ಅಂದು 1929ರ ಏಪ್ರಿಲ್ 8. ಭಗತ್ ಮತ್ತು ಆತನ ಸ್ನೇಹಿತ ಬಟುಕೇಶ್ವರ ದತ್ತರು ಸಂಸತ್ನ ಅಧಿವೇಶನದಲ್ಲಿ ಭಾಷಣ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ಸ್ಥಾನದ ಹಿಂದಿನ ಗೋಡೆಗೆ ಗುರಿಯಿಟ್ಟು ಬಾಂಬ್ ಎಸೆದರು. ಸ್ಪೋಟದಿಂದ ಗಾಬರಿಯಾಗಿ ಎಲ್ಲರೂ ಹೊರಗೋಡತೊಡಗಿದರು.
ಬಾಂಬ್ ದಾಳಿಯಿಂದ ಯಾವ ಸಾವು-ನೋವೂ ಆಗಲಿಲ್ಲ; ಬ್ರಿಟಿಷರ ಗಮನಸೆಳೆದು ಸತ್ಯ ಅರುಹುವುದೇ ಭಗತ್, ಅವನ ಗೆಳೆಯರ ಉದ್ದೇಶವಾಗಿತ್ತು.ಹೀಗಾಗಿ, ತಪ್ಪಿಸಿಕೊಳ್ಳುವ ಯತ್ನವನ್ನೂ ಮಾಡದೆ ಸೆರೆಯಾದರು. ಅವರನ್ನು ಬಂಧಿಸಿ ಸೆಂಟ್ರಲ್ ಜೈಲಿನಲ್ಲಿರಿಸಲಾಯಿತು.
ನ್ಯಾಯಾಲಯದಲ್ಲಿ ಭಗತ್ ಮತ್ತು ಬಟುಕೇಶ್ವರ ದತ್ತರ ವಿಚಾರಣೆ ಆರಂಭವಾಯಿತು. ತನ್ನ ಪರ ತಾನೇ ವಾದಿಸಲು ಭಗತ್ ನಿರ್ಧರಿಸಿದ. ತನ್ನ ಕೆಲಸ ಸ್ವಾತಂತ್ರ್ಯ ಸಂಗ್ರಾಮದ ಸಂಕೇತವೆಂದೂ, ಬ್ರಿಟಿಷರ ಸಾಮ್ರಾಜ್ಯವಾದವನ್ನು ವಿರೋಧಿಸಿ ಚುನಾಯಿತರಾಗಿದ್ದ ಭಾರತೀಯ ಪ್ರತಿನಿಧಿಗಳ ಮೇಲೆ ಬ್ರಿಟಿಷರು ನಡೆಸಿದ ದಬ್ಬಾಳಿಕೆಗೆ ಪ್ರತ್ಯುತ್ತರವೆಂದೂ ಭಗತ್ ವಾದಿಸಿದ.
ಅಷ್ಟು ಹೊತ್ತಿಗಾಗಲೇ ಸ್ವಾತಂತ್ರ್ಯ ಹೋರಾಟದ ಕಿಡಿ ದೇಶದೆಲ್ಲೆಡೆ ವ್ಯಾಪಿಸಿ, ಭಗತ್ನ ಗುಣಗಾನ ನಡೆಯುತ್ತಿತ್ತು. ಭಗತ್, ಅವನ ಸ್ನೇಹಿತರು ಯುವಶಕ್ತಿಯ, ಸ್ವಾತಂತ್ರ್ಯ ಸಂಗ್ರಾಮದ ಹೊಸಸಂಕೇತವಾಗಿದ್ದರು.
ಅದೇ ವೇಳೆಗೆ, ಭಗತ್ನ ಸಂಘಟನೆಯ ಸಹಚರರನ್ನು ಲಾಹೋರ್ನಲ್ಲಿ ಬಂಧಿಸಿ, ಸ್ಯಾಂಡರ್ಸ್ ಕೊಲೆ ಹಾಗೂ ಕಾನೂನುವಿರೋಧಿ ಕಾರ್ಯಾಚರಣೆಯ ಆಪಾದನೆ ಹೊರಿಸಲಾಗಿತ್ತು. ಇತ್ತ ನ್ಯಾಯಾಲಯದಲ್ಲಿ ಭಗತ್ನ ವಾದಗಳೆಲ್ಲ ತಿರಸ್ಕೃತಗೊಂಡು, ಭಗತ್, ರಾಜಗುರು ಮತ್ತು ಸುಖದೇವ್ರಿಗೆ ಮರಣದಂಡನೆ ಘೋಷಿಸಲಾಯಿತು. 1931ರ ಮಾರ್ಚ್ 23ರಂದು ಸಂಗಡಿಗರ ಜತೆ ನೇಣುಗಂಬವೇರಿದ ಭಗತ್ ಲಕ್ಷಾಂತರ ಯುವಕರು ತಾಯಿನಾಡಿನ ಮುಕ್ತಿಗಾಗಿ ಹೋರಾಡಲು ಪ್ರೇರಣೆಯಾದ. ಎಂದೂ ಆರದ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿದ.
ಗಲ್ಲಿಗೇರುವ ಹಿಂದಿನ ದಿನ:
ಮಾರ್ಚ್ 22 ಅಂದರೆ ಗಲ್ಲಿಗೇರುವ ಹಿಂದಿನ ದಿನ ಭಗತ್ ಸಿಂಗ್ ಪರ ವಕೀಲ ಪ್ರಾಣ್ನಾಥ್ ಮೆಹ್ತಾ, ಭಗತ್ನನ್ನು ಕೊನೆಯದಾಗಿ ಭೇಟಿಯಾದ ಸಂದರ್ಭ. ಮೆಹ್ತಾ, ‘ದೇಶಕ್ಕೆ ಏನಾದರೂ ಸಂದೇಶ ನೀಡುತ್ತೀರಾ?’ ಎಂದಾಗ ಭಗತ್ ಸಿಂಗ್ ೆ ‘ಸಾಮ್ರಾಜ್ಯಶಾಹಿಗೆ ಧಿಕ್ಕಾರ, ಕ್ರಾಂತಿ ಚಿರಾಯುವಾಗಲಿ- ಈ ಎರಡು ಘೊಷಣೆಗಳನ್ನು ತಿಳಿಸಿ’ ಎಂದ. ‘ನಿನಗೇನಾದರೂ ಆಸೆ ಇದೆಯಾ?’ ಎಂಬ ಮೆಹ್ತಾರ ಪ್ರಶ್ನೆಗೆ, ‘ಹೌದು, ಈ ದೇಶದಲ್ಲಿ ಮತ್ತೆ ಹುಟ್ಟುವ ಆಸೆಯಿದೆ; ಮತ್ತೆ ಹುಟ್ಟಿದರೆ ಈ ದೇಶದ ಸೇವೆಮಾಡಬಹುದು’ ಎಂದುತ್ತರಿಸಿದ!
ಗಲ್ಲಿಗೇರುವ ದಿನವೂ, ನೇಣುಗಂಬದ ಹಾದಿಯಲ್ಲಿ ಭಗತ್ ಸಿಂಗ್ ಗಟ್ಟಿಯಾಗಿ ಕ್ರಾಂತಿ ಕುರಿತಾದ ಭಾಷಣವೊಂದನ್ನು ಮಾಡಿದ. ಉಳಿದ ಕೈದಿಗಳು ರೋಮಾಂಚನಗೊಂಡರು. ‘ರಂಗ್ ದೇ ಬಸಂತಿ ಚೋಲಾ….’ ಹಾಡು ಪ್ರತಿಧ್ವನಿಸಿತು. ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಈ ಮೂವರ ಮುಖದಲ್ಲೂ ಉತ್ಸಾಹ ಮತ್ತು ನಗು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹೊತ್ತಿಸಬಲ್ಲ, ಸ್ಪೂರ್ತಿ ತುಂಬಬಲ್ಲ ಅವರ ವರ್ತನೆಗೆ ಜೈಲಿನ ಅಷ್ಟೂ ಅಧಿಕಾರಿಗಳು ಬೆಚ್ಚಿಬಿದ್ದಿದ್ದರು. ನೇಣಿಗೆ ಕೊರಳೊಡ್ಡುವ ಮುನ್ನವೂ ಆ ಮೂವರ ಮುಖಗಳಿಂದ ನಗು ಮಾಸಿರಲಿಲ್ಲ…
ಪಂಜಾಬಿನಲ್ಲಿ ರಜೆ:
ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಹುತಾತ್ಮರಾದ ಮಾರ್ಚ್ 23ರ ಶಹೀದ್ ದಿನಕ್ಕೆ ಸಾರ್ವತ್ರಿಕ ರಜಾ ದಿನವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಘೋಷಿಸಿದ್ದಾರೆ. ಪಂಜಾಬ್ ವಿಧಾನಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಪ್ರತಿಮೆ ಸ್ಥಾಪಿಸುವ ನಿರ್ಣಯವನ್ನೂ ವಿಧಾನಸಭೆ ಅಂಗೀಕರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ