ಚಿಕ್ಕನಾಯಕನಹಳ್ಳಿ
ಕೇಂದ್ರ ಸರ್ಕಾರವು ಫಸಲ್‍ಭೀಮಾ ಯೋಜನೆ ಮೂಲಕ ರೈತರ ಬೆಳೆಗೆ ವಿಮೆ ನೀಡುತ್ತಿದೆ ಆದರೆ ಅಧಿಕಾರಿಗಳು ಹಾಗೂ ಏಜೆಂಟ್‍ರ್‍ಗಳಿಂದ ರೈತರಿಗೆ ಬೆಳೆವಿಮೆ ಸರಿಯಾದ ಸಮಯಕ್ಕೆ ದೊರೆಯದಂತಾಗಿದೆ, ಇದರ ವಿರುದ್ದ ಕಾನೂನಾತ್ಮಕ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲ್ಲೂಕು ಬೆಳೆ ವಿಮೆ ಪಾಲಿಸಿದಾರರ ವೇದಿಕೆ ಸಂಘಟನೆ ಅಧ್ಯಕ್ಷ ಕುಮಾರಯ್ಯರಾಮನಹಳ್ಳಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2016-17, 2017-18ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಸುಮಾರು 3ಸಾವಿರ ರೈತರು ಬೆಳೆವಿಮೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಅರ್ಜಿ ಸಲ್ಲಿಸಿದ ರೈತರುಗಳಿಗೆ ಇದುವರೆವಿಗೂ ಬೆಳೆ ವಿಮೆಯ ಪರಿಹಾರದ ಹಣ ಸಮರ್ಪಕವಾಗಿ ದೊರಕಿಲ್ಲ, ಈಗಾಗಿ ತಾಲ್ಲೂಕಿನಲ್ಲಿ ನೂತನವಾಗಿ ರಚನೆಯಾಗಿರುವ ಬೆಳೆ ವಿಮೆ ಪಾಲಿಸಿದಾರರ ವೇದಿಕೆಯಿಂದ ಕಾನೂನಾತ್ಮಕ ಹೋರಾಟ ಮಾಡುತ್ತೇವೆ, ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿರುವ ರೈತರೊಂದಿಗೆ ಈ ವೇದಿಕೆ ಜೊತೆಯಾಗಿದ್ದು ವಿಮೆ ಪಡೆಯುವ ಬಗ್ಗೆ ಸಲಹೆ, ಸೂಚನೆಗಳನ್ನು ನೀಡುತ್ತದೆ ಎಂದರು.
ಸರ್ಕಾರ ನಿಗಧಿಪಡಿಸಿರುವ ಬೆಳೆಗೆ ರೈತರು ವಿಮೆ ಕಟ್ಟಿ, ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿಯೂ ಬೆಳೆ ವಿಮೆ ದೊರಕದ ರೈತರು ಜಿಲ್ಲಾ ಗ್ರಾಹಕರ ವೇದಿಕೆಯ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಮೂಲಕ ಕಾನೂನಿನ ಹೋರಾಟ ಪ್ರಾರಂಭಿಸಲಾಗುವುದು ಎಂದರು.
ಗ್ರಾಹಕರ ವೇದಿಕೆಯ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರೆ, ವಿಮೆ ಹಣ ಬರುವ ಜೊತೆಗೆ, ವಕೀಲರಿಗೆ ಕೊಡುವ ಫೀಜಿನ ಹಣವೂ ಹಾಗೂ ಗ್ರಾಹಕರ ವೇದಿಕೆಯು ವಿಮೆ ಕಂಪನಿಗೆ ದಂಡ ವಿಧಿಸಿದಾಗ ಬರುವ ಹಣವೂ ರೈತರಿಗೆ ಬರಲಿದೆ, ಹೆಚ್ಚು ದಿನ ಪ್ರಕರಣ ನಡೆದರೆ 9%ರಷ್ಟು ಬಡ್ಡಿ ರೈತರಿಗೆ ದೊರಕುತ್ತದೆ, ಇದಕ್ಕೆ ಹೆಚ್ಚಿನ ಹಣ ವ್ಯಯ ಮಾಡಬೇಕಾಗುವುದಿಲ್ಲ, ನ್ಯಾಯಾಲಯಕ್ಕೆ ದೂರು ನೀಡಿದ 5 ಅಥವಾ 6ತಿಂಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಹಾಗಾಗಿ ಬೆಳೆ ವಿಮೆ ಸಮರ್ಪಕವಾಗಿ ಪಡೆಯದ ರೈತರು ಪರಿಹಾರಕ್ಕಾಗಿ ಈ ವೇದಿಕೆಗೆ ನೊಂದಾಯಿಸಿಕೊಳ್ಳಿ ಎಂದು ಕೋರಿದರು.
ವಕೀಲ ಎಂ.ಎಸ್.ಶಂಕರಲಿಂಗಪ್ಪ ಮಾತನಾಡಿ, ಬೆಳೆವಿಮೆಗಾಗಿ ಅರ್ಜಿ ಸಲ್ಲಿಸಿದ ರೈತರು ವಿಮೆ ಹಣ ಬರುವುದು ವಿಳಂಬವಾದರೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು ಎಂದರು.
ಬೆಳೆ ವಿಮೆ ಪಾಲಿಸಿದಾರರ ವೇದಿಕೆಯ ಕಾರ್ಯದರ್ಶಿ ಸಿ.ಹೆಚ್.ಚಿದಾನಂದ್ ಮಾತನಾಡಿ, ತಾಲ್ಲೂಕಿನಲ್ಲಿ ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿದ ಹಲವು ರೈತರ ಖಾತೆಗೆ ಹಣ ಬರದೆ ಬೇರೆ ಯಾವುದೋ ಜಿಲ್ಲೆಯಲ್ಲಿನ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ, ಇದು ಅಧಿಕಾರಿಗಳ ನಿರ್ಲಕ್ಷತನವೋ, ಬ್ಯಾಂಕಿನವರ ಬೇಜವಬ್ದಾರಿಯೋ ತಿಳಿಯುತ್ತಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳೆ ವಿಮೆ ಪಾಲಿಸಿದಾರರ ವೇದಿಕೆಯ ಸದಸ್ಯರಾದ ಸದಾಶಿವಯ್ಯ, ಜಗದೀಶ್, ಶಿವಕುಮಾರ್, ಸತ್ಯನಾರಾಯಣ್, ವಿಶ್ವೇಶ್ವರಯ್ಯ, ಪ್ರಕಾಶ್, ರೇಣುಕಾರಾಧ್ಯ, ಲೋಹಿತಾಶ್ವ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
