ದುಬೈನಲ್ಲೇ ಆಡಿದ್ದರಿಂದ ಭಾರತಕ್ಕೆ ಅನುಕೂಲ’ :ಟೀಕಾಕಾರರಿಗೆ ತಿರುಗೇಟು ಕೊಟ್ಟ ಆಸೀಸ್‌ ವೇಗಿ

ಸಿಡ್ನಿ:

    ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯ  ಎಲ್ಲಾ ಪಂದ್ಯಗಳನ್ನು ಭಾರತ ತಂಡ ದುಬೈ ಕ್ರೀಡಾಂಗಣದಲ್ಲೇ ಆಡಿದ ಕಾರಣ ತಂಡಕ್ಕೆ ಹೆಚ್ಚಿನ ಅನುಕೂಲ ಸಿಕ್ಕಿದೆ ಎಂದು ಹಲವರು ಟೀಕಿಸುತ್ತಿರುವ ಮಧ್ಯೆ ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌  ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ. ದುಬೈ ಪರಿಸ್ಥಿತಿಯು ಭಾರತ ತಂಡಕ್ಕೆ  ಅನುಕೂಲಕರವಾಗಿತ್ತು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

    ಕ್ರೀಡಾ ಸಂದರ್ಶನದಲ್ಲಿ ಮಾತನಾಡಿದ ಸ್ಟಾರ್ಕ್‌, ನನ್ನ ಪ್ರಕಾರ ಭಾರತ ತಂಡಕ್ಕಿಂತ ದುಬೈ ಕ್ರೀಡಾಂಗಣ ಇತರ ತಂಡದ ಆಟಗಾರರಿಗೆ ಹೆಚ್ಚಿನ ಅನುಕೂಲವಾಗಿದೆ. ಏಕೆಂದರೆ ಇತರ ತಂಡದ ಕ್ರಿಕೆಟಿಗರು ಪ್ರಪಂಚದಾದ್ಯಂತ ನಡೆಯುವ ಫ್ರಾಂಚೈಸಿ ಲೀಗ್‌ಗಳನ್ನು ಆಡುವ ಅವಕಾಶ ಹೊಂದಿದ್ದಾರೆ. ಆದರೆ, ಭಾರತೀಯ ಆಟಗಾರರ ವಿಷಯದಲ್ಲಿ ಹಾಗಲ್ಲ. ಅವರು ಕೇವಲ ತವರಿನಲ್ಲಿ ಐಪಿಎಲ್‌ ಮಾತ್ರ ಆಡುತ್ತಾರೆ. ದುಬೈನಲ್ಲಿ ನಡೆಯುವ ಟಿ10 ಲೀಗ್‌ನಲ್ಲಿಯೂ ವಿದೇಶಿ ಆಟಗಾರರು ದೊಡ್ಡ ಸಂಖ್ಯೆಯಲ್ಲಿ ಆಡುತ್ತಾರೆ. ಭಾರತ ತಂಡ ಗೆದ್ದಿರುವುದು ಆಟಗಾರರ ಸಾಮರ್ಥ್ಯದ ಬಲದಿಂದ ಹೊರತು ಒಂದೇ ತಾಣದಲ್ಲಿ ಆಡಿದ ಕಾರಣದಿಂದಲ್ಲ’ ಎಂದು ಸ್ಟಾರ್ಕ್‌ ಹೇಳಿದರು. 

    ‘ಭಾರತ ತಂಡದ ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ನನಗೇನು ಆಶ್ಚರ್ಯವಾಗಿಲ್ಲ. ಏಕೆಂದರೆ, ನಾನು ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾಗ ವರುಣ್ ಚಕ್ರವರ್ತಿ ಅವರ ಕೌಶಲ್ಯಗಳನ್ನು ಹತ್ತಿರದಿಂದ ನೋಡಿದ್ದೆ. ಚಕ್ರವರ್ತಿ ಅವರ ಸಾಮರ್ಥ್ಯ ಕಂಡು ನನಗೆ ವಿಶ್ವಾಸ ಮೂಡಿತ್ತು. ಇದು ಭಾರತದ ಯಶಸ್ಸಿಗೆ ಕಾರಣವಾಗಿರಬಹುದು’ ಎಂದು ಹೇಳಿದರು. ಸ್ಟಾರ್ಕ್‌ ಗಾಯದಿಂದಾಗಿ ಚಾಂಪಿಯನ್ಸ್‌ ಟ್ರೋಫಿ ಆಡಿರಲಿಲ್ಲ. ಮಾರ್ಚ್‌ 22 ರಿಂದ ಆರಂಭಗೊಳ್ಳುವ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ.

    ಮುಖ್ಯವಾಗಿ ಭಾರತ ತಂಡದ ಗೆಲುವಿನ ಬಗ್ಗೆ ಅತಿ ಹೆಚ್ಚು ಕೊಂಕು ಮಾತನಾಡಿದ್ದು, ಇಂಗ್ಲೆಂಡ್‌ ತಂಡದ ಮಾಜಿ ಕ್ರಿಕೆಟಿಗರು. ಇಂಗ್ಲೆಂಡ್‌ನ ಮಾಜಿ ವೇಗಿ ಹಾಗೂ ವೀಕ್ಷಕ ವಿವರಣೆಗಾರ ಜೊನಾಥನ್ ಆ್ಯಗ್ನೂ ಎಬಿಸಿ ಸ್ಪೋರ್ಟ್ಸ್‌ ಜತೆಗಿನ ಸಂದರ್ಶನದಲ್ಲಿ, ‘ಭಾರತವನ್ನು ಈ ರೀತಿ ಆದರಿಸುವುದನ್ನು ನೋಡಿದರೆ ನನಗೆ ಮಜುಗರವೆನಿಸುತ್ತದೆ’ ಎಂದು ಹೇಳಿದ್ದರು. ಆಥರ್ಟನ್ ಮತ್ತು ನಾಸಿರ್ ಹುಸೇನ್‌ ಕೂಡ ಭಾರತಕ್ಕೆ ನಿರಾಕರಿಸಲಾಗದಂಥ ಅನುಕೂಲವಿದೆ ಎಂದು ಹೇಳಿದ್ದರು. ಇದಕ್ಕೆ ಸುನೀಲ್‌ ಗವಾಸ್ಕರ್‌ ತಕ್ಕ ತಿರುಗೇಟು ಕೂಡ ನೀಡಿದ್ದರು. ಒಟ್ಟಾರೆ ಚಾಂಪಿಯನ್ಸ್‌ ಟ್ರೋಫಿ ಮುಕ್ತಾಯಗೊಂಡು ಒಂದು ವಾರ ಆಗುತ್ತಾ ಬಂದರೂ ಕೂಡ ಭಾರತ ತಂಡದ ಟೀಕೆ ಮಾತ್ರ ನಡೆಯುತ್ತಲೇ ಇದೆ. ಆದರೆ ಬಿಸಿಸಿಐ ಇದ್ಯಾವುದಕ್ಕೂ ಕ್ಯಾರೆ ಎಂದಿಲ್ಲ.