ವಾಷಿಂಗ್ಟನ್:
ವರ್ಷಾಂತ್ಯದ ವೇಳೆಗೆ ಭಾರತವು ರಷ್ಯಾದಿಂದ ಮಾಡಿಕೊಳ್ಳುತ್ತಿರುವ ತೈಲ ಆಮದನ್ನು ಹಂತ ಹಂತವಾಗಿ ನಿಲ್ಲಿಸಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗೆ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ಭಾರತವು ರಷ್ಯಾದ ಕಚ್ಚಾ ತೈಲ ಖರೀದಿಗಳನ್ನು ಕ್ರಮೇಣವಾಗಿ ನಿಲ್ಲಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ರಷ್ಯಾ ತೈಲ ಆಮದನ್ನು ನಿಲ್ಲಿಸುವುದಾಗಿ ಭಾರತ ಹೇಳಿತ್ತು. ಇದು ಒಂದು ಪ್ರಕ್ರಿಯೆಯಾಗಿದ್ದು, ಎಲ್ಲವನ್ನೂ ಒಂದೇ ಬಾರಿಗೆ ರಾತ್ರೋರಾತ್ರಿ ನಿಲ್ಲಿಸಲು ಸಾಧ್ಯವಿಲ್ಲ. ವರ್ಷಾಂತ್ಯದ ವೇಳೆಗೆ ಹಂತ ಹಂತವಾಗಿ ಆಮದನ್ನು ನಿಲ್ಲಿಸಲಿದ್ದಾರೆ. ರಷ್ಯಾದಿಂದ ತೈಲ ಆಮದನ್ನು ಭಾರತ ಶೇ 40ಕ್ಕೆ ಇಳಿಸಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಟ್ರಂಪ್, ಮೋದಿ “ಶ್ರೇಷ್ಠ” ವ್ಯಕ್ತಿ ಎಂದು ಹೇಳಿದ್ದಾರೆ.ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದನ್ನು ಮೆಲುಕು ಹಾಕಿದ ಟ್ರಂಪ್, ಭಾರತ ಮತ್ತು ಚೀನಾ ನಡುವೆ ಹೋಲಿಕೆ ಮಾಡಿದ್ದಾರೆ.
ಭಾರತವು ಅತ್ಯುತ್ತಮ ದೇಶವಾಗಿದ್ದು, ಚೀನಾಗಿಂತ ಭಿನ್ನವಾಗಿದೆ. ಉಭಯ ದೇಶಗಳು ರಷ್ಯಾದೊಂದಿಗೆ ವಿಭಿನ್ನ ಸಂಬಂಧವನ್ನು ಹೊಂದಿದ್ದಾರೆ. ಬೈಡನ್ ಮತ್ತು ಒಬಾಮಾ ಅವರ ಕಾರಣದಿಂದಾಗಿ, ರಷ್ಯಾ ಜೊತೆ ಸಂಬಂಧ ಕಾಯ್ದುಕೊಳ್ಳಲಾಗಿತ್ತು ಎಂದಿದ್ದಾರೆ. ಏತನ್ಮಧ್ಯೆ ಭಾರತವು ಒಪ್ಪಂದದ ಹೇಳಿಕೆಯನ್ನು ನಿರಾಕರಿಸಿದೆ. ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ತನ್ನ ಆದ್ಯತೆಯನ್ನು ಒತ್ತಿ ಹೇಳಿದೆ.
ಈ ಹಿಂದೆ ಹೇಳಿಕೆ ನೀಡಿದ್ದ ಟ್ರಂಪ್ ಅವರು, ಭಾರತದ ರಷ್ಯಾದ ತೈಲ ಖರೀದಿ ಕುರಿತು ಟೀಕೆಗಳನ್ನು ಮಾಡಿದ್ದರು. ತೈಲ ಆಮದು ನಿಲ್ಲಸುವವರೆಗೆ ಹೆಚ್ಚುವರಿ ಸುಂಕ ಪಾವತಿ ನಿಲ್ಲುವುದಿಲ್ಲ ಎಂದು ಹೇಳಿದ್ದರು.ಏರ್ ಫೋರ್ಸ್ ಒನ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಅವರು ತಮ್ಮ ದೂರವಾಣಿ ಕರೆಯನ್ನು ನಿರಾಕರಿಸಿದ ಬಗ್ಗೆ ಕೇಳಲಾಯಿತು.
ವರ್ತನೆ ಹೀಗಾದರೆ, ಅವರು ಬಹಳಷ್ಟು ಸುಂಕಗಳನ್ನು ಪಾವತಿಸುತ್ತಲೇ ಇರುತ್ತಾರೆ. ಆದರೆ, ಮೋದಿಯವರು ನನ್ನ ದೂರವಾಣಿ ಕರೆ ನಿರಾಕರಿಸಿದ್ದಾರೆಂಬುದನ್ನು ನಾನು ನಂಬುವುದಿಲ್ಲ. ನಾನು ಮೋದಿಯವರೊಂದಿಗೆ ಮಾತನಾಡಿದ್ದೇನೆ. ಅವರು ರಷ್ಯಾ ತೈಲ ಆಮದನ್ನು ನಿಲ್ಲಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ವಿರುದ್ಧವಾಗಿ ನಡೆದುಕೊಂಡರೆ ಹೆಚ್ಚುವರು ಸುಂಕ ಪಾವತಿಸುವುದನ್ನು ಮುಂದುವರೆಸುತ್ತಾರೆಂದು ಹೇಳಿದ್ದರು.
ಈ ನಡುವೆ ಈ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯ, ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ತಿಳಿಸಿದೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ನಡೆದ ಯಾವುದೇ ಸಂಭಾಷಣೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಗಾಜಾ ಶಾಂತಿ ಯೋಜನೆಯ ಯಶಸ್ಸಿಗೆ ಮೋದಿಯವರು ಟ್ರಂಪ್ ಅವರನ್ನು ಅಭಿನಂದಿಸಿದ್ದರು. ಅಕ್ಟೋಬರ್ 9 ರಂದು ಉಭಯ ನಾಯಕರ ನಡುವೆ ಮಾತುಕತೆ ನಡೆದಿತ್ತು. ಇದೇ ಕೊನೆಯ ಸಂಭಾಷಣೆ ಎಂದು ಹೇಳಿದ್ದಾರೆ.
