ಮಹಿಳಾ ಬೋಗಿಯೊಳಗೆ ಮದ್ಯದ ಬಾಟಲಿ ಎಸೆದ ಕಿಡಿಗೇಡಿಗಳು

ಮುಂಬೈ:

    ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ಮದ್ಯದ ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆದುಬಿಡುತ್ತಾರೆ. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು ಎಂಬ ಪರಿಜ್ಞಾನವೇ ಇಲ್ಲದಂತೆ ವರ್ತಿಸುತ್ತಾರೆ. ಇತ್ತೀಚೆಗೆ ಅಂತಹದೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಚಲಿಸುತ್ತಿರುವ ರೈಲಿನ ಮಹಿಳಾ ಕಂಪಾರ್ಟ್‍ಮೆಂಟ್‍ ಒಳಗೆ ಕಿಡಿಗೇಡಿಗಳು ಖಾಲಿ ಮದ್ಯದ ಬಾಟಲಿಯನ್ನು ಎಸೆದಿದ್ದಾರೆ. ರಾತ್ರಿ ವೇಳೆ ಟಿಟ್ವಾಲಾ ಸ್ಥಳೀಯ ರೈಲು ಮಸೀದಿ ನಿಲ್ದಾಣವನ್ನು ದಾಟಿ ಮುಂಬೈನ ಸ್ಯಾಂಡ್ಹರ್ಸ್ಟ್ ರಸ್ತೆಯ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಘಟನೆಗೆ ಎಫ್‍ಪಿಜೆಯ ಮಹಿಳಾ ಪತ್ರಕರ್ತೆ ಸಾಕ್ಷಿಯಾಗಿದ್ದಾಳೆ. ಆಕೆ ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದು ಈಗ ವೈರಲ್  ಆಗಿದೆ.

   ಕಿಡಿಗೇಡಿಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಾಟಲಿಯನ್ನು ಎಸೆದಿದ್ದಾರೆ ಎಂದು ಹೇಳಲಾಗಿದೆ. ಅವರು ಎಸೆದ ಬಾಟಲಿ ಮೊದಲು ಫ್ಯಾನ್‍ಗೆ ಅಪ್ಪಳಿಸಿ, ನಂತರ ಬಾಟಲಿಯ ಚೂರುಗಳು ಕಂಪಾರ್ಟ್‍ಮೆಂಟಿನಲ್ಲಿ ಚದುರಿಹೋದವಂತೆ. ಅದರಲ್ಲಿ ಒಂದು ತುಂಡು 18 ವರ್ಷದ ಅಮೀನಾ ಖಾನ್ ಎಂಬ ಹುಡುಗಿಗೆ ತಗುಲಿದೆ. ಆದರೆ ಅದೃಷ್ಟವಶಾತ್ ಆಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಬಾಟಲಿಯನ್ನು ಎಸೆದ ರೈಲು ಸಿಎಸ್ಎಂಟಿ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.

   29 ವರ್ಷದ ಮಹಿಳೆ ಪ್ರಣವಿ ಬಿಲ್ಲಾ ಎಂಬಾಕೆ ಮುರಿದ ಬಾಟಲಿಯನ್ನು ಎತ್ತಿಕೊಂಡು ರೈಲಿನಲ್ಲಿದ್ದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ವರದಿ ಮಾಡಿದ್ದಾಳೆ. ಆದರೆ ಅವರು ಅದಕ್ಕೆ ಪ್ರತಿಕ್ರಿಯಿಸಲಿಲ್ಲ ಹಾಗೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ. ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಭದ್ರತಾ ಕ್ರಮಗಳು ಮತ್ತು ಇಂತಹ ಅಜಾಗರೂಕ ನಡವಳಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಕರೆ ನೀಡಿದ್ದಾರೆ. ಇಂತಹ ಘಟನೆಗಳ ದೂರುಗಳಿಗೆ ಪೊಲೀಸರು ಕೂಡಲೇ ಪ್ರತಿಕ್ರಿಯಿಸಬೇಕು ಎಂದು ಕೇಳಿಕೊಂಡಿದ್ದಾರೆ. ಅದೃಷ್ಟವಶಾತ್, ಬಾಟಲಿ ಯಾವುದೇ ಮಹಿಳಾ ಪ್ರಯಾಣಿಕರಿಗೆ ನೇರವಾಗಿ ತಗುಲಲಿಲ್ಲ. ಇಲ್ಲವಾದರೆ ಇದು ಮಾರಣಾಂತಿಕವಾಗಿರಬಹುದು ಎನ್ನಲಾಗಿದೆ.

   ಈ ಘಟನೆಯ ಬಗ್ಗೆ ಮಾತನಾಡಿದ ಎಫ್‍ಪಿಜೆಯ ಮಹಿಳಾ ಪತ್ರಕರ್ತೆ, “ನಾನು ಮಹಿಳಾ ಕಂಪಾರ್ಟ್‍ಮೆಂಟ್‍ನಲ್ಲಿ ಕುಳಿತಿದ್ದಾಗ, ಎಲ್ಲಿಂದಲೋ, ದೊಡ್ಡ ಮದ್ಯದ ಬಾಟಲಿಯನ್ನು ಒಳಗೆ ಎಸೆಯಲಾಯಿತು. ಹಠಾತ್ ಘಟನೆಯಿಂದ ಎಲ್ಲರಿಗೂ ಶಾಕ್‌ ಆಗಿತ್ತಂತೆ. ಆದರೆ ಈ ಬಗ್ಗೆ ದೂರು ನೀಡಲು ಹೋದಾಗ ಅಲ್ಲಿದ್ದ ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳು ಇದಕ್ಕೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ” ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾಳೆ. ವರದಿ ಪ್ರಕಾರ, ಈ ಘಟನೆ ನಡೆದ ಸ್ವಲ್ಪ ಸಮಯದ ನಂತರ ಒಬ್ಬ ವ್ಯಕ್ತಿಯು ರೈಲು ಹತ್ತಿ ಬಾಟಲಿ ತಗುಲಿ ಗಾಯವಾದ ಹುಡುಗಿಯ ಬಳಿಗೆ ಬಂದು ವಿಚಾರಿಸಿದ್ದಾನಂತೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

Recent Articles

spot_img

Related Stories

Share via
Copy link