ಮತಕ್ಕಾಗಿ ಪ್ರಜೆಗಳು ಬೇಕು, ಪ್ರಜೆಗಳ ಸಮಸ್ಯೆ ಮಾತ್ರ ಬೇಡವೆ?

 ತಿಪಟೂರು :

      ಪ್ರಜೆಗಳ ಮತ ಮಾತ್ರ ಬೇಕು, ಪ್ರಜೆಗಳ ಸಮಸ್ಯೆ ನಮಗೇಕೆ ಎಂಬ ವರ್ತನೆಯನ್ನು ತೋರುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಜೆಗಳನ್ನು ಇಲ್ಲದ ಸಂಕಷ್ಟಕ್ಕೆ ದೂಡುತ್ತಿವೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಆರೋಪಿಸಿದರು.

      ಅವರು ನಗರದ ಕೆಂಪಮ್ಮದೇವಿ ದೇವಸ್ಥಾನದಿಂದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಉಪವಿಭಾಗ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ಬಂದು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ನಮ್ಮದು ಕಾಂಗ್ರೆಸ್ ಪರವಾದ ಹೋರಾಟವಲ್ಲ, ನಾವು ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರವು ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದು, ದವಸ-ಧಾನ್ಯ, ಪೆಟ್ರೋಲ್, ಡೀಸೆಲ್, ಗ್ಯಾಸ್ ದರಗಳು ಗಗನ ಮುಖಿಯಾಗಿವೆ. ಜನರ ಆದಾಯ ಮಾತ್ರ ಪಾತಾಳಕ್ಕಿಳಿಯುತ್ತಿದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ರೈತ ವಿರೋಧಿ ಕಾನೂನುಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ರೈತರು ಪ್ರತಿಭಟನೆ ಮಾಡಿದರೂ, ಕಿವಿ ಕೇಳದೆ ಕುಳಿತಿರುವ ಸರಕಾರದಿಂದ ದೇಶಕ್ಕೆ ಏನೂ ಪ್ರಯೋಜನವಿಲ್ಲ. ಕೇಂದ್ರ ಗೃಹಮಂತ್ರಿ ಅಮಿತ್ ಷಾ ಪ್ರಕರಣವೊಂದರಲ್ಲಿ ಗಡಿ ಪಾರಾಗಿದ್ದವರು ಹಾಗೂ ಪ್ರಧಾನಿ ಮೋದಿ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಸಹ ಇಂದು ದೇಶವನ್ನು ಆಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಪಕ್ಷ. ಇಂದಿರಾಗಾಂಧಿ, ರಾಜೀವ್‍ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ.

      ಆದರೆ ಪ್ರಧಾನಿ ಮೋದಿ ಜನರಿಗೆ ಇಲ್ಲದ ಆಮಿಷಗಳನ್ನು ಕೊಟ್ಟು ಇಂದು ಅಧಿಕಾರಕ್ಕೇರಿ ಜನರ ಪ್ರಾಣವನ್ನೆ ತಿನ್ನುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆಯನ್ನು ಹತೋಟಿಯಲ್ಲಿಡಬೇಕು. ರೈತ ವಿರೋಧಿ ನೀತಿಗಳನ್ನು ತಕ್ಷಣವೆ ಹಿಂಪಡೆಯಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಇನ್ನೂ ಜೋರಾಗುತ್ತದೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಎಚ್ಚರಿಸಿ, ತಮ್ಮ ಮನವಿಯನ್ನು ಉಪವಿಭಾಗಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ತಲುಪಿಸಿದರು.

      ಪ್ರತಿಭಟನೆಯಲ್ಲಿ ತಾ.ಪಂ ಅಧ್ಯಕ್ಷ ಶಿವಸ್ವಾಮಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ನಗರ ಅಧ್ಯಕ್ಷ ಟಿ.ಎನ್.ಪ್ರಕಾಶ್, ಹಿರಿಯ ಕಾಂಗ್ರೆಸ್ ಮುಖಂಡ ಅಣ್ಣಯ್ಯ, ತಾ.ಪಂ ಸದಸ್ಯರಾದ ಎನ್.ಎಂ.ಸುರೇಶ್, ಸಿದ್ದಾಪುರ ಸುರೇಶ್, ಬಜಗೂರು ಮಂಜುನಾಥ್, ನಗರಸಭಾ, ಗ್ರಾಮ ಪಂಚಾಯಿತಿ ಸದಸ್ಯರುಗಳು ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link