ಶಿರಾ
ಕೃಷಿ ಚಟುವಟಿಕೆಯ ಹಿನ್ನೆಲೆಯಲ್ಲಿ ರೈತರು ಮಾಡಿದ ಸಾಲಕ್ಕೆ ಹತ್ತರಷ್ಟು ಬಡ್ಡಿ ಹೇರಿ ರೈತರಿಗೆ ಸಾಲ ಪಾವತಿ ಮಾಡುವಂತೆ ಒತ್ತಾಯಿಸಿ ಕಲ್ಪತರು ಗ್ರಾಮೀಣ ಬ್ಯಾಂಕ್ ರೈತರ ಮೇಲೆ ಒತ್ತಡ ಹೇರುತ್ತಿದ್ದು ಈ ಬಗ್ಗೆ ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲ್ಲೂಕು ರೈತ ಸಂಘ ಪ್ರತಿಭಟನೆ ನಡೆಸಿ ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಧರಣಿ ನಡೆಸಿತು.
ನಗರದ ಪ್ರವಾಸಿ ಮಂದಿರದ ವೃತ್ತದಿಂದ ಹೊರಟ ಪ್ರತಿಭಟನೆಯು ನಗರದ ಮುಖ್ಯರಸ್ತೆಯ ಮೂಲಕ ಕಲ್ಪತರು ಗ್ರಾಮೀಣ ಬ್ಯಾಂಕಿಗೆ ತೆರಳಿ ಬ್ಯಾಂಕಿನ ಮುಂಭಾಗದಲ್ಲಿ ಕೂತು ಧರಣಿ ನಡೆಸಿತು.
ಜಿಲ್ಲಾ ರೈತ ಸಂಘದ ಸಂಚಾಲಕ ಧನಂಜಯಾರಾಧ್ಯ ಮಾತನಾಡಿ 2005 ರಲ್ಲಿ ಬೋರಸಂದ್ರದ ಹನುಮಂತರಾಯಪ್ಪ ಎಂಬಾತ ಗ್ರಾಮೀಣ ಬ್ಯಾಂಕಿನಲ್ಲಿ 4 ಲಕ್ಷ ರೂ ಬೆಳೆ ಸಾಲ ಪಡೆದಿದ್ದು ಸದರಿ ಬ್ಯಾಂಕಿನಲ್ಲಿ ಬಡ್ಡಿ ಹಾಗೂ ಅಸಲು ಎಲ್ಲವೂ ಸೇರಿ 13 ಲಕ್ಷಕ್ಕೂ ಹೆಚ್ಚು ಸಾಲದ ಬಾಪ್ತಿಗೆ ಬ್ಯಾಂಕ್ ನೋಟೀಸ್ ಕಳುಹಿಸಿ ಸಾಲ ಪಾವತಿಸುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅದರಲ್ಲೂ ಶಿರಾ ಭಾಗದಲ್ಲಿ ಮಳೆ-ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿರುವಂತಹ ಸಂದರ್ಬದಲ್ಲಿ ಯಾವುದೇ ಬ್ಯಾಂಕುಗಳು ಸಾಲ ವಸೂಲಾತಿಗೆ ರೈತರ ಮೇಲೆ ಒತ್ತಡ ಹೇರಬಾರದು ಎಂಬ ನಿಯಮವಿದ್ದರೂ ರೈತರನ್ನು ಹಿಂಸಿಸುವ ಕೆಲಸವನ್ನು ಬ್ಯಾಂಕುಗಳು ಮಾಡುತ್ತಿವೆ. ಈ ಕೂಡಲೇ ಸರ್ಕಾರ ಅಂತಹ ಬ್ಯಾಂಕುಗಳ ಮೇಲೆ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ರೈತರ ಸಾಲಮನ್ನಾ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.ತಾಲ್ಲೂಕು ಸಂಘದ ಅಧ್ಯಕ್ಷ ಸಣ್ಣ ದ್ಯಾಮೇಗೌಡ, ಮಹಂತೇಶ್, ಚಂದ್ರಶೇಖರ್, ಗುರು, ಪರಮೇಶ್, ರಂಗನಾಥ್, ಬಸವರಾಜು, ಮುಕುಂದಪ್ಪ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
