ಇತಿಹಾಸಕಾರರ ಊಹೆಗಳನ್ನು ತಲೆಕೆಳಗೆ ಮಾಡಿದ ಚೀನಾದ ಮಹಾಗೋಡೆ!

ಬೀಜಿಂಗ್: 

    ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ಚೀನಾದ ಮಹಾಗೋಡೆಯ  ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿ  ಸ್ಥಾನವನ್ನು ಪಡೆದುಕೊಂಡಿರುವ ಈ ಚೀನಾದ ಮಹಾಗೋಡೆಯು 21,196 ಕಿ.ಮೀ.ಗಳಷ್ಟು ಉದ್ದಕ್ಕೆ ಚಾಚಿ ನಿಂತಿದ್ದು, ಚೀನಾ ದೇಶವನ್ನು ಆಳಿದ್ದ ವಿವಿಧ ರಾಜ ವಂಶಗಳ ಕಾಲದಲ್ಲಿ ಈ ಮಹಾಗೋಡೆಯನ್ನು ಹಂತಹಂತವಾಗಿ ನಿರ್ಮಿಸಲಾಗಿದೆ. ಇನ್ನು ಈ ಚೀನಾದ ಮಹಾಗೋಡೆಯ ಕಾಲಮಾನಕ್ಕೆ ಸಂಬಂಧಿಸಿದಂತೆ ಇದೀಗ ಹೊಸದೊಂದು ರೋಚಕ ಮಾಹಿತಿ ಹೊರಬಿದ್ದಿದೆ. ಪೂರ್ವ ಚೀನಾದ ಪುರಾತತ್ವ ಇಲಾಖೆಯ ಅಧಿಕಾರಿಗಳು ಕಂಡುಕೊಂಡಿರುವ ಪ್ರಕಾರ ಈ ಚೀನಾದ ಮಹಾಗೋಡೆಯ ಕಾಲಮಾನ, ಇತಿಹಾಸಕಾರರು ಈಗ ಅಂದುಕೊಂಡಿರುವುದಕ್ಕಿಂತಲೂ 300 ವರ್ಷಗಳಿಗಿಂತ ಹಳೆಯದಾಗಿದೆ ಎಂಬುದೇ ಈ ಹೊಸ ವಿಚಾರವಾಗಿದೆ.

    ಅಂದರೆ, ಚೀನಾದ ಮಹಾಗೋಡೆಯ ಕಾಲಮಾನ ಇದೀಗ ವೆಸ್ಟರ್ನ್ ಝೂಹು ರಾಜವಂಶಕ್ಕೆ  (ಕ್ರಿ.ಪೂ. 1046 – 771)ಕ್ಕೆ ಬಂದು ನಿಲ್ಲುತ್ತದೆ. ಈ ಹೊಸ ಕಾಲಘಟ್ಟಕ್ಕೆ ಪುರಾವೆ ಸಿಕ್ಕಿರುವುದು ಶಾನ್ ಡಾಂಗ್ ಪ್ರಾಂತ್ಯದ  ಚಾಂಗ್-ಕ್ವಿಂಗ್ ಜಿಲ್ಲೆಯಲ್ಲಿ ಸಿಕ್ಕಿರುವ ಹೊಸ ಸಾಕ್ಷಿಗಳಿಂದ ಈ ಮಹಾಗೋಡೆಯ ಕಾಲಮಾನ ಇದೀಗ ನಾವಂದುಕೊಂಡಿರುವುದಕ್ಕಿಂತಲೂ 300 ವರ್ಷ ಹಿಂದೆ ಸಾಗಿಬಿಟ್ಟಿದೆ.

   ಈ ಮಹಾಗೋಡೆಯ ಕೆಲ ಭಾಗಗಳನ್ನು ಚೀನಾದ ಸ್ಪ್ರಿಂಗ್  ಮತ್ತು ಅಟಮನ್  ಆಳ್ವಿಕೆಯ ಅವಧಿ (ಕ್ರಿ.ಪೂ. 770 – 476)ರ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ವಿಶ್ವಪ್ರಸಿದ್ಧ ಯಾತ್ರಿಕ ಕನ್ ಫ್ಯೂಶಿಯಸ್ ನ  ಕಾಲಮಾನವಾಗಿದೆ.

   ಚೀನಾದ ಮಹಾಗೋಡೆಗೆ ಸಂಬಂದಿಸಿದಂತೆ ಈ ಹಿಂದಿನ ನಂಬಿಕೆಗಳಿಗೆ ವ್ಯತಿರಿಕ್ತವಾಗಿ, ಈ ಮಹಾಗೋಡೆಯನ್ನು ಒಂದೇ ಹಂತದಲ್ಲಿ ರಚಿಸಲಾಗಿಲ್ಲ, ಬದಲಾಗಿ ಹಂತಹಂತವಾಗಿ ಚೀನಾದ ಈ ಭಾಗವನ್ನು ಆಳಿದ್ದ ವಿವಿಧ ರಾಜಮನೆತನಗಳ ಅವಧಿಯಲ್ಲಿ ಇದನ್ನು ನಿರ್ಮಿಸಲಾಗಿದೆ ಎಂಬ ವಿಚಾರವೂ ಇದೀಗ ಹೊರಬಿದ್ದಿದೆ.

   ಚೀನಾದ ಈ ಮಹಾಗೋಡೆಯನ್ನು ಪ್ರಾಚೀನ ಚೀನಾದ ಉತ್ತರದ ಗಡಿಭಾಗಗಳನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸಿಕೊಳ್ಳುವುದಕ್ಕಾಗಿ, ಅದರಲ್ಲೂ ಮುಖ್ಯವಾಗಿ ಯುರೇಷಿಯನ್ ಭಾಗದಿಂದ ಬರುವ ಅಲೆಮಾರಿ ಗುಂಪುಗಳ ಒಳನುಸುಳುವಿಕೆಯನ್ನು ತಡೆಯುವುದಕ್ಕಾಗಿ ನಿರ್ಮಿಸಲಾಗಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ ಈ ಮಹಾಗೋಡೆಯನ್ನು ಶತಮಾನಗಳ ಕಾಲ ನಿರ್ಮಿಸಿಕೊಂಡೇ ಬರಲಾಗಿದೆ, ಆದರೆ ಇದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ಲಭ್ಯವಿಲ್ಲದ ಕಾರಣ ಇದರ ನಿರ್ಮಾಣದ ನಿಖರ ಕಾಲಮಾನವನ್ನು ಅಳೆಯಲು ಸಾ‍ಧ್ಯವಾಗಿರಲಿಲ್ಲ.

   ಇದೀಗ ಇತ್ತೀಚಿನ ಈ ಪುರಾತತ್ವ ಇಲಾಖೆಯ ಸಂಶೋಧನೆಗಳು ಪ್ರಾಚೀನ ಚೀನಿಯರ ಸುಧಾರಿತ ನಿರ್ಮಾಣ ಕೌಶಲ ಸಾಮರ್ಥ್ಯದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಹೊರಜಗತ್ತಿಗೆ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಅದರಲ್ಲೂ ಮುಖ್ಯವಾಗಿ ಯುದ್ಧದ ಸಂದರ್ಭಗಳನ್ನು ಎದುರಿಸಲು ಅವರು ಅನುಸರಿಸಿದ ಈ ರಕ್ಷಣಾ ತಂತ್ರಗಾರಿಕೆ ವಿಶ್ವಕ್ಕೇ ಚೋದ್ಯದ ವಿಚಾರವಾಗಿದೆ. ಇನ್ನು ಕ್ಯುಐ ರಾಜ್ಯಭಾರದ ಕಾಲದಲ್ಲಿ ಈ ಮಹಾಗೋಡೆಯ ಎತ್ತರ 30 ಮೀಟರ್ ಗಳಷ್ಟು ಏರಿಕೆ ಕಂಡಿತ್ತು ಎಂಬ ವಿಚಾರವೂ ಇದೀಗ ಬೆಳಕಿಗೆ ಬಂದಿದೆ. 

   ಚೀನಾದ ಪ್ರಾಚೀನ ಸಾಹಿತ್ಯಗಳೂ ಸಹ ಚೀನಾದ ಮಹಾಗೋಡೆ ಹೇಗೆ ಹಂತಹಂತವಾಗಿ ನಿರ್ಮಾಣಗೊಂಡಿತು ಎಂಬ ಸಂಶೋಧಕರ ವಿಚಾರಕ್ಕೆ ಪುಷ್ಠಿಯನ್ನು ನೀಡುವಂತಿದೆ. ಈ ಗೋಡೆಯ ಪ್ರಾರಂಭಿಕ ಹಂತದ ನಿರ್ಮಾಣ, ಅದರ ವಿಸ್ತರಿಸುವಿಕೆ ಮತ್ತು ಪ್ರಾಕೃತಿಕ ವಿಕೋಪ ಮತ್ತು ಸೇನಾ ದಾಳಿಗಳ ಕಾರಣದಿಂದ ಅಲ್ಲಿಲ್ಲಿ ನಾಶಗೊಂಡ ವಿಚಾರಗಳು ನಮ್ಮ ಮುಂದಿದೆ. ಇದೆಲ್ಲದರ ಹೊರತಾಗಿಯೂ, ಈ ಭಾಗದಲ್ಲಿದ್ದ ಎಲ್ಲಾ ರಾಜ ಮನೆತನಗಳು ಈ ಮಹಾಗೊಡೆಯನ್ನು ಪುನರ್ ನಿರ್ಮಾಣ ಮಾಡುವಲ್ಲಿ, ಸಂರಕ್ಷಣೆ ಮಾಡುವಲ್ಲಿ ಮತ್ತು ನವೀಕರಣಗೊಳಿಸುವಲ್ಲಿ ಶ್ರಮಿಸುತ್ತಲೇ ಬಂದಿದ್ದು, ಆ ಮೂಲಕ ಪ್ರಾಚೀನಾ ಚೀನಾದ ನಿರ್ಮಾಣ ಕೌಶಲವನ್ನು ಜತನದಿಂದ ಕಾಪಾಡಿಕೊಂಡು ಬಂದಿವೆ.

   ಈ ಭಾಗದಲ್ಲಿ ಸಂಗ್ರಹಿಸಲಾದ ಸಾಂಪ್ರದಾಯಿಕ ಮಾನವ ನಿರ್ಮಿತ ರಚನೆಗಳು, ಗಿಡಗಳ ಪಳೆಯುಳಿಕೆಗಳು ಮತ್ತು ಪ್ರಾಣಿಗಳ ಮೂಳೆಗಳನ್ನು ಅಧ್ಯಯನ ಮಾಡುವ ಮೂಲಕ ಸಂಶೋಧಕರು ಒಂದು ಪುರಕ, ಬಹುವಿಧ ಆಯಾಮದ ಒಂದು ಅಧ್ಯಯನ ವಿಧಾನವನ್ನು ಈ ಮಹಾಗೋಡೆಯ ನಿರ್ಮಾಣ ಕಾಲವನ್ನು ನಿರ್ಣಯಿಸುವಲ್ಲಿ ಕಂಡುಕೊಳ್ಳುವಲ್ಲಿ ಸಫಲರಾಗಿದ್ದಾರೆ.

   ‘ನಮಗಿಲ್ಲ ರಸ್ತೆ, ಮನೆ ಪಾಯದ, ಹೊಂಡದ ಮತ್ತು ಬೂದಿ ಹೊಂಡಗಳ ಸುಟ್ಟ ಪಳೆಯುಳಿಕೆಗಳು ಲಭ್ಯವಾಗಿದೆ.’ ಎಂದು ಶಾನ್ ಡಾಂಗ್ ಪ್ರಾಂತೀಯ ಸಾಂಸ್ಕೃತಿಕ ಅಧ್ಯಯನ ಮತ್ತು ಪುರಾತತ್ವ ಕೇಂದ್ರದ ಪ್ರಾಜೆಕ್ಟ್ ಲೀಡರ್ ಝಾಂಗ್ ಸು ಹೇಳಿದ್ದಾರೆ.ಯುದ್ಧ ಕಾಲೀನ ಅವಧಿಯೆಂದೇ ಗುರುತಿಸಿಕೊಂಡಿರುವ ಕ್ರಿ.ಪೂ. 475 – 221ರ ಅವಧಿಯಲ್ಲಿ ಉತ್ತಮ ಮಾದರಿಯಲ್ಲಿ ಗೋಡೆಯ ನಿರ್ಮಾಣ ನಡೆಯಿತು, ಈ ಭಾಗ ಚೆನ್ನಾಗಿ ಸಂರಕ್ಷಿಸಲ್ಪಟ್ಟಿದೆ ಮತ್ತು ಇದು ಈ ಮಹಾಗೋಡೆಯ ಇತಿಹಾಸದ ಬಗ್ಗೆ ಬಹಳಷ್ಟು ಒಳನೋಟಗಳನ್ನು ನಮಗೆ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Recent Articles

spot_img

Related Stories

Share via
Copy link