ತಿಪಟೂರು : ಗ್ರಾ.ಪಂ.ನಿಂದಲೇ ಕೆರೆಯ ಅಂಗಳಕ್ಕೆ ಹೊರಗಿನ ಕಸ

ತಿಪಟೂರು : 

     ಕೆರೆಗಳು ನಮ್ಮ ಗ್ರಾಮೀಣ ಜನರ ಕೃಷಿ ಬದುಕಿನ ಜೀವಸೆಲೆಗಳು, ಅವುಗಳನ್ನು ನಾವು ಬಹಳ ಸ್ವಚ್ಛತೆಯಿಂದ ಜೋಪಾನವಾಗಿ ಕಾಯ್ದುಕೊಳ್ಳಬೇಕು. ಸ್ವಚ್ಛತೆಯೆ ದೇವರು, ಎಲ್ಲಿ ಸ್ವಚ್ಛತೆ ಇರುತ್ತದೊ ಅಲ್ಲಿ ದೇವರು ನೆಲಸುತ್ತಾನೆ ಎನ್ನುತ್ತಾರೆ. ಸರ್ಕಾರಗಳು ಸಹ ಸ್ವಚ್ಛ ಭಾರತ್ ಅಭಿಯಾನ್ ಎಂದು ಸ್ವಚ್ಛತೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತವೆ. ಆದರೆ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿಯವರು ಮಾತ್ರ ತನ್ನ ಪಂಚಾಯಿತಿ ವ್ಯಾಪ್ತಿಯ ಕೋಟೆ ನಾಯಕನಹಳ್ಳಿ ಕೆರೆಗೆ ಕಸವನ್ನು ತಂದು ಸುರಿಯುವ ಮೂಲಕ ಸರ್ಕಾರದ ಸ್ವಚ್ಛ ಭಾರತ ಅಭಿಯಾನ್ ಕಾರ್ಯಕ್ರಮಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ.

      ನಿನ್ನೆ ತಾನೇ ಎಲ್ಲಾ ಕಡೆ ವಿಶ್ವ ಪರಿಸರ ದಿನ ಆಚರಿಸಲಾಗಿದೆ. ಪ್ರಸ್ತುತ ಕೊರೊನಾ ಅಲೆಗೆ ತತ್ತರಿಸಿರುವ ಜನತೆ ಸದ್ಯ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚಕೊಳಿಸಿಕೊಂಡು, ಗಿಡ-ಮರಗಳನ್ನು ಬೆಳಸಿಕೊಂಡು ಉತ್ತಮವಾದ ಆಮ್ಲಜನಕವನ್ನು ಪಡೆಯಲು ಹಪಹಪಿಸುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಗ್ರಾಮಗಳಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕಾದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ತಮ್ಮದೇನಿದ್ದರು ಊರ ಕಸವನ್ನು ಊರಿನಿಂದ ಹೊರಗೆ ಸಾಗಿಸುದಷ್ಟೆ, ಊರಿನಿಂದ ಹೊರ ಸಾಗಿಸಲಾದ ಕಸಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ತನ್ನದೇ ಕೆರೆಯ ಅಂಗಳಕ್ಕೆ ಕಸವನ್ನು ತಂದು ಸುರಿದು ಹೋಗುತ್ತಿದ್ದಾರೆ ಎಂದು ಗ್ರಾ.ಪಂ.ನ ಪ್ರಜ್ಞಾವಂತ ನಾಗರೀಕರು ಆರೋಪಿಸಿದ್ದಾರೆ.

      ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ಕೆರೆ, ಕಟ್ಟೆ, ಕಾಡು, ಮೇಡುಗಳನ್ನು ಹಲವಾರು ಕಾಮಗಾರಿಗಳಿಗೆ, ರಸ್ತೆ ಅಭಿವೃದ್ಧಿಗೆ ಆಪೋಶನ ತೆಗೆದುಕೊಳ್ಳಲಾಗಿದೆ. ಸದ್ಯ ಉಳಿದಿರುವ ಜಲ ಮೂಲಗಳಾದ ಕೆರೆ, ಕಟ್ಟೆಗಳು ಜನ-ಜಾನುವಾರು, ಕಾಡುಪ್ರಾಣಿಗಳಿಗೆ ಪ್ರಮುಖ ನೀರಿನ ಸೆಲೆಗಳಾಗಿವೆ. ಹಾಗಾಗಿ ಅವುಗಳನ್ನು ಉಳಿಸುವ ಕೆಲಸವನ್ನು ಇಂದು ತುರ್ತಾಗಿ ಮಾಡಬೇಕಿದೆ. ಇದೆಲ್ಲದರ ಮಧ್ಯೆ ಕೆಲ ದಿನಗಳ ಹಿಂದೆ ಹುಚ್ಚಗೊಂನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೊಟೆನಾಯಕನಹಳ್ಳಿಯು ಕೊರೊನಾ ರೆಡ್‍ಜೋನ್ ಮತ್ತು ಹಾಟ್‍ಸ್ಪಾಟ್ ಆಗಿ ಗುರುತಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಕೊರೊನಾ ರೆಡ್‍ಜೋನ್ ಕಸವನ್ನು ವಿಲೆವಾರಿ ಮಾಡಲು ವಿಫಲವಾದ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿಯು ಕೆರೆ ಇರುವಾಗ ಬೇರೆ ಜಾಗವೇಕೆ ಎಂದು ಕಸವನ್ನು ತಂದು ಕೆರೆಗೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರ ಮಧ್ಯೆ ಮಳೆ ಬಂದು ಕಸವು ಅರ್ಧಂಬರ್ಧ ಉರಿದು ಮಳೆನೀರಿನ ಜೊತೆಸೇರಿ ಕೆರೆನೀರಿನಲ್ಲಿ ವಿಲೀನವಾಗಿದೆ.

ಇದರಿಂದ ಆತಂಕಕ್ಕೊಳಗಾಗಿರುವ ರೈತಾಪಿ ಜನರು ಜಾನುವಾರುಗಳಿಗೆ ನೀರನ್ನು ಕುಡಿಸಿದರೆ ಎಲ್ಲಿ ಅವುಗಳ ಆರೋಗ್ಯ ಕೆಡುತ್ತದೊ ಎಂದು ಹೆದರುತ್ತಿದ್ದು ಕೆರೆಗೆ ಸುರಿದ ತ್ಯಾಜ್ಯದಿಂದ ಕೊರೊನಾ ಹರಡುತ್ತದೆ ಎಂಬ ಭಯದಲ್ಲಿ ವಾಸಿಸುತ್ತಿದ್ದಾರೆ.
ಕಸದಲ್ಲಿ ಮದ್ಯದ ಬಾಟಲಿಗಳಿದ್ದು, ಹಲವಾರು ಪ್ಲಾಸ್ಟಿಕ್ ಚೀಲಗಳಲ್ಲಿ ಆಹಾರ ತ್ಯಾಜ್ಯವನ್ನು ತುಂಬಿ ಎಸೆಯಲಾಗಿದೆ. ಇದರಿಂದ ಹಸಿದ ನಾಯಿಗಳು ಆಹಾರಕ್ಕಾಗಿ ಪ್ಲಾಸ್ಟಿಕ್‍ಚೀಲಗಳನ್ನು ಹರಿದು ಕೆರೆಯ ತುಂಬಾ ಚೆಲ್ಲಾಡಿವೆ. ಇದರಿಂದ ಹಲವಾರು ರೋಗಗಳು ಹರಡುತ್ತವೆ ಎಂಬ ಭೀತಿಯಿದೆ ಎಂದು ಸ್ಥಳಿಯ ನಿವಾಸಿ ಚಂದ್ರು ವಿಷಾದಿಸಿದರು.

      ಈ ಬಗ್ಗೆ ಹುಚ್ಚಗೊಂಡನಹಳ್ಳಿ ಗ್ರಾ.ಪಂ.ಕಾರ್ಯದರ್ಶಿಗೆ ಕರೆ ಮಾಡಿ ವಿಚಾರಿಸಿದಾಗ “ಕಸವನ್ನು ಹಿಂಡಸ್ಕೆರೆ ಘನತ್ಯಾಜ್ಯ ವಿಲೇವಾರಿ ಘಟಕದಲಿ ಪರಿಷ್ಕರಿಸುತ್ತೇವೆ. ಕೋಟೆನಾಯಕನಹಳ್ಳಿ ಗ್ರಾಮವು ಕೊರೊನಾ ಹಾಟ್‍ಸ್ಪಾಟ್, ರೆಡ್‍ಜೋನ್ ಆಗಿಲ್ಲದಿದ್ದರೆ ನಾವು ಕಸವನ್ನು ವಿಲೇವಾರಿ ಮಾಡುತ್ತಿದ್ದೆವು. ಕೆರೆಗೆ ಹಾಕಿದ ಕಸವನ್ನು ಸುಟ್ಟುಹಾಕಲು ತಿಳಿಸಿದ್ದೆನು ಎಂದು ಹೇಳಿ ನಂತರ ಕರೆಮಾಡುತ್ತೇನೆಂದು ಕರೆಯನ್ನು ನಿಷ್ಕ್ರಿಯ ಗೊಳಿಸಿದರು.

      ಹೀಗೆ ಕೊರೊನಾ ರೆಡ್‍ಜೋನ್ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡದಿದ್ದರೆ ಈ ಕಸದಿಂದ ಇನ್ನಷ್ಟು ಜನರಿಗೆ ಕೊರೊನಾ ಹರಡುತ್ತದೆ ಎಂಬ ಪರಿಜ್ಞಾನವು ಇಲ್ಲದೇ ಎಲ್ಲೆಂದರಲ್ಲಿ ಕಸವನ್ನು ಹಾಕಿರುವ ಗ್ರಾ.ಪಂ.ಸಿಬ್ಬಂದಿಗಳ ಕೆಲಸಕ್ಕೆ ಯಾರನ್ನು ದೂರುವುದು ಮತ್ತು ಇದನ್ನು ಕಂಡು ಕಾಣದ ಹಾಗೆ ಇರುವ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳು ತಮ್ಮ ಸಿಬ್ಬಂದಿ ಏನು ಕೆಲಸ ಮಾಡುತ್ತಿದ್ದಾರೆ ಎಂದು ನೋಡುತ್ತಿಲ್ಲವೆ ಎಂಬುದುದೇ ತಿಳಿಯುತ್ತಿಲ್ಲ. ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಕಸವನ್ನು ವಿಲೇವಾರಿ ಮಾಡದಿದ್ದರೆ ಹಲವಾರು ರೋಗಗಳು ಹರಡುವುದಲ್ಲಿ ಸಂಶಯವಿಲ್ಲ.

-ರಂಗನಾಥ್ ಪಾರ್ಥಸಾರಥಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link