ತುಮಕೂರು :
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಉಸಿರಾಟದ ಗಂಭೀರ ಸಮಸ್ಯೆ ಎದುರಿಸುತ್ತಿದ್ದ 24 ಕೋವಿಡ್ ರೋಗಿಗಳು ಆಕ್ಸಿಜನ್ ಪೂರೈಕೆಯಾಗದೆ ಒಂದೇ ದಿನದಲ್ಲಿ ಸಾವನ್ನಪ್ಪಿರುವ ಪ್ರಕರಣ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ಕರೆಗಂಟೆಯಾಗಿದ್ದು, ತುಮಕೂರು ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಕೈಗೊಂಡ ಆಕ್ಸಿಜನ್ ಪೂರೈಕೆ ಕ್ರಮಗಳ ಕಾರಣಕ್ಕೆ ಆಕ್ಸಿಜನ್ ತುರ್ತು ಪರಿಸ್ಥಿತಿಯಿಂದ ಜಿಲ್ಲೆ ಸದ್ಯದ ಮಟ್ಟಿಗೆ ಪಾರಾಗಲು ಸಾಧ್ಯವಾಗಿದೆ. ಆದರೆ ಆಕ್ಸಿಜನ್ ಬೆಡ್‍ಗಳ ಕೊರತೆ ಜಿಲ್ಲೆಯ ಕೋವಿಡ್ ಸೋಂಕಿತರನ್ನು ತೀವ್ರವಾಗಿ ಬಾಧಿಸುತ್ತಿದ್ದು, ಆಕ್ಸಿಜನ್ ಬೆಡ್‍ಗಳನ್ನು ಹೆಚ್ಚುವರಿಯಾಗಿ ಒದಗಿಸುವ ಅವಶ್ಯಕತೆ ಹೆಚ್ಚಿದೆ.
ಪ್ರಸಕ್ತ ಜಿಲ್ಲೆಯಲ್ಲಿ ಲಭ್ಯವಿರುವ ಆಕ್ಸಿಜನ್ ಬೆಡ್‍ಗಳನ್ನು ಆಧರಿಸಿ ದಿನವೊಂದಕ್ಕೆ 18.5 ಕಿಲೋ ಲೀಟರ್ ಆಕ್ಸಿಜನ್ ಜಿಲ್ಲೆಗೆ ಅವಶ್ಯಕವಿದೆ ಎಂದು ಅಂದಾಜಿಸಲಾಗಿದ್ದು, ಆಕ್ಸಿಜನ್ ಬೆಡ್‍ಗಳನ್ನು ಹೆಚ್ಚಳ ಮಾಡಿದರೆ ಜಿಲ್ಲೆಗೆ ಪೂರೈಕೆಯಾಗುವ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಳ ಮಾಡಬೇಕಿದೆ. ಇಲ್ಲವಾದರೆ ಚಾಮರಾಜನಗರದ ದುರಂತವೇ ಜಿಲ್ಲೆಯಲ್ಲೂ ಉದ್ಬವಿಸಿದರೆ ಅಚ್ಚರಿ ಪಡಬೇಕಿಲ್ಲ.
ರಾಜಧಾನಿ ಬೆಂಗಳೂರು ಬಿಟ್ಟರೆ ಅತೀ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿರುವ ಜಿಲ್ಲೆಗಳ ಸಾಲಿನಲ್ಲಿ ತುಮಕೂರು ಪ್ರಮುಖವಾಗಿದ್ದು, ಜಿಲ್ಲೆಯಲ್ಲಿ ದಿನವೊಂದಕ್ಕೆ ಸುಮಾರು 2500ಕ್ಕೂ ಅಧಿಕ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಮೇ.3ಕ್ಕೆ 13897 ಮಂದಿ ಸಕ್ರಿಯ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದು, ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳ ಮುಂದೆ ಆಂಬುಲೆನ್ಸ್‍ನಲ್ಲೇ ಆಕ್ಸಿಜನ್ ಬೆಡ್‍ಗಳಿಗಾಗಿ ಕಾಯುವ ಪರಿಸ್ಥಿತಿ ತಲೆದೋರಿದೆ. ಸರಕಾರಿ ಖಾಸಗಿ ಆಸ್ಪತ್ರೆ , 2 ಮೆಡಿಕಲ್ ಕಾಲೇಜು ಸೇರಿ 1500ರಷ್ಟು ಅಧಿಕ ಆಕ್ಸಿಜನ್ ಬೆಡ್‍ಗಳನ್ನು ಕೋವಿಡ್‍ಗಾಗಿ ಒದಗಿಸಲಾಗಿದೆ.
ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಿಗೆ ನಿತ್ಯ ಆಕ್ಸಿಜನ್ ಸಿಲೆಂಡರ್‍ಗಳ ಮೂಲಕ ಕೃತಕ ಆಮ್ಲಜನಕ ಪೂರೈಸಬೇಕಿದ್ದು, ಜಿಲ್ಲಾಡಳಿತ ಇವರಿಗೆ ಅಗತ್ಯವಾದ ಆಕ್ಸಿಜನ್ ಪೂರೈಸಲು ಶತ ಪ್ರಯತ್ನ ಹಾಕುತ್ತಿದೆ. ಹತ್ತು ದಿನಗಳ ಹಿಂದೆಯೇ ಜಿಲ್ಲೆಯಲ್ಲೂ ಮೆಡಿಕಲ್ ಆಕ್ಸಿಜನ್ ಸಿಲೆಂಡರ್‍ಗಳಿಗೆ ಅಭಾವದ ಮುನ್ಸೂಚನೆ ಕಂಡುಬಂದಿತ್ತು. ಮುಂದಿನ ಪರಿಸ್ಥಿತಿಯಭೀಕರತೆ ಅರಿತ ಜಿಲ್ಲಾಡಳಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆಕ್ಸಿಜನ್ ಉತ್ಪಾದನೆ, ರೀಫಿಲ್ಲಿಂಗ್ ಘಟಕಗಳನ್ನು ಪರಿಶೀಲಿಸಿ ವಿತರಣಾ ಏಜೆನ್ಸಿಗಳಿಗೆ ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ಮಾಡಿದರೆ ಗಂಭೀರ ಎಚ್ಚರಿಕೆ ನೀಡುವ ಜೊತೆ ಡ್ರಗ್ ಕಂಟ್ರೋಲರ್ ಹಾಗೂ ಕೆಎಎಸ್ ಅಧಿಕಾರಿಯೊಬ್ಬರನ್ನು ಆಕ್ಸಿಜನ್ ಘಟಕಗಳ ಮೇಲೆಯೇ ನಿಗಾ ವಹಿಸಲೆಂದು ನಿಯೋಜಿಸಿದ್ದು ಈ ಕ್ರಮವಹಿಸದಿದ್ದರೆ ರೆಮ್‍ಡಿಸಿವರ್ ಮಾದರಿಯಲ್ಲೇ ಆಕ್ಸಿಜನ್ ಸಿಲೆಂಡರ್‍ಗಳು ದುಬಾರಿ ಬೆಲೆಗೆ ಬಿಕರಿಯಾಗುವ ಪರಿಸ್ಥಿತಿ ತಲೆದೋರುತ್ತಿತ್ತು.
ಲಿಕ್ವಿಡ್ ಆಕ್ಸಿಜನ್ ಫ್ಯ್ಲಾಂಟ್‍ಗಳಿದ್ದರೂ ಸಿಲೆಂಡರ್‍ಗಳಿಗೂ ಬೇಡಿಕೆ:
ತುಮಕೂರು ಜಿಲ್ಲಾಸ್ಪತ್ರೆಯಲ್ಲೂ 6000 ಕಿಲೋಲೀಟರ್ ಸಂಗ್ರಹ ಸಾಮರ್ಥ್ಯದ ಲಿಕ್ವಿಟ್ ಆಕ್ಸಿಜನ್ ಫ್ಲ್ಯಾಂಟ್ ಅನ್ನು ಕಳೆದ ಅಕ್ಟೋಬರ್‍ನಲ್ಲಿ ಸ್ಥಾಪಿಸಿದ್ದು, ಈ ಸಿಲಿಂಡರ್‍ನಲ್ಲಿ ಆಕ್ಸಿಜನ್ ಒಮ್ಮೆ ಭರ್ತಿ ಮಾಡಿದರೆ ಒಂದು ವಾರಕ್ಕೆ ತೊಂದರೆಯಿಲ್ಲ ಎನ್ನುತ್ತಾರೆ ಆಸ್ಪತ್ರೆ ವೈದ್ಯರು. ಅದೇರೀತಿ ಶ್ರೀದೇವಿ, ಸಿದ್ದಾರ್ಥ ವೈದ್ಯಕೀಯ ಕಾಲೇಜು ಹಾಗೂ ಸಿದ್ಧಗಂಗಾ ಆಸ್ಪತ್ರೆಯಲ್ಲೂ ಲಿಕ್ವಿಡ್ ಆಕ್ಸಿಜನ್ ಫ್ಲಾಂಟ್ ಇದ್ದು, ಇಲ್ಲಿ ಲಭ್ಯವಾಗುವ ಆಕ್ಸಿಜನ್ ಜೊತೆ ಹೆಚ್ಚುವರಿಯಾಗಿ 50 ಲೀಟರ್ ಸಾಮಾರ್ಥ್ಯದ ಸಿಲೆಂಡರ್‍ಗಳನ್ನೂ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸಿಲೆಂಡರ್‍ಗಳಿಗೆ ಹೆಚ್ಚಿದ ಬೇಡಿಕೆ:
ಅಮೋಘ ಗ್ಯಾಸ್ ರಿಫೀಲ್ಲಿಂಗ್ ಘಟಕದಿಂದ ತುಮಕೂರಿನ ಶ್ರೀದೇವಿ, ಪದ್ಮಶ್ರೀ, ಎಂಎಸ್‍ಪಿಎಲ್ ವಿತರಣಾ ಏಜೆನ್ಸಿಗಳಿಗೆ ಸಿಲೆಂಡರ್‍ಗಳು ರವಾನೆಯಾಗುತ್ತಿದ್ದು, ಅಲ್ಲಿಂದ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಮಂಡಿಪೇಟೆಯ ಶ್ರೀದೇವಿ ಏಜೆನ್ಸಿಯವರಿಗೆ ತುಮಕೂರು ಜಿಲ್ಲಾಸ್ಪತ್ರೆ, ಗುಬ್ಬಿ ಆಸ್ಪತ್ರೆ, ನಗರದ ಖಾಸಗಿ ಆಸ್ಪತ್ರೆಗಳಿಗೆ ಸಿಲೆಂಡರ್ ಹಂಚಿಕೆ ಮಾಡುವ ಜವಾಬ್ದಾರಿ ವಹಿಸಿÀ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲೇ ಲಿಕ್ವಿಡ್ ಸಿಲಿಂಡರ್ ಘಟಕವಿರುವುದರಿಂದ ಅಲ್ಲಿಗೆ ಹೆಚ್ಚಿಗೆ ಬೇಡಿಕೆಯಿಲ್ಲ. ಅವಶ್ಯಕವಿದ್ದಾಗ ಆರ್ಡರ್ ಮಾಡುತ್ತಾರೆ. ಕೂಡಲೇ ಒದಗಿಸುತ್ತೇವೆ. ಸಿದ್ಧಗಂಗಾ ಆಸ್ಪತ್ರೆಗೆ 50 ಲೀಟರ್ ಸಾಮರ್ಥ್ಯದ ಸಿಲಿಂಡರ್‍ಗಳನ್ನು ನಿತ್ಯ 100 ರಿಂದ 120 ಸಂಖ್ಯೆಯಲ್ಲಿ ಪೂರೈಸುತ್ತಿದ್ದೆವೆ ಎನ್ನುತ್ತಾರೆ ಏಜೆನ್ಸಿಯವರು.
24 ತಾಸು ಮುಂಚೆಯೇ ಆಕ್ಸಿಜನ್ ಬೇಡಿಕೆ ವರದಿ ತರಿಸುತ್ತಿದ್ದೇವೆ: ಡಿಸಿ
ಆಕ್ಸಿಜನ್ ದಾಸ್ತಾನು, ಬೇಡಿಕೆ ಬಗ್ಗೆ ನಿಯಮಿತವಾಗಿ ಆಸ್ಪತ್ರೆಗಳಿಂದ 24 ತಾಸು ಮುಂಚೆಯೇ ಪ್ರಸ್ತಾವನೆ ತರಿಸಿಕೊಳ್ಳಲಾಗುತ್ತಿದೆ. ಆಕ್ಸಿಜನ್ ಖಾಲಿಯಾಗುವವರೆಗೂ ಆಸ್ಪತ್ರೆಗಳವರು ಕಾಯಬಾರದು. 25% ಖಾಲಿಯಾದ ತಕ್ಷಣ ಅದನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ಆಕ್ಸಿಜನ್ ಬಳಕೆ ಮಾಡಬಾರದು. ಗೈಡ್‍ಲೈನ್ ನಂತೆಯೇ ಸೋಂಕಿತರಿಗೆ ಆಕ್ಸಿಜನ್ ಮತ್ತು ರೆಮಿಡಿಸಿವರ್ ಕೊಡಬೇಕು. ಅನಗತ್ಯವಾಗಿ ಆಕ್ಸಿಜನ್ ಕೊರತೆಯಾಗಿ ಸಮಸ್ಯೆ ಉಂಟಾಗಿ ದೂರುಗಳು ಕೇಳಿಬಂದರೆ ನಿರ್ದಾಕ್ಷಿಣ್ಯವಾಗಿ ತಾಲೂಕು ಕಾರ್ಯಪಡೆಯನ್ನೇ ಹೊಣೆ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ವಿತರಣಾ ಏಜೆನ್ಸಿಗಳು ಅಧಿಕಾರಿಗಳು ವಾಟ್ಸಾಪ್ ಗ್ರೂಪ್ ಮಾಡಿ ಆಯಾದಿನದ ಸಿಲಿಂಡರ್ ಸರಬರಾಜು, ಆಸ್ಪತ್ರೆ ಬೇಡಿಕೆಗಳನ್ನು ನಿತ್ಯ 3 ಬಾರಿ ತರಿಸಿಕೊಂಡು, ಆಕ್ಸಿಜನ್ ಸಿಲೆಂಡರ್ ಪೂರೈಕೆಗೆ ಜಿಲ್ಲಾಡಳಿತ ಕ್ರಮವಹಿಸಿದೆ. ಸದ್ಯ 50 ಲೀ.ಸಾಮಾರ್ಥ್ಯದ ಸಿಲೆಂಡರ್‍ಗೆ 450 ರೂ.ದರವಿದ್ದು, ಸಕಾಲದಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳದಿದ್ದಿದ್ದರೆ ಸಿಲೆಂಡರ್‍ಗಳ ಕೃತಕ ಅಭಾವ ಸೃಷ್ಟಿಯಾಗುತ್ತಿತ್ತು.
-ಕಾರ್ತಿಕ್, ಆಕ್ಸಿಜನ್ ಗ್ಯಾಸ್ ವಿತರಕರು. ಮಂಡಿಪೇಟೆ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ