ಶಿರಾ :
ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಶಿರಾ ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ 1 ಕೋಟಿ ರೂ ವೆಚ್ಚದ ಆಕ್ಸಿಜನ್ ಉತ್ಪಾದಕ ಘಟಕಕ್ಕೆ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಶಿರಾ ತಾಲ್ಲೂಕಿನಲ್ಲಿ ದಿನ ದಿನಕ್ಕೂ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಈ ನಡುವೆ ಜಿಲ್ಲೆಯಲ್ಲಿಯೇ ಶಿರಾ ತಾಲ್ಲೂಕು ಹೆಚ್ಚು ಸೋಂಕಿತರ ಪ್ರಮಾಣ ಹೊಂದುತ್ತಿದ್ದು ತಾಲ್ಲೂಕು ಕೇಂದ್ರದಲ್ಲಿ ಆಕ್ಸಿಜನ್ ಉತ್ಪಾದಕ ಘಟಕವನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಶಾಸಕ ಡಾ.ರಾಜೇಶ್‍ಗೌಡ ಸರ್ಕಾರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಘಟಕಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ 1 ಕೋಟಿ ರೂ. ವೆಚ್ಚದ ಕಾಮಗಾರಿಯು ಇಂದಿನಿಂದಲೇ ಆರಂಭಗೊಳ್ಳಲಿದ್ದು 15-20 ದಿನದೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ನಿಮಿಷಕ್ಕೆ 390 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮಥ್ರ್ಯವನ್ನು ಈ ಘಟಕ ಹೊಂದಿರುತ್ತದೆ ಎಂದು ತಿಳಿಸಿದರು.
ಈಗಾಗಲೇ 100 ಬೆಡ್‍ಗಳಿಗೆ ಆಕ್ಸಿಜನ್ ಸೌಲಭ್ಯ ಇದ್ದು ಆಕ್ಸಿಜನ್ ಅಗತ್ಯವಿರುವ ರೋಗಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಮುಂಜಗ್ರತಾ ಕ್ರಮವಾಗಿ ಆಕ್ಸಿಜನ್ ಘಟಕವನ್ನು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಶಿರಾದಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.
ಆಸ್ಪತ್ರೆಯ ಆವರಣದಲ್ಲಿ ಘಟಕ ನಿರ್ಮಾಣಗೊಂಡ ಕೂಡಲೇ ಅಲ್ಲಿಂದ ಆಕ್ಸಿಜನ್ ಸಿಲಿಂಡರ್‍ಗಳಿಗೆ ತುಂಬಿಸಿ ಆಸ್ಪತ್ರೆಯ ಎಲ್ಲಾ ಬೆಡ್‍ಗಳಿಗೆ ಪೈಪ್‍ಲೈನ್ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಇಲ್ಲಿನ ಎಲ್ಲಾ ಬೆಡ್‍ಗಳನ್ನು ತುರ್ತು ಸಂದರ್ಭದಲ್ಲೂ ಯಾರಿಗೂ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದರು.
ಶಿರಾ ಆಸ್ಪತ್ರೆಯಲ್ಲಿ ಬಳಸಿ ಹೆಚ್ಚುವರಿ ಆಕ್ಸಿಜನ್‍ನ್ನು ಜಿಲ್ಲೆಯ ಇತರೆ ಆಸ್ಪತ್ರೆಗಳಿಗೂ ನೀಡಲಾಗುತ್ತದೆ. ಪ್ರಸ್ತುತ ಇಲ್ಲಿ ಆಕ್ಸಿಜನ್ ಸಂಪರ್ಕ ಹೊಂದಿರುವ ಬೆಡ್‍ಗಳು ಬಳಕೆಯಾದರೆ ದಿನದ 24 ಗಂಟೆಯೂ 30 ರಿಂದ 32 ಸಿಲಿಂಡರ್ ಬೇಕಾಗುತ್ತದೆ ಎಂದು ಶಾಸಕರು ಮಾಹಿತಿ ನೀಡಿದರು.
ತಾಲ್ಲೂಕು ದಂಡಾಧಿಕಾರಿ ಮಮತಾ, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್, ಡಾ.ಅಫ್ಜಲ್ ಉರ್ ರೆಹಮಾನ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ