ಕಲಬುರಗಿ:
ಇಂದಿನಿಂದ ಮಲ್ಲಿಕಾರ್ಜುನ ಖರ್ಗೆ ಕುದುರೆ ಓಡುವುದಿಲ್ಲ. ಉಮೇಶ್ ಜಾಧವ್ ಅವರ ಕುದುರೆ ಓಡುತ್ತದೆ. ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಭದ್ರಕೋಟೆಯಾದ ಕಲಬುರಗಿಯಲ್ಲಿ ಇಂದು ಬಿಜೆಪಿ ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಮಧ್ಯಾಹ್ನ 12ಗಂಟೆಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಆರಂಭಗೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಡಾ.ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಬಿಎಸ್ ಯಡಿಯೂರಪ್ಪ ಬರಮಾಡಿಕೊಂಡರು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಬಿಜೆಪಿಗೆ ಸೇರ್ಪಡೆಯಾಗಿರುವುದು ಬಹಳ ಸಂತೋಷವಾಗಿದೆ. ಈ ವಾತಾವರಣ ನೋಡಿ ಖುಷಿಯಾಗುತ್ತಿದೆ. ನಿಮ್ಮ ಭರವಸೆ ಮೇಲೆ ಬಂದಿದ್ದೇನೆ. ಏನಾದ್ರೂ ಮಾಡಿ ನಮಗೆ ಐತಿಹಾಸಿಕ ಗೆಲುವು ಸಾಧಿಸುವಂತೆ ಮಾಡಿ ಎಂದು ಮನವಿ ಮಾಡಿದರು.
ಮಲ್ಲಿಕಾರ್ಜುನ ಖರ್ಗೆ ನಮ್ಮ ಸಮಾಜಕ್ಕೆ ಎಸ್ ಟಿ ಪಟ್ಟ ಸೇರಿಸದೇ ಕೊಡಲಿ ಪೆಟ್ಟು ಹಾಕಿದ್ದಾರೆ. ಇವತ್ತಿನ ದಿನ ಮಲ್ಲಿಕಾರ್ಜುನ ಖರ್ಗೆ ಕುದುರೆ ಓಡುವುದಿಲ್ಲ. ಉಮೇಶ್ ಜಾಧವ್ ಅವರ ಕುದುರೆ ಓಡುತ್ತದೆ. ಇಂದು ನನಗೊಂದು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ.
ವಿಶ್ವದಲ್ಲೇ ಹೆಸರು ಮಾಡಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ನಮ್ಮ ಆಶಯ ಎಂದು ಬಹಿರಂಗ ಸಭೆಯಲ್ಲಿ ಜಾಧವ್ ವಿನಂತಿಸಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ