ತಿಪಟೂರು :
ನಗರದ ಹೆಚ್‍ಡಿಎಫ್‍ಸಿ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಸುಮಾರು 29 ಲಕ್ಷ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್‍ಡಿಎಫ್‍ಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಚಿಕ್ಕಬಿದರೆಯ ಶಾಂತಕುಮಾರ್ ಬಿನ್ ಚಂದ್ರಣ್ಣ ಎಂಬುವವರು ಸಾಲದ ಬಾಬ್ತು ಜಮೆ ಮಾಡುವಂತೆ ಡಿಸೆಂಬರ್ 22ರಂದು 29 ಲಕ್ಷ ರೂಪಾಯಿಗಳನ್ನು ಬ್ಯಾಂಕ್‍ನ ವ್ಯವಸ್ಥಾಪಕರಿಗೆ ಕೊಟ್ಟಿರುತ್ತಾರೆ. ಆದರೆ, ಡಿಸೆಂಬರ್ 24 ಆದರೂ ಖಾತೆಗೆ ಹಣ ವರ್ಗಾವಣೆಯಾಗದ ಬಗ್ಗೆ ಇಲ್ಲಸಲ್ಲದ ಕಾರಣ ಹೇಳಿದ ಮ್ಯಾನೇಜರ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಡಿಸೆಂಬರ್ 24ರಂದು ದೂರು ನೀಡಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕಿನ ಅನೇಕ ಗ್ರಾಹಕರು ಠಾಣೆಮುಂದೆ ಜಮಾಸಿದ್ದು ತಮಗೂ ಇದೇ ರೀತಿಯಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಹಣ ಜಮೆ ಮಾಡಲು ಕಾಲಾವಕಾಶ ಕೋರಿದ ಬ್ಯಾಂಕಿನ ವ್ಯವಸ್ಥಾಪಕ 5-6 ಗ್ರಾಹಕರಿಗೆ ಪೋಸ್ಟ್‍ಡೇಟೆಡ್ ಚೆಕ್ ನೀಡಿದ್ದಾರೆ.
ಬ್ಯಾಂಕಿನ ವ್ಯವಸ್ಥಾಪಕ ಆನ್‍ಲೈನ್ ಜೂಜಾದ ರಮ್ಮಿ ಸರ್ಕಲ್‍ಗೆ ಬಿದ್ದು ಬ್ಯಾಂಕಿನ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಈಗ ಊರು ಬಿಟ್ಟಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ನಗರ ಪೋಲೀಸ್ ಠಾಣೆಯಲ್ಲಿ ಐ.ಪಿ.ಸಿ 420 ಕಾಯಿದೆಯಡಿ ದೂರುದಾಖಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
