಿ ಅಲ್ಲಿ ಎಲ್ಲರೆದುರು ಗದರಿದ್ದಾಳೆ. ಈ ಎಲ್ಲಾ ಘಟನೆಯಿಂದ ಮನನೊಂದ ಬಾಲಕ ವಿಷ ಸೇವಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ. 

    ಇನ್ನು ಬಾಲಕ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದಾನೆ. ಆ ಪತ್ರದಲ್ಲಿ ಬಾಲಕ ಅಮ್ಮ ನಾನು ಕಳ್ಳ ಅಲ್ಲ..ಚಿಪ್ಸ್‌ ಕದ್ದಿಲ್ಲಮ್ಮ ಎಂದು ಬರೆದಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಯ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದ್ದು, ಅಂಗಡಿ ಮಾಲಿಕನ ದೀಕ್ಷಿತ್‌ ವಿರುದ್ಧ ಕಿಡಿಕಾರಿದ್ದಾರೆ. ಸದ್ಯ ಅಂಗಡಿ ಮಾಲಿಕ ದೀಕ್ಷಿತ್ ಕಾಣೆಯಾಗಿದ್ದಾನೆ ಎನ್ನಲಾಗಿದೆ.

Recent Articles

spot_img

Related Stories

Share via
Copy link