ಆಧಾರ್ ಕಾರ್ಡ್ ಒಂದು ಸಮಸ್ಯೆ ಹಲವು

 ತಿಪಟೂರು :

      ಅಂಗನವಾಡಿಯಲ್ಲಿ ಆಧಾರ್‍ಕಾರ್ಡ್ ಮಾಡಿಸಿದ್ದ ಮಕ್ಕಳ ಪೋಷಕರಿಗೆ ಹೊಸದೊಂದು ಸಮಸ್ಯೆ ಎದುರಾಗಿದ್ದು ಪೋಷಕರು ಬೆಂಗಳೂರಿನ ಆಧಾರ್ ವಿಭಾಗೀಯ ಕಛೇರಿಗೆ ಹೋಗದೆ ಪರ್ಯಾಯ ದಾರಿ ಇಲ್ಲದೇ ಪರಿತಪಿಸುವಂತಾಗಿದೆ.

      ರಾಜ್ಯದಲ್ಲಿ ಕಳೆದ 2-3 ವರ್ಷಗಳ ಹಿಂದೆ ಅಂಗನವಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಆಧಾರ್ ಕಾರ್ಡ್‍ಮಾಡಿಸಿಕೊಟ್ಟು ಅದರಿಂದ ಆದ ಮಹಾ ಎಡವಟ್ಟೊಂದು ಈಗ ಬೆಳಕಿಗೆ ಬರುತ್ತಿದೆ. ಸಾಮಾನ್ಯವಾಗಿ ನಾಡಕಛೇರಿ ಹಾಗೂ ನೊಂದಾಯಿತ ಆಧಾರ್ ಕಾರ್ಡ್ ಸೆಂಟರ್‍ಗಳಲ್ಲಿ ಆಧಾರ್ ಕಾರ್ಡ್ ಮಾಡಿಸಿದವರಿಗೆ ಯಾವುದೇ ತೊಂದರೆಯಾಗುತ್ತಿಲ್ಲ. ಮುಖ್ಯವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಟ್ಯಾಬ್ ಸಹಾಯದಿಂದ ಮಾಡಿದ ಆಧಾರ್ ಕಾರ್ಡ್‍ನಲ್ಲಿ ಕೇವಲ ಇಂಗ್ಲೀಷ್‍ನಲ್ಲಿ ಹೆಸರಿದ್ದು ಕನ್ನಡದಲ್ಲಿ ಇಲ್ಲದೇ ಇರುವ ಪೋಷಕರು ಕಡ್ಡಾಯವಾಗಿ ಬೆಂಗಳೂರಿನ ವಿಭಾಗೀಯ ಕಛೇರಿಗೆ ಹೋಗಿ ಆಧಾರ್ ಕಾರ್ಡ್ ತಿದ್ದುಪಡಿಮಾಡಿಸದೆ ಇದ್ದರೆ ಪಡಿತರ, ಕಾರ್ಮಿಕರ ಕಾರ್ಡ್ ಹಾಗೂ ಆರೋಗ್ಯ ಸೇವೆಗಳು ಸಿಗದೆ ಇರುವಂತಹ ಸ್ಥಿತಿಗೆ ಬಂದು ತಲುಪಿದ್ದು ಈಗ ಬೆಂಗಳೂರಿಗೆ ಹೋಗಲೆ ಬೇಕಾಗದ ಅನಿವಾರ್ಯತೆ ಎದುರಾಗಿದೆ.

      ಅಂಗನವಾಡಿಯಲ್ಲಿ ಮಾಡಿಸಿದ ಆಧಾರ್ ಕಾರ್ಡ್‍ಗಳನ್ನು ಎಷ್ಟುಬಾರಿ ತಿದ್ದುಪಡಿಮಾಡಿದರು ಸಹ ಕನ್ನಡದಲ್ಲಿ ಹೆಸರು ಬರುತ್ತಿಲ್ಲ ಇದರಿಂದ ರೋಸಿಹೋದ ಜನತೆ ಈಗ ಬೆಂಗಳೂರಿನ ದಾರಿ ಹಿಡಿಯದೇ ವಿಧಿಯೇ ಇಲ್ಲ.

ಸಾಫ್ಟ್ ವೇರ್ ಸಮಸ್ಯೆ :

      ಅಂಗನವಾಡಿಯಲ್ಲಿ ಟ್ಯಾಬ್‍ಗಳ ಸಹಾಯದಿಂದ ಪರಿಣಿತರ ಸಹಾಯವಿಲ್ಲದೆ ಆಧಾರ್ ಕಾರ್ಡ್‍ಗಳನ್ನು ಮಾಡಿದ್ದು ಸಾಫ್ಟ್‍ವೇರ್ ಸಮಸ್ಯೆಯಿಂದ ನೊಂದಾಯಿಸುವಾಗ ಪ್ರಾದೇಶಿಕ ಬಾಷೆ ಕನ್ನಡವನ್ನು ಆಯ್ಕೆಮಾಡಿಲ್ಲದೆ ಇರಬಹುದು, ಕನ್ನಡದಲ್ಲಿ ಟೈಪ್‍ಮಾಡುವುದು ತಿಳಿದೆಯೋ ಅಥವಾ ಹೇಗೋ ಮಾಡಿದರಾಯಿತು ಎಂದುಕೊಂಡು ಆಧಾರ್‍ಕಾರ್ಡ್ ಮಾಡಿಕೊಟ್ಟಿದ್ದರು ಆದರೆ ಈಗ ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ.

ಪಡಿತರ ಅಕ್ಕಿ ಇಲ್ಲ :

      ಅಂಗನವಾಡಿಯಲ್ಲಿ ಆಧಾರ್ ಕಾರ್ಡ್ ಮಾಡಿಸಿದ ತಪ್ಪಿಗೆ ಮಕ್ಕಳಿಗೆ ಅಕ್ಕಿಯೂ ಇಲ್ಲದೆ ಇರುವುದು ಮತ್ತೊಂದು ವಿಪರ್ಯಾಸವಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಅಂದಾಜು ಒಂದು ಲಕ್ಷ ಆಧಾರ್ ಕಾರ್ಡ್‍ಮಾಡಿಕೊಟಿದ್ದಾರೆ ಅಂದರೆ ಒಂದು ಕಾರ್ಡ್‍ಗೆ 5 ಕೆ.ಜಿ ಅಂದರೆ ತಿಂಗಳಿಗೆ 500 ಟನ್ ಅಕ್ಕಿ ಸರ್ಕಾರಕ್ಕೆ ಉಳಿತಾಯುವಾಗಿತ್ತಿರುವುದರ ಜೊತೆಗೆ ಅಷ್ಟೇ ಪ್ರಮಾಣದ ಬಡಜನರು ಪಡಿತರ ಅಕ್ಕಿ ಇಲ್ಲದೆ ಪರದಾಡುವಂತಾಗಿದೆ. ಇಲ್ಲೂ ಸಹ ಸಾಫ್ಟ್‍ವೇರ್ ತೊಂದರೆಯಾಗುತ್ತಿದ್ದು ಕನ್ನಡದಲ್ಲಿ ಹೆಸರಿಲ್ಲೆಂದರೆ ಆಹಾರ ಮತ್ತು ನಾಗರೀಕ ಸರಬರಾಜು ಸಾಫ್ಟ್‍ವೇರ್‍ನಲ್ಲಿ ಅರ್ಜಿಯು ಮುಂದೆಹೋಗುವುದೇ ಇಲ್ಲ.

ವಿದ್ಯಾರ್ಥಿವೇತನವಿಲ್ಲ :

     ಮುಖ್ಯವಾಗಿ ಆಧಾರ್ ಕಾರ್ಡ್‍ನ ಈ ಸಮಸ್ಯೆ ಪ್ರಾರಂಭವಾಗಿದ್ದೆ ಇಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿ ಅಲ್ಲಿಂದ ದಾಖಲಾತಿ ಪ್ರಮಾಣ ಪತ್ರವನ್ನು ಪಡೆದು ಕಾರ್ಮಿಕ ಇಲಾಖೆಗೆ ಹೋದ ಪೋಷಕರಿಗೆ ಅಲ್ಲಿಯೂ ಸಹ ನಿಮ್ಮ ಮಕ್ಕಳ ಆಧಾರ್ ಕಾರ್ಡ್‍ನಲ್ಲಿ ಕನ್ನಡದಲ್ಲಿ ಹೆಸರು ಬಂದಿಲ್ಲ ಅದನ್ನು ಸರಿಪಡಿಸುವ ತನಕ ನಿಮ್ಮ ಮಕ್ಕಳ ಹೆಸರನ್ನು ಕಾರ್ಮಿಕ ಇಲಾಖೆಯ ಕಾರ್ಮಿಕ ಕಾರ್ಡ್‍ನಲ್ಲಿ ಸೇರಿಸಲು ಆಗುವುದಿಲ್ಲ ಜೊತೆಗೆ ನಿಮ್ಮ ಮಕ್ಕಳಿಗೆ ವಿದ್ಯಾರ್ಥಿವೇತನವು ಬರುವುದಿಲ್ಲ ಎನ್ನುತ್ತಾರೆಂದು ಪೋಷಕರು ನೊಂದು ನುಡಿಯುತ್ತಾರೆ.
ಈಗಲಾದರು ಸಂಬಂಧಪಟ್ಟ ಇಲಾಖೆಯವರು ಆಧಾರ್ ಕಾರ್ಡ್‍ನಲ್ಲಿ ಕನ್ನಡದಲ್ಲಿ ಹೆಸರು ಬರುವಂತೆ ತಾಲ್ಲೂಕು ಮಟ್ಟದಲ್ಲಿ ತಿದ್ದುಪಡಿಗೆ ಅವಕಾಶಮಾಡಿಕೊಟ್ಟರೆ ಲಕ್ಷಾಂತರ ಮಕ್ಕಳಿಗೆ ಮತ್ತು ಪೋಷಕರಿಗೆ ಅನುಕೂಲವಾಗುತ್ತದೆ ಎಂದುಬುದು ನೊಂದವರ ಆಶಯವಾಗಿದೆ.

      ನಾವು ಹೋಗೋ ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದೆವು ಆದರೆ ಅಂಗನವಾಡಿಯಲ್ಲಿ ಮಾಡುತ್ತೇವೆ ಎಂದಾಗ ಸರದಿಸಾಲಿನಲ್ಲಿ ನಿಲ್ಲುವುದು ತಪ್ಪಿತು ಎಂದುಕೊಂಡೆವು ಆದರೆ ಈ ರೀತಿ ತೊಂದರೆಯಾಗುತ್ತದೆ ಎಂದಿದ್ದರೆ ನಾವೇ ಆಧಾರ್ ಕಾರ್ಡ್‍ಮಾಡಿಸಿಕೊಳ್ಳುತ್ತಿದ್ದೆವು. ಈಗ ಅಂಗನವಾಡಿಯಲ್ಲಿ ಆಧಾರ್ ಕಾರ್ಡ್‍ಮಾಡಿಸಿದ್ದನ್ನು ಹಲವಾರು ಬಾರಿ ಟೋಕನ್ ತೆಗೆದುಕೊಂಡು ಹಾಗೂ ನಮ್ಮ ಕೂಲಿ ಕೆಲಸವನ್ನು ಬಿಟ್ಟು ಎಷ್ಟು ಬಾರಿ ಬದಲಾವಣೆ ಮಾಡಿದರೂ ಬದಲಾಗುತ್ತಿಲ್ಲ ಈಗ ಬೆಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೂಲಿ ಕಾರ್ಮಿಕ ವೆಂಕಟೇಶ್ ತಿಳಿಸುತ್ತಾರೆ.

      ಆಧಾರ್ ಕಾರ್ಡ್‍ನಲ್ಲಿ ಸಮಸ್ಯೆಯಾಗಿರುವುದು ನಮಗೆ ತಿಳಿಯುತ್ತಿದ್ದು ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಪರಿಹಾರವನ್ನು ದೊರಕಿಸುವ ವ್ಯವಸ್ಥೆಯನ್ನು ಮಾಡುತ್ತೇವೆ. ತಿಪಟೂರು ತಹಸೀಲ್ದಾರ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ .

 ರಂಗನಾಥ್ ಪಾರ್ಥಸಾರಥಿ

Recent Articles

spot_img

Related Stories

Share via
Copy link