ತುಮಕೂರು : ಸ್ಮಾರ್ಟ್‍ಸಿಟಿ ಅನುದಾನದಲ್ಲಿ ತಲೆಯೆತ್ತಲಿದೆ ಮಹಾತ್ಮಗಾಂಧಿ ಕ್ರೀಡಾಂಗಣ

ತುಮಕೂರು  : 

      ನಗರದಲ್ಲಿ ಹಿಂದೆ ಇದ್ದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ತುಮಕೂರು ಸ್ಮಾರ್ಟ್‍ಸಿಟಿ ವತಿಯಿಂದ (ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ) ರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಯನ್ನು ತಯಾರಿಸಿ ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು ರೂ.54.65 ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಲಾಗಿರುತ್ತದೆ. ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಇದ್ದ ತೆರೆದ ಆಟದ ಮೈದಾನದಲ್ಲಿ ನಡೆಸಲಾಗುತ್ತಿದ್ದ ಎಲ್ಲಾ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅದನ್ನೂ ಸಹ ಒಳಾಂಗಣ ಕ್ರೀಡಾಂಗಣವನ್ನಾಗಿ ಪರಿವರ್ತಿಸಿ, ತುಮಕೂರು ಜಿಲ್ಲೆಯಲ್ಲಿ ಕ್ರೀಡಾಸಕ್ತರಿಗೆ ಮತ್ತು ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ ತುಮಕೂರು ಜಿಲ್ಲೆಯಲ್ಲಿ ಹೆಸರಾಂತ, ಪ್ರಶಸ್ತಿ ಪುರಸ್ಕರತ ಕುಸ್ತಿಪಟುಗಳು ಇರುವ ಹಿನ್ನೆಲೆಯಲ್ಲಿ ಕುಸ್ತಿಯನ್ನು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಆರ್‍ಸಿಸಿ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. ತುಮಕೂರು ನಗರವು ಹಿಂದಿನಿಂದಲೂ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿದ್ದ ಹಿನ್ನೆಲೆಯಲ್ಲಿ ಈಗಿನ ಕಾಲದಲ್ಲಿ ದಾರಿ ತಪ್ಪುತ್ತಿರುವ ಯುವ ಪೀಳಿಗೆಯನ್ನು ಕ್ರೀಡಾಸಕ್ತರನ್ನಾಗಿ ಪರಿವರ್ತನೆಗೊಳ್ಳಲು ತುಮಕೂರು ಸ್ಮಾರ್ಟ್‍ಸಿಟಿ ವತಿಯಿಂದ ನಿರ್ಮಿಸಲಾಗುತ್ತಿರುವ ಆಧುನಿಕ, ಸುಸಜ್ಜಿತ ಕ್ರೀಡಾಂಗಣವು ಆಕರ್ಷಿತವಾಗಬಹುದೆಂದು ನಿರೀಕ್ಷಿಸಲಾಗಿದೆ.

      ಮಹಾತ್ಮಗಾಂಧಿ ಕ್ರೀಡಾಂಗಣವು ಎಂಟು ಪ್ರೇಕ್ಷಕರ ಗ್ಯಾಲರಿಯನ್ನು ಹೊಂದಿದ್ದು, 1957.77sqm ವಿಸ್ತೀರ್ಣದ ಗ್ಯಾಲರಿಯಲ್ಲಿ 6000 ಪ್ರೇಕ್ಷಕರು ಆಸೀನರಾಗಬಹುದಾಗಿದೆ. ಜೊತೆಗೆ 944.85 sqm ವಿಸ್ತೀರ್ಣದ ಗ್ಯಾಲರಿಗಳನ್ನು ವಿಶೇಷಚೇತನರಿಗೆ ಪ್ರತ್ಯೇಕವಾಗಿ ನಿರ್ಮಿಸಲಾಗುತ್ತಿದ್ದು, ಸುಮಾರು 400 ವಿವಿಐಪಿ ಮತ್ತು 80 ವಿಶೇಷಚೇತನರು ಆಸೀನರಾಗಬಹುದಾಗಿದೆ ಹಾಘೂ ಕ್ರೀಡಾ ಸಂಕೀರ್ಣದ ವಿಸ್ತೀರ್ಣ 902 sqm. ಈ ಎಲ್ಲಾ ಗ್ಯಾಲರಿಗಳನ್ನು ಆರ್‍ಸಿಸಿ ಯಿಂದ ನಿರ್ಮಿಸಲಾಗುತ್ತಿದ್ದು, ಇದರ ಕೆಳಭಾಗದಲ್ಲಿ ಕಾರು ಮತ್ತು ಬೈಕ್‍ಗಳ ಪಾರ್ಕಿಂಗ್‍ಗಾಗಿ ಕಾಯ್ದಿರಿಸಲಾಗಿದೆ. ಈ ಕ್ರೀಡಾಂಗಣದ ಮುಂದಿನ ನಿರ್ವಹಣೆಯನ್ನು ಸುಸೂತ್ರವಾಗಿ ನಿರ್ವಹಿಸುವ ಸಲುವಾಗಿ ಆದಾಯದ ಮೂಲವನ್ನು ಸಹ ಕಲ್ಪಿಸಲು ದೂರದೃಷ್ಟಿಯಿಂದಾಗಿ ಮೂರು ಮಹಡಿಗಳ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಈ ಕ್ರೀಡಾಂಗಣದ ಸುತ್ತಲೂ ಜನರು ಓಡಾಡಲು ಹಾಗೂ ತುರ್ತು ಸಂದರ್ಭಗಳಲ್ಲಿ ಹೊರ ಹೋಗಲು ಅನುವಾಗುವಂತೆ ಅಗತ್ಯವಿರುವ ಮೆಟ್ಟಿಲುಗಳು ಹಾಗೂ ಸುತ್ತಲೂ ಕಾಂಕ್ರೀಟ್‍ನಿಂದ 6 ಮೀ. ಅಗಲದ ರನ್‍ವೇಯನ್ನು ನಿರ್ಮಿಸಲಾಗುತ್ತಿದೆ.

      ಕ್ರೀಡಾಂಗಣದಲ್ಲಿ ಅಂಕಣದ ಸುತ್ತಲೂ ಡ್ರೈನೇಜ್ ನಿರ್ಮಾಣ ಮಾಡಲಾಗುತ್ತಿದ್ದು, ಅಂಕಣದಲ್ಲಿ ಬಿದ್ದ ನೀರು ಹೊರ ಹೋಗುವಂತೆ ಮಳೆನೀರು ಚರಂಡಿಗಳನ್ನು ನಿರ್ಮಿಸಿ ಹತ್ತಿರದ ರಸ್ತೆಯ ಮಳೆನೀರು ಚರಂಡಿಗೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಅತೀವೃಷ್ಟಿ ಸಂದರ್ಭದಲ್ಲಿಯೂ ನೀರು ನಿಲ್ಲದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಸ್ಮಾರ್ಟ್‍ಸಿಟಿ ಅಧಿಕಾರಿಗಳು ತಿಳಿಸಿದರು.

      ಪ್ರಸ್ತುತ ನಿರ್ಮಿಸಲಾಗುತ್ತಿರುವ 8 ಪ್ರೇಕ್ಷಕರ ಗ್ಯಾಲರಿಯ ಪೈಕಿ 4 ಪ್ರೇಕ್ಷಕರ ಗ್ಯಾಲರಿಯ ಹಿಂಭಾಗದಲ್ಲಿ 2 ಮಹಡಿಯ ವಸತಿ ನಿಲಯವನ್ನು ನಿರ್ಮಿಸಲಾಗುತ್ತಿದ್ದು, ಕ್ರೀಡಾಪಟುಗಳು, ವಿಐಪಿಗಳು ತಂಗಲು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಐಪಿ ಗ್ಯಾಲರಿ ಮತ್ತು ದಿವ್ಯಾಂಗ ಗ್ಯಾಲರಿಯ ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಕಛೇರಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

      ಈ ಹಿಂದೆ ಇದ್ದ ಕ್ರೀಡಾಪಟುಗಳು ಮಹಾತ್ಮಗಾಂಧಿ ಕ್ರೀಡಾಂಗಣದ ಪಕ್ಕದಲ್ಲಿದ್ದ ಸರ್ಕಾರಿ ಜಾಗದಲ್ಲಿ ಬ್ಯಾಸ್ಕೆಟ್ ಬಾಲ್, ಟೆನ್ನಿಸ್ ಬಾಲ್, ಬೇಸ್‍ಬಾಲ್, ಬ್ಯಾಡ್ಮಿಂಟನ್, ಸ್ಕೇಟಿಂಗ್ ಮತ್ತು ಕುಸ್ತಿ ಕ್ರೀಡೆಗಳನ್ನು ತೆರೆದ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದದನ್ನು ಪರಿಗಣಿಸಿ, ಅವರಿಗಾಗಿ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿಕೊಡಲಾಗುತ್ತಿದೆ. ಒಳಾಂಗಣ ಕ್ರೀಡಾಂಗಣವು ಒಟ್ಟು 434.05 sqm ವಿಸ್ತೀರ್ಣವನ್ನು ಹೊಂದಿದ್ದು, ಏಕಕಾಲದಲ್ಲಿ ಎಲ್ಲಾ ಕ್ರೀಡೆಗಳನ್ನು ಅಭ್ಯಾಸ ಮಾಡಬಹುದಾಗಿದೆ ಮತ್ತು ರಾಷ್ಟ್ರೀಯ ಮಟ್ದ ಪಂದ್ಯಾವಳಿಗಳನ್ನು ನಡೆಸಲು ಅನುವಾಗುವಂತೆ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ.

      ಕುಸ್ತಿಯ ಪಟುಗಳಿಗಾಗಿ 2 ಅಂತಸ್ತಿನ ಆರ್‍ಸಿಸಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ನೆಲಮಹಡಿಯಲ್ಲಿ ಮಹಿಳಾ ಕುಸ್ತಿಪಟುಗಳಿಗಾಗಿ, ಮೊದಲನೆ ಮಹಡಿಯಲ್ಲಿ ಪುರುಷ ಕುಸ್ತಿಪಟುಗಳಿಗಾಗಿ ಮತ್ತು ಟೆರೇಸ್‍ನಲ್ಲಿ ಶೌಚಾಲಯ ಮತ್ತು ಡ್ರೆಸ್ಸಿಂಗ್ ರೂಂಗಳನ್ನು ವ್ಯವಸ್ಥೆ ಕಲ್ಪಿಸಲಾಗಿದೆ. ಕುಸ್ತಿಪಟುಗಳಿಗೆ ರಾಷ್ಟ್ರೀಯ ಮಟ್ಟದ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

      ಈ ಎಲ್ಲಾ ಕ್ರೀಡಾಪಟುಗಳು ಮ್ತು ಕ್ರೀಡಾಸಕ್ತರು ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸುತ್ತಿರುವ ದೂರದೃಷ್ಟಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯುವಪೀಳಿಗೆಯ ಉನ್ನತಿಗಾಗಿ ಮತ್ತು ಕ್ರೀಡಾಸಕ್ತಿಯನ್ನು ಉತ್ತೇಜಿಸುವ ಈ ಕಾರ್ಯವು ಶ್ಲಾಘನೀಯವಾಗಿದೆ. ಕೋವಿಡ್-19 ರ ಲಾಕ್‍ಡೌನ್‍ನಿಂದಾಗಿ ಮತ್ತು ಕ್ರೀಡಾಂಗಣದ ಸುತ್ತಲೂ ಬೆಳೆದಿದ್ದ ಮರಗಳನ್ನು ಉಳಿಸುವ ಸಲುವಾಗಿ ವಿನ್ಯಾಸದ ಬದಲಾವಣೆಯಿಂದ ನಿಗದಿತ ಅವಧಿಗೆ ಪೂರ್ಣಗೊಳಿಸಲು ಸಾಧ್ಯವಾಗದೆ ವಿಳಂಬವಾಗಿದ್ದು, 2021 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಯೋಚಿಸಲಾಗಿದೆ ಎಂದು ತಿಳಿಸಿದರು.

      ಹಾಗೆಯೇ ಈ ನಿರ್ಮಾಣದಲ್ಲಿ ಕ್ರೀಡಾಪಟುಗಳು ಹಾಗೂ ತರಬೇತುದಾರರು ಮತ್ತು ಪ್ರಶಸ್ತಿ ಪುರಸ್ಕøತ ಕ್ರೀಡಾಪಟುಗಳೊಂದಿಗೆ ಚರ್ಚಿಸಿ ಸಚಿವರು, ಸಂಸದರು ಹಾಗೂ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಅವರು ಯುವ ಪೀಳಿಗೆಯ ಸಬಲೀಕರಣಕ್ಕಾಗಿ ಒತ್ತು ನೀಡಲು ಪ್ರತಿ ಹಂತದಲ್ಲಿಯೂ ನೀಡಿರುವ ಸಲಹೆಯ ಮೇರೆಗೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಾಯಿತೆಂದು ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ತಿಳಿಸಿದ್ದಾರೆ.

      ಈ ಕಾಮಗಾರಿಯನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯವರು ಅನುಷ್ಠಾನಗೊಳಿಸುತ್ತಿದ್ದು, ಎನ್.ಬಿ. ಕನ್‍ಸ್ಟ್ರಕ್ಷನ್ ಕಂಪನಿ ಬೆಂಗಳೂರು ಇವರಿಗೆ ಗುತ್ತಿಗೆ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link