ವೆಲ್ಲಿಂಗ್ಟನ್:
ಅಂತಾರಾಷ್ಟ್ರೀಯ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿ ಸದ್ಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಾತ್ರ ಆಡುತ್ತಿರುವ ಟೀಮ್ ಇಂಡಿಯಾ ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಏಕದಿನ ಸ್ವರೂಪ ವೃತ್ತಿ ಜೀವನದ ಭವಿಷ್ಯದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಇದರ ನಡುವೆ ನ್ಯೂಜಿಲೆಂಡ್ ತಂಡದ ಆಟಗಾರ ಟಿಮ್ ಸೌಥಿ ಈ ಕುರಿತು ಮಾತನಾಡಿದ್ದು, ವಯಸ್ಸು ಮುಖ್ಯವಲ್ಲ, ಅವರ ಫಾರ್ಮ್ ಇರುವವರೆಗೆ ಮುಂದುವರಿಯಬೇಕು. ಉಭಯ ಆಟಗಾರರು ಟೀಮ್ ಇಂಡಿಯಾಗೆ ಇನ್ನು ಹೆಚ್ಚಿನ ಕೊಡುಗೆ ನೀಡಲಿದ್ದಾರೆ ಎಂದು ಭವಿಷ್ಯ ನುಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಭಾರತ ಕಳೆದ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರೂ, 2027ರ ಏಕದಿನ ವಿಶ್ವಕಪ್‌ಗೆ ಈ ಇಬ್ಬರು ಆಟಗಾರರು ಆಯ್ಕೆಯಾಗುವುದು ಖಚಿತವಿಲ್ಲ. ಇದರಿಂದಾಗಿ ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ. ಈ ಕುರಿತು ಬಿಸಿಸಿಐ ಆಗಲಿ ಅಥವಾ ಆಯ್ಕೆ ಮಂಡಳಿಯಾಗಲಿ ಈ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಮ್ಮ ಬ್ಯಾಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಬದಲಾವಣೆಗಳು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ರನ್ ಗಳಿಸಲು ಸಹಾಯ ಮಾಡಿವೆ. ಅವರ ಪ್ರದರ್ಶನ ಉತ್ತಮವಾಗಿರುವ ತನಕ ವಯಸ್ಸು ಅಪ್ರಸ್ತುತವಾಗುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಟಿಮ್ ಸೌಥಿ, “ಕೊಹ್ಲಿ ಇದುವರೆಗಿನ ಅತ್ಯುತ್ತಮ ಏಕದಿನ ಬ್ಯಾಟ್ಸ್‌ಮನ್ ಎಂದು ವಾದಿಸಬಹುದು ಮತ್ತು ಅವರು ಇನ್ನೂ ಪ್ರದರ್ಶನ ನೀಡುತ್ತಿದ್ದಾರೆ, ಏಕೆ ಆಡಬಾರದು? ರೋಹಿತ್ ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಶತಕ ಗಳಿಸಿದ್ದರು, ಆದ್ದರಿಂದ ಅವರು ಇನ್ನೂ ಪ್ರದರ್ಶನ ನೀಡುತ್ತಿದ್ದಾರೆ. ಅವರು ತಂಡಕ್ಕೆ ಕೊಡುಗೆ ನೀಡುತ್ತಿರುವವರೆಗೆ, ವಯಸ್ಸು ಕೇವಲ ಒಂದು ಸಂಖ್ಯೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಬಳಿಕ ವಿರಾಟ್ ಕೊಹ್ಲಿ 77ರ ಸರಾಸರಿಯಲ್ಲಿ 311 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ರೋಹಿತ್ 68ರ ಸರಾಸರಿಯಲ್ಲಿ 273 ರನ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಆಡಬೇಕೆ? ಅಥವಾ ಬೇಡವೇ? ಎಂಬುದನ್ನು ನಿರ್ಧರಿಸುವುದು ಇಬ್ಬರು ಹಿರಿಯ ಆಟಗಾರರಿಗೆ ಬಿಡಬೇಕಾದ ವಿಷಯವಾಗಿದೆ. ಮತ್ತು ಅವರು ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೆ ಅವರ ಮಾರ್ಗದರ್ಶನ ತಂಡಕ್ಕೆ ಕೊಡುಗೆ ನೀಡಬಹುದು. ಅವರನ್ನು ತಂಡದಿಂದ ಹೊರಗಿಡಲು ಯಾವುದೇ ಕಾರಣವಿಲ್ಲ ಎಂದು ಸೌಥಿ ಹೇಳಿದರು.
“ವಿಶ್ವಕಪ್‌ನಲ್ಲಿ ಆಡುವುದು ಅವರ ನಿರ್ಧಾರ ಅಂತ ನಾನು ಭಾವಿಸುತ್ತೇನೆ. ಅವರು ಇನ್ನೂ ಉನ್ನತ ಮಟ್ಟದಲ್ಲಿ ಆಡಲು ಅಗತ್ಯವಿರುವ ಎಲ್ಲವನ್ನೂ ಮಾಡಬಹುದು ಎಂದು ಭಾವಿಸಿದರೆ, ಏಕೆ ಆಡಬಾರದು? ನಾನು ಹೇಳಿದಂತೆ, ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಏಕದಿನ ಬ್ಯಾಟ್ಸ್‌ಮನ್, ಮತ್ತು ಅವರು ಏಕದಿನ ವಿಶ್ವಕಪ್‌ಗೆ ಲಭ್ಯವಿದ್ದರೆ, ತಂಡಕ್ಕೆ ಅವರು ಅಗತ್ಯ ಎಂದು ನಾನು ಭಾವಿಸುತ್ತೇನೆ,” ಎಂದು ಟಿಮ್ ಸೌಥಿ ಹೇಳಿದರು.
ಪ್ರಸ್ತುತ ಭಾರತವು ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಮೊದಲ ಎರಡು ಪಂದ್ಯಗಳ ಬಳಿಕ ಉಭಯ ತಂಡಗಳು 1-1 ಅಂತರದಲ್ಲಿ ಸರಣಿ ಸಮಬಲ ಸಾಧಿಸಿವೆ. ಇನ್ನು ವಿರಾಟ್ ಕೊಹ್ಲಿ ಅವರು ಸತತ ಎರಡು ಶತಕಗಳನ್ನು ಬಾರಿಸಿ ಡಿಸೆಂಬರ್ 6 ರಂದು ವೈಜಾಗ್‌ನಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.








