ತುಮಕೂರು:
ನಗರದ ಹಿಂದುಳಿದ ವರ್ಗಗಳ ಒಕ್ಕೂಟದ ಕಚೇರಿಯಲ್ಲಿ ನಿಧನರಾದ ಟೂಡಾ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ. ಎನ್. ಮಧುಕರ್ ಅವರು ರೆಡ್ಡಿ ಚಿನ್ನಯಲ್ಲಪ್ಪ ಅವರು ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡವರು.
ಹಿರಿಯರು, ಯುವ ಜವರ ನಡುವಿನ ಕೊಂಡಿಯಂತಿದ್ದರು. ಅಹಿಂದ ಸಮಾವೇಶ ತುಮಕೂರಿನಲ್ಲಿ ಸಂಘಟಿತವಾದಾಗ ಅದರ ಯಶಸ್ಸಿಗೆ ಪ್ರಮುಖ ವಾಗಿ ಶ್ರಮಿಸಿದ್ದರು. ಹಿರಿಯ ಸಚಿವ ರಾದ ಪರಮೇಶ್ವರ್, ಕೆ.ಎನ್. ರಾಜಣ್ಣ, ನಮ್ಮ ತಂದೆ ನಾಗಣ್ಣ ಅವರ ಸಮಕಾಲೀನ ಒಡನಾಡಿಗಳಾಗಿದ್ದು, ತುಮಕೂರಿಗೆ ಹಲವು ಕೊಡುಗೆ ಗಳನ್ನು ನೀಡಿದ್ದಾರೆ. ವಿದ್ಯಾರ್ಥಿ ಸಂಘರ್ಷದ ದಿನಗಳಲ್ಲಿ ಅವುಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.
ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಸಂಸ್ಮರಣ ನುಡಿಗಳನ್ನಾಡಿ ತುಮಕೂರು ನಗರಸಭೆ, ಟೂಡಾ ಎರಡಕ್ಕೂ ಅಧ್ಯಕ್ಷ ರಾದ ಹೆಗ್ಗಳಿಕೆ ರೆಡ್ಡಿ ಚಿನ್ನಯಲ್ಲಪ್ಪ ಅವರಿಗೆ ಸಲ್ಲುತ್ತದೆ. ಹಿಂದುಳಿದ ಶೋಷಿತ ಸಮುದಾಯದ ಪರ ಕಾಳಜಿಯುಳ್ಳವರಾಗಿದ್ದ ರೆಡ್ಡಿ ಚಿನ್ನಯಲ್ಲಪ್ಪ ಅವರು ಸಿನಿಮಾ ನಟರಾಗಿಯೂ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು. ತುಮಕೂರು ನಗರಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಚಿರಶಾಂತಿ ಕೋರುವೆಯೆಂದರು.
ಒಕ್ಕೂಟದ ಉಪಾಧ್ಯಕ್ಷ ಪಿ. ಮೂರ್ತಿ ಅವರು ನುಡಿನಮನ ಸಲ್ಲಿಸಿ ಮಾತನಾಡಿ ರೆಡ್ಡಿ ಚಿನ್ನಯಲ್ಲಪ್ಪ ಅವರು ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿದ್ದರು. ಎಸ್. ಎಂ. ಕೃಷ್ಣ ಅವರ ಸಿಎಂ ಆಗಿದ್ದ ಅವಧಿಯಲ್ಲಿ ಕೆಎನ್ಆರ್ ಎಂಎಲ್ಸಿ ಆಗಿದ್ದ ಸಂದರ್ಭದಲ್ಲಿ ಟೂಡಾ ಅಧ್ಯಕ್ಷ ಪದಗ್ರಹಣ ಸ್ವೀಕರಿಸಿದ ಸಮಾರಂಭಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೆವು. ಅವರಲ್ಲಿದ್ದ ದೂರದರ್ಶಿತ್ವ ನಾಯಕತ್ವ ಗುಣ, ಪಕ್ಷ ನಿಷ್ಠೆ ಮಾದರಿಯಾದುದು ಎಂದು ಸ್ಮರಿಸಿದರು. ಒಕ್ಕೂಟದ ನಿರ್ದೇಶಕ ರಾದ ಚಿ. ನಿ. ಪುರುಷೋತ್ತಮ್ ಅವರು ಮಾತನಾಡಿ ಮೌಲ್ಯ ಯುತ ರಾಜಕಾರಣಿಗಳೇ ವಿರಳವಾದ ಈ ಸಂದರ್ಭದಲ್ಲಿ ರೆಡ್ಡಿ ಚಿನ್ನಯಲ್ಲಪ್ಪ ಅವರಂತಹ ಪಕ್ಷ ನಿಷ್ಟನಾಯಕರು ಮಾದರಿ ಎನಿಸಿದ್ದಾರೆ ಎಂದು ಸ್ಮರಿಸಿದರು.
ಒಕ್ಕೂಟದ ನಿರ್ದೇಶಕ ಶಾಂತಕುಮಾರ್ ಅವರು ಸ್ಮರಣೀಯ ನುಡಿಗಳನ್ನಾಡಿ ಅತೀ ಹಿಂದುಳಿದ ಸಮುದಾಯ ದಲ್ಲಿ ಹುಟ್ಚಿ ಸ್ನಾತಕೋತ್ತರ ಪದವೀದರರಾಗಿದ್ದ ರೆಡ್ಡಿ ಚಿನ್ನಯಲ್ಲಪ್ಪ ಅವರ ಹೆಸರು ಅವರ ಸೇವಾ ಕಾರ್ಯಗಳಿಂದ ಜನಜನಿತ ವಾಗಿದೆ. ತುಮಕೂರು ನಗರದ ಶ್ರೀ ರಾಮ ನಗರದಿಂದ ಕೌನ್ಸಿಲರ್ ಆಗಿ ಉನ್ನತ ಸ್ಥಾನಕ್ಕೇರಿದರು. ಅವರ ನಿಧನ ಇಡೀ ತುಮಕೂರಿಗೆ ತುಂಬಲಾರದ ನಷ್ಟ ಎಂದರು. ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬೂರು ಶ್ರೀ ನಿವಾಸಮೂರ್ತಿ, ಉಪಾಧ್ಯಕ್ಷ ಡಿ. ಎಂ. ಸತೀಶ್, ನಿರ್ದೇಶಕ ರುಗಳು ಹಾಜರಿದ್ದ ರು.