ತಿಪಟೂರು :
ತಾಲ್ಲೂಕು ಆಡಳಿತದ ವೈಫಲ್ಯ, ದಿವ್ಯ ನಿರ್ಲಕ್ಷ್ಯದಿಂದ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಬೇಕಿದ್ದ ಮತ ಎಣಿಕೆ ಪ್ರಕ್ರಿಯೆಯೂ 10.30 ಆದರೂ ಪ್ರಾರಂಭವಾಗದೆ ಇದ್ದದ್ದರಿಂದ ಅಭ್ಯರ್ಥಿಗಳು ಕಂಗಾಲಾಗಿದ್ದ ಘಟನೆ ನಡೆದಿದೆ.
ನಗರದ ಕಲ್ಪತರು ವಿದ್ಯಾಸಂಸ್ಥೆ ಪಲ್ಲಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾರಮಭವಾದ ಚುನಾವಣಾ ಮತ ಎಣಿಕೆ ಕಾರ್ಯವು ಬೆಳಿಗ್ಗೆ ತಡವಾಗಿ ಪ್ರಾರಂಭವಾಯಿತು. ಮತ ಎಣಿಕೆಗೆ ತಡವಾದ ಕಾರಣ ಎನು ಎಂಬುದು ತಿಳಿಯದೆ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ತದ ನಂತರ 11 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿ ಮಂದಗತಿಯಲ್ಲಿ ಸಾಗಿತು.
ಚುನಾವಣಾ ಮತ ಎಣಿಕೆಗೆ ಅಗತ್ಯವಿದ್ದ ಪೂರಕ ಸಾಮಾಗ್ರಿಗಳನ್ನು (ಮತ ವಿಂಗಡನೆಗೆ ಬೇಕಾಗಿರುವ) ಮಧ್ಯಾಹ್ನ 2 ಗಂಟೆಯಾದರೂ ಸಾಗಿಸುುತ್ತಿದ್ದ ಸಿಬ್ಬಂದಿಗಳನ್ನು ಕಂಡು ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದರು. ಇದರ ಮಧ್ಯೆ ಅಭ್ಯರ್ಥಿಗಳು, ಏಜೆಂಟರು ಕುಳಿತುಕೊಳ್ಳಲು ಸ್ಥಳವಿಲ್ಲದೇ ಬಿರು ಬಿಸಿಲಿನಲ್ಲಿಯೇ ನಿಂತಿದ್ದರು. ಬಾಯಾರಿಕೆಯಾಗಿ ಕುಡಿಯುವ ನೀರಿನ ಆಹಾಕಾರ ಎದುರಾಗಿತ್ತು.
ಮೊಬೈಲ್ ವಶಕ್ಕೆ ಪಡೆದ ಪೊಲೀಸರು :
ಭದ್ರತಾ ವೈಫಲ್ಯದಿಂದಾಗಿ ಮತ ಎಣಿಗೆ ಕೇಂದ್ರ ಒಳಭಾಗದಲ್ಲಿ ಮೊಬೈಲ್‍ಗಳು ನುಸುಳಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಮಾಹಿತಿ ಹೊರಗೆ ವಿನಿಮಯವಾಗಿ ಬೆಂಬಲಿಗರೇ ವಿಜಯೋತ್ಸವನ್ನು ಆಚರಣೆ ಮಾಡುತ್ತಿದ್ದರು. ತಡವಾಗಿ ಈ ವಿಷಯ ತಿಳಿದ ಪೊಲೀಸ್ ಸಿಬ್ಬಂದಿಗಳು ಎಲ್ಲಾ ಅಧಿಕಾರಿಗಳನ್ನು ಪರಿಶೀಲಿಸಿದಾಗ ಸುಮಾರು 30ಕ್ಕೂ ಹೆಚ್ಚು ಮೊಬೈಲ್‍ಗಳು ಪತ್ತೆಯಾದವು. ಅವುಗಳನ್ನು ವಶಕ್ಕೆ ಪಡೆದು ಜಾಗೃತರಾದರು.
ಕಳಪೆ ಆಹಾರದ ಆರೋಪ :
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಆರಕ್ಷಕರು ಹಾಗೂ ಸಿಬ್ಬಂದಿಗಳಿಗೆ ಕಳಪೆ ಆಹಾರ ನೀಡಿದ್ದು, ಸಿಬ್ಬಂದಿಗಲೇ ಹೇಳುವಂತೆ ಅರ್ಧ ಬೆಂದಿದ್ದ ಅನ್ನ, ನೀರಿನಷ್ಟು ರುಚಿ ಇಲ್ಲದ ಸಾಂಬಾರು, ನೀರಿಗೆ ಹಾಕಿದ್ದ ಮಜ್ಜಿಗೆಯನ್ನು ಸವಿದ ಅಧಿಕಾರಿಗಳು ಇದನ್ನು ತಿನ್ನದೇ ಉಪವಾಸವಿದ್ದರೂ ಇಂತಹ ಆಹಾರ ಬೇಡ ಎನ್ನುತ್ತಿದ್ದರು.
ಸಿಬ್ಬಂದಿಗಳನ್ನು ಹಿಡಿಯಲು ಹರಸಾಹಸ :
ಚುನಾವಣಾ ಮತ ಎಣಿಕೆ ಪ್ರಕ್ರಿಯೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳು ಹರ ಸಾಹಸ ಮಾಡಿದ ಘಟನೆ ವರದಿಯಾಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಸಿಬ್ಬಂದಿಗಳು ಊಟಕ್ಕೆ ಹೋದವರು ಪುನಃ ಬಾರದೇ ಧ್ವನಿವರ್ಧಕದಲ್ಲಿ ಪದೇ ಪದೇ ಕರೆದರು ಬರದಿದ್ದದ್ದು ಚುನಾವಣಾ ಮತ ಎಣಿಕೆ ತಡವಾಗಲು ಕಾರಣವಾಯಿತು. ಬಹುಶಃ ಸೂಕ್ತ ಉಪಹಾರ, ಊಟದ ವ್ಯವಸ್ಥೆ ಇಲ್ಲದ ಹಿನ್ನೆಲೆ ಅಧಿಕಾರಿಗಳು ತಡಮಾಡಿದಂತಿತ್ತು.
ಒಟ್ಟಿನಲ್ಲಿ ತಡವಾಗಿ ಪ್ರಾರಂಭವಾದ ಮತ ಎಣಿಕೆ ಕಾರ್ಯವೂ ತಡ ರಾತ್ರಿಯವರೆಗೂ ನಡೆಯುವಂತಹ ಮುನ್ಸೂಚನೆ ದೊರೆತರೂ ಬೆಂಬಲಿಗರೂ ಮತ ಎಣಿಕೆ ಕೇಂದ್ರದ ಹೊರ ಭಾಗದಲ್ಲಿ ಕಾದು ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ