ತಿಪಟೂರು :
ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರು ಸ್ಥಿತಿ ಇಂದು, ಹಸುಗಳನ್ನು ಹಾಲುಕೊಡುವ ತನಕ ಚೆನ್ನಾಗಿ ನೋಡಿಕೊಂಡು ಕೊನೆಗೆ ಖಸಾಯಿಖಾನೆಗೆ ತಲುಪಿಸುವ ಸ್ಥಿತಿಗೆ ಬಂದಿದೆ ಎಂದು ವಿಧಾನ ಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ವಿಷಾದಿಸಿದರು.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಡಾ.ವೈ.ಎನ್.ಎನ್ ಮತ್ತು ಚಿದಾನಂದ್ ಎಂ ಗೌಡ ಸ್ನೇಹಿತರ ಬಳಗದಿಂದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ, ಸಿಬ್ಬಂದಿಗೆ ಆಹಾರಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ಹಸು ಮತ್ತು ಶಿಕ್ಷಕರ ಸ್ಥಿತಿ ಒಂದೇ ಆಗಿದೆ. ಖಾಸಗಿ ಶಾಲೆಯ ಶಿಕ್ಷಕರು ವಯಸ್ಸಾದ ಮೇಲೆ ಸೇವಾ ಭದ್ರತೆ ಇಲ್ಲದೆ ಪರಿತಪಿಸುತ್ತಾರೆ. ಯಾರು ಸಹ ತಮ್ಮ ಮಕ್ಕಳನ್ನು ಶಾಲಾ ಕಟ್ಟಡ ನೋಡಿ ಶಾಲೆಗೆ ಕಳುಹಿಸುವುದಿಲ್ಲ, ಅಲ್ಲಿನ ಶಿಕ್ಷಕರನ್ನು ನೋಡಿ ಕಳಹಿಸುತ್ತಾರೆ. ಆದರೆ ಕೆಲವು ಸಂಸ್ಥೆಗಳು ವಯಸ್ಸಾದ ನಂತರ ನಿರ್ಧಯವಾಗಿ ಶಿಕ್ಷಕರನ್ನು ಹೊರದುಡುತ್ತಾರೆ.
ಸ್ವಾಭಿಮಾನಿಯಾದ ಶಿಕ್ಷಕರು ಯಾರ ಹತ್ತಿರವು ಕೈಚಾಚುವುದಿಲ್ಲ, ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಅದನ್ನು ತೋರಿಸದೆ ನಗುನಗುತ್ತಾ ವಿದ್ಯಾರ್ಥಿಗಳಿಗೆ ಬೋಧನೆ ಮಾಡದಿದ್ದರೆ ಅವರಿಗೆ ಸಮಾಧಾನವಿಲ್ಲ. ಕೋವಿಡ್ ಸಂದರ್ಭದಲ್ಲಿ ಮಕ್ಕಳನ್ನು ಬಿಟ್ಟು ಬದುಕುವುದಕ್ಕೆ ಶಿಕ್ಷಕರಿಗೆ ಸಾಧ್ಯವಾಗದ ಮಾತಾಗಿದೆ. ಆದಷ್ಟು ಬೇಗ ಶಾಲೆಗಳು ಪ್ರಾರಂಭವಾಗಿ ಶಿಕ್ಷಕರ ಬದುಕು ನಗುವಂತಾಗಲಿ, ಹಾಗೂ ಶೀಘ್ರದಲ್ಲೇ ಶಿಕ್ಷಕರ ಕಷ್ಟವನ್ನು ನೀಗಿಸಲಾಗದಿದ್ದರೂ ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ಮೊದಲ ಕಂತಾಗಿ 5 ಸಾವಿರ ರೂ.ಗಳನ್ನು ಮುಖ್ಯಮಂತ್ರಿ ಬಿಎಸ್‍ವೈ ಘೋಷಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಬಿಇಓಗಳು 2020ರ ಲಾಕ್‍ಡೌನ್ ಆದಾಗ ಇದ್ದಂತಹ ಶಿಕ್ಷಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದರು.
ಆಗ್ನೇಯ ಪದವೀಧರ ಕ್ಷೇತ್ರದ ಶಾಸಕ ಚಿದಾನಂದಗೌಡ ಮಾತನಾಡಿ ಖಾಸಗಿ ಶಾಲೆಗಳಿಂದ ಶೇ.75 ರಷ್ಟು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್, ಬಿಜಿಪಿ ತಾಲ್ಲೂಕು ಮತ್ತು ನಗರಾಧ್ಯಕ್ಷರು, ಬಿಇಓ ಪ್ರಭುಸ್ವಾಮಿ, ತುಮಕೂರು ವಿವಿಸಿಂಡಿಕೇಟ್ ಸದಸ್ಯ ರಾಜು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
