ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ (ಮಾ.14) ಅಮೆರಿಕದ ನ್ಯಾಯಂಗ ಇಲಾಖೆಯಲ್ಲಿ ತಮ್ಮ ಭಾಷಣವನ್ನು ಮಾಡಿದ್ದಾರೆ. ಈ ವೇಳೆ ತಮ್ಮ ಶತ್ರುಗಳ ಹೆಡೆಮುರಿ ಕಟ್ಟುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ವಿರೋಧಿಗಳಿಗೆ ಖಡಕ್ ಎಚ್ಚರಿಕೆಯನ್ನು ಈ ಮೂಲಕ ಟ್ರಂಪ್ ನೀಡಿದ್ದಾರೆ. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ತಮ್ಮ ವಿರುದ್ಧದ ವಿಚಾರಣೆಯಲ್ಲಿ ಭಾಗಿಯಾಗಿರುವ ಎಲ್ಲ ಜನರನ್ನು ಬಹಿರಂಗಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ತನ್ನ ಮೇಲೆ ಮೊಕದ್ದಮೆ ಹೂಡಿದ್ದ ಬಗ್ಗೆ ನ್ಯಾಯಾಂಗ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಮಾತನಾಡಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ.
ನಮ್ಮ ಸರ್ಕಾರದಿಂದ ರಾಕ್ಷಸ ಗುಣ ಇರುವ ಹಾಗೂ ಭ್ರಷ್ಟ ಶಕ್ತಿಗಳನ್ನು ನಾವು ಹೊರಹಾಕುತ್ತೇವೆ. ಅವರ ಘೋರ ಅಪರಾಧಗಳು ಮತ್ತು ದುಷ್ಕೃತ್ಯವನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದರು. 2021ರಲ್ಲಿ ಅಫ್ಘಾನಿಸ್ತಾನದಿಂದ ಯುನೈಟೆಡ್ ಸ್ಟೇಟ್ಸ್ ಮಿಲಿಟರಿಯನ್ನು ತೆಗೆಯುವ ಮೂಲಕ ತಾಲಿಬಾನ್ಗಳಿಗೆ ಅವಕಾಶ ಮಾಡಿಕೊಟ್ಟು, ಜಗತ್ತಿನ ಮುಂದೆ ನಮ್ಮ ದೇಶಕ್ಕೆ ಅವಮಾನ ಮಾಡಿದ್ದಾರೆ. ಜೋ ಬೈಡನ್ ಆಡಳಿತ ಸಮಯದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಸಮಯದಲ್ಲಿದ್ದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳವುದಾಗಿ ಹೇಳಿದ್ದಾರೆ.
ಇನ್ನು ಅಮೆರಿಕದ ಆಡಳಿತದಲ್ಲಿ ಅಧ್ಯಕ್ಷರೊಬ್ಬರು ನ್ಯಾಯಾಂಗ ಇಲಾಖೆಗೆ ಭೇಟಿ ನೀಡಿದ್ದು ಇದೇ ಮೊದಲು. ತಮ್ಮ ಭಾಷಣದಲ್ಲಿ, ಬೈಡನ್ ಆಡಳಿತವು ಇಲಾಖೆಯನ್ನು ತಮ್ಮ ವಿರುದ್ಧ ಅಸ್ತ್ರವನ್ನಾಗಿ ಮಾಡಿಕೊಂಡಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.ನಮ್ಮ ಪೂರ್ವಜರು ಈ ನ್ಯಾಯ ಇಲಾಖೆಯನ್ನು ಅನ್ಯಾಯದ ಇಲಾಖೆಯಾಗಿ ಪರಿವರ್ತಿಸಿದರು. ಆದರೆ ಆ ದಿನಗಳು ಮುಗಿದಿವೆ ಮತ್ತು ಅವು ಎಂದಿಗೂ ಹಿಂತಿರುಗುವುದಿಲ್ಲ ಮತ್ತು ಎಂದಿಗೂ ಬರುವುದಿಲ್ಲ ಎಂದು ಘೋಷಿಸಲು ನಾನು ಇಂದು ನಿಮ್ಮ ಮುಂದೆ ನಿಂತಿದ್ದೇನೆ” ಎಂದು ಟ್ರಂಪ್ ಹೇಳಿದರು.








