ತಿರುಮಲ:
ದೇವಾಲಯದ ಆಡಳಿತವನ್ನು ನೋಡಿಕೊಳ್ಳುವ ಅಧಿಕಾರಿಯೊಬ್ಬರು ಚರ್ಚ್ ನ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ ಅಮಾನತುಗೊಳಿಸಿದ್ದು, ಅಧಿಕಾರಿ ಹಿಂದೂ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ಹೇಳಿದೆ. ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಆಡಳಿತ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಎ. ರಾಜಶೇಖರ್ ಬಾಬು ಪ್ರತಿ ಭಾನುವಾರ ಚರ್ಚ್ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಿದ್ದರು. ಇದು ಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಟಿಟಿಡಿ ಮಂಗಳವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಆಂಧ್ರಪ್ರದೇಶದ ಅತ್ಯಂತ ಪೂಜ್ಯನೀಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ. ಇಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಎ. ರಾಜಶೇಖರ್ ಬಾಬು ಅವರು ತಮ್ಮ ಹುಟ್ಟೂರು ತಿರುಪತಿ ಜಿಲ್ಲೆಯಲ್ಲಿರುವ ಪುತ್ತೂರಿನಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಾರ್ಥನೆಗಳಲ್ಲಿ ನಿರಂತರ ಭಾಗಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.
ಈ ಕುರಿತು ಮಂಗಳವಾರ ಅಧಿಕೃತ ಹೇಳಿಕೆ ನೀಡಿರುವ ಟಿಟಿಡಿ, ರಾಜಶೇಖರ್ ಬಾಬು ಅವರು ಪ್ರತಿ ಭಾನುವಾರ ಚರ್ಚ್ ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿದೆ. ಇದು ಟಿಟಿಡಿ ನಿಯಮಗಳ ಉಲ್ಲಂಘನೆಯಾಗಿದೆ. ಅವರು ಸಂಸ್ಥೆಯ ಉದ್ಯೋಗಿಯಾಗಿ ಟಿಟಿಡಿಯ ನೀತಿ ಸಂಹಿತೆಯನ್ನು ಪಾಲಿಸಿಲ್ಲ ಮತ್ತು ಹಿಂದೂ ಧಾರ್ಮಿಕ ಸಂಘಟನೆಯನ್ನು ಪ್ರತಿನಿಧಿಸುವ ಉದ್ಯೋಗಿಯಾಗಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ದೇವಾಲಯ ಟ್ರಸ್ಟ್ ಹೇಳಿದೆ.
ಟಿಟಿಡಿಯ ವಿಜಿಲೆನ್ಸ್ ಇಲಾಖೆ ಸಲ್ಲಿಸಿದ ವಿವರವಾದ ವರದಿ ಮತ್ತು ಇತರ ಪುರಾವೆಗಳ ಆಧಾರದ ಮೇಲೆ ರಾಜಶೇಖರ್ ವಿರುದ್ಧ ಟಿಟಿಡಿ ತನ್ನ ನಿಯಮಗಳ ಅಡಿಯಲ್ಲಿ ತಕ್ಷಣದ ಶಿಸ್ತು ಕ್ರಮ ಕೈಗೊಂಡಿದೆ. ಅವರನ್ನು ತಮ್ಮ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.
ತಿರುಮಲ ತಿರುಪತಿ ದೇವಸ್ಥಾನಂ ಬೇರೆ ಧರ್ಮದ ಪದ್ದತಿಗಳನ್ನು ಅನುಸರಿಸಿದ್ದಕ್ಕಾಗಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಫೆಬ್ರವರಿಯಲ್ಲಿ ಆರು ಶಿಕ್ಷಕರು ಸೇರಿದಂತೆ 18 ಸಿಬ್ಬಂದಿಯ ವಿರುದ್ದವು ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಇದರಲ್ಲಿ ಉಪ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇಬ್ಬರು ಎಲೆಕ್ಟ್ರಿಷಿಯನ್‌ಗಳು ಸೇರಿದ್ದರು.
1989 ಅಕ್ಟೋಬರ್ 24ರಂದು ಕಂದಾಯ ಇಲಾಖೆ (ದತ್ತಿ) ಹೊರಡಿಸಿದ ಸರ್ಕಾರಿ ಆದೇಶ ಸಂಖ್ಯೆ 1060 ರ ಅಡಿಯಲ್ಲಿ ಟಿಟಿಡಿ ಸಿಬ್ಬಂದಿ ಹಿಂದೂ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ.
