ತುಮಕೂರು : ಮಾರುಕಟ್ಟೆ ನಿತ್ಯದ ಕೋಟಿ ವಹಿವಾಟು 25 ಲಕ್ಷಕ್ಕೆ ಕುಸಿತ

 ತುಮಕೂರು :  

      ಕೋವಿಡ್ ಕಫ್ರ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ, ಮಾರಾಟಕ್ಕೆ ಮೊದಲಿಗೆ ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅವಕಾಶ ಕಲ್ಪಿಸಿದ್ದ ಸರಕಾರ, ನಂತರ ಎರಡು ತಾಸು ಹೆಚ್ಚುವರಿ ಅವಧಿ ಮಧ್ಯಾಹ್ನ 12ರವರೆಗೆ ವಿಸ್ತರಿಸಿತು. ಆದರೂ ನಗರದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಳ್ಳುವವರ ಸಂಖ್ಯೆ ಕ್ಷೀಣಿಸಿ ಹೂ, ಹಣ್ಣು ವಹಿವಾಟಿಗೆ ಬಾರಿ ಹೊಡೆತ ಬಿದ್ದಿದೆ.

      ನಿತ್ಯ 1 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದ್ದ ಈ ಸಗಟು ಮಾರುಕಟ್ಟೆಯಲ್ಲಿ ನಿತ್ಯದ ವಹಿವಾಟು 25-30 ಲಕ್ಷಕ್ಕೆ ಕುಸಿದಿದ್ದು, ಕೊಳ್ಳುವವರಿಲ್ಲದೆ ಮಾರುಕಟ್ಟೆ ಪ್ರಾಂಗಣ ಬಣಗುಡುತ್ತಿದೆ. ತುಮಕೂರು ತಾಲೂಕು ಸುತ್ತಮತ್ತ, ಕೊರಟಗೆರೆ, ಮಧುಗಿರಿ ಭಾಗಗಳಿಂದ ಹೂವ್ವು, ತರಕಾರಿ ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಹರಿದು ಬರುತ್ತದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಕೊಳ್ಳುವವರೇ ಬಾರದಿರುವುದು ವ್ಯಾಪಾರಸ್ಥರು ಹಾಗೂ ತರಕಾರಿ ಹೂವನ್ನು ಮಾರುಕಟ್ಟೆಗೆ ತಂದ ರೈತರನ್ನು ಕಂಗಾಲಾಗಿಸಿದೆ.

      ಶುಭಸಮಾರಂಭ, ಸಭೆಗಳು, ಧಾರ್ಮಿಕ ಉತ್ಸವಗಳು, ಹೋಟೆಲ್ ರೆಸ್ಟೊರೆಂಟ್‍ಗಳಿಗೆ ಬ್ರೇಕ್ ಬಿದ್ದಿರುವುದರಿಂದ ತರಕಾರಿ, ಹೂವು ಬೇಡಿಕೆ ಕಳೆದುಕೊಂಡು ಅರ್ಧದಷ್ಟು ದರ ಕುಸಿತಕ್ಕೆ ಕಾರಣವಾಗಿದೆ. 25 ಕೆಜಿಯ ಒಂದು ಬಾಕ್ಸ್ ಟೊಮೊಟೊ ಕೇವಲ 130 ರಿಂದ 150ಕ್ಕೆ ಮಾರಾಟವಾಗುತ್ತಿದ್ದು, ಸೌತೆಕಾಯಿ, ಉರುಳಿಕಾಯಿ ಹೀಗೆ ಬಹುತೇಕ ತರಕಾರಿ ದರಗಳಲ್ಲಿ ಇಳಿಕೆಯಾಗಿದೆ.

      ಮೊದಲಿಗೆ ಬೆಳಿಗ್ಗೆ 6 ರಿಂದ 10ರ ಸೀಮಿತ ಅವಧಿಗೆ ಮಾತ್ರ ಮಾರಾಟ ಅವಕಾಶ ಎರಡು ಗಂಟೆ ಹೆಚ್ಚುವರಿ ಅವಧಿಗೆ ವಿಸ್ತರಿಸಿದರೂ,. ಮಾರುಕಟ್ಟೆಯಿಂದ ಕೊಂಡೊಯ್ದು ಬಡಾವಣೆಗಳಲ್ಲಿ ಮಾರಾಟ ಮಾಡುತ್ತಿದ್ದ ಚಿಲ್ಲರೆ ವ್ಯಾಪಾರಸ್ಥರು ಸಹ ಅಧಿಕ ಪ್ರಮಾಣದಲ್ಲಿ ಕೊಂಡೊಯ್ಯಲು ಹಿಂದೇಟು ಹಾಕುತ್ತಿದ್ದು, ರೈತರು ಮಾರುಕಟ್ಟೆಗೆ ಹೊತ್ತು ತಂದ ತರಕಾರಿ, ಹೂವಿಗೆ ಬೆಲೆ ಸಿಗದಂತಾಗಿದೆ. ಜೊತೆಗೆ ಸಗಟು ವ್ಯಾಪಾರಸ್ಥರಿಗೂ ಹೊಡೆತ ನೀಡಿದೆ.

ವ್ಯಾಪಾರವಾದರೆ ರೈತರಿಗೆ ಹಣ:

      ರೈತರು ಕರ್ಫ್ಯೂ ಕಾರಣಕ್ಕೆ ರಾತ್ರಿಯೇ ವಾಹನಗಳಲ್ಲಿ ಬಂದು ಮಾರುಕಟ್ಟೆ ಬಳಿ ಬೆಳಿಗ್ಗೆಯವರೆಗೆ ಕಾಯುತ್ತಿದ್ದು, ಕೂಲಿಗಳಿಂದ ಕೀಳಿಸಿ, ವಾಹನಗಳಲ್ಲಿ ಹೊತ್ತು ತಂದ ಖರ್ಚು ಸಹ ಹುಟ್ಟುತ್ತಿಲ್ಲ. ಜನ ಬಾರದ ಕಾರಣಕ್ಕೆ ವ್ಯಾಪಾರಸ್ಥರು ಸಹ ತರಕಾರಿ, ಹೂವು ವ್ಯಾಪಾರ ಆದರೆ ಮಾತ್ರ ನಮಗೆ ಹಣ ನೀಡುತ್ತಿದ್ದಾರೆ. ಇಲ್ಲವಾದರೆ ಅದೂ ಇಲ್ಲ,. ಹಾಗಾಗಿ 9-10ಗಂಟೆಯವರೆಗೂ ರೈತರು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಎಷ್ಟು ರೈತರು ತಾವೂ ತಂದ ತರಕಾರಿ ಹೂಗೆ ಸೂಕ್ತ ಬೆಲೆ ಸಿಗದೆ ಇಲ್ಲಿಯೇ ಸುರಿದು ಹೋಗುವ ಸ್ಥಿತಿ ಉದ್ಬವಿಸಿದೆ. ಮತ್ತಷ್ಟು ರೈತರು ಬೇಡಿಕೆ ಇಲ್ಲದ ಕಾರಣಕ್ಕೆ ಜಮೀನಿನಲ್ಲೆ ತರಕಾರಿ ಕೊಳೆಸಿ ಗಿಡಗಳನ್ನು ನೆಲಸಮ ಮಾಡುವಂತಾಗಿದೆ ಎಂದು ಮೆಳೆಹಳ್ಳಿಯ ರೈತ ವಿನೋದ್ ಬೇಸರದಿಂದ ನುಡಿಯುತ್ತಾರೆ.

       ಏತನ್ಮಧ್ಯೆ ಮಾರುಕಟ್ಟೆಯಲ್ಲಿ ಕಸದ ರಾಶಿ ತುಂಬಿರುವುದರಿಂದ ವಾಹನಗಳೇನಾದರೂ ಓಡಾಡಿದರೆ ಧೂಳು ತರಕಾರಿ ಮೇಲೆ ಕೂರುತ್ತದೆ. ಬಂದ ಜನರು ಬಿದ್ದ ಕಸ ಕಡ್ಡಿಯಿಂದ ಕೊಳ್ಳದೆ ದೂರ ಉಳಿಯುತ್ತಾರೆ. ಆದಷ್ಟು ಮಾರುಕಟ್ಟೆಯ ಒಳಗೆ ವಾಹನ ಸಂಚಾರವನ್ನು ನಿಯಂತ್ರಿಸಬೇಕು. ಕೊಳ್ಳುವವರಿಗೆ ಮಾತ್ರ ಒಳಗಡೆ ಅವಕಾಶ ನೀಡಬೇಕು ಎಂಬುದು ತರಕಾರಿ ವ್ಯಾಪಾರಿಗಳು ಮನವಿ ಮಾಡಿದ್ದಾರೆ.

ಪ್ರವೇಶದ್ವಾರದಲ್ಲೇ ನಿರ್ಬಂಧ, ತಹಸೀಲ್ದಾರ್ ಪರಿಶೀಲನೆ :

      ಇನ್ನು ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ಪೊಲೀಸರು ಯಾವುದೇ ವಾಹನಗಳನ್ನು ಒಳಗೆ ಬಿಡುತ್ತಿರಲಿಲ್ಲ. ತರಕಾರಿ ತುಂಬಿರುವ ವಾಹನಗಳಿಗೆ ಮಾತ್ರ ಒಳ ಹೋಗಲು ಅವಕಾಶ ನೀಡುತ್ತಿದ್ದರು. ಉಳಿದಂತೆ ದ್ವಿಚಕ್ರ ವಾಹನ, ಕಾರು ಮತ್ತಿತರ ವಾಹನಗಳನ್ನು ರಸ್ತೆಯ ಬದಿಯಲ್ಲೇ ಪಾರ್ಕಿಂಗ್‍ಗೆ ಅವಕಾಶ ನೀಡಿದ್ದರು. ಉಳಿದಂತೆ ಪೊಲೀಸ್ ವಾಹನವೊಂದು ಕೊರೊನಾ ಮುನ್ನೆಚ್ಚರಿಕೆ ಬಗ್ಗೆ ಮೈಕ್ ಮೂಲಕ ಎಚ್ಚರಿಸುತ್ತಿದ್ದ ದೃಶ್ಯ ಕಂಡುಬಂದಿತು. ತಹಸೀಲ್ದಾರ್ ಮೋಹನ್‍ಕುಮಾರ್ ಮಾರುಕಟ್ಟೆಗೆ ಭೇಟಿ ನೀಡಿ ನಿಯಮ ಪಾಲನೆ ಬಗ್ಗೆ ವರ್ತಕರಲ್ಲಿ ಅರಿವು ಮೂಡಿಸಿದರು.

    ಸಂತೆ, ವಾರದ ಸಂತೆಗಳಿಗೆ ನಿರ್ಬಂಧ :

      ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ/ನೂಕು ನುಗ್ಗಲುಗಳನ್ನು ತಪ್ಪಿಸಲು ಮೇ.2 ರಿಂದಲೇ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಇದರ ಬದಲಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಹಾಪ್‍ಕಾಮ್ಸ್, ಎಲ್ಲಾ ಹಾಲಿನ ಬೂತುಗಳು, ತಳ್ಳುವಗಾಡಿ ಮೂಲಕ ಹಣ್ಣು, ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವುದು ಹಾಗೂ ಕೋವಿಡ್-19 ನಿಯಮಗಳನ್ನು ಪಾಲಿಸುವುದರೊಂದಿಗೆ ಅನುಮತಿಸಲಾಗಿದೆ. ಎಪಿಎಂಸಿ ಹಾಗೂ ದಿನಸಿ ಅಂಗಡಿಗಳನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆ.

      ಮಾರುಕಟ್ಟೆಯಲ್ಲಿ 120ಕ್ಕೂ ಅಧಿಕ ತರಕಾರಿ ಮಳಿಗೆಗಳಿದ್ದು. ಸಾಮಾನ್ಯ ದಿನಗಳಲ್ಲಿ 8-10 ಸಾವಿರ ವ್ಯಾಪಾರ ಮಾಡಿ 1500 ದಿಂದ 2000ದಷ್ಟು ಆದಾಯಗಳಿಸುತ್ತಿದ್ದರು. ಈಗ ವ್ಯಾಪಾರ 2-3 ಸಾವಿರಕ್ಕೆ ಕುಸಿದಿದ್ದು, ಮಾರಾಟ ಕಮೀಷನ್, ಕೆಲಸಗಾರರ ದಿನಗೂಲಿ ಸೇರಿ ನಾವು ಇಲ್ಲಿಗೆ ಬಂದು ಓಡಾಡುವ ಖರ್ಚು ಹುಟ್ಟಿದರೆ ಸಾಕು ಎನ್ನುವ ಸ್ಥಿತಿಗೆ ವರ್ತಕರು ಬಂದಿದ್ದಾರೆ. ಮಾರಾಟ ಅವಧಿಯನ್ನು 12ರವರೆಗೆ ವಿಸ್ತರಿಸಿದರೆ ರೈತರು, ಮಂಡಿ ವರ್ತಕರು, ಚಿಲ್ಲರೆ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ.

-ಟಿ.ಎಚ್.ಜಯರಾಂ, ಹಿರಿಯ ಮಂಡಿ ವರ್ತಕರು. ನಗರಸಭೆ ಮಾಜಿ ಅಧ್ಯಕ್ಷರು.

     ತುಮಕೂರು, ಕೊರಟಗೆರೆ, ಮಧುಗಿರಿ ಭಾಗದಿಂದ ಹೂವ್ವು ಮಾರುಕಟ್ಟೆಗೆ ಬರುತ್ತಿತ್ತು. ಇಲ್ಲಿಂದ ಉಡುಪಿ ಮಂಗಳೂರು ಭಾಗಕ್ಕೆ ಸೇವಂತಿಗೆ, ಗುಲಾಬಿ, ಬಟನ್ಸ್ ಮಲ್ಲಿಗೆ ರವಾನೆಯಾಗುತ್ತಿತ್ತು. ಕರ್ಫ್ಯೂ ಕಾರಣ ಅಲ್ಲಿನ ಹೂವಿನ ಸಾಗಾಟ ಸ್ಥಗಿತಗೊಂಡಿದ್ದು, ಬಟನ್ಸ್, ಸೇವಂತಿಗೆ, ಮಲ್ಲಿಗೆ, ಗುಲಾಭಿ ಹೂವ್ವಿನ ದರದಲ್ಲಿ ಅರ್ಧದಷ್ಟು ಇಳಿಕೆಯಾಗಿದೆ. 100 -150 ರೂ.ಗಳಿಗಿದ್ದ ಬಿಡಿ ಗುಲಾಬಿ, 50ಕ್ಕೆ ಇಳಿದಿದೆ. ಎಷ್ಟೋ ಹೂ ಬೆಳೆಗಾರರು ಬೆಲೆ ಕುಸಿತದ ಕಾರಣಕ್ಕೆ ಕೂಲಿಕೊಟ್ಟು ಹೂ ಕೀಳಿಸಲಾಗದೆ ಗಿಡಗಳನ್ನು ಕೀಳಿಸಲಾರಂಭವಿಸಿದ್ದಾರೆ.

-ಗವಿರಂಗಯ್ಯ, ಸಗಟು ಹೂ ಮಾರಾಟಗಾರರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap