ಮರಳಿದ ಯುಗಾದಿ… ಮರುಕಳಿಸಿದ ಕೊರೋನಾ…!

 ತುಮಕೂರು : 

      ಸರಿಯಾಗಿ ಒಂದು ವರ್ಷ. ಯುಗಾದಿ ಸಿದ್ಧತೆಯಲ್ಲಿದ್ದವರೆಲ್ಲಾ ಸ್ತಬ್ದರಾಗಿದ್ದರು. ಯುಗಾದಿಯ ಸಂಭ್ರಮಾಚರಣೆಗೆ ಕೊರೋನಾ ಕೊಳ್ಳಿ ಇಟ್ಟಿತ್ತು. ಯುಗಾದಿಗೆ ಏನೆಲ್ಲಾ ಬೇಕೋ ಆ ತಯಾರಿ ನಡೆಸಿದ್ದವರಿಗೆ 2020ರ ಮಾರ್ಚ್ 24ರ ರಾತ್ರಿ ಘೋಷಣೆಯಾದ ಕೊರೊನಾ ಲಾಕ್‍ಡೌನ್ ಎಲ್ಲರನ್ನೂ ಮನೆಯಲ್ಲಿಯೇ ಬಂಧಿಯಾಗಿರುವಂತೆ ಮಾಡಿತು. ಆ ದಿನಗಳು ಮರೆಯಲಾಗದ ಕಹಿ ಕ್ಷಣಗಳು.

      ಕಳೆದ ವರ್ಷ ಮಾರ್ಚ್ 25 ರ ಬುಧವಾರದಂದು ಯುಗಾದಿ ಆಚರಿಸಲು ಸಿದ್ದತೆಗಳು ನಡೆದಿದ್ದವು. ನಗರಗಳಲ್ಲಿ ಉದ್ಯೋಗಕ್ಕಿದ್ದವರೆಲ್ಲ ತಮ್ಮ ಹಳ್ಳಿಗಳಿಗೆ ತೆರಳಲು ಸಜ್ಜಾಗಿದ್ದರು. ಕೆಲವರು ಊರು ತಲುಪಿದ್ದರೆ ಇನ್ನು ಕೆಲವರು ಮಾರನೆಯ ದಿನ ತಮ್ಮೂರಿನ ಮಾರ್ಗ ಹಿಡಿಯಲು ಸನ್ನದ್ಧರಾಗಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಘೋಷಣೆ ಅವರೆಲ್ಲರನ್ನೂ ಅತಂತ್ರರನ್ನಾಗಿಸಿಬಿಟ್ಟಿತು. ಕಷ್ಟಪಟ್ಟು ಬಂದು ಹಳ್ಳಿ ಸೇರಿಕೊಂಡರು. ಅದೆಷ್ಟು ಮಂದಿ ಪೊಲೀಸರ ಲಾಠಿ ರುಚಿ ಕಂಡರೋ ಲೆಕ್ಕವಿಲ್ಲ. ಪೊಲೀಸರ ಆ ಬೆತ್ತದ ರುಚಿಯನ್ನೂ ಲೆಕ್ಕಿಸದೆ ದೌಡಾಯಿಸಿ ಬಂದು ಊರು ಸೇರಿಕೊಳ್ಳುವ ಪರಿಸ್ಥಿತಿ ಆಗ ಹಾಗಿತ್ತು.

     ಈ ವರ್ಷದ ಯುಗಾದಿ ಏಪ್ರಿಲ್ ತಿಂಗಳಿನಲ್ಲಿ ಬಂದಿದೆ. ಯುಗಾದಿ ಆಚರಣೆಗೆ ಮುಂದಾಗಿರುವವರೆಲ್ಲ ಕಳೆದ ವರ್ಷದ ಆ ಕರಾಳ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಿದ್ದಾರೆ. ಆದರೆ ಈ ವರ್ಷವೂ ಆ ಕರಾಳ ಛಾಯೆ ಮುಗಿದಂತೆ ಕಾಣುತ್ತಿಲ್ಲ. ಕಳೆದ 2-3 ತಿಂಗಳ ಹಿಂದೆ ಇನ್ನೇನು ಕೊರೋನಾ ವೈರಸ್ ಮಾಯವಾಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಯುಗಾದಿಯ ವೇಳೆಗೆ ಮತ್ತೆ ವೈರಸ್ ವಕ್ಕರಿಸತೊಡಗಿದೆ. ಕಳೆದ ಒಂದು ತಿಂಗಳಿನಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ.

      ಒಂದು ಕಡೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನೇ ಮುಂದಿಟ್ಟುಕೊಂಡು ರಾತ್ರಿ ಕಫ್ರ್ಯೂ ವಿಧಿಸಲಾಗಿದೆ. ಮತ್ತೊಂದು ಕಡೆ ಸಾರಿಗೆ ನೌಕರರ ಮುಷ್ಕರ ಸಾರ್ವಜನಿಕ ಪ್ರಯಾಣ ವ್ಯವಸ್ಥೆಯನ್ನು ಮೊಟಕುಗೊಳಿಸಿದೆ. ಏಪ್ರಿಲ್ 13 ರಂದು ಯುಗಾದಿಯ ಹಬ್ಬವನ್ನು ಈ ಬಾರಿಯಾದರೂ ನೆಮ್ಮದಿಯಿಂದ ಆಚರಿಸೋಣ ಅಂದುಕೊಂಡಿದ್ದ ಹಲವರಿಗೆ ಮತ್ತದೆ ಸಂಕಷ್ಟಗಳು ಎದುರಾಗುತ್ತಿವೆ. ನಗರಗಳಲ್ಲಿ ಇರುವವರು ಸಾರಿಗೆ ಸಂಕಷ್ಟದಿಂದಾಗಿ ಅಲ್ಲಿಯೇ ಉಳಿದಿದ್ದಾರೆ. ಕೊರೋನಾ ಪ್ರಕರಣಗಳು ನಗರಗಳಲ್ಲಿ ಹೆಚ್ಚುತ್ತಿರುವುದರಿಂದ ಅಲ್ಲಿರುವವರು ಹಳ್ಳಿಗಳ ಕಡೆಗೆ ಹೋಗದಿರುವುದೇ ವಾಸಿ ಎಂಬ ಸಲಹೆಗಳು ಕೇಳಿಬರುತ್ತಿವೆ. ಈಗ ಬೇಸಿಗೆಯ ರಣಬಿಸಿಲು ಆರಂಭವಾಗಿದ್ದು, ಇನ್ನಿತರ ರೋಗರುಜಿನಗಳ ಆತಂಕವೂ ಎದುರಾಗಿದೆ.

ಜಿಲ್ಲೆಯಲ್ಲಿ ಮೊದಲ ಪ್ರಕರಣ:

     ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾಗಿದ್ದು ಕಳೆದ ವರ್ಷ ಮಾರ್ಚ್ 24 ರ ರಾತ್ರಿ. ಅದಕ್ಕೂ ಮುನ್ನ ಮಾರ್ಚ್ 20 ರಂದೇ ತುಮಕೂರು ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಸಿಆರ್‍ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಜಿಲ್ಲೆಯಲ್ಲಿ ಮಾರ್ಚ್ 20 ರಿಂದಲೇ ವ್ಯಾಪಾರ ವಹಿವಾಟು, ಜನಜೀವನ ಬಂದ್ ಆಗತೊಡಗಿತು. ಲಾಕ್‍ಡೌನ್ ಘೋಷಣೆಯಾದ ನಂತರ ಇದು ಮತ್ತಷ್ಟು ಬಿಗಿ ಸ್ವರೂಪ ಪಡೆಯಿತು.

     2020ರ ಮಾರ್ಚ್ 27 ರಂದು ತುಮಕೂರು ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಪತ್ತೆ ಹಾಗೂ ಬಲಿ ಪಡೆಯುವುದರೊಂದಿಗೆ ಈ ಜಿಲ್ಲೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿತು. ಶಿರಾ ಮೂಲದ ವ್ಯಕ್ತಿಯೊಬ್ಬರು ಮಾರ್ಚ್ 24 ರಂದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವ್ಯಕ್ತಿ 27 ರಂದು ಮೃತಪಟ್ಟಾಗ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಅಂದೇ ಶಿರಾದಲ್ಲಿ ಲಾಕ್ ಡೌನ್ ಜೊತೆ ಕಫ್ರ್ಯೂ ವಿಧಿಸಲಾಯಿತು.

      ಮಾರ್ಚ್ 30 ರಂದು ಜಿಲ್ಲೆಯಲ್ಲಿ 2ನೇ ಸೋಂಕು ಕಾಣಿಸಿಕೊಂಡಿತು. ಮೃತ ವೃದ್ಧನ ಮಗನಿಗೂ ಪಾಸಿಟಿವ್ ಇರುವುದಾಗಿ ಜಿಲ್ಲಾಡಳಿತ ಘೋಷಿಸಿತು. ಈ ಇಬ್ಬರು ವ್ಯಕ್ತಿಗಳು ಓಡಾಡಿದ್ದ ಪ್ರದೇಶ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಹೆಚ್ಚುವುದು, ಅವರನ್ನು ಕ್ವಾರಂಟೈನ್‍ಗೆ ಒಳಪಡಿಸುವ ಪ್ರಕ್ರಿಯೆಗಳು ಹೆಚ್ಚಾದವು.

      ಮಾರ್ಚ್ 27ರ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಕಂಡುಬಂದಿದ್ದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 64 ಮಾತ್ರ. ಏಪ್ರಿಲ್ 14ರ ವೇಳೆಗೆ ಈ ಸಂಖ್ಯೆ 260ಕ್ಕೆ ಏರಿಕೆಯಾಯಿತು. ಶಿರಾ ಮೂಲದ ವೃದ್ಧನ ಸಾವು ಸೇರಿದಂತೆ ರಾಜ್ಯದಲ್ಲಿ ಆ ವೇಳೆಗೆ 10 ಮಂದಿ ಸಾವನ್ನಪ್ಪಿದ್ದರು. ಆಗ ರಾಜ್ಯದ 18 ಜಿಲ್ಲೆಗಳಲ್ಲಿ ಮಾತ್ರವೇ ಇದ್ದ ಕೊರೋನಾ ವೈರಸ್ ತಿಂಗಳಾಂತ್ಯದ ವೇಳೆಗೆ ಎಲ್ಲ ಕಡೆಗೂ ವ್ಯಾಪಿಸುತ್ತಾ ಹೋಯಿತು.

      ಇಲ್ಲಿಗೆ ಸರಿಯಾಗಿ 1 ವರ್ಷ. ಅಂದರೆ ಏಪ್ರಿಲ್ 13ನೇ ತಾರೀಖು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಬಿಡುಗಡೆ ಮಾಡಿದ್ದ ವರದಿಯನ್ವಯ ಜಿಲ್ಲೆಯಲ್ಲಿ ಇಬ್ಬರಲ್ಲಿ ಮಾತ್ರ ಕೊರೋನಾ ಪಾಸಿಟಿವ್ ವರದಿಯಾಗಿದ್ದು, ಒಬ್ಬರು ಮೃತಪಟ್ಟಿರುವುದಾಗಿ ಹೇಳಲಾಗಿತ್ತು. ವಿವಿಧ ರೀತಿಯ ಸಂಪರ್ಕಿತರ 300 ಜನರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಅಷ್ಟು ಜನರ ಪೈಕಿ 326 ಮಂದಿಯ ವರದಿ ನೆಗೆಟಿವ್ ಎಂದು ದೃಢಪಟ್ಟಿತ್ತು.

     2020ರ ಏಪ್ರಿಲ್ 14ರ ವೇಳೆಗೆ ಜಿಲ್ಲೆಯಲ್ಲಿ 2 ಪ್ರಕರಣ ಮಾತ್ರವೆ ಕೋವಿಡ್ ಪಾಸಿಟಿವ್ ಇದ್ದದ್ದು ಈ ಒಂದು ವರ್ಷದ ಅವಧಿಯಲ್ಲಿ 27, 322 ಕ್ಕೆ ಏರಿಕೆಯಾಗಿದೆ. ಆಗ ಒಂದು ಪ್ರಕರಣ ಮಾತ್ರ ಸಾವಿನ ವರದಿ ಇದ್ದರೆ, ಈವರೆಗೆ ಜಿಲ್ಲೆಯಲ್ಲಿ ಒಟ್ಟು ಸಾವು 467ಕ್ಕೆ ಏರಿದೆ.

ವಲಸೆ ಕಾರ್ಮಿಕರ ಸಂಕಷ್ಟ:

      ಲಾಕ್‍ಡೌನ್ ಘೋಷಣೆಯಾಗುತ್ತಿದ್ದಂತೆ ನಗರಗಳಲ್ಲಿದ್ದ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮೂರುಗಳತ್ತ ದೌಡಾಯಿಸಲು ಪ್ರಯತ್ನಿಸಿದರು. ಆದರೆ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಬೆಂಗಳೂರಿನಿಂದ ಸುಮಾರು 316 ವಲಸೆ ಕಾರ್ಮಿಕರನ್ನು ತುಮಕೂರಿನ ಹನುಮಂತಪುರದಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ಕರೆ ತಂದು ಆಶ್ರಯ ಕಲ್ಪಿಸಲಾಯಿತು. ಉತ್ತರ ಕರ್ನಾಟಕ ಹಾಗೂ ಆಂಧ್ರಪ್ರದೇಶದವರಾದ ಇವರನ್ನು ಸಂತೈಸುವುದೇ ಆಡಳಿತಕ್ಕೆ ಒಂದು ಸವಾಲಾಗಿ ಪರಿಣಮಿಸಿತು.

ಸೀಲ್‍ಡೌನ್:

      ಯಾವುದಾದರು ಊರು ಅಥವಾ ಬಡಾವಣೆಯಲ್ಲಿ ಒಂದು ಸೋಂಕು ಪ್ರಕರಣ ಪತ್ತೆಯಾದರೆ ಸಾಕು ಇಡೀ ಏರಿಯಾ ಅಥವಾ ಊರನ್ನು ಸೀಲ್‍ಡೌನ್ ಮಾಡಲಾಗುತ್ತಿತ್ತು. ಈ ಅವಧಿಯಲ್ಲಿ ಪರಿತಪಿಸಿದವರ ಗೋಳು ಹೇಳತೀರದು. ಪಾಸಿಟಿವ್ ಪತ್ತೆಯಾದವರ ಮನೆಯ ಮುಂದೆ ಜ್ಹಿಂಕ್‍ಶೀಟ್‍ಗಳನ್ನು ಹಾಕಲಾಗಿ ಆರಂಭದ ದಿನಗಳಲ್ಲಿ ಅಂತಹ ಮನೆಗಳವರನ್ನು ಅಮಾನವೀಯವಾಗಿ ನೋಡಲಾಯಿತು.
ಹಳ್ಳಿ ಹಳ್ಳಿಗಳಲ್ಲಿ ಬೇಲಿ: ನಗರ ಪ್ರದೇಶಗಳಲ್ಲಿ ಇರುವ ಜನ ಹಳ್ಳಿಗೆ ಬಂದು ರೋಗ ಅಂಟಿಸುತ್ತಾರೆ ಎಂದು ಹೆದರಿದ ಹಳ್ಳಿಯ ಜನ ಇತರೆಯವರನ್ನು ತಮ್ಮೂರಿನೊಳಗೆ ಬಾರದಂತೆ ತಡೆಯಲು ಊರ ಹೊರಗೆ ಬೇಲಿ ನಿರ್ಮಿಸಿಕೊಂಡರು. ಕೆಲವು ಕಡೆ ರಸ್ತೆ ಅಗೆದು ಸಂಪರ್ಕವನ್ನೇ ಕಡಿತಗೊಳಿಸಿದರು. ಕಲ್ಲು ಮಣ್ಣನ್ನು ರಸ್ತೆಗೆ ಹಾಕಿದರು. ಇಂತಹ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಈ ಪರಿಪಾಠ ಎಲ್ಲ ಕಡೆಗೂ ವ್ಯಾಪಿಸತೊಡಗಿತು.

      ಯುಗಾದಿ ಹಬ್ಬದ ಸಮಯದಲ್ಲಿ ವರ್ಷತೊಡಕು-ಬಾಡೂಟದ ಸಂಭ್ರಮಾಚರಣೆಗೆ ಕಳೆದ ವರ್ಷ ಬ್ರೇಕ್ ಬಿದ್ದಿತ್ತು. ಅಷ್ಟೇ ಅಲ್ಲ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳೂ ಸ್ತಬ್ಧಗೊಂಡಿದ್ದರಿಂದ ಸಂಬಂಧಗಳೇ ಮೊಟಕಾಗಿದ್ದವು. ಹಣ್ಣು, ತರಕಾರಿ ಮಾರಲಾಗದೆ ಬೆಳೆಗಾರರು ಕಂಗಾಲಾಗಿದ್ದರು. ಈ ವರ್ಷವಾದರೂ ನೆಮ್ಮದಿ ಸಿಕ್ಕೀತೆ ಎಂಬ ನಿರೀಕ್ಷೆಯಲ್ಲಿ ಹಲವು ವರ್ಗದವರು ಇದ್ದಾರೆ.

ಓಪಿಡಿಗಳು ಬಂದ್:

      ಲಾಕ್‍ಡೌನ್ ಘೋಷಣೆಯಾಗಿ ಕೊರೊನಾ ಸೋಂಕು ಮತ್ತು ಸಾವಿನ ಮುನ್ಸೂಚನೆಗಳು ವರದಿಯಾಗುತ್ತಿದ್ದಂತೆಯೇ ಎಲ್ಲ ಕಡೆ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಆದವು. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವೇ ಚಿಕಿತ್ಸೆ ಪಡೆಯಬೇಕಾಯಿತು. ಸರ್ಕಾರಿ ಆಸ್ಪತ್ರೆಗಳು ಸಹ ಕೋವಿಡ್ ಆಸ್ಪತ್ರೆಗಳಾಗಿ ಮಾರ್ಪಟ್ಟವು. ಕೆಲವು ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಗುರುತಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ರೋಗ-ರುಜಿನಗಳಿಂದ ನರಳಿದ ಮಂದಿಯ ಬದುಕು ಯಾತನಾಮಯವಾಯಿತು. ಕೋವಿಡ್ ಕೇಂದ್ರಗಳಲ್ಲಿ ದಿನದೂಡಿ ಹೊರ ಬಂದದ್ದೇ ಪುನರ್ಜನ್ಮ ಎಂದು ಭಾವಿಸುವಂತಾಯಿತು.

ಸರಳ ವಿವಾಹಗಳಿಗೆ ಪ್ರೇರಣೆ:

      2020ರ ಮಾರ್ಚ್ ಕೊನೆಯ ಭಾಗ ಹಾಗೂ ಮೇ ಮತ್ತು ಜೂನ್ ತಿಂಗಳವರೆಗೆ ಹಲವು ಕಡೆಗಳಲ್ಲಿ ವಿವಿಧ ಛತ್ರಗಳು ವಿವಾಹಕ್ಕಾಗಿ ಬುಕ್ ಆಗಿದ್ದವು. ಲಾಕ್‍ಡೌನ್ ನಿರ್ಬಂಧದ ಪರಿಣಾಮವಾಗಿ ಮೇ ಅಂತ್ಯದಿಂದ ಸುಮಾರು 6-7 ತಿಂಗಳುಗಳ ಕಾಲ ವಿವಾಹಗಳೇ ಬಂದ್ ಆದವು. ಕೆಲವು ವಿವಾಹಗಳು ಮುಂದೂಡಲ್ಪಟ್ಟರೆ, ಇನ್ನು ಕೆಲವರು ಸರಳವಾಗಿ ವಿವಾಹ ಮಾಡಿಕೊಂಡರು. ಹಳ್ಳಿಗಳಲ್ಲಿ ದೇವಾಲಯಗಳೇ ಛತ್ರಗಳಾದವು. ಸೀಮಿತ ಸಂಖ್ಯೆಯಲ್ಲಿ ವಿವಾಹಗಳಿಗೆ ಭಾಗವಹಿಸಬೇಕಿದ್ದರಿಂದ ಬಹಳಷ್ಟು ಜನರಿಗೆ ಈ ನಿರ್ಬಂಧಗಳೇ ಪೂರಕವಾದವು.
ಸಡಿಲಗೊಂಡಿದ್ದ ನಿರ್ಬಂಧಗಳು ಈಗ ಮತ್ತೆ ಚಾಲ್ತಿಗೆ ಬಂದಿವೆ. ಮದುವೆ, ಸಾರ್ವಜನಿಕ ಸಮಾರಂಭ ಇತ್ಯಾದಿಗಳಿಗೆ ಮತ್ತೆ ಬ್ರೇಕ್ ಬಿದ್ದಿದೆ. ಕೆಲವು ಕಡೆ ದೇವಾಲಯಗಳಿಗೂ ಹೆಚ್ಚು ಜನರ ಪ್ರವೇಶ ನಿರ್ಬಂಧಿಸಲಾಗುತ್ತಿದೆ. ಒಂದು ವರ್ಷದ ಈ ಅವಧಿಯಲ್ಲಿ ಗಳಿಕೆಗಿಂತ ಕಳೆದುಕೊಂಡದ್ದೆ ಹೆಚ್ಚು. ಆರ್ಥಿಕವಾಗಿ ಇನ್ನೂ ಚೇತರಿಕೆ ಕಂಡಿಲ್ಲ. ಈ ನಡುವೆ ಕೊರೊನಾ ಕರಿನೆರಳು ಮತ್ತೆ ಮತ್ತೆ ಬಾಧಿಸುತ್ತಿದೆ.

ಶವಗಳನ್ನು ನೋಡಲಾಗದ ಸ್ಥಿತಿ:

      ಕೋವಿಡ್‍ನಿಂದಾಗಿ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರವೇ ಹೊಸದೊಂದು ಇತಿಹಾಸ ಬರೆಯುವಂತಾಯಿತು. ಕಣ್ಣಿನಿಂದ ನೋಡಲೂ ಆಗದಂತಹ ಪರಿಸ್ಥಿತಿ ಪೋಷಕ ವರ್ಗಕ್ಕೆ ಎದುರಾಯಿತು. ಆಸ್ಪತ್ರೆಗಳಲ್ಲಿ ಮರಣ ಹೊಂದಿದ ಕೋವಿಡ್ ರೋಗಿಗಳನ್ನು ಅನಾಮತ್ತಾಗಿ ಕೋವಿಡ್ ನಿಯಮಾವಳಿ ಅನ್ವಯ ಮಣ್ಣಿಗೆ ಹಾಕಲಾಯಿತು. ಇದಕ್ಕಾಗಿಯೇ ಇದ್ದ ಅಂತ್ಯಕ್ರಿಯೆ ನೆರವೇರಿಸುವ ತಂಡವನ್ನು ಹೊರತುಪಡಿಸಿದರೆ ಉಳಿದವರ್ಯಾರೂ ಅದರಲ್ಲಿ ಭಾಗಿಯಾಗದ ಪರಿಸ್ಥಿತಿ, ಮೃತ ದೇಹವನ್ನು ತನ್ನೂರಿಗೆ ತೆಗೆದುಕೊಂಡು ಹೋಗಲಾಗದ ಸಂಕಷ್ಟ, ವಿಧಿ ವಿಧಾನಗಳನ್ನು ನೆರವೇರಿಸದೆಯೇ ಮಣ್ಣಿನೊಳಗೆ ಹೂತು ಹಾಕುವ ಕರುಳು ಹಿಂಡುವ ಭಯಾನಕತೆಯ ದೃಶ್ಯಗಳು ಎಂತಹವರನ್ನೂ ದಂಗುಬಡಿಸಿದವು. ಈ ಜೀವದ ಬೆಲೆ ಇಷ್ಟೇನಾ ಎನ್ನುವಂತಹ ಮಾತುಗಳು ಕೇಳಿಬಂದವು. ಇನ್ನೂ ಎಷ್ಟೋ ಜನರಿಗೆ ಅಂತ್ಯಕ್ರಿಯೆ ನೆರವೇರಿಸಲಾಗದೆ ಅಸಹಾಯಕ ಪರಿಸ್ಥಿತಿ ಉಂಟಾಯಿತು. ಇಂತಹ ಪರಿಸ್ಥಿತಿಯಲ್ಲಿ ಕಾಳಜಿಯಿಂದ ಮುಂದೆ ಬಂದು ಅಂತ್ಯಕ್ರಿಯೆ ನೆರವೇರಿಸಿದ ತುಮಕೂರು ನಗರದ ಒಂದೆರಡು ತಂಡಗಳ ಕಾರ್ಯ ಅತ್ಯಂತ ಸ್ತುತ್ಯಾರ್ಹವಾದುದು.

      ಕೋಟಿಗಟ್ಟಲೆ ಹಣ ಇದ್ದವರು, ಶ್ರೀಮಂತರು ಸಹ ಕೊರೊನಾಕ್ಕೆ ಬಲಿಯಾದರು. ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ತಮ್ಮದೇ ಸಂಪ್ರದಾಯದಲ್ಲಿ ಆಚರಿಸುತ್ತಿದ್ದವರು ಅನಿವಾರ್ಯವಾಗಿ ಈ ಕ್ರಿಯೆಯನ್ನು ಯಾರಿಗೋ ಒಪ್ಪಿಸಬೇಕಾದ ಸ್ಥಿತಿಗೆ ಬಂದು ನಿಂತರು. ಆಗಿನ ಸಂದರ್ಭದಲ್ಲಿ ಎದುರಾಗಿರುವ ಸಂಕಟ, ದುಃಖ ವರ್ಣಿಸಲಸದಳ.

 ವೆಚ್ಚಗಳಿಗೆ ಕಡಿವಾಣ:

      ಕೊರೋನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡ ಹಿಂದೆಯೇ ಎದುರಾದ ಲಾಕ್‍ಡೌನ್ ಮತ್ತು ಆನಂತರ ಎದುರಾದ ನಿರ್ಬಂಧಗಳು ಇಡೀ ಬದುಕನ್ನು ಕುಬ್ಜವನ್ನಾಗಿಸಿದವು. ಇದಕ್ಕೂ ಮೊದಲು ನಡೆಸುತ್ತಿದ್ದ ಮೋಜು ಮಸ್ತಿಗಳಿಗೆ ಕಡಿವಾಣ ಬಿದ್ದಿತು. ವೀಕ್ ಎಂಡ್ ಸೇರಿದಂತೆ ತರಾವರಿ ಊಟ, ಉಪಹಾರ, ತಿಂಡಿತಿನಿಸು, ಬೇಕು ಬೇಡಗಳ ಕೊಂಡುಕೊಳ್ಳುವಿಕೆ ಎಲ್ಲದಕ್ಕೂ ಕೊರೊನಾ ಬ್ರೇಕ್ ಹಾಕಿತು. ಮನೆಯಲ್ಲಿಯೇ ಕುಳಿತು ಎಲ್ಲರೊಟ್ಟಿಗೆ ಊಟ ಮಾಡುವ ಹೊಸದಾದ ವಾತಾವರಣವೊಂದು ಸೃಷ್ಟಿಯಾಯಿತು. ಅದೆಷ್ಟೋ ಮನೆಗಳಲ್ಲಿ ಬಾಂಧವ್ಯಗಳು ವೃದ್ಧಿಯಾದವು. ಮನೆಯಲ್ಲಿಯೇ ತಯಾರು ಮಾಡಿಕೊಂಡು ಊಟ ಮಾಡಬಹುದಾದ ಪರಿಸ್ಥಿತಿ ಎದುರಾಗಿದ್ದರಿಂದ ಸಹಜವಾಗಿಯೇ ಆರೋಗ್ಯವೂ ಸುಧಾರಿಸಿತು. ಅನಾರೋಗ್ಯ ದೂರವಾಯಿತು. ಅಷ್ಟರ ಮಟ್ಟಿಗೆ ಕೊರೋನಾ ಕೆಲವರಿಗೆ ಪಾಠ ಕಲಿಸಿತು. ದುಂದು ವೆಚ್ಚಗಳಿಗೆ ಕಡಿವಾಣ ಬಿದ್ದಿತು.

     ಈಗಲೂ ಸಹ ಕೆಲವರು ಯಾವುದಾದರು ವಸ್ತುಗಳನ್ನು ಕೊಂಡುಕೊಳ್ಳಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ಇದೆ. ಅಗತ್ಯ ವಸ್ತುಗಳಿಗಷ್ಟೇ ಜನ ಮನಸ್ಸು ಮಾಡುತ್ತಿರುವುದನ್ನು ನೋಡಿದರೆ ಮನುಷ್ಯನಿಗೆ ಕೊರೊನಾ ಹೊಡೆತದಿಂದ ಇನ್ನೂ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ.

      ಒಂದು ವರ್ಷವಾಯಿತು ಈ ಕೋರೊನಾ ಮಾರಿ ವಕ್ಕರಿಸಿ. ಕೆಲವರು ಮರೆತುಬಿಟ್ಟಿರಬಹುದು. ಇನ್ನು ಕೆಲವರಿಗೆ ಜೀವನ ಪರ್ಯಂತ ಮರೆಯಲು ಸಾಧ್ಯವಾಗದ ಸನ್ನಿವೇಶಗಳು ಮರುಕಳಿಸಬಹುದು. ಕಷ್ಟ, ಸುಖಗಳು ಮನುಷ್ಯನಿಗೆ ಬಾರದೆ ಮರಕ್ಕೆ ಬಂದೀತೆ ಎಂಬ ಹಿರಿಯರ ನಾಣ್ಣುಡಿಗಳು ಎಷ್ಟು ಅರ್ಥಗರ್ಭಿತ..! ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ, ಹೊಸ ಹೊಸ ರೋಗಗಳಿಗೆ ಎದುರಾಗಿ ಬದುಕನ್ನು ತೆರೆದುಕೊಳ್ಳುವುದೇ ನಮ್ಮ ಮುಂದೆ ಇರುವ ಸವಾಲು. ನಮ್ಮ ಭಾರತೀಯರಿಗೆ ಜನವರಿ 1 ರ ಕ್ಯಾಲೆಂಡರ್ ವರ್ಷಕ್ಕಿಂತ ಯುಗಾದಿಯ ಹಬ್ಬವೇ ಹೊಸವರ್ಷ. ಇದನ್ನು ವಿಶೇಷವಾಗಿ ಆಚರಿಸುತ್ತಾ ಬರಲಾಗಿದೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತಲೇ ಮುನ್ನಡೆಯುವ ಶಕ್ತಿಯನ್ನು ಗಳಿಸಿಕೊಳ್ಳದೆ ಅನ್ಯ ಮಾರ್ಗವಿಲ್ಲ. ಪರಸ್ಪರ ಸಂಬಂಧ, ಮಾನವೀಯತೆ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಂಡು ಯುಗಾದಿಯನ್ನು ಸಂಭ್ರಮಿಸುವತ್ತ ಮುನ್ನಡೆಯುವುದು ಈಗ ಅನಿವಾರ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link