ಲೋಕ್ ಅದಾಲತ್‍ನ ತೀರ್ಮಾನವೇ ಅಂತಿಮ

ತಿಪಟೂರು : 

      ನ್ಯಾಯಾಲಯದಲ್ಲಿ ಇರುವ ವ್ಯಾಜ್ಯಪೂರ್ವ ಹಾಗೂ ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, ಚೆಕ್, ಬ್ಯಾಂಕ್, ಮೋಟಾರುವಾಹನ, ಅಪಘಾತ, ಕೌಟುಂಬಿಕ ವ್ಯಾಜ್ಯ ಮುಂತಾದ ಪ್ರಕರಣಗಳನ್ನು ಬೃಹತ್ ಲೋಕ್ ಅದಾಲತ್‍ನಲ್ಲಿ ಶೀಘ್ರವಾಗಿ ಬಗೆಹರಿಸಿಕೊಳ್ಳಿ ಎಂದು 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಬಿ ಅವರು ಕರೆ ನೀಡಿದರು.

      ನಗರದ ನ್ಯಾಯಾಲಯದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಆ.14 ರಂದು ನಡೆಯುವ ಬೃಹತ್ ಲೋಕ್ ಅದಾಲತ್‍ನಲ್ಲಿ ಇತ್ಯರ್ಥವಾಗುವ ಯಾವುದೇ ಪ್ರಕರಣಗಳನ್ನು ಮೇಲ್ಮನವಿ ಸಲ್ಲಿಸುವ ಹಾಗಿಲ್ಲ. ಇಲ್ಲಿನ ತೀರ್ಮಾನವೇ ಅಂತಿಮ. ಇದರಿಂದ ಸಾರ್ವಜನಿಕರು ತಮ್ಮ ದೂರು ಪ್ರಕರಣಗಳನ್ನು ಕಡಿಮೆ ಸಮಯದಲ್ಲಿ ಇತ್ಯರ್ಥಗೊಳಿಸಿಕೊಳ್ಳಬಹುದೆಂದು ತಿಳಿಸಿದ ಅವರು ಈ ಪ್ರಕರಣಗಳಿಗೆ ಶುಲ್ಕ ಇರುವುದಿಲ್ಲ. ಬಹಳ ದಿನಗಳಿಂದ ನಡೆಯುತ್ತಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿಕೊಳ್ಳಿ. ಕಳೆದ 2 ವರ್ಷಗಳಿಂದಲೂ ತುಮಕೂರು ಜಿಲ್ಲೆಯು ಲೋಕ್ ಅದಾಲತ್‍ಗಳನ್ನು ಬಳಸಿಕೊಂಡು ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಈ ವರ್ಷವು ಇದನ್ನು ಮುಂದು ವರೆಸಿಕೊಂಡು ಹೋಗವ ಭರವಸೆ ಇದೆ, ಇದಕ್ಕೆ ಎಲ್ಲಾ ಇಲಾಖೆಗಳ ಸಹಕಾರವು ಮುಖ್ಯವೆಂದು ತಿಳಿಸಿದರು.

      ಹಿರಿಯ ಸಿವಿಲ್ ನ್ಯಾಯಾಧೀಶರು, ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಆದ ನೂರುನ್ನೀಸಾ ಅವರು ಮಾತನಾಡಿ ಸಾರ್ವಜನಿಕರು ಕೊರೊನಾ ಭಯದಿಂದ ಇನ್ನು ಹೊರಬಂದಿಲ್ಲ. ಈಗ ಎಲ್ಲಾ ಎಸ್‍ಓಪಿ ನಿಯಮಗಳನ್ನು ಪಾಲಿಸಿ ದಿನಕ್ಕೆ 40 ಕೇಸ್‍ಗಳನ್ನು ಪರೀಶೀಲಿಸಲಾಗುತ್ತಿದೆ. 5 ಜನ ಸಾಕ್ಷಿದಾರರನ್ನು ಮಾತ್ರ ನ್ಯಾಯಾಲಯದ ಆವರಣಕ್ಕೆ ಬಿಡಲಾಗುತ್ತಿದ್ದು, ಈಗ ನಿರ್ಬಂಧವನ್ನು ಸಡಿಲಿಸಲಾಗಿದೆ ಎಂದರು. ಈ ಬಾರಿಯ ಲೋಕ್‍ಅದಾಲತ್‍ಗೆ 7333 ಪ್ರಕರಣಗಳು ಬಂದಿದ್ದು, ಅವುಗಳಲ್ಲಿ 2846 ಪ್ರಕರಣಗಳನ್ನು ಗುರುತಿಸಿದ್ದು, ಇನ್ನುಳಿದ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳನ್ನು ಗುರುತಿಸಿ ಇತ್ಯರ್ಥಪಡಿಸಲಾಗುವುದು ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯವೆಂದು ತಿಳಿಸಿದರು.

      ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯರಾದ ದಾಸರಿ ಕ್ರಾಂತಿಕಿರಣ್, ಅಧಿಕ ಸಿವಿಲ್ ನ್ಯಾಯಾಧೀಶರಾದ ಹಾಗೂ ಜೆಎಂಎಫ್‍ಸಿ ಚಂದನ್.ಎಸ್ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap