ಸಿಎಂಗೆ ದೆಹಲಿ ನಾಯಕರಿಂದ ಅಪಮಾನ, ರಾಜ್ಯದ ಜನರಿಗೆ ಮಾಡಿದ ಅಪಮಾನ – ಕೆಎನ್.ಆರ್

  ತುಮಕೂರು :

     ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ಹೋಗಿ ಬರಿಗೈಯಲ್ಲಿ ವಾಪಸ್ಸಾಗಿರುವುದು, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಸೂಚನೆಯಾಗಿದೆ ಎಂದು ಮಾಜಿ ಶಾಸಕ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರು ಹೇಳಿದರು.

      ನಗರದ ಟಿಎಪಿಸಿಎಂಎಸ್ ಕಚೇರಿ ಬಳಿ ಗುರುವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರಕೆ ಪುಷ್ಪನಮನ ಸಲ್ಲಿಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣನವರು, ಸಚಿವ ಸಂಪುಟ ವಿಸ್ತರಣೆಯ ಸಚಿವ ಸ್ಥಾನದ ಅರ್ಹರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪನವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಗೃಹ ಸಚಿವರೊಂದಿಗೆ ಮಾತನಾಡಲು ಭೇಟಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರೂ ಅಮಿತ್ ಶಾ ಅವಕಾಶ ನೀಡಲಿಲ್ಲ. ಇದು ಕೇವಲ ರಾಜ್ಯದ ಮುಖ್ಯಮಂತ್ರಿಗೆ ಮಾಡಿದ ಅಪಮಾನ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾಡಿದ ಅಪಮಾನ. ಇದು ಖಂಡನಾರ್ಹ ಎಂದು ಹೇಳಿದರು.
ಯಡಿಯೂರಪ್ಪನವರು ಕೇವಲ ಬಿಜೆಪಿಯ ಮುಖ್ಯಮಂತ್ರಿಯಲ್ಲ, ರಾಜ್ಯದ ಮುಖ್ಯಮಂತ್ರಿ, ನಮ್ಮೆಲ್ಲರ ನಾಯಕರು ಅವರಿಗೆ ಮಾಡಿದ ಅಪಮಾನ ರಾಜ್ಯದ ಜನರಿಗೆ ಮಾಡಿದಂತೆ. ಇದು ನಾಚಿಕೆಗೇಡಿನ ವಿಚಾರ ಎಂದು ಟೀಕಿಸಿದರು.

ಡಾ.ಪರಮೇಶ್ವರ್ ಸಂಬಂಧ ಸುಳ್ಳು ಪ್ರಚಾರ :

      ಶಿರಾ ಉಪ ಚುನಾವಣೆ ನಂತರ ಇತ್ತೀಚೆಗೆ ತಾವು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಆ ವೇಳೆ ನಮ್ಮಿಬ್ಬರನ್ನು ಬಿಟ್ಟು ಇನ್ನಾರೂ ಇರಲಿಲ್ಲ. ಆದರೆ, ತಾವು ಡಾ.ಪರಮೇಶ್ವರ್ ವಿರುದ್ಧ ದೂರು ನೀಡಿದ್ದಾಗಿ ಮಾರನೆ ದಿನ ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾಗಿತ್ತು. ಇದು ಸುಳ್ಳು ಮಾಹಿತಿ ಹಾಗೂ ಸತ್ಯಕ್ಕೆ ದೂರವಾದ ವಿಚಾರ. ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರೂ ಪ್ರಮಾಣಿಕವಾಗಿ ಕೆಲಸ ಮಾಡಿದರು. ಡಾ.ಜಿ.ಪರಮೇಶ್ವರ್ ಕೂಡಾ ಚುನಾವಣೆಯಲ್ಲಿ ಶ್ರಮ ಹಾಕಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ತಾವು ಅವರ ವಿರುದ್ಧ ದೂರು ಹೇಳಿದೆ ಎಂದು ವರದಿ ಮಾಡಿ ಜನರಲ್ಲಿ ತಪ್ಪು ಭಾವನೆ ಮೂಡಿಸುವಂತಾಗುತ್ತದೆ. ಜನರಿಗೆ ತಪ್ಪು ಸಂದೇಶ ಹೋಗಬಾರದು. ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದು ಕೆ.ಎನ್.ರಾಜಣ್ಣನವರು ಹೇಳಿದರು.

ಅಭಿವೃದ್ಧಿ ನಿಗಮಗಳು ಪ್ರಯೋಜನವಿಲ್ಲ 

      ಬೆಳಗಾವಿ ಲೋಕ ಸಭಾ ಚುನಾವಣೆ, ಬಸವಕಲ್ಯಾಣ ವಿಧಾನ ಸಭಾ ಉಪ ಚುನಾವಣೆ ದೃಷ್ಟಿ ಇಟ್ಟುಕೊಂಡು ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭವನ್ನು ಕರಾಳ ದಿನ ಆಚರಿಸಿದ ಮರಾಠಿಗರ ಓಲೈಕೆಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಅಗತ್ಯವಿರಲಿಲ್ಲ. ಅಭಿವೃದ್ಧಿ ಪ್ರಾಧಿಕಾರದ ವಿಚಾರದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮೀಜಿಯವರು ಹೇಳಿರುವುದು ನೂರಕ್ಕೆ ನೂರು ಸತ್ಯ. ಅವಕಾಶ ವಂಚಿತ, ತಳ ಸಮುದಾಯದ ಅಭಿವೃದ್ಧಿಗೆ ಇಂತಹ ಪ್ರಾಧಿಕಾರಗಳ ರಚನೆ ಆಗಬೇಕೇ ಹೊರತು ಬಲಾಢ್ಯ ಜನಾಂಗದವರಿಗಲ್ಲ. ಮಡಿವಾಳರು, ಕುಂಬಾರರು, ಸವಿತಾ ಸಮಾಜದಂತಹ ಸಮಾಜಗಳಿಗೆ ನೆರವಾಗುವ ಕಾರ್ಯಕ್ರಮಗಳಿಗೆ ಸರ್ಕಾರ ಆದ್ಯತೆ ನಿಡಬೇಕು ಎಂದು ಕೆ.ಎನ್.ರಾಜಣ್ಣ ಹೇಳಿದರು.

ಕೊಟ್ಟ ಭರವಸೆ ಕಾಲಮಿತಿಯಲ್ಲಿ ಈಡೇರಿಸಲಿ 

      ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಸುಳ್ಳು ಭರವಸೆ ನೀಡಿ ಗೆಲುವು ಸಾಧಿಸಿದೆ. ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಮೊದಲು ಹೇಳಿ ನಂತರ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ, ಈ ನಿಗಮಗಳಿಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ, ಇವು ಇನ್ನೂ ಪೇಪರ್ ಮೇಲಿವೆ. ಶಿರಾ ತಾಲ್ಲೂಕಿನ ಮದ್ದಕ್ಕನಹಳ್ಳಿಯ ಭೋವಿ ಸಮುದಾಯ ಎದುರಿಸುತ್ತಿದ್ದ ಸಮಸ್ಯೆ ನಿವಾರಿಸುವ ಭರವಸೆ ನೀಡಿ, ಒಳ ಮೀಸಲಾತಿ ಜಾರಿ, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವುದಾಗಿ ಎಡಗೈ ಸಮುದಾಯದವರಿಗೆ ಭರವಸೆ ನೀಡಿದ್ದರು. ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದಾಗಿ ಹೇಳಿದ್ದರು. ಈ ಭರವಸೆ ನಂಬಿ ಮತದಾರರು ಬಿಜೆಪಿಯನ್ನು ಈ ಬಾರಿ ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಬಿಜೆಪಿ ಸರ್ಕಾರ ಕಾಲಮಿತಿಯೊಳಗೆ ಈಡೇರಿಸಬೇಕು ಎಂದು ಒತ್ತಾಯಿಸಿದ ಕೆ.ಎನ್.ಆರ್, ತಪ್ಪಿದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ನಾನು ಇಂದಿರಾ ಗಾಂಧಿಯವರ ಅನುಯಾಯಿ :

     ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅನುಯಾಯಿ. 1969ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ ಇಂದಿರಾ ಗಾಂಧಿ ಪರವಾಗಿದ್ದೆ. 78ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಇಬ್ಭಾಗವಾದಾಗಲೂ ಇಂದಿರಾ ಗಾಂಧಿಯವರ ಪರವಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಕೆಲಸ ಮಾಡಿದ್ದೆ. ಇಂದಿರಾಗಾಂಧಿಯವರ ಪ್ರಗತಿಪರ ಚಿಂತನೆಗಳು, ಅವರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಅವರ ಅನುಯಾಯಿಯಾಗಿದ್ದೆ. ಇಂದಿರಾ ಅವರ ಜನ್ಮದಿನದ ಸಂರ್ಭದಲ್ಲಿ ಅವರ ಸಿದ್ಧಾಂತ, ನೀತಿಗಳನ್ನು ಪ್ರಚಾರ ಮಾಡುತ್ತಾ ಅವರ ಸ್ಮರಣೆ ಮಾಡುತ್ತಾ ಗೌರವ ಸಲ್ಲಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು. ಯುವಜನರನ್ನು ಪಕ್ಷಕ್ಕೆ ಸೆಳೆದು ಅವರು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದು ಕೆ.ಎನ್.ಆರ್ ಹೇಳಿದರು.

     ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಸಹಕಾರ ಮಹಾಮಂಡಳಿ ಅಧ್ಯಕ್ಷ ಎನ್.ಗಂಗಣ್ಣ, ಮುಖಂಡರಾದ ಟಿ.ಪಿ.ಮಂಜುನಾಥ್, ಕೆ.ಹೆಚ್.ಜಯರಾಮ್, ಕೆ.ಜಿ.ಆನಂದ್, ನಾರಾಯಣಗೌಡ, ರಾಮದಾಸ್, ಪುರುಷೋತ್ತಮ್, ಲಕ್ಷೀನಾರಾಯಣ್, ರಾಮದಾಸ್,ಮಹಮದ್ ಜಿಯಾವುಲ್ಲಾ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap