ಚೆನ್ನಪಟ್ಟಣ ಊಪಚುನಾವಣೆ : ದೋಸ್ತಿಗಳ ನಿರ್ಧಾರ ಇನ್ನೂ ನಿಗೂಢ…!

ಬೆಂಗಳೂರು

    ಚನ್ನಪಟ್ಟಣ ಉಪಚುನಾವಣೆ ಕರ್ನಾಟಕದಲ್ಲಿಯೇ ಕುತೂಹಲದ ಕಣವಾಗಿ ಮಾರ್ಪಡುತ್ತಿದೆ. ಒಂದೆಡೆ ಕಾಂಗ್ರೆಸ್​​ನಿಂದ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಕಾಳಜಿ ವಹಿಸಿದ್ದರೆ, ಇತ್ತ ಕ್ಷೇತ್ರವನ್ನು ತಮ್ಮ ಹಿಡಿತದಿಂದ ಬಿಟ್ಟುಕೊಡದೇ ಇರಬೇಕೆಂಬುದು ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ ಆಶಯ. ಆದರೆ, ಅತ್ತ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ಬಿಜೆಪಿ ಟಿಕೆಟ್​​ಗೆ ಪಟ್ಟು ಹಿಡಿದಿದ್ದು, ತೆರೆಯ ಮರೆಯಿಂದ ಕಸರತ್ತು ನಡೆಸುತ್ತಿದ್ದಾರೆ. ಪ್ರಚಾರ ಕಾರ್ಯವನ್ನೂ ಶುರು ಮಾಡಿದ್ದಾರೆ. ಇದು ಎನ್​ಡಿಎ ಮೈತ್ರಿಕೂಟದಲ್ಲಿ ಟಿಕೆಟ್ ಪೈಪೋಟಿ ಹೆಚ್ಚಿಸಿದೆ.

   ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ತಲೆನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ಹೆಚ್​ಡಿ ಕುಮಾರಸ್ವಾಮಿ ಮತ್ತೊಂದು ತಂತ್ರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಬಿಜೆಪಿ ಎಂಎಲ್​ಸಿ ಸಿಪಿ ಯೋಗೇಶ್ವರ್​ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಜೆಡಿಎಸ್ ಅಭ್ಯರ್ಥಿಯನ್ನು ಅಂತಿಮಗೊಳಿಸುವುದು ಕುಮಾರಸ್ವಾಮಿ ಲೆಕ್ಕಾಚಾರವಾಗಿದೆ.

   ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸದಲ್ಲಿರುವ ಯೋಗೇಶ್ವರ್ ಅವರನ್ನು ಮನವೊಲಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಸಿಪಿ ಯೋಗೇಶ್ವರ್ ಜತೆ ಮಾತುಕತೆ ನಡೆಸಿ ಅವರಿಗೆ ಕೇಂದ್ರದಲ್ಲಿ ನಿಗಮ ಮಂಡಳಿ ಸ್ಥಾನದ ಆಫರ್ ನೀಡಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಈ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಯೋಚನೆ ಕುಮಾರಸ್ವಾಮಿಯವರದ್ದಾಗಿದೆ.

   ಬಿಜೆಪಿ ವರಿಷ್ಠರ ಜತೆಗೆ ಯೋಗೇಶ್ವರ್ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಟಿಕೆಟ್​ಗಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಈ ಸಂದರ್ಭದಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಜತೆ ಮಾತುಕತೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಮತ್ತೊಂದೆಡೆ, ಕರ್ನಾಟಕ ಬಿಜೆಪಿ ನಾಯಕರ ಮೂಲಕ ಯೋಗೇಶ್ವರ್ ಮನವೊಲಿಕೆಗೂ ಜೆಡಿಎಸ್ ಪ್ಲ್ಯಾನ್ ಮಾಡಿದೆ.

    ಆ ಮೂಲಕ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವುದರ ಜತೆಗೆ ಒಗ್ಗಟ್ಟಾಗಿ ಕೆಲಸ ಮಾಡಿ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ತಂತ್ರ ಹೂಡುತ್ತಿದ್ದಾರೆ. ಯೋಗೇಶ್ವರ್​ರನ್ನು ವಿಶ್ವಾಸಕ್ಕೆ ಪಡೆದು, ಅವರ ಬೆಂಬಲದೊಂದಿಗೇ ಕಾಂಗ್ರೆಸ್ ಮಣಿಸುವ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂದು ಮೂಲಗಳು ಹೇಳಿವೆ.

Recent Articles

spot_img

Related Stories

Share via
Copy link
Powered by Social Snap