ತಿಪಟೂರು :
ನಗರದಲ್ಲಿ ಶುಕ್ರವಾರ ನಡೆದ ಯೇ ಸುರಿಸಿದ್ದು ಮುಖ್ಯವಾಗಿ ಡಿವೈಎಸ್ಪಿ ಕಚೇರಿಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ ಎಂದು ದಲಿತ ಮುಖಂಡರು ಒಕ್ಕೊರಲಿನಿಂದ ಆರೋಪಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಎಕ್ಸರೇ, ಸ್ಕ್ಯಾನಿಂಗ್‍ಗೆ ಹಣ:
ಸಭೆಯು ಆರಂಭವಾಗುತ್ತಿದ್ದಂತೆ ಉಪವಿಭಾಗಾಧಿಕಾರಿ ಕಚೇರಿ, ನಗರಸಭೆಯ ವಿಷಯಗಳು ಅಜೆಂಡದಲ್ಲಿ ಚರ್ಚೆಯಾದವು. ನಂತರ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಚರ್ಚೆಯಾಗುವಾಗ ಬಿಪಿಎಲ್ ಕಾರ್ಡ್ ಹೊಂದಿದ್ದರು ತಾಲೂಕು ಆಸ್ಪತ್ರೆಯಲ್ಲಿ ಎಕ್ಸರೇ ಮತ್ತು ಸ್ಕ್ಯಾನಿಂಗ್‍ಗೆ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಕಂಚಾಘಟ್ಟ ಸುರೇಶ್ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಎಕ್ಸ್‍ರೇ ಇರಲಿ, ಸರ್ಕಾರಿ ವೈದ್ಯರು ಬರೆದುಕೊಟ್ಟ ಮಾತ್ರೆಗಳನ್ನೇ ಅರ್ಧಂಬರ್ದ ಕೊಡುತ್ತಾರೆ, ಸೂಕ್ತವಾಗಿ ಔಷಧಿಗಳನ್ನೇ ಸರಬರಾಜು ಮಾಡುವುದಿಲ್ಲ, ಮುಖ್ಯವಾಗಿ ಹೆರಿಗೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ ಎಂದು ದಲಿತ ಮುಖಂಡರುಗಳು ಆರೋಪಿಸಿ ಸಭಾಧ್ಯಕ್ಷರಿಗೆ ಸೂಕ್ತ ಕ್ರಮಕೈಗೊಂಡು ಎಲ್ಲರಿಗೂ ಸೂಕ್ತ ಔಷಧಿಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಆದೇಶಿಸುವಂತೆ ತಿಳಿಸಿದರು.
ಸ್ಮಶಾನಗಳ ಒತ್ತುವರಿ :
ಕಂದಾಯ ಇಲಾಖೆಗೆ ಸಂಬಂಧಿಸಿಂತೆ ದಲಿತರ ಭೂಮಿಗಳನ್ನು ಕಬಳಿಸಲು ಸರ್ವರ್ಣೀಯರು ಹೊಂಚುಹಾಕುತ್ತಿದ್ದು, ದಲಿತರು ತಮ್ಮ ಜಮೀನುಗಳಿಗೆ ಹೋಗಲು ಅಕ್ಕ ಪಕ್ಕದ ಜಮೀನಿನವರು ದಾರಿಯನ್ನು ಬಿಡುತ್ತಿಲ್ಲ. ಇದಕ್ಕೆ ಹಲವಾರು ಉದಾಹರಣೆಗಳಿದ್ದು, ತುರುವೇಕೆರೆ ತಾಲ್ಲೂಕಿನ ಅಂಚಿಹಳ್ಳಿಯ ನಂಜಯ್ಯ ಎಂಬ ದಲಿತನ ಮೇಲೆ ಬೆಂಗಳೂರಿನ ಕಿರಣ್ ಎಂಬ ವ್ಯಕ್ತಿ ಪದೆ ಪದೆ ಜಮೀನಿನ ವಿಷಯವಾಗಿ ಶೋಷಣೆ ಮಾಡುತ್ತಿದ್ದಾನೆ. ಹಾಗೂ ನಂಜಯ್ಯನ ಜಮೀನಲ್ಲಿದ್ದ ಷೆಡ್‍ಗಳನ್ನು ಮುರಿದು ಹಾಕಿದ್ದಾನೆ. ಈ ಬಗ್ಗೆ ತಾಲ್ಲೂಕು ದಂಡಾಧಿಕಾರಿಗಳಿಗೆ ಮತ್ತು ಆರಕ್ಷಕರಿಗೆ ದೂರು ನೀಡಿದರೂ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅವರು ಘಟನೆಯ ಬಗ್ಗೆ ತಿಳಿದಿಲ್ಲ, ಪರಿಶೀಲಿಸುವುದಾಗಿ ತಿಳಿಸಿದರು.
ಸರ್ಕಾರದ ಸ್ಮಶಾನಗಳು ಸಹ ಒತ್ತುವರಿಯಾಗಿವೆ, ಕೆಲವು ಊರಿನಲ್ಲಿ ಸ್ಮಶಾನಗಳೇ ಇಲ್ಲ, ಜೊತೆಗೆ ಪ್ರಭಾವಿಗಳು ಸ್ಮಶಾನವನ್ನು ಒತ್ತುವರಿ ಮಾಡಿಕೊಂಡು ಬೋರ್‍ವೆಲ್‍ಗಳನ್ನು ಕೊರೆಸಿಕೊಂಡಿದ್ದಾರೆ. ಯಾವ ಸ್ಮಶಾನಗಳಿಗೂ ಹದ್ದು ಬಸ್ತು ಇಲ್ಲ. ಇಲಾಖೆಗಳ ಸಮನ್ವಯತೆಯ ಕೊರತೆಯಿಂದ ಸ್ಮಶಾನಗಳು ಹಾಳಾಗಿದ್ದು ಸ್ಮಶಾನದ ಒಳಗೆ ಹೋಗಲು ದಾರಿಯೇ ಇಲ್ಲದಂತಾಗಿದೆ. ತುರುವೇಕೆರೆ ತಾಲ್ಲೂಕಿನ ರಾಯಸಂದ್ರದಲ್ಲಿ ಸ್ಮಶಾನವೆ ಇಲ್ಲದೆ ದಲಿತರೊಬ್ಬರನ್ನು ಶವಸಂಸ್ಕಾರ ಮಾಡಲು ಸಾಧ್ಯವಾಗಲಿಲ್ಲ ಕೋವಿಡ್ ಇಲ್ಲದೆ ಇದ್ದಿದ್ದರೆ ತುರುವೇಕೆರೆ ತಾಲ್ಲೂಕು ಕಛೇರಿಯ ಮುಂದೆ ಶವವಿಟ್ಟುಕೊಂಡು ಪ್ರಟತಿಭಟನೆ ಮಾಡಲು ನಿರ್ಣಯಿಸಿದ್ದವೆಂದು ದಲಿತ ಮುಖಂಡ ಕುಂದೂರುತಿಮ್ಮಯ್ಯ ಸಭೆಗೆ ತಿಳಿಸಿದಾಗ. ಪ್ರತಿಕ್ರಿಯಿಸಿದ ತುರುವೇಕೆರೆ ತಹಸೀಲ್ದಾರ್ ತಾಲ್ಲೂಕಿನಲ್ಲಿ 199 ಹಳ್ಳಿಗಳಲ್ಲಿ 17 ಹಳ್ಳಿಗಳನ್ನು ಬಿಟ್ಟು ಎಲ್ಲಾ ಹಳ್ಳಿಗಳಲ್ಲೂ ಸ್ಮಶಾನಕ್ಕೆ ಸ್ಥಳವನ್ನು ಗುರುತಿಸಲಾಗಿದೆ ಎಂದರು. ಆಗ ದಲಿತ ಮುಖಂಡರುಗಳು ಸ್ಥಳ ಗುರುತಿಸಿದರೆ ಸಾಲದು. ಉಪವಿಭಾಗದ ಎಲ್ಲಾ ಸ್ಮಶಾನಗಳಿಗೂ ಬಂದೊ ಬಸ್ತ್ ಮಾಡಿ, ಮುಳ್ಳು ತಂತಿ ಹಾಕಿಸಿ ಸೂಕ್ತವಾದ ನಾಮಫಲಕವನ್ನು ಹಾಕಿಸುವಂತೆ ಆಗ್ರಹಿಸಿದರು.
ಕಲ್ಲು ಗಣಿಗಾರಿಕೆಯಿಂದ ತೊಂದರೆ :
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಬೆನ್ನಾಯಕನಹಳ್ಳಿ ಬಂಡೆಯಲ್ಲಿ ಪ್ರಭಾವಿ ರಾಜಕಾರಣಿಗೆ ಸೇರಿದ ಕಲ್ಲುಗಣಿ ಇದ್ದು ಅಲ್ಲಿನ ಸ್ಪೋಟಕ್ಕೆ ಹಳ್ಳಿಯ ಜನರು ಜೀವಿಸಲಾಗುತ್ತಿಲ್ಲ, ಜೊತೆಗೆ ಅಧಿಕ ಭಾರವನ್ನು ಹೊತ್ತು ಸಾಗುವ ನೂರಾರು ಲಾರಿಗಳಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಪೆದ್ದಿಹಳ್ಳಿ ನರಸಿಂಹಯ್ಯ ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಮೀಸೆತಿಮ್ಮನಹಳ್ಳಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆಯಿಂದ ಅಂತರ್ಜಲ ಬತ್ತುತ್ತಿದೆ ಎಂದು ತಿಳಿಸಿದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿಗಳು ಗಣಿಗಾರಿಕೆ ಸ್ಥಳಗಳ ಸರ್ವೆ ನಡೆಸಿ ಸರಿಪಡಿಸುವಂತೆ ತಿಳಿಸಿದ್ದು, ಗಣಿಗಾರಿಕೆಗೆ ಸಂಬಂಧಿಸಿದಂತೆ ಎಲ್ಲಾ ಮುನ್ನಚ್ಚರಿಕೆಗಳನ್ನು ತೆಗೆದುಕೊಂಡು ಅನುಮತಿ ಕೊಡಲಾಗಿದೆ ಎಂದು ತಿಳಿಸಿದರು.
ಹಿರಿಯರು, ಮಹಿಳೆಯರಿಗೆ ಗೌರವವಿಲ್ಲ:
ಒಂದು ಹಂತದವರೆಗೂ ಶಾಂತವಾಗಿ ಸಾಗುತಿದ್ದ ಸಭೆಯಲ್ಲಿ ಪೋಲೀಸ್ ಇಲಾಖೆಯ ವಿಚಾರಗಳು ಬಂದ ತಕ್ಷಣ ಸಭೆಯು ಒಂದು ಕ್ಷಣ ರೌದ್ರವಾಯಿತು. ಡಿವೈಎಸ್ಪಿ ಕಛೇರಿಯಲ್ಲಿ ಅಸ್ಪøಷ್ಯತೆ ತಾಂಡವಾಡುತ್ತಿದ್ದು, ಜಾತೀಯತೆ ಮಾಡುತ್ತಾರೆ. ಹಿರಿಯರು ಕಿರಿಯರು ಎನ್ನದೇ ಏಕವಚನದಲ್ಲಿ ಮಾತನಾಡಿಸುತ್ತಾರೆ. ಅಲ್ಲದೇ ಕಛೇರಿಯ ಒಳಗೆ ಬಿಡದೆ ಹೊರಗೆ ಮಾತನಾಡಿಸುತ್ತಾರೆ. ಮುಖ್ಯವಾಗಿ ಹೊಡೆದು ಮಾತನಾಡಿಸುತ್ತಾರೆ ಎಂದು ಪೆದ್ದಿಹಳ್ಳಿ ತಿಮ್ಮಯ್ಯ ಆರೋಪಿಸಿದರು.
ಕೆ.ಬಿ.ಕ್ರಾಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಆದ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆ.ಬಿ.ಕ್ರಾಸ್ ಪಿಎಸ್‍ಐ ಅವರು ಅಪಘಾತದಲ್ಲಿ ಮರಣ ಹೊಂದಿದದವರ ಶವಪರೀಕ್ಷೆಯ ವರದಿಯಲ್ಲಿ ಹೃದಯಾಘಾತವಾಗಿದೆ ಎಂದು ವರದಿ ನೀಡುವಂತೆ ತಿಪಟೂರು ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ.ವಿನೂತಾ ಅವರಿಗೆ ತಿಳಿಸುತ್ತಾರೆ. ಮೃತರ ಸಂಭಂದಿಕರಿಗೆ ತಿಳಿಸದೆ ಶವ ಪರೀಕ್ಷೆಗಾಗಿ ಶವವನ್ನು ತುಮಕೂರಿಗೆ ಸಾಗಿಸುತ್ತಾರೆ. ಏಕೆ ಈರೀತಿ ಮಾಡುತ್ತಾರೆ ಎಂದು ಕುಂದೂರು ತಿಮ್ಮಯ್ಯ ನೇರವಾಗಿ ಆರೋಪಿಸಿದರು.
ಇದಕ್ಕೆ ಡಿವೈಎಸ್ಪಿ ಚಂದನ್‍ಕುಮಾರ್ ಅವರು ಉತ್ತರಿಸಿ ತನಿಖೆಗಾಗಿ ಶವಪರೀಕ್ಷೆಯನ್ನು ಮಾಡಿಸಬೇಕು ಇಲ್ಲಿ ಕೆಲವು ಸೌಲಭ್ಯಗಳಿಲ್ಲದ್ದರಿಂದ ತುಮಕೂರಿಗೆ ಕಳುಹಿಸಲಾಗಿತ್ತೆ ವಿನಹ ಬೇರೆ ಉದ್ದೇಶವಿಲ್ಲ ಹಾಗೂ ಈ ಬಗ್ಗೆ ತನಿಖೆ ನಡೆಯುತ್ತಿದೆ ನ್ಯಾಯಾಲಯಕ್ಕೆ ವರಿದಿ ನೀಡುವುದಾಗಿ ತಿಳಿಸಿದರು.
ಸಮಸ್ಯೆಗಳನ್ನು ಆಲಿಸಿದ ಉಪವಿಭಾಗಾಧಿಕಾರಿ ದಿಗ್ವಿಜಯ್‍ಬೋಡ್ಕೆ ಪ್ರಕರಣಗಳ ಬಗ್ಗೆ ತನಿಕೆ ನಡೆಸಿ ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈ ಕೊಳ್ಳುವಂತೆ ಆದೇಶಿಸಿದರು. ಹಲವಾರು ಸಮಸ್ಯೆಗಳು ಚರ್ಚೆಗೆ ಬಂದವಾದರೂ ಮಧ್ಯಾಹ್ನದ ವೇಳೆಯಾದರೂ ತಿಪಟೂರು ತಾಲ್ಲೂಕಿನ ಸಮಸ್ಯೆಗಳೇ ಮುಗಿದಿರಲಿಲ್ಲವಾದ್ದರಿಂದ ಇನ್ನು ತುರುವೇಕೆರೆ, ಚಿಕ್ಕನಾಯಕನಹಳ್ಳಿಯ ಸಮಸ್ಯೆಗಳನ್ನು ಯಾವಾಗ ಬಗೆಹರಿಸುತ್ತಾರೆ ಎಂದು ಮುಖಂಡರುಗಳು ಮಾತನಾಡಿಕೊಳ್ಳುತ್ತಿದ್ದರು.
ಸಭೆಯಲ್ಲಿ ಉಪವಿಭಾಗದ ತಹಶೀಲ್ದಾರ್‍ಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಭಾಗವಹಿಸದೇ ಇದ್ದ ಅಧಿಕಾರಿಗಳಿಗಳಿಗೆ ನೋಟೀಸ್ ಕಳುಹಿಸುವಂತೆ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ ಸೂಚಿಸಿದರು.
ದೇವಾಲಯಗಳಿಗೆ ಪ್ರವೇಶ ಕಲ್ಪಿಸಿ :
ಎಲ್ಲಾ ಮುಜುರಾಯಿ ದೇವಸ್ಥಾನಗಳಲ್ಲಿ ಪ.ಜಾತಿ ಮತ್ತು ಪ.ಪಂಗಡದ ಜನರು ಪ್ರವೇಶ ಮಾಡಲು ನಾಮಫಲಕ ಹಾಕಿಸಿ ಎಂದು ಚಿಕ್ಕಣ್ಣ ತಿಳಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಚಂದ್ರಶೇಖರ್ ನಾಮಫಲಕ ಹಾಕಿಸಲಾಗುವುದೆಂದು ತಿಳಿಸಿದರು. ದೇವಸ್ಥಾನಗಳಲ್ಲಿ ಹೋಗಲಿ ನಾವು ಗೊಲ್ಲರಹಟ್ಟಿಗಳಿಗೆ ಹೋಗುವ ಹಾಗೆ ಇಲ್ಲ. ಮೊದಲು ಅವರಿಗೆ ತಿಳುವಳಕೆ, ಅರಿವು ಮೂಡಿಸುವಂತಹ ಕೆಲಸಗಳನ್ನು ಮಾಡುವಂತೆ ದಲಿತ ಮುಖಂಡರುಗಳು ತಹಸೀಲ್ದಾರ್‍ಗೆ ತಿಳಿಸಿದರು.
“ನೊಣವಿನಕರೆ ಠಾಣೆಯ ಪಿಎಸ್‍ಐ ಗಣೇಶ್ ಅವರು ಶೆಟ್ಟಿಹಳ್ಳಿ ಗ್ರಾಮದ ಮಹಿಳೆ ಶಿವಮ್ಮ ದೂರು ಕೊಡಲು ಹೋದರೆ ಆಕೆಯನ್ನು ತಡರಾತ್ರಿಯವರೆಗೂ ಠಾಣೆಯಲ್ಲಿ ಕುಳ್ಳಿರಿಸಿಕೊಂಡು ಅವರು ಕೊಟ್ಟಿರುವ ದೂರು ಸುಳ್ಳು ಪ್ರಕರಣವೆಂದು ಬಿ-ರಿಪೋರ್ಟ್ ನೀಡಿ ಆಕೆಯ ಮೇಲೆಯೇ ದೂರು ದಾಖಲಿಸಿಕೊಳ್ಳುತ್ತಾರೆ. ಹಾಗೆಯೇ ಚಿಗ್ಗಾವಿಯ ಲೋಕೇಶ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಮತ್ತೆ ಈ ಕಡೆ ಬಂದರೆ ರೌಡಿಶೀಟರ್ ಎಂದು ಕೇಸು ದಾಳಲಿಸುತ್ತೇವೆ ಎಂದು ಹೆದರಿಸಿ ಕಳುಹಿಸುತ್ತಾರೆ. ಈ ರೀತಿ ದೌರ್ಜನ್ಯ ಮಾಡಿದರೇ ನಾವೆಲ್ಲಿಗೆ ಹೋಗಬೇಕು. ಆರಕ್ಷಕರೇ ಹೀಗೆ ಭಯವನ್ನುಂಟುಮಾಡಿದರೆ ನಮ್ಮನ್ನು ರಕ್ಷಿಸುವವರು ಯಾರು?”
-ಕುಂದೂರು ತಿಮ್ಮಯ್ಯ, ಮುಖಂಡರು, ದಸಂಸ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ