ತಿಪಟೂರು :
ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ದೃಷ್ಠಿಯಿಂದ ಮಹಿಳಾ ಮತ್ತು ಮಕ್ಕಳ ಇಲಾಖೆ ಒಂದು ಕಡೆ ಪೋಷಣ್ ಅಭಿಯಾನ್ ಕಾರ್ಯಕ್ರಮ ಮಾಡುತ್ತಿದ್ದರೆ. ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರವನ್ನು ಬೇರೆಡೆಗೆ ಸಾಗಿಸುವ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿ ಪತಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ.
ತಾಲ್ಲೂಕಿನ ದಸರೀಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ಹುಚ್ಚನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಚೈತ್ರ.ವೈ ಪತಿ ಅಶೋಕ ಅಂಗನವಾಡಿ ಮಕ್ಕಳಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ವಿತರಿಸಬೇಕಾದ ಕಡಲೆಬೀಜ, ಹೆಸರುಕಾಳು, ಕಡಲೆಕಾಳು ಹಾಲಿನ ಪ್ಯಾಕೇಟ್ ಮುಂತಾದ ಸಾಮಗ್ರಿಗಳನ್ನು ಬ್ಯಾಗ್‍ನಲ್ಲಿ ತುಂಬಿ ಕಳುಹಿಸುವ ಸಂದರ್ಭದಲ್ಲಿ ಗ್ರಾಮಸ್ಥರ ಕೈಗೆ ನೇರವಾಗಿ ಸಿಕ್ಕಿಬಿದ್ದಿದ್ದಾನೆ.
ಈ ಸಂದರ್ಭದಲ್ಲಿ ಇದನ್ನು ಸಾಸಲಹಳ್ಳಿಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ ಮಕ್ಕಳು ಅಥವಾ ಗರ್ಭಿಣಿ, ಬಾಣಂತಿಯರಿಗೆ ವಿತರಿಸುವುದಾದರೆ ಸ್ವತಃ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಮನೆಗೆ ತಲುಪಿಸಿಬೇಕು ಅದನ್ನು ಬಿಟ್ಟು ಯಾವುದೋ ಬ್ಯಾಗಿಗೆ ತುಂಬಿ ಸಹಾಯಕಿಯ ಪತಿಯಿಂದ ತಲುಪಿಸುವ ಕ್ರಮವೇನು ಸ್ಥಳಕ್ಕೆ ಸಿ.ಡಿ.ಪಿ.ಓ ಬರಲಿ ಎಂದು ಗ್ರಾಮಸ್ಥರು ಆಗ್ರಹಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಅಕ್ರಮವನ್ನು ಸಾಕ್ಷಿಸಮೇತ ಹಿಡಿದ ಮೋಹನ್‍ಕುಮಾರ್, ದೇವರಾಜು ಮತ್ತು ಗ್ರಾಮಸ್ಥರು ಹೇಳುವಂತೆ ಬಹಳ ದಿನಗಳಿಂದಲೂ ಪೌಷ್ಠಿಕ ಆಹಾರವನ್ನು ಕದ್ದು ಸಾಗಿಸುತ್ತಿದ್ದು, ಈಗ ಹಿಡಿದಿದ್ದೇವೆ. ಮಕ್ಕಳ ಮನೆಯವರು ಕೇಳಿದರೆ ಇನ್ನು ಬಂದಿಲ್ಲ ಬಂದಾಗ ಕೊಡುತ್ತೇವೆಂದು ಹೇಳುತ್ತಾರೆ. ಸಾಮಗ್ರಿಗಳನ್ನು ಕದ್ದು ಸಾಗಿಸುವುದನ್ನು ಹಿಡಿಯಲೆಂದು ಕಾಯ್ದಿದ್ದೆವು ಈ ದಿನ ನಮ್ಮ ಮುಂದೆಯೇ ತೆಗೆದುಕೊಂಡು ಹೋಗುವುದನ್ನು ನೋಡಿ ಹಿಡಿದಿದ್ದೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
