ಕೋವಿಡ್ ಹೆಚ್ಚಳ : ನಗರದಿಂದ ಮತ್ತೆ ಹಳ್ಳಿಗಳ ಕಡೆಗೆ ಪಯಣ

 
ತುಮಕೂರು:

      ದಿನೆ ದಿನೆ ಕೊರೊನಾ ಸೋಂಕು ನಗರಗಳಲ್ಲಿ ಹೆಚ್ಚುತ್ತಿದ್ದು, ಕಳೆದ ಬಾರಿಯಂತೆಯೆ ಮರಳಿ ಊರು ಸೇರಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

      ಉದ್ಯೋಗಕ್ಕೆ ಸೇರಿಕೊಂಡಿದ್ದ ಗ್ರಾಮೀಣ ಯುವಕರು ಯುಗಾದಿ ಹಬ್ಬಕ್ಕೆ ಊರು ಸೇರಿಕೊಂಡು ಅತಂತ್ರ ಸ್ಥಿತಿಗೆ ಒಳಗಾಗಿದ್ದಾರೆ. ಹಬ್ಬಕ್ಕೂ ಮುನ್ನವೆ ಸಾರಿಗೆ ನೌಕರರ ಮುಷ್ಕರ ಆರಂಭವಾಗಿತ್ತು. ಬಸ್‍ಗಳ ಸಂಚಾರ ಇಲ್ಲದ ಆ ಸಮಯದಲ್ಲಿ ಕಷ್ಟಪಟ್ಟು ಊರು ಸೇರಿಕೊಂಡಿದ್ದರು. ಆ ವೇಳೆಗಾಗಲೆ ಕೊರೊನಾ ವೈರಸ್ ಎರಡನೇ ಅಲೆ ವ್ಯಾಪಕವಾಗಿ ವ್ಯಾಪಿಸಿದ್ದು, ಇದೀಗ ತಾರಕಕ್ಕೆ ಹೋಗಿದೆ.

      ಹೀಗಾಗಿ ಹಳ್ಳಿಯಲ್ಲಿರುವವರು ಮತ್ತೆ ನಗರಕ್ಕೆ ಬಂದು ಉದ್ಯೋಗ ಮಾಡಲು ಮನಸ್ಸಾಗದ ಸ್ಥಿತಿಯಲ್ಲಿಯೇ ಬಹಳಷ್ಟು ಜನರಿದ್ದಾರೆ.
ಸತತವಾಗಿ ಎದುರಾದ ರಜೆಗಳ ಪರಿಣಾಮ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ತಮ್ಮೂರು ಸೇರಿಕೊಂಡರು. ಮುಂದಿನ ದಿನಗಳಲ್ಲಿ ಲಾಕ್‍ಡೌನ್ ಎದುರಾಗಬಹುದೆಂಬ ವದಂತಿಯೂ ಇತ್ತು. ಹಬ್ಬ ಮುಗಿದ ಕೂಡಲೆ ಬೆಂಗಳೂರಿನಲ್ಲಿ ಕಫ್ರ್ಯೂ ಇಲ್ಲವೆ ಲಾಕ್‍ಡೌನ್ ಘೋಷಣೆ ಮಾಡಬಹುದು ಎಂಬ ಭೀತಿಯಿಂದ ಕೆಲವರು ಊರಿನಲ್ಲಿಯೇ ಉಳಿದು ಬಿಟ್ಟಿದ್ದಾರೆ. ಬಸ್ ಸಂಚಾರ ವ್ಯವಸ್ಥೆ ಇನ್ನೂ ಸರಿ ದಾರಿಗೆ ಬರದ ಹಿನ್ನೆಲೆಯಲ್ಲಿ ಹಾಗೂ ಮುಂದಿನ ಆಗುಹೋಗುಗಳನ್ನು ನೋಡಿಕೊಂಡೆ ನಗರಕ್ಕೆ ಮರಳಬೇಕು ಎಂಬ ನಿಟ್ಟಿನಲ್ಲಿ ಹಲವರಿದ್ದರು. ಇದೀಗ ಬಸ್ ಸಂಚಾರ ಸುಗಮವಾಗಿದೆ. ಆದರೆ ಅದರ ಹಿಂದೆಯೆ ಬೆಂಗಳೂರು, ತುಮಕೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಲಾಕ್‍ಡೌನ್ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಊರಿನಲ್ಲಿಯೆ ಇದ್ದು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

      ಬೆಂಗಳೂರು ಸೇರಿದಂತೆ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಕೊರೊನಾ ಆರ್ಭಟ ಹೆಚ್ಚಿದೆ. ಉಳಿದ ಜಿಲ್ಲೆಗಳಿಗೂ ವ್ಯಾಪಿಸದಿರಲಿ ಎಂದು ನೈಟ್ ಕಫ್ರ್ಯೂವನ್ನು ರಾಜ್ಯಾದ್ಯಂತ ವಿಸ್ತರಿಸಲಾಯಿತು. ಇದರ ಜೊತೆಗೆ ವೀಕ್ ಎಂಡ್ ಕಫ್ರ್ಯೂ ಸಹ ವಿಧಿಸಲಾಗಿದ್ದು, ಶುಕ್ರವಾರದಿಂದ ಸೋಮವಾರ ಮುಂಜಾನೆಯವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. ಇವೆಲ್ಲವೂ ಒಟ್ಟಾರೆ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ನಗರಗಳಿಂದ ಹಳ್ಳಿಗೆ ಬಂದು ಸೇರಿರುವ ಜನತೆ ದಿನ ದಿನದ ವಿದ್ಯಮಾನಗಳನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ.
ಮಾಧ್ಯಮಗಳಲ್ಲಂತೂ ಪ್ರತಿದಿನ, ಪ್ರತಿನಿಮಿಷ ಕೊರೊನಾ ವಿಷಯವೇ ವರದಿಯಾಗುತ್ತಿವೆ. ಬೆಡ್ ಸಿಗದೆ ಸಾವು, ಚಿಕಿತ್ಸೆಗೆ ಪರದಾಟ, ಕೊರೊನಾ ರಣಕೇಕೆ ಎಂಬಂತಹ ಸುದ್ದಿಗಳನ್ನು ನೋಡಿ ಜನತೆ ಈಗಾಗಲೆ ವಿಚಲಿತರಾಗಿದ್ದಾರೆ. ಕಷ್ಟವೊ ಸುಖವೊ ಇಲ್ಲಿಯೆ ಇರೋಣ ಎಂಬ ತೀರ್ಮಾನಕ್ಕೆ ಬಂದಿರುವ ಹಲವರು ಮರಳಿ ನಗರಗಳಿಗೆ ಹೋಗದೆ ಹಳ್ಳಿಯಲ್ಲಿಯೆ ಠಿಕಾಣಿ ಹೂಡಿದ್ದಾರೆ.

      ಗ್ರಾಮೀಣ ಪ್ರದೇಶಗಳಲ್ಲಿ ಈಗ ಒಕ್ಕಲುತನದ ಕೆಲಸವಿಲ್ಲ. ಬೇಸಿಗೆ ಕಾಲವಾಗಿದ್ದು ಕೃಷಿ ಚಟುವಟಿಕೆಯೂ ಇಲ್ಲ. ಸಾಧಾರಣ ಮಳೆ ಬಂದಿದ್ದು, ಮುಂದಿನ ಮಳೆಯ ಸೂಚನೆಯನ್ನು ಕಾಯಲಾಗುತ್ತಿದೆ. ಹೀಗಾಗಿ ಉತ್ತಮ ಮಳೆ ಬಂದು ಕೃಷಿ ಚಟುವಟಿಕೆ ಹೆಚ್ಚಾದರೆ ಬಹಳಷ್ಟು ಮಂದಿ ಯುವಕರು ಕಳೆದ ಬಾರಿಯಂತೆ ಈ ಬಾರಿಯೂ ಹಳ್ಳಿಯಲ್ಲಿಯೆ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ದಿನೆ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾವಿನ ಪ್ರಕರಣಗಳು ಹೆಚ್ಚು ಹೆಚ್ಚಾಗಿ ವರದಿಯಾಗುತ್ತಿರುವ ಕಾರಣ ಪೋಷಕರಲ್ಲಿಯೂ ಗಾಬರಿ ಉಂಟಾಗಿದ್ದು, ನಗರಕ್ಕೆ ಹೋಗುವುದೆ ಬೇಡ ಎಂದು ತಾಕೀತು ಮಾಡಿರುವ ಪ್ರಸಂಗಗಳೂ ಇವೆ.

      ಕಳೆದ ಬಾರಿ ಈ ಅವಧಿಗಾಗಲೆ ನಗರಗಳಲ್ಲಿರುವ ಯುವ ಜನತೆ ಹಳ್ಳಿ ಸೇರಿಕೊಂಡಿದ್ದರು. ಅಳಿದುಳಿದ ಕೆಲವರು ಕಳ್ಳ ಮಾರ್ಗಗಳಲ್ಲಿ ಬಂದು ಊರು ಸೇರುತ್ತಿದ್ದರು. ದ್ವಿಚಕ್ರ ವಾಹನಗಳ ಮೂಲಕ ಪೊಲೀಸರ ಕಣ್ತಪ್ಪಿಸಿ ಬರುವ ಹಾಗೂ ಮಾರ್ಗಮಧ್ಯೆ ಲಾಠಿ ರುಚಿ ನೋಡಿ ಬಂದಿದ್ದ ಬಹಳಷ್ಟು ಜನರಿದ್ದಾರೆ. ಅವರಿಗೆಲ್ಲ ಕಳೆದ ಬಾರಿಯ ಪರಿಸ್ಥಿತಿ ಚೆನ್ನಾಗಿ ಗೊತ್ತು. ನಗರಗಳಲ್ಲಿ ನಿರ್ಬಂಧಗಳು ಹೆಚ್ಚಾದರೆ ಏನೆಲ್ಲಾ ಸಂಕಷ್ಟಗಳು ಇರಲಿವೆ ಎಂಬ ಚಿತ್ರಣದ ಅರಿವಿದೆ. ಹೀಗಾಗಿ ಕೆಲವು ತಿಂಗಳು ಇಲ್ಲಿರುವುದೇ ವಾಸಿ ಎಂಬ ನಿರ್ಧಾರಕ್ಕೂ ಬಂದಿದ್ದಾರೆ.
ಕಳ್ಳ ದಾರಿಯಲ್ಲಿ ಬಂದು ಹಳ್ಳಿ ಸೇರಿರುವ ನಗರ ಪ್ರದೇಶದವರನ್ನು ತಡೆಯಲು ಹಳ್ಳಿ ಹಳ್ಳಿಗಳಲ್ಲಿ ಬೇಲಿಗಳು ನಿರ್ಮಾಣವಾಗಿದ್ದವು. ಆ ಊರಿನವರು ಮಾತ್ರವಲ್ಲ, ಯಾರೇ ಬಂದರೂ ಪ್ರವೇಶ ನಿರ್ಬಂಧಿಸಿ ರಸ್ತೆಗೆ ಕಲ್ಲು, ಮುಳ್ಳು ಹಾಕಿದ್ದರು. ನಂತರದ ದಿನಗಳಲ್ಲಿ ಇದು ವ್ಯಾಪಕ ಅಸಮಾಧಾನಕ್ಕೂ ಕಾರಣವಾಯಿತು. ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ಮುಳ್ಳು ಬೇಲಿಗಳನ್ನು ತೆರವುಗೊಳಿಸಿತ್ತು. ಕ್ರಮೇಣ ಅಲ್ಲಿನ ಜನರೆ ಅದನ್ನು ತೆರವು ಮಾಡಲು ಮುಂದಾದರು. ನಗರ ಪ್ರದೇಶಗಳವರು ಹೊರಗಿನಿಂದ ಸೋಂಕು ತಂದು ಇಲ್ಲಿ ಹರಡುತ್ತಾರೆ ಎಂಬ ಭಯ ಗ್ರಾಮೀಣರಲ್ಲಿ ಇತ್ತು.
 
ಕಾದು ನೋಡುವ ತವಕ…

      ಯುಗಾದಿ ಹಬ್ಬಕ್ಕೆಂದು ಊರಿಗೆ ಬಂದು ಹಬ್ಬ ಮುಗಿಸಿ ದುಡಿಮೆಗಾಗಿ ಮತ್ತೆ ಬೆಂಗಳೂರಿನತ್ತ ಪ್ರಯಾಣಿಸಲು ಮುಂದಾಗಿದ್ದ ಸಮಯದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ತಲೆದೋರಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದು ಕಡೆ ಸಾರಿಗೆ ಮುಷ್ಕರ, ಮತ್ತೊಂದು ಕಡೆ ಕೊರೊನಾ ಸೋಂಕು ಹೆಚ್ಚಳದಿಂದ ಬೆಂಗಳೂರಿಗೆ ಹೋಗುವ ದಿನಗಳನ್ನು ಮುಂದೂಡಿರುವವರೆ ಅಧಿಕ. ದುಡಿಮೆಗಾಗಿ ನಗರಗಳಲ್ಲಿರುವ ಕೊರೊನಾ ರೋಗಿಗಳು ಅನುಭವಿಸುತ್ತಿರುವ ನೋವು, ಯಾತನೆಯನ್ನು ಮಾಧ್ಯಮಗಳಲ್ಲಿ ನೋಡಿ ಇಲ್ಲಿ ಇರುವುದನ್ನೇ ತಿಂದು ಕಷ್ಟಪಟ್ಟರೂ ಪರವಾಗಿಲ್ಲ, ನೆಮ್ಮದಿಯ ಬದುಕು ಸಾಗಿಸೋಣ, ಅಲ್ಲಿಗೆ ಹೋಗಿ ಎಡವಟ್ಟಾದರೆ ಏನು ಮಾಡುವುದು ಎಂಬ ಆತಂಕ ಹಲವರದ್ದು.

 ಊರುಗಳತ್ತ ಪಯಣ

     ಶುಕ್ರವಾರ ರಾತ್ರಿಯಿಂದ ಎರಡು ದಿನಗಳ ಕಾಲ ವೀಕೆಂಡ್ ಲಾಕ್‍ಡೌನ್ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಅಲ್ಲಲ್ಲಿ ಪೆಟ್ರೋಲ್ ಬಂಕ್‍ಗಳಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಊರುಗಳಿಗೆ ತೆರಳುವವರ ಸಂಖ್ಯೆ ಕಂಡುಬಂದಿತು. ಎರಡು ದಿನಗಳ ಕಾಲ ಊರುಗಳಲ್ಲಿ ಕಾಲ ಕಳೆದು ಬಂದರಾಯಿತು ಎನ್ನುವವರೆ ಹೆಚ್ಚಾಗಿ ಕಂಡುಬಂದರು. ಈಗಾಗಲೇ ಕಳೆದ ಎರಡು ದಿನಗಳಿಂದ ನೈಟ್ ಕಫ್ರ್ಯೂ ಜೊತೆಗೆ ದಿನವಿಡೀ ನಿರ್ಬಂಧ ಹೇರಿರುವುದರಿಂದ ಸಂಚಾರ ದಟ್ಟಣೆಯು ಕಡಿಮೆಯಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link