ವಿಧಾನಸಭೆಯ ವೇಳಾಪಟ್ಟಿ ಪ್ರಕಟ….!

ಬೆಂಗಳೂರು:

     ವಿಧಾನ ಮಂಡಲ ಅಧಿವೇಶನಕ್ಕೆ ಇನ್ನು ಏಳು ದಿನ ಬಾಕಿ ಇದ್ದು, ವಿಪಕ್ಷವನ್ನು ಎದುರಿಸಲು ಮತ್ತು ಸುಗಮ ಕಲಾಪಕ್ಕೆ ಸರ್ಕಾರ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.

     ರಾಜ್ಯಪಾಲರ ಭಾಷಣ, ಅದರ ಮೇಲಿನ ಚರ್ಚೆಗೆ ಇರುವ ವಿಷಯಗಳಿಗೆ ಕೊಡಬೇಕಾದ ಪ್ರತ್ಯುತ್ತರ, ಬಳಿಕ ಬಜೆಟ್ ಮಂಡನೆ, ಬಜೆಟ್ ಮೇಲಿನ ಚರ್ಚೆ, ಪ್ರತಿಪಕ್ಷದ ಕಡೆಯಿಂದ ಬರಬಹುದಾದ ನಿರ್ದಿಷ್ಟ ದಾಳಿಯನ್ನು ಹಿಮ್ಮೆಟ್ಟಿಸಲು ತನ್ನದೇ ಆದ ಅಸ್ತ್ರವನ್ನು ಆಡಳಿತ ಪಕ್ಷ ಸಿದ್ಧಪಡಿಸಿಕೊಳ್ಳುತ್ತಿದೆ.

    ಈ ಹಿಂದೆ ನಡೆದ ಅಧಿವೇಶನ ಶಾಸಕರ ಪ್ರಮಾಣ ವಚನ, ಸ್ಪೀಕರ್ ಚುನಾವಣೆಗೆ ಸೀಮಿತವಾಗಿತ್ತು. ಜುಲೈ 3ರಿಂದ 14ರವರೆಗೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ನೈಜ ಕಾಳಗಕ್ಕೆ ಅಖಾಡ ಹರಳುಕಟ್ಟುತ್ತಿದೆ.

   ಅಧಿವೇಶನವು ನಿರಂತರವಾಗಿ 12 ದಿನ ನಡೆದರೂ ಎರಡು ಭಾಗಗಳಾಗಿ ವಿಭಜನೆಯಾಗಿರುತ್ತದೆ. ಪೂರ್ವಾರ್ಧದಲ್ಲಿ ರಾಜ್ಯಪಾಲರ ಭಾಷಣ ಮತ್ತು ಭಾಷಣದ ಮೇಲಿನ ಚರ್ಚೆ, 10 ವಿಧೇಯಕಗಳ ಮಂಡನೆ, ಪರ್ಯಾಲೋಚನೆ, ಎರಡನೇ ಅವಧಿಯಲ್ಲಿ ಬಜೆಟ್ ಮಂಡನೆ, ಬಜೆಟ್ ಮೇಲಿನ ಚರ್ಚೆ ಹಾಗೂ ಅನುಮೋದನೆ ಪ್ರಕ್ರಿಯೆ ನಡೆಯುವುದು.

   ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಲು ಸಂಪುಟ ಸಭೆ ಅನುಮೋದನೆ ನೀಡಿದ್ದು, ಈ ಅಧಿವೇಶನದಲ್ಲಿ ವಿಧೇಯಕ ಹಿಂಪಡೆಯುವ ಪ್ರಕ್ರಿಯೆ ವಿಧಾನ ಮಂಡಲದಲ್ಲಿ ನಡೆಯುವುದು. ಸಹಜವಾಗಿ ಬಿಜೆಪಿ ಸರ್ಕಾರ ಕೈಗೊಂಡ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯುತ್ತಿರುವ ಕಾರಣ ಜಟಾಪಟಿ ಜೋರಾಗಿಯೇ ಇರಲಿದೆ. ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿನ ಗೊಂದಲ ಮತ್ತು ಸಚಿವರು ನೀಡಿದ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಗಳು ಸರ್ಕಾರದ ಮೇಲೆ ಮುಗಿ ಬೀಳುವುದನ್ನು ನಿರೀಕ್ಷಿಸಿರುವ ಆಡಳಿತ ಪಕ್ಷ ಕಾಂಗ್ರೆಸ್ ಅಕ್ಕಿ ನೀಡಲು ಹಿಂದೇಟು ಹಾಕಿದ ಕೇಂದ್ರ ಸರ್ಕಾರದ ನಿಲುವು ಮತ್ತು ಆಹಾರ ನಿಗಮದ ಪತ್ರಗಳನ್ನು ದಾಖಲೆಯಾಗಿ ಬಳಸಿಕೊಂಡು ಬಿಜೆಪಿಯನ್ನು ಕಟ್ಟಿಹಾಕಲು ಮಾನಸಿಕವಾಗಿ ಸಜ್ಜಾಗಿದೆ.

   ಮತ್ತೊಂದು ಪ್ರಮುಖ ಚರ್ಚಾ ಸಂಗತಿ ಎಂದರೆ ಗ್ಯಾರೆಂಟಿ ಯೋಜನೆಯ ಅಡ್ಡ ಪರಿಣಾಮ ಹಾಗೂ ರಾಜ್ಯದ ಬೊಕ್ಕಸದ ಮೇಲಿನ ದೂರಗಾಮಿ ಪರಿಣಾಮ ಕುರಿತು ರಾಜ್ಯದ ಗಮನ ಸೆಳೆಯಲು ಪ್ರತಿಪಕ್ಷಕ್ಕೆ ಅಸ್ತ್ರಗಳುಂಟು. ಅಧಿವೇಶನದ ಒಳ ಹೊರಗೆ ಶಕ್ತಿ ಯೋಜನೆ ಸಂತ್ರಸ್ತರ ಪರ ದನಿ ಎತ್ತುವುದು ಮತ್ತು ಹೋರಾಟಕ್ಕೆ ಅವಕಾಶವೂ ಇದೆ.

   ಮತಾಂತರ ನಿಷೇಧ ಕಾಯ್ದೆ ವಾಪಸ್, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿ ಹತ್ತು ವಿಧೇಯಕ ಕುರಿತು ವಿಧಾನ ಮಂಡಲದಲ್ಲಿ ಪರ್ಯಾಲೋಚನೆ ನಡೆಯುವುದು. ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್ ಮುಗಿಸಿದವರ ವೈದ್ಯರ ಗ್ರಾಮೀಣ ಸೇವೆಯನ್ನು ನಗರ ಪ್ರದೇಶಕ್ಕೂ ಬಳಸಿಕೊಳ್ಳಲೂ ಸಹ ಒಂದು ಕಾಯ್ದೆ ಪ್ರಸ್ತುತಪಡಿಸಲಾಗುತ್ತಿದೆ. ಈಗಾಗಲೆ ಕಾನೂನು ಇಲಾಖೆ ವಿಧಾನ ಮಂಡಲದಲ್ಲಿ ಮಂಡನೆಯಾಗುವ ಕಾಯ್ದೆಯಾಗುವ ಕಾನೂನುಗಳ ಹಿಂದುಮುಂದು ವಿಚಾರವಾಗಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದೆ.

ನಿರೀಕ್ಷಿತ ವೇಳಾಪಟ್ಟಿ

  • ಜುಲೈ 3ರಂದು ರಾಜ್ಯಪಾಲರ ಭಾಷಣ
  • ಬಳಿಕ ಸಂತಾಪ ಸೂಚನಾ ಪ್ರಕ್ರಿಯೆ
  • ಜುಲೈ 4ರಿಂದ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ
  • ವಿವಿಧ ವಿಧೇಯಕಗಳ ಮಂಡನೆ, ಪರ್ಯಾಲೋಚನೆ
  • ಜುಲೈ 7ರಂದು ಬಜೆಟ್ ಮಂಡನೆ
  • ಜುಲೈ 10ರಿಂದ 14ರವರೆಗೆ ಬಜೆಟ್ ಮೇಲೆ ಚರ್ಚೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap