ತುಮಕೂರು : ತಮ್ಮ ಮೃತ್ಯು ತಾವೇ ಆಹ್ವಾನಿಸುತ್ತಿರುವ ಜನ

 ತುಮಕೂರು :

      ಎರಡನೇ ಅಲೆ ಮೊದಲನೇ ಅಲೆಗಿಂತ ಭೀಕರ. ಸಮುದಾಯದಲ್ಲಿ ಹರಡಿ ಹೋಗಿರುವ ಕೊರೊನಾ ಸೋಂಕು ಈಗ ಮನೆ ಮನೆಗಳಿಗೂ ವ್ಯಾಪಿಸುತ್ತಿದೆ. ಇದರ ತೀಕ್ಷ್ಣತೆ ಎಷ್ಟಿದೆ ಎಂದರೆ ಕೆಲವೇ ದಿನಗಳ ಅಂತರದಲ್ಲಿ ಪರಿಚಿತರು, ಕುಟುಂಬಸ್ಥರು ಕೊರೊನಾ ಪಾಸಿಟಿವ್‍ಗಳಾಗಿ ಪರಿಣಮಿಸುತ್ತಿದ್ದಾರೆ. ಪಾಸಿಟಿವ್ ಬಂದಾಗಲೇ ಹೌಹಾರುತ್ತಿದ್ದಾರೆ. ಆದರೆ ಅದಕ್ಕೂ ಮುನ್ನ ನನ್ನ ಪಾತ್ರ ಏನಾಗಬೇಕಿತ್ತು ಎಂಬುದರ ಬಗ್ಗೆಯೂ ಸಾರ್ವಜನಿಕರು ಗಮನಿಸಬೇಕಲ್ಲವೆ?

       ಸದ್ಯದ ಪರಿಸ್ಥಿತಿಯಲ್ಲಿ ಸಮರ್ಪಕವಾಗಿ ಮಾಸ್ಕ್ ಧರಿಸುವ ಹಾಗೂ ಅಂತರ ಕಾಪಾಡುವ ಮೂಲಕವಷ್ಟೇ ಸೋಂಕು ನಿಗ್ರಹ ಸಾಧ್ಯ ಎಂಬುದು ಸಾಬೀತಾಗಿದೆ. ಗಾಳಿಯ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುಖ ಗವಸು ಕಡ್ಡಾಯ ಎಂದು ಸಾರಿ ಸಾರಿ ಹೇಳಲಾಗುತ್ತಿದೆ. ಇಷ್ಟಾದರೂ ಕನಿಷ್ಠ ಮಾರ್ಗಸೂಚಿಗಳನ್ನು ಪಾಲನೆ ಮಾಡದೆ ಹೋದರೆ ಹೊಣೆ ಯಾರು?

 ಸಿಗುತ್ತಿಲ್ಲ ಲಸಿಕೆ :

      ಕೊರೊನಾ ವೈರಸ್‍ಗೆ ರೋಗ ನಿರೋಧಕ ಶಕ್ತಿಯಾಗಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಲೇ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿತ್ತು. ಸಾಕಷ್ಟು ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ. ಆದರೆ ಇದಕ್ಕೂ ಸಂಚಕಾರ ಬಂದೊದಗಿದೆ. 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುವುದು ಎಂದು ಯಾವ ಆಧಾರದಲ್ಲಿ ಸರ್ಕಾರಗಳು ಹೇಳಿದವೋ? ಹೀಗೆ ಹೇಳಿದ ಹಿಂದೆಯೇ ಲಸಿಕೆಯ ಅಭಾವ ಶುರುವಾಗಿದೆ. ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೀರಮ್ ಇನಿಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆಧಾರ್ ಪೂನ ಮಾಲ ಅವರೆ ಹೇಳಿರುವಂತೆ ಲಸಿಕೆ ಕೊರತೆ ಸದ್ಯಕ್ಕೆ ನೀಗುವುದಿಲ್ಲ. ಈ ಕೊರತೆ ಮುಂಬರುವ ಜುಲೈವರೆಗೆ ಇರಲಿದೆ ಎಂದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮತ್ತಷ್ಟು ಎಚ್ಚರಿಕೆ ಅಗತ್ಯ ಅಲ್ಲವೆ?

      ಕೊರೊನಾ ರೋಗಕ್ಕೆ ಈವರೆಗೂ ನಿಗದಿತ ಔಷಧಿ ಕಂಡು ಹಿಡಿಯಲಾಗಿಲ್ಲ. ಆದರೆ ಅದಕ್ಕೆ ಪೂರಕ ಪರ್ಯಾಯ ಮಾರ್ಗಗಳಷ್ಟೆ ಈಗ ರಹದಾರಿ. ಕೋವಿಡ್ ಸೋಂಕಿತರು ದಿನೆ ದಿನೆ ಹೆಚ್ಚಳವಾಗುತ್ತಿರುವುದರಿಂದ ಆರೋಗ್ಯ ವ್ಯವಸ್ಥೆ ದಿನೆ ದಿನೆ ಹದಗೆಡುತ್ತಿದೆ. ಎಲ್ಲಿಗೆ ಹೋದರೂ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ ಎಂಬ ಬೋರ್ಡ್‍ಗಳು ಕಂಡುಬರುತ್ತಿವೆ. ಪಾಸಿಟಿವ್ ಬಂದವರು ದಿನವಿಡಿ ಆಸ್ಪತ್ರೆಗಳನ್ನು ಸುತ್ತುತ್ತಿರುವ ದಾರುಣ ಘಟನೆಗಳು ಎದೆ ಝಲ್ ಎನ್ನಿಸುತ್ತವೆ. ದಿನಕ್ಕೆ ತುಮಕೂರು ಜಿಲ್ಲೆಯೊಂದರಲ್ಲೇ 10ಕ್ಕೂ ಹೆಚ್ಚು ಸಾವುಗಳಾಗುತ್ತಿವೆ. ಇತರೆ ರೋಗಗಳಿಗೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇವುಗಳನ್ನೆಲ್ಲಾ ಪ್ರತಿದಿನ ಕಣ್ಣಾರೆ ಕಾಣುತ್ತಿದ್ದೇವೆ. ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ನಮ್ಮ ಜವಾಬ್ದಾರಿ ಏನು? :

     ಇಡೀ ಜಿಲ್ಲೆಯಲ್ಲಿ ಹೆಚ್ಚಿದ ಪ್ರಕರಣಗಳು

      ತುಮಕೂರು ಜಿಲ್ಲೆ ಈಗ ಸುರಕ್ಷತಾ ವಲಯವಾಗಿ ಉಳಿದಿಲ್ಲ. ತುಮಕೂರು ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳು ಹಾಟ್ ಸ್ಪಾಟ್ ವಲಯಗಳಾಗಿ ಗುರುತಿಸಿಕೊಂಡಿವೆ. ರಾಜ್ಯ ಹೈಕೋರ್ಟ್ ಬಿಡುಗಡೆ ಮಾಡಿರುವ ಮಾರ್ಗಸೂಚಿಯ 5 ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯೂ ಸೇರಿಕೊಂಡಿದೆ. ಈ ಜಿಲ್ಲೆಗಳಲ್ಲಿ ಕೋರ್ಟ್ ಕಲಾಪಗಳು ಸ್ಥಗಿತಗೊಂಡಿದ್ದು, ಆನ್‍ಲೈನ್ ಮೂಲಕವೆ ಕಲಾಪ ನಡೆಸಲು ಹೈಕೋರ್ಟ್ ಮಾರ್ಗಸೂಚಿ ಜಾರಿಗೊಳಿಸಿದೆ. ಈ ಜಿಲ್ಲೆಯ ಸೋಂಕಿನ ಪ್ರಮಾಣ ಎಷ್ಟಿದೆ ಎಂಬುದನ್ನು ಇದರಿಂದಲೇ ಅರ್ಥ ಮಾಡಿಕೊಳ್ಳಬಹುದು.

 ಬೆಳಗ್ಗೆ ಹೊತ್ತು ಗುಂಪುಗೂಡುವ ಜನ :

      ನಗರದ ಬಹಳಷ್ಟು ಕಡೆಗಳಲ್ಲಿ ವಾಕ್ ಹೋಗುವವರು ಕಂಡುಬರುತ್ತಾರೆ. ಕೆಲವು ಪ್ರದೇಶಗಳನ್ನು ನಿರ್ಬಂಧಿಸಲಾಗಿದೆ. ಸರ್ಕಾರವೂ ಸಹ ಎಚ್ಚರಿಕೆ ನೀಡಿದೆ. ಆದರೂ ನಿರ್ಲಕ್ಷಿಸಿ ಗುಂಪು ಗುಂಪಾಗಿ ವಾಕ್ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ. ತುಮಕೂರು ವಿಶ್ವವಿದ್ಯಾನಿಲಯದ ಕಡೆಗೆ ಬೆಳಗಿನ ಹೊತ್ತು ನಗರದ ವಿವಿಧ ಭಾಗಗಳಿಂದ ಬಂದು ಗುಂಪುಗೂಡುತ್ತಾರೆ. ಕೆಲ ಹೊತ್ತು ಹರಟೆ ಒಡೆಯುತ್ತಾರೆ. ಇವರೆಲ್ಲ ಸುಸಂಸ್ಕøತ ನಾಗರಿಕರು. ಆದರೆ ಅವರಲ್ಲಿಯೇ ಅದೆಷ್ಟೋ ಮಂದಿಗೆ ಸೋಂಕು ತಗುಲಿರಬಹುದು. ಇತರರಿಗೂ ಹರಡಬಹುದು. ಅಶೋಕನಗರ, ಎಸ್.ಐ.ಟಿ. ಬಡಾವಣೆಯ ಕೆಲವು ರಸ್ತೆಗಳಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಇಂತಹ ಮನೆಗಳವರು ಮನೆಯಿಂದ ಹೊರಗೆ ಬರಬಾರದು. ಆದರೆ ಬೆಳಗಿನ ವೇಳೆ ವಾಕ್ ಬರುವ, ಟೀ ಸ್ಟಾಲ್‍ಗಳ ಬಳಿ ಗುಂಪುಗೂಡಿ ಹರಟುವ ಮಂದಿ ಕಂಡುಬರುತ್ತಿದ್ದಾರೆ. ಇಷ್ಟು ಸಾಕಲ್ಲವೆ ಸೋಂಕು ಉಲ್ಬಣಿಸಲು. ಇಂತಹವರಿಗೆಲ್ಲ ಯಾರು ಪಾಠ ಮಾಡಬೇಕು? ಸೋಂಕು ಇರುವುದು ತಿಳಿದಿದ್ದರೂ ಮನೆಯೊಳಗೆ ಐಸೋಲೇಷನ್ ಆಗಿರುವುದು ಬಿಟ್ಟು ಹೊರಗೆ ಬಂದರೆ ಅಂತಹವರನ್ನು ಏನನ್ನಬೇಕು..?
 
ಪರಿಚಿತರು – ಬಂಧುಗಳಲ್ಲಿಯೂ ಸೋಂಕು ಇರಬಹುದು :

      ಭಾನುವಾರ ಬೆಳಗಿನ ವೇಳೆ ಮಟನ್, ಚಿಕನ್ ಸ್ಟಾಲ್‍ಗಳ ಎದುರು ಜನಜಂಗುಳಿ ಇರುತ್ತದೆ. ವರ್ಷವಿಡೀ ಮಾಂಸ ತಿನ್ನುವ ಅವಕಾಶಗಳು ಇರುವಾಗ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಮಾಂಸಕ್ಕಾಗಿ ಮುಗಿ ಬೀಳಬೇಕೆ. ಒಂದಷ್ಟು ದಿನ ಇಂತಹ ಬಯಕೆಗಳನ್ನು ಮುಂದೂಡಬಹುದಲ್ಲವೆ? ಅಥವಾ ಗುಂಪಾಗಿ ಸೇರುವ ಬದಲು ನಿಯಮಾವಳಿ ಅನುಸರಿಸಿ ತರಬಹುದಲ್ಲವೆ? ಮಾಂಸದೂಟ, ವಿಶೇಷ ಅಡುಗೆ ಇತ್ಯಾದಿಗಳನ್ನು ಮಾಡಿ ಸ್ನೇಹಿತರನ್ನು, ಬಂಧುಗಳನ್ನು ಆಹ್ವಾನಿಸುವ ಪರಿಪಾಠ ಇನ್ನೂ ಕೆಲವರಲ್ಲಿದೆ. ಆದರೆ ಅದೇ ಬಂಧು, ಪರಿಚಿತರಲ್ಲಿ ಎಷ್ಟು ಮಂದಿಗೆ ಪಾಸಿಟಿವ್ ಇದೆ ಎಂಬುದನ್ನು ಬಲ್ಲವರಾರು? ಈ ಸೂಕ್ಷ್ಮತೆ ಎಲ್ಲರಲ್ಲಿಯೂ ಇರಬೇಕಲ್ಲವೆ?

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap