ಪಾವಗಡ
ಇಂಗ್ಲೆಂಡ್ ದೇಶದ ಎರಡನೇ ಬಹುದೊಡ್ಡ ಕಣ್ಣಿನ ಆಸ್ಪತ್ರೆ ಮ್ಯಾಂಚೆಸ್ಟರ್ ರಾಯಲ್ ಐ ಹಾಸ್ಪಿಟಲ್ ಹಾಗೂ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಪಾವಗಡ, ಭಾರತ ಒಂದು ಸಹಯೋಗದ ಒಡಂಬಡಿಕೆಯನ್ನು ಸದ್ಯದಲ್ಲಿಯೇ ಮಾಡಿಕೊಳ್ಳುವ ಅಭೂತಪೂರ್ವ ಅವಕಾಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ನಿಟ್ಟಿನಲ್ಲಿ ನವೆಂಬರ್ 20 ರಂದು ಸ್ವಾಮಿ ಜಪಾನಂದಜಿ ಹಾಗೂ ಮ್ಯಾಂಚೆಸ್ಟರ್ ರಾಯಲ್ ಐ ಹಾಸ್ಪಿಟಲ್‍ನ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಮಾತುಕತೆಯಾಗಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ. ಈ ಒಡಂಬಡಿಕೆಯ ಪ್ರಕಾರ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗು ಸಂಶೋಧನಾ ಕೇಂದ್ರ, ಪಾವಗಡ ಜಂಟಿಯಾಗಿ ಗ್ರಾಮಾಂತರ ಪ್ರದೇಶದಲ್ಲಿನ ನೇತ್ರ ಚಿಕಿತ್ಸೆ ಹಾಗು ಮಕ್ಕಳ ನೇತ್ರ ತಪಾಸಣೆ, ಹಿರಿಯರ ದೃಷ್ಟಿ ನಿವಾರಣಾ ವಿಭಾಗದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಜಂಟಿಯಾಗಿ ತಾಂತ್ರಿಕತೆ ಹಾಗು ನೈಪುಣ್ಯತೆಯ ವಿನಿಮಯ ಮುಂತಾದ ವಿಚಾರಗಳನ್ನು ಚರ್ಚಿಸಲಾಯಿತು.
ಸ್ವಾಮಿ ಜಪಾನಂದಜಿರವರು ಮ್ಯಾಂಚೆಸ್ಟರ್ ರಾಯಲ್ ಕಣ್ಣಿನ ಆಸ್ಪತ್ರೆಯ ಮುಖ್ಯ ನಿರ್ವಾಹಣಾಧಿಕಾರಿ ಜೋನ್ ಆಶ್ಕ್ರಾಫ್ಟ್ ಹಾಗು ಡಾ.ವಿಲಿಯಮ್ಸ್ ರವರೊಂದಿಗೆ ಉನ್ನತಮಟ್ಟದ ಚರ್ಚೆನಡೆಸಿದರು. ಈ ಚರ್ಚೆಯಲ್ಲಿ ಮತ್ತೊಬ್ಬ ಕನ್ನಡಿಗರೆ ಆದ ಡಾ. ವಿಶ್ವನಾಥ್, ಹಿರಿಯ ತಜ್ಞರು, ನ್ಯೂರೋ ಆಫ್ತಲ್ ತಜ್ಞರು ಭಾಗವಹಿಸಿದ್ದರು. ಒಟ್ಟಿನಲ್ಲಿ ದೂರದ ಇಂಗ್ಲೆಂಡಿನ ಎರಡನೆ ಬಹುದೊಡ್ಡ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಜೊತೆಯಾಗಿ ಸೇವೆ ಸಲ್ಲಿಸಲು ನಿಶ್ಚಯಿಸಿರುವುದರಿಂದ ತಾಲ್ಲೂಕಿನ ಸಮಸ್ತ ಗ್ರಾಮಾಂತರ, ರೈತಾಪಿ ಜನರಿಗೆ ಉತ್ಕೃಷ್ಟ ರೀತಿಯ ನೇತ್ರ ಚಿಕಿತ್ಸೆ ದೊರೆಯಲಿದೆ ಎಂದು ಹರ್ಷಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
