ತುಮಕೂರು : ಮನೆಗಳು ಸೋಂಕಿನ ಆಲಯವಾಗುವ ಮುನ್ನಾ ಕ್ರಮವಹಿಸಿ!

  ತುಮಕೂರು :

ಕ್ಯಾತ್ಸಂದ್ರದ ಟ್ರಕ್ ಟರ್ಮಿನಲ್‍ನಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್  ಸೆಂಟರ್.

       ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಕೋವಿಡ್ ಕೇರ್ ಸೆಂಟರ್‍ಗಳನ್ನು ಜಿಲ್ಲಾ ಕೇಂದ್ರ ಸೇರಿದಂತೆ ತುಮಕೂರಿನ ಹತ್ತು ತಾಲೂಕಿನಲ್ಲೂ ತೆರೆಯಲಾಗಿದೆ. ಈ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 1278 ಬೆಡ್‍ಗಳನ್ನು ಅಲಾಟ್ ಮಾಡಲಾಗಿದ್ದು, ಮೇ4ರ ಅಂಕಿ-ಅಂಶದಂತೆ 313 ಮಂದಿ ಸೋಂಕಿತರನ್ನು ಮಾತ್ರ ಈವರೆಗೆ ಕೋವಿಡ್ ಸೆಂಟರ್‍ಗಳಲ್ಲಿ ದಾಖಲಾತಿ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕು ವಿಸ್ತರಣೆ ತಡೆಗೆ ಈ ಪ್ರವೇಶಾತಿ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದ್ದು, ಹೆಚ್ಚುವರಿ ಕೊಠಡಿಗಳಿಲ್ಲದಿರುವ ಸಿಂಗಲ್ ರೂಂ ಮನೆಗಳಲ್ಲಿ ಸೋಂಕಿತರಾಗಿ ಹೋಂ ಐಸೋಲೇಷನ್ ಗೊಳಗಾಗಿರುವವರನ್ನು ಆದ್ಯತೆ ಮೇರೆಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಿಕೊಟ್ಟು, ಸೋಂಕು ಮತ್ತಷ್ಟು ಜನರಿಗೆ ವಿಸ್ತರಣೆಯಾಗದಂತೆ ತಡೆಯುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಮನೆಯಲ್ಲೇ ಸೋಂಕಿತರು ಉಳಿದು, ತಮ್ಮ ಕುಟುಂಬ ಸದಸ್ಯರಿಗೂ, ನೆರೆಹೊರೆಯವರಿಗೂ ಹರಡುವ ಅಪಾಯ ಜಾಸ್ತಿಯಾಗುತ್ತಿದೆ. ಕೋವಿಡ್ ಎರಡನೇ ಅಲೆಯಲ್ಲಿ ಹೋಂ ಐಸೋಲೇಷನ್‍ಗೆ ಒಳಗಾಗಿರುವವರ ಸಂಖ್ಯೆಯೇ ಹೆಚ್ಚಿದ್ದು, ಆರೋಗ್ಯ ಇಲಾಖೆಯವರು ಸಹ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ತೆರೆದಿರುವ ಟ್ರಯೇಜ್ ಸೆಂಟರ್‍ಗಳಲ್ಲಿ ಕೋವಿಡ್ ಪಾಸಿಟಿವ್ ರಿಪೋರ್ಟ್ ಆಧರಿಸಿ ಸೋಂಕಿನ ಆರಂಭಿಕ ಕ್ಷಣಗಳಿದ್ದವರಿಗೆ ಹೋಂ ಐಸೋಲೇಷನ್‍ಗೆ ಹೆಚ್ಚು ಶಿಫಾರಸ್ಸು ಮಾಡುತ್ತಿರುವುದು ಕಂಡುಬಂದಿದೆ.

      ಕಿರಿದಾದ ಮನೆಯಲ್ಲಿದ್ದರೆ ಸೋಂಕು ಹೆಚ್ಚಳವಾಗುವುದಿಲ್ಲವೇ:

       ಜಿಲ್ಲಾ ಕೇಂದ್ರ ತುಮಕೂರು ನಗರವನ್ನೇ ತೆಗೆದುಕೊಳ್ಳುವುದಾದರೆ 31 ಪ್ರದೇಶಗಳನ್ನು ಕೊರೊನಾ ಹಾಟ್‍ಸ್ಪಾಟ್‍ಗಳೆಂದು ಮಹಾನಗರಪಾಲಿಕೆಯೇ ಗುರುತಿಸಿದೆ. ಅದರಲ್ಲಿ ಇಟ್ಟಿಗೆ ಗೂಡುಗಳಂತೆ ಒಂದಕ್ಕೊಂದು ಅಂಟಿಕೊಂಡಂತೆ ಮನೆಗಳನ್ನು ಹೊಂದಿರುವ ಚಿಕ್ಕಪೇಟೆ-ಅಗ್ರಹಾರ, ಗೂಡ್‍ಶೆಡ್ ಕಾಲೋನಿ , ಪಾಂಡುರಂಗನಗರ, ತಿಗಳರಬೀದಿ, ವಿನೋಬನಗರ, ಬಂಡೇಪಾಳ್ಯ ಬಡಾವಣೆಗಳು ಸೇರಿದ್ದು, ಇಲ್ಲಿ ಹೋಂ ಐಸೋಲೇಷನ್ ಆಗಿರುವ ಸೋಂಕಿತರು ಹೆಚ್ಚಿದ್ದಾರೆ. ಇವರಿಗೆ ಮನೆಗಳಲ್ಲಿ ಪ್ರತ್ಯೇಕ ಕೊಠಡಿಯಾಗಲಿ, ಪ್ರತ್ಯೇಕ ಬಾತ್‍ರೂಮ್‍ಗಳ ವ್ಯವಸ್ಥೆಯಾಗಲೀ ಮರೀಚಿಕೆಯಾಗಿದೆ. ಇದರಿಂದ ಸೋಂಕಿತರು ಮನೆಯ ಇತರ ಸದಸ್ಯರೊಡನೆ ವಾಸಿಸುವ ಅನಿವಾರ್ಯತೆ ಎದುರಾಗಿದ್ದು, ಮನೆಯಲ್ಲಿನ ಚಿಕ್ಕಮಕ್ಕಳು, ಹಿರಿಯ ನಾಗರಿಕರು ಸೋಂಕು ಬೇಗ ವ್ಯಾಪಿಸುವುದಿಲ್ಲವೇ? ಎಂಬ ಪ್ರಶ್ನೆಯನ್ನು ಚಿಕ್ಕಪೇಟೆಯ ನಿವಾಸಿಗಳಾದ ಜಯಪ್ರಕಾಶ್, ಬಿ.ವಿ.ಗಂಗರಾಜಾಚಾರ್ ಮುಂದಿಡುತ್ತಾರೆ.

      ರಾಜಧಾನಿಯಲ್ಲಾದಂತೆ ಆಗದಿರಲಿ:

      ರಾಜಧಾನಿ ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕಳೆದ ವರ್ಷ 10ಸಾವಿರ ಬೆಡ್‍ಗಳು ಬೃಹತ್ ಕೋವಿಡ್ ಕೇರ್ ಸೆಂಟರ್ ತೆರೆದು ಅದು ಸದ್ಬಳಕೆಯೇ ಆಗದೇ ನೂರಾರೂ ಕೋಟಿ ವ್ಯರ್ಥವಾದಂತೆ, ಎರಡನೇ ಅಲೆಯಲ್ಲೂ ಆಗಬಾರದು. ಸದ್ಯ ಜಿಲ್ಲೆಯಲ್ಲಿ ಸರಕಾರದ ಹತ್ತು ಕೋವಿಡ್ ಕೇರ್ ಸೆಂಟರ್‍ಗಳು ಜೊತೆಗೆ ಹಾಗೂ ಸಿದ್ಧಗಂಗಾ ಮಠ, ಸೇರಿ ಕೆಲವು ಖಾಸಗಿ ಸಂಸ್ಥೆಗಳು, ಸಮುದಾಯ ಸಂಘಟನೆಗಳು ಹಾಸ್ಟೆಲ್ ಭವನಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಬಿಟ್ಟುಕೊಡಲು ಮುಂದೆ ಬಂದಿದ್ದು, ಜಿಲ್ಲಾಡಳಿತ ಮನಸ್ಸು ಮಾಡಿದರೆ 5ಸಾವಿರಕ್ಕೂ ಅಧಿಕ ಬೆಡ್‍ಗಳನ್ನು ಜಿಲ್ಲೆಯಲ್ಲಿ ಆರಂಭಿಕ ಸೋಂಕಿತರಿಗಾಗಿ ವ್ಯವಸ್ಥೆ ಮಾಡಿ ಸೋಂಕು ಹೆಚ್ಚು ವ್ಯಾಪಿಸದಂತೆ ತಡೆಯಬಹುದಾಗಿದೆ.
 
      ಆಕ್ಸಿಜನ್ ಬೆಡ್, ಜೀವರಕ್ಷಕ ಔಷಧವನ್ನು ಪೂರೈಸುವಲ್ಲಿ ವಿಫಲವಾಗಿರುವ ಸರಕಾರ ಸೋಂಕಿತರನ್ನು ಕೇರ್‍ಸೆಂಟರ್‍ಗಳಲ್ಲಿ ಹೇಗೆ ನೋಡಿಕೊಳ್ಳುತ್ತದೆ ಎಂಬ ಬಗ್ಗೆಯೂ ಅನುಮಾನವಿದೆ. ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಅಗತ್ಯವಿರುವ ಮೂಲ ಸೌಕರ್ಯ, ವೈದ್ಯಕೀಯ ಸಿಬ್ಬಂದಿಯನ್ನು ಒದಗಿಸುವ ಜೊತೆಗೆ ಹೋಂ ಐಸೋಲೇಷನ್‍ನಲ್ಲಿ ಇರುವವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಿ ಸೋಂಕು ಮನೆಯ ಇತರರಿಗೂ ತಡೆಯದಂತೆ ಕ್ರಮ ವಹಿಸಬೇಕು. ಮುಂದಿನ ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳಲ್ಲೂ ಆಕ್ಸಿಜನ್ ಬೆಡ್‍ಗಳು ಮೀಸಲಿರುವ ಸ್ಥಿತಿಯೂ ಬರಬಹುದು. ಅದಕ್ಕೂ ತಯಾರಿ ಅವಶ್ಯ.

-ಡಾ.ರಫೀಕ್ ಅಹಮದ್, ಮಾಜಿ ಶಾಸಕರು ತುಮಕೂರು.

 ಸಚಿವರ ಸ್ಥಳಾಂತರ ಸೂಚನೆ ಶೀಘ್ರ ಜಾರಿ ಅಗತ್ಯವಿದೆ :

      ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಸಹ ಸೋಮವಾರ ನಡೆಸಿದ ಸಭೆಯಲ್ಲಿ ಹೋಂಕ್ವಾರಂಟೈನ್‍ನಲ್ಲಿರುವವರನ್ನು ಬೇಗ ಕೋವಿಡ್ ಕೇರ್ ಸೆಂಟರ್‍ಗಳಿಗೆ ಸ್ಥಳಾಂತರಿಸಿ ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಸಚಿವರ ಸೂಚನೆಯಂತೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಬೇಗ ಕ್ರಮವಹಿಸಬೇಕಿದೆ. ಇಲ್ಲವಾದಲ್ಲಿ ದಿನವೊಂದಕ್ಕೆ ಎರಡು ಸಾವಿರ ಪ್ರಮಾಣದಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ.

 ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link