ತುಮಕೂರು : 24 ತಾಸು ನೀರು ಸರಬರಾಜು ಯೋಜನೆ ಹಳ್ಳಹಿಡಿಯಿತೇ?

 ತುಮಕೂರು : 

      ನಗರದಲ್ಲಿ ಅನುಷ್ಟಾನಗೊಳಿಸುತ್ತಿರುವ ದಿನದ 24 ತಾಸು ನೀರು ಸರಬರಾಜು ಯೋಜನೆ, ಪ್ರಾಯೋಗಿಕವಾಗಿ ಚಾಲನೆ ಕೊಟ್ಟ ನಗರದ 26ನೇ ವಾರ್ಡ್‍ನಲ್ಲಿ ಹಳ್ಳಹಿಡಿದಿದ್ದು, ಕಳಪೆ ಗುಣಮಟ್ಟದ ಪೈಪ್‍ಲೈನ್,ರೈಸಿಂಗ್ ಮೈನಿಂಗ್ ಅಳವಡಿಸಿರುವ ಕಿರಿದಾದ ಪೈಪ್‍ಲೈನ್‍ನಿಂದಾಗಿ ನೀರು ಮನೆ ಮನೆಗೆ ತಲುಪದೇ ದಾರಿಯಲ್ಲಿ ಸೋರಿಕೆಯುಂಟಾಗುತ್ತಿದ್ದು, ನೂರಾರು ಕೋಟಿ ಮೊತ್ತದ ಮಹತ್ವಕಾಂಕ್ಷಿ ಯೋಜನೆ ಹಳ್ಳಹಿಡಿಯುತ್ತಿರುವುದಕ್ಕೆ ಜ್ವಲಂತ ನಿದರ್ಶನವೆನಿಸಿದೆ.

      ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಮೂಲಕ ಸಣ್ಣ ಮತ್ತು ಮಧ್ಯಮ ನಗರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ಅಮೃತ್ ಸಿಟಿ ಈ ಎರಡು ಯೋಜನೆಯಡಿ ಒಟ್ಟು 204.49 ಕೋಟಿ ಮೊತ್ತದಲ್ಲಿ ದಿನದ 24 ತಾಸು ನೀರು ಪೂರೈಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕಾಗಿ ನಗರದ 35 ವಾರ್ಡ್‍ಗಳಲ್ಲೂ ಪೈಪ್‍ಲೈನ್ ಅಳವಡಿಸುವ ಕಾಮಗಾರಿಯನ್ನು ಎಲ್ ಅಂಡ್ ಟಿ ಹಾಗೂ ಮತ್ತೊಂದು ಬೆಂಗಳೂರಿನ ಎಂ.ಎನ್.ರಮೇಶ್ ಎಂಬುವರ ಖಾಸಗಿ ಕಂಪನಿ ಗುತ್ತಿಗೆ ಪಡೆದು ಪೈಪ್‍ಲೈನ್ ಹಾಕುತ್ತಿದ್ದು, ನಗರದಲ್ಲಿ 850 ಕಿ.ಮೀ ಉದ್ದ ಪೈಪ್‍ಲೈನ್ ಅಳವಡಿಸುವ ಗುರಿಯನ್ನು ಈ ಎರಡು ಕಂಪನಿಗಳಿಗೆ ನೀಡಲಾಗಿತ್ತು. ಈ ಪೈಕಿ ಶೇ.90ರಷ್ಟು ಕಾಮಗಾರಿ ಮುಗಿಸಿದ್ದಾರೆ ಎನ್ನುತ್ತಿರುವ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು, ಪ್ರಾಯೋಗಿಕವಾಗಿ ಹರಿಸಲು ಮುಂದಾದ ವಾರ್ಡ್‍ನಲ್ಲೇ ಆಗಿರುವ ತೊಂದರೆ ಬಗ್ಗೆ ಗಮನಹರಿಸದಿರುವುದರಿಂದ ಎಲ್ಲಾ ವಾಡಗಳಲ್ಲೂ ಇನ್ನೇಗೆ ಯೋಜನೆ ಸಮರ್ಪಕ ಅನುಷ್ಟಾನ ಮಾಡುತ್ತಾರೆಂಬ ಪ್ರಶ್ನೆ ಹುಟ್ಟಿಕೊಂಡಿದೆ.

ವರ್ಷ ಕಳೆದು 2 ತಿಂಗಳಾದರೂ ನೀರು ಬಂದಿಲ್ಲ :

      ನಗರದ 26ನೇ ವಾರ್ಡಿನಲ್ಲಿ 2020 ಜನವರಿ 25ರಂದು ಪ್ರಾಯೋಗಿಕವಾಗಿ ದಿನದ 24 ತಾಸು ನೀರು ಸರಬರಾಜು ಯೋಜನೆಯನ್ನು ಶಾಸಕರು, ಅಂದಿನ ಮೇಯರ್, ಆಯುಕ್ತರ ಸಮ್ಮುಖದಲ್ಲಿ ಚಾಲನೆ ಕೊಡಲಾಗಿತ್ತು. ವಾರ್ಡ್ ವ್ಯಾಪ್ತಿಯ ಎಸ್‍ಐಟಿ ಬಡಾವಣೆ, ಅಶೋಕನಗರ ಮತ್ತಿತರೆಡೆ ಪ್ರತೀ ಮನೆಗೂ ಸಂಪರ್ಕಗಳನ್ನು ಕೊಡಲಾಗಿದೆ. ಆದರೆ ನೀರನ್ನು ಪಂಪ್ ಮಾಡಿದ ಕೂಡಲೇ ನೀರು ಪೈಪ್‍ಲೈನ್‍ಗಳಲ್ಲೇ ಲೀಕ್ ಆಗಿ ರಸ್ತೆಯಲ್ಲೇ ಸೋರಿಕೆಯಾಗಿ ಜಲಾವೃತವಾಗುತ್ತಿದ್ದು, ಇದು ಕಳಪೆ ಕಾಮಗಾರಿಗೆ ನಿದರ್ಶನವಾಗುವ ಜತೆಗೆ ಮನೆಗಳಿಗೆ ನಿರಂತರ ನೀರು ಪೂರೈಕೆಯೂ ಮರೀಚಿಕೆಯಾಗಿದೆ. ರಸ್ತೆಯಲ್ಲೇ ಹೊಡೆಯುತ್ತಿರುವ ಪೈಪ್‍ಲೈನ್‍ಗಳನ್ನು ದುರಸ್ತಿಗೊಳಿಸಲು 3-4 ತಿಂಗಳು ತೆಗೆದುಕೊಳ್ಳುತ್ತಿದ್ದು, ರೈಸಿಂಗ್ ಮೈನ್ ಪೈಪಲೈನ್‍ಗಳು ಕಿರಿದಾಗಿರುವುದರಿಂದ ನೀರು ರಭಸವಾಗಿ ಪಂಪ್ ಆಗದೆ ಮನೆಗಳಿಗೆ ತಲುಪಲು ಅಸಾಧ್ಯವಾಗಿದೆ. ಹೀಗಾಗಿ ಹಳೆಯ ಪೈಪ್‍ಲೈನ್ ವ್ಯವಸ್ಥೆಯಡಿಯೇ ನೀರು ಬಿಡುತ್ತಿದ್ದು, ದಿನದ 24 ತಾಸು ನೀರು ತುಮಕೂರು ನಗರಕ್ಕೆ ಮರೀಚಿಕೆಯೇ ಸರಿ ಎಂದು ನಾಗರಿಕರು ಬೇಸರಪಟ್ಟುಕೊಳ್ಳುವಂತಾಗಿದೆ. ಸದುದ್ದೇಶದ ಯೋಜನೆಯನ್ನು ಅವೈಜ್ಞಾನಿಕವಾಗಿ ಅನುಷ್ಟಾನಗೊಳಿಸಿ ನೂರಾರು ಕೋಟಿ ನಿರರ್ಥಕ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪೈಪ್‍ಲೈನ್ ಅಳವಡಿಕೆ ಸರಿಯಿಲ್ಲ :

ದಿನದ 24 ತಾಸು ನೀರು ಪೂರೈಸುವ ಅನುಷ್ಟಾನಗೊಂಡ ತುಮಕೂರಿನ 26ನೇ ವಾರ್ಡಿನ ಅಶೋಕನಗರದಲ್ಲಿ ಅಳವಡಿಸಿರುವ ಪೈಪ್‍ಲೈನ್ ರಸ್ತೆಯೊಳಗೆ ಒಡೆದು ನೀರು ತುಂಬಿಕೊಂಡಿರುವುದು.

      ರಸ್ತೆಯೊಳಗೆ ನಿಗದಿತ ಆಳಕ್ಕೆ ಪೈಪ್ ಅಳವಡಿಸದೆ ಮೇಲ್ಮಟ್ಟಕ್ಕೆ ಅಳವಡಿಸಿ ಬೇಕಾಬಿಟ್ಟಿ ಕಾಮಗಾರಿಗಳನ್ನು ಮಾಡಿರುವುದರಿಂದ ರಸ್ತೆಯ ಮೇಲೆ ದೊಡ್ಡ ವಾಹನ ಸಂಚರಿಸಿದರೆ ಅದರ ಒತ್ತಡಕ್ಕೆ ಪೈಪ್‍ಲೈನ್‍ಗಳು ಒಡೆದುಹೋಗುತ್ತಿದ್ದು, ಮನೆ ಮನೆಗೆ ಸಂಪರ್ಕ ಕಲ್ಪಿಸಿರುವ ನಲ್ಲಿ ಪೈಪ್‍ಲೈನ್‍ಗಳು ಸಹ ಕಿಲುಬು ಹಿಡಿಯುತ್ತಿರುವುದಲ್ಲದೇ, ಕಡಿಮೆ ಗುಣಮಟ್ಟದಿಂದ ಕೂಡಿ ಬಿರುಕು ಬಿಡುತ್ತಿವೆ. ಮೀಟರ್ ಅಳವಡಿಕೆ ಛೇಂಬರ್‍ಗಳ ಗುಣಮಟ್ಟವೂ ಸರಿಯಿಲ್ಲ. ರಸ್ತೆ ಅಗೆದ ಮೇಲೆ ಅದನ್ನು ಸರಿಯಾಗಿ ಮುಚ್ಚುವ ಕಾರ್ಯವೂ ಆಗುತ್ತಿಲ್ಲ ಎಂದು ಅಶೋಕನಗರ ವಾಸಿ ವಿಶ್ವನಾಥರಾವ್ ದೂರುತ್ತಾರೆ.

ನೀರೇ ಬಂದಿಲ್ಲ ಶುಲ್ಕ ವಸೂಲಿಗೆ ಚಿಂತನೆ

      24 ತಾಸು ನೀರು ಸರಬರಾಜು ಯೋಜನೆಯಡಿ ಶೇ.10ರಷ್ಟು ಕಾಮಗಾರಿ ಮಾತ್ರ ಬಾಕಿ ಉಳಿದಿದೆ ಎನ್ನುತ್ತಿರುವ ಅಧಿಕಾರಿಗಳು ಈಗಾಗಲೇ ಪ್ರಾಯೋಗಿಕವಾಗಿ ಜಾರಿಯಾದ ವಾರ್ಡ್‍ನಲ್ಲಿ ಕನೆಕ್ಷನ್ ಕೊಟ್ಟಿರುವ ಮನೆಗಳಿಗೆ ಶುಲ್ಕ ವಸೂಲಿ ಮಾಡುವ ಚರ್ಚೆಗೆ ಮುಂದಾಗಿರುವುದು ನಾಗರಿಕರಲ್ಲಿಆಕ್ರೋಶಕ್ಕೆ ಕಾರಣವಾಗಿದೆ. ನೀರೆ ಬಂದಿಲ್ಲವೆಂದ ಮೇಲೆ ಮೀಟರ್ ಆಧಾರದಲ್ಲಿ ಶುಲ್ಕ ಪಾವತಿಸುವುದಾದರೂ ಹೇಗೇ? ಮೊದಲು ಕಾಮಗಾರಿ ಅವ್ಯವಸ್ಥೆಯನ್ನು ಸರಿಪಡಿಸಿ ಮೂರ್ನಾಲ್ಕು ತಿಂಗಳು ಪ್ರಾಯೋಗಿಕ ಹರಿಸಿ ನಂತರ ಶುಲ್ಕ ಕೇಳಬೇಕು. ಇಲ್ಲವಾದಲ್ಲಿ ನಮಗೆ ಈ ಯೋಜನೆಯೇ ಬೇಡ ಹಳೆಯ ವ್ಯವಸ್ಥೆಯಲ್ಲೇ ನೀರು ಬಿಡಲಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಪ್ರತೀ ವಾರ್ಡ್‍ನ ಸಮಸ್ಯೆಯಾಗಲಿದೆ ಎಚ್ಚರ…!

      ನಗರಕ್ಕೆ ನೀರು ಪೂರೈಸುವ 34 ಓವರ್ ಹೆಡ್ ಟ್ಯಾಂಕ್‍ಗಳಿಗೂ ಹೊಸ ಪೈಪ್‍ಲೈನ್ ಅಳವಡಿಸಿ ಆ ಮೂಲಕ ಎಲ್ಲಾ ಮನೆಗಳಿಗೂ ನಿರಂತರ ನೀರು ಪೂರೈಸುವ ಮಹತ್ವದ ಯೋಜನೆ ಇದಾಗಿದ್ದು, ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸಲಾದ 26, 18ನೇ ವಾರ್ಡ್‍ಗಳಲ್ಲಿ ಮಾತ್ರ ಪೈಪ್ಲೈನ್ ಒಡೆಯುತ್ತಿದೆ ಎಂದು ಸಂಬಂಧಪಟ್ಟವರು ನಿರ್ಲಕ್ಷ್ಯ ತಾಳಿದರೆ ಮುಂದೆ ಎಲ್ಲಾ ವಾರ್ಡ್‍ಗಳಲ್ಲೂ ಈ ಸಮಸ್ಯೆ ಉದ್ಬವಿಸುವುದು ನಿಶ್ಚಿತ. ಪಾಲಿಕೆ ಆಡಳಿತ ನೂತನ ಮೇಯರ್, ಉಪಮೇಯರ್, ಆಯುಕ್ತರು, ಶಾಸಕರು, ಸಂಸದರು, ವಿಪಕ್ಷದವರು ಸ್ಥಾಯಿ ಸಮಿತಿಯವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಪರಾಮರ್ಶಿಸುವ ಅಗತ್ಯವಿದೆ. ಜಿಲ್ಲಾಡಳಿತವೂ ಸಹ ನೂರಾರು ಕೋಟಿ ಯೋಜನೆ ನಿರರ್ಥಕವಾಗದಂತೆ ಕಡಿಗಳಿಗೆಯಲ್ಲೂ ಎಚ್ಚರಿಕೆ ವಹಿಸದಿದ್ದರೆ ಯೋಜನೆ ಸಂಪೂರ್ಣ ನಿರರ್ಥಕವಾಗಲಿದೆ ಎಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

      ಗುತ್ತಿಗೆಯನ್ನು ಎರಡು ಪ್ರಮುಖ ಖಾಸಗಿ ಕಂಪನಿಗಳು ಪಡೆದಿದ್ದರೂ ಹಲವರು ಉಪಗುತ್ತಿಗೆ ಪಡೆದು ಇಡೀ ಯೋಜನೆಯನ್ನು ಹಾಳು ಮಾಡಿದ್ದಾರೆ. ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸುವ ಜೊತೆಗೆ ಅಕ್ರಮದ ತನಿಖೆಗೊಳಪಡಿಸಬೇಕು. ಯೋಜನೆ ಅನುಷ್ಟಾನದ ಹೊಣೆ ಹೊತ್ತಿರುವವ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಮನೆಗೆ ನೀರು ಸರಿಯಾಗಿ ಬರುತ್ತಿಲ್ಲವೆಂದರೆ ಯೋಜನೆ ಜಾರಿ ಯಾವ ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.

-ಕೆ. ರವಿಕುಮಾರ್, ಎಸ್‍ಐಟಿ ಬಡಾವಣೆ ವಾಸಿ.

 
      ನಿರಂತರ 24 ತಾಸು ನೀರು ಸರಬರಾಜು ಕೇಂದ್ರ ಸರಕಾರದ ಮಹತ್ವದ ಯೋಜನೆ. ಸಂಸದ ಬಸವರಾಜು ಅವರು ಒತ್ತಾಸೆಯಿಂದ ತಂದ ಯೋಜನೆ ಅನುಷ್ಟಾನ ಲೋಪದೊಂದಿಗೆ ಹಳ್ಳಹಿಡಿಯುತ್ತಿದೆ. ಪ್ರಾಯೋಗಿಕವಾಗಿ ಜಾರಿಗೆ ತಂದ ನಮ್ಮ ವಾರ್ಡ್‍ನಲ್ಲಿ ವರ್ಷವಾದರೂ ಸಮರ್ಪಕವಾಗಿ ನೀರು ಕೊಡಲು ಸಾಧ್ಯವಾಗಿಲ್ಲವೆಂದರೆ ಯೋಜನೆಯಡಿ ನೀರು ಬರುವುದೇ ಇಲ್ಲ ಎಂಬ ಅನುಮಾನ ಮೂಡಿಸಿದೆ. ನೀರು ಬಾರದೆ ಸಂಪರ್ಕ ಶುಲ್ಕ ಕಟ್ಟಲು ನಮ್ಮ ವಾರ್ಡ್‍ನ ನಾಗರಿಕರ್ಯಾರು ಸಿದ್ದರಿಲ್ಲ.

-ಎಚ್.ಮಲ್ಲಿಕಾರ್ಜುನ್, 26ನೇ ವಾರ್ಡ್ ಸದಸ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap