ತಿಪಟೂರು : ಹಾಟ್‍ಸ್ಪಾಟ್ ಆಗುತ್ತಿದೆ ರೈಲ್ವೆ ನಿಲ್ದಾಣ

ತಿಪಟೂರು:

      ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇದ್ದರೂ ಸಹ ಜೂ. 17 ರಂದು ಒಂದೇ ದಿನ 60 ಜನ ಸೋಂಕಿತರು ಕಂಡು ಬಂದಿದ್ದು, ಇನ್ನೂ ಶೇ. 10 ರಿಂದ 15 ರಷ್ಟು ಸೋಂಕು ಪ್ರಕರಣಗಳು ಇರಬಹುದೆಂದು ವರದಿಯೊಂದು ತಿಳಿಸಿದೆ.

      ಪತ್ರಿಕೆಯಲ್ಲಿ ಮೊನ್ನೆ ತಾನೆ ಲಾಕ್‍ಡೌನ್ ಮುಗಿದಿಲ್ಲ, ಕೊರೊನಾ ಭಯವಿಲ್ಲ ಎಂಬ ವರದಿ ಪ್ರಕಟಗೊಂಡಿತ್ತು. ಅದರಂತೆಯೆ ಸೋಮವಾರ ಮತ್ತು ಮಂಗಳವಾರ ಅರ್ಧ ಶತಕ್ಕಿಂತ ಕಡಿಮೆ ಜನರಿಗೆ ಕೊರೊನಾ ಸೊಂಕು ಕಂಡುಬಂದಿದ್ದು, ಬುಧವಾರ ಮತ್ತೆ 60 ಜನರಿಗೆ ಸೊಂಕು ಧೃಡಪಟ್ಟಿದ್ದು ಈಗಲಾದರು ಜನರು ಎಚ್ಚೆತ್ತುಕೊಳ್ಳದಿದ್ದರೆ ಜಿಲ್ಲೆಯಲ್ಲಿ ಮತ್ತೆ ತಿಪಟೂರು ಹಾಟ್‍ಸ್ಪಾಟ್ ಆಗುವುದರಿಲ್ಲಿ ಅನುಮಾನವೇ ಇಲ್ಲ.

ಹಾಟ್‍ಸ್ಪಾಟ್ ಆಗುತ್ತಿದೆ ರೈಲ್ವೆ ನಿಲ್ದಾಣ :

      ನಗರದಲ್ಲಿ ಲಾಕ್‍ಡೌನ್ ಇದ್ದು ಎಲ್ಲಾ ಟೀ ಅಂಗಡಿಗಳು ಮತ್ತು ಸ್ಟೇಡಿಯಂ, ಕೆರೆ ಅಂಗಳ ಮುಚ್ಚಿದ್ದರಿಂದ ರೈಲ್ವೆ ನಿಲ್ದಾಣ ಕಾಫೀ ಮತ್ತು ವಾಕಿಂಗ್ ಪ್ರಿಯರು ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ದಿನನಿತ್ಯ ಸಂಜೆಯಾಯಿತೆಂದರೆ ಸಾಕು ನೂರಾರು ಜನರು ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಾರೆ. ವಾಕಿಂಗ್ ಮಾಡುವವರು, ಉಚಿತವಾಗಿ ಇಂಟರ್‍ನೆಟ್ ಸಿಗುತ್ತದೆ ಎಂದು ಯುವಕರ ಗುಂಪುಗಳು, ಕಾಫೀ-ಟೀ ಮತ್ತು ಕುರುಕಲು ತಿಂಡಿಗಾಗಿ, ಸುಮ್ಮನೇ ಕುಳಿತು ಹರಟೆ ಹೊಡೆಯಲು ಬರರುವರು, ಮುಖ್ಯವಾಗಿ ಕ್ಯಾಮೆರಾ ತೆಗೆದುಕೊಂಡು ಬಂದು ಶೂಟಿಂಗ್ ಸ್ಪಾಟ್‍ಮಾಡಿಕೊಳ್ಳುವ ಹುಡುಗರು ಹೀಗೆ ಏನಿಲ್ಲವೆಂದರು ಪ್ರತಿನಿತ್ಯ ಸುಮಾರು ಸಾವಿರಾರು ಜನರು ಗುಂಪು ಗುಂಪಾಗಿ ಬಂದು ಬಂದು ರೈಲ್ವೆ ನಿಲ್ದಾಣ ಸೇರುತ್ತಾರೆ.

      ಇದರ ಜೊತೆಗೆ ಸದ್ಯ ರೈಲ್ವೆ ನಿಲ್ದಾಣವು ಬೆಂಗಳೂರಿಗೆ ಕೆಲಸದ ನಿಮಿತ್ತ ಮತ್ತು ಅನ್ಯ ಕಾರ್ಯದ ನಿಮಿತ್ತ ಪ್ರಯಾಣಿಸುವವರ ನೂಕು ನುಗ್ಗಲಿನಿಂದ ಕೂಡಿದ್ದು ಮತ್ತೆ ಕೊರೊನಾ ಉಲ್ಬಣಿಸಲು ಕಾರಣವಾಗಿ ಮತ್ತೆ ತಿಪಟೂರನ್ನು ಹಾಟ್‍ಸ್ಪಾಟ್ ಮಾಡಲು ರೈಲ್ವೆ ನಿಲ್ದಾಣ ಸಹಕಾರ ನೀಡುವಂತಿದೆ.

      ಮುಖ್ಯವಾಗಿ ರೈಲ್ವೆ ಸ್ಟೇಷನ್ ಸಮಾನಂತರ ರಸ್ತೆ ಮತ್ತು ಕಾರ್ಪೋರೇಷನ್ ರಸ್ತೆಯ ಹಿಂಭಾಗದ ಹೋಟೆಲ್ ಒಂದರಲ್ಲಿ ಸಂಜೆಯ ವೇಳೆ ಪಾರ್ಸಲ್ ಮಾತ್ರ ಎಂದು ಫಲಕ ಹಾಕಿಕೊಂಡು ಚುರುಮುರಿ, ಬೋಂಡ ಮತ್ತಿತರ ಕುರುಕುಲು ತಿಂಡಿಗಳನ್ನು ಮಾರುತ್ತಿದ್ದು, ಸಂಜೆಯ ಚುಮು ಚುಮು ಚಳಿಗೆ ಏನಾದರು ಬಿಸಿಯಾಗಿ ತಿನ್ನಬೇಕೆಂಬ ಹಂಬಲದಿಂದ ಬರುವ ಗ್ರಾಹಕರನ್ನು ತಣಿಸುತ್ತಿದ್ದಾರೆ. ಇವರು ಕೊಡುವ ಪಾರ್ಸಲ್ ಮತ್ತು ನೀರಿನ ಬಾಟಲಿ ಹಿಡಿದು ಹತ್ತಿರದ ರೈಲ್ವೆ ಸ್ಟೇಷನ್ ಕಾಂಪೌಂಡ್ ಮೇಲೆ ಕೂತು ತಿಂದು ಅಲ್ಲಿಯೆ ಬಿಸಾಡುತ್ತಾರೆ. ಇದರ ಬಗ್ಗೆ ನಗರಸಭೆ ಮತ್ತು ಆರಕ್ಷಕ ಇಲಾಖೆ ಹೆಚ್ಚಿನ ಗಮನಹರಿಸಬೇಕಿದೆ.

      ವ್ಯಾಕ್ಸಿನ್ ಹಾಕುವ ಸ್ಥಳ, ಕೊರೊನಾ ಪರೀಕ್ಷಿಸುವ ಸ್ಥಳ, ಬ್ಯಾಂಕ್, ಅಂಗಡಿಗಳ ಮುಂದೆ ಯಾವುದೇ ಕಡೆ ಕೊರೊನಾ ಎಸ್‍ಓಪಿ ನಿಯಮವನ್ನು ಪಾಲಿಸುತ್ತಿಲ್ಲ. ಜೊತೆಗೆ ಸಾರ್ವಜನಿಕ ಆಸ್ಪತ್ರೆಗಳು ಸಹ ರೋಗ ಹರಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಈ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ನಗರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಇನ್ನು ನಗರಸಭೆಯ ಅಧಿಕಾರಿಗಳು ಮಾಸ್ಕ್ ಹಾಕದವರಿಗೆ ಮೊಲದನೆ ಅಲೆಯಲ್ಲಿ ದಂಡವನ್ನು ವಿಧಿಸುತ್ತಿದ್ದರು. ಆದರೆ ಎರಡನೆ ಅಲೆ ಬಂದಾಗಿನಿಂದ ನಮಗೂ ರೋಗ ಬರಬಹುದು ಅಂತಲೊ ಅಥವಾ ಜನರಿಗೆ ಎಷ್ಟು ಹೇಳಿದರು ಬುದ್ದಿಬರುವುದಿಲ್ಲ ಎಂದು ಸಾಕಾಗಿ ತಮ್ಮ ಜವಾಬ್ದಾರಿಯಿಂದ ವಿಮುಖರಾಗಿದ್ದರೊ ತಿಳಿಯದಾಗಿದೆ. ಜನರ ಆರೋಗ್ಯ, ಸುರಕ್ಷತೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು ಎಚ್ಚೆತ್ತು ಸಾರ್ವಜನಿಕರನ್ನು ರಕ್ಷಿಸುವ ಜವಾಬ್ದಾರಿ ತಾಲ್ಲೂಕು ಆಡಳಿತ, ನಗರಸಭೆ ಮತ್ತು ಎಲ್ಲಾ ಗ್ರಾಮ ಪಂಚಾಯಿತಿಗಳ ಮೇಲಿದೆ.

-ರಂಗನಾಥ್ ಪಾರ್ಥಸಾರಥಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap