ತುಮಕೂರು :
ತುಮಕೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ ಹಲವಾರು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಈ ಮೈದಾನದಲ್ಲಿ ಓಡಾಡಿ, ಇಲ್ಲಿನ ಶಾಲೆಯ ವಿದ್ಯಾರ್ಥಿಯಾಗಿ ಕಲಿತಿದ್ದರು. ಸ್ವಾತಂತ್ರ್ಯ ಚಳುವಳಿ ವೇಳೆ ಮಹಾತ್ಮ ಗಾಂಧೀಜಿ ಈ ಮೈದಾನಕ್ಕೆ ಬಂದು ಇಲ್ಲಿನ ಕಟ್ಟಡದಲ್ಲಿ ರಾತ್ರಿ ತಂಗಿದ್ದರು. ದೇಶದ ಅನೇಕ ಪ್ರಧಾನ ಮಂತ್ರಿಗಳು ತುಮಕೂರಿಗೆ ಬಂದ ವೇಳೆ ಇದೇ ಮೈದಾನದಲ್ಲಿ ಏರ್ಪಾಟಾಗಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅನೇಕ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳು ಇಲ್ಲಿ ಆಯೋಜನೆಯಾಗಿದ್ದವು. ಇಂತಹ ಅನೇಕ ಘಟನಾವಳಿಗಳಿಗೆ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನ ಮೈಲಿಗಲ್ಲಾಗಿ ಉಳಿದಿದೆ.
ಇದೀಗ ಈ ಕಾಲೇಜು ಮೈದಾನ ನಗರದ ಪ್ರಮುಖ ಕ್ರೀಡಾ ಚಟುವಟಿಕೆಗಳ ತಾಣವಾಗಿ ರೂಪುಗೊಳ್ಳುತ್ತಿದೆ. ಸ್ಮಾರ್ಟ್ ಸಿಟಿ ಲಿಮಿಟೆಡ್‍ನಿಂದ ಸುಮಾರು 680 ಲಕ್ಷ ರೂ.ಗಳ ವೆಚ್ಚದಲ್ಲಿ ಇಲ್ಲಿ ವಿವಿಧ ಕ್ರೀಡೆಗಳ ಸುಸಜ್ಜಿತ ಕ್ರೀಡಾಂಗಣಗಳು, ವ್ಯಾಯಾಮ ಕೇಂದ್ರಗಳನ್ನು ಸಿದ್ಧ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಶುಕ್ರವಾರ ಇಂತಹ ಕಾರ್ಯಯೋಜನೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಒಂದು ಜ್ಯೂನಿಯರ್ ಕಾಲೇಜು ಇಷ್ಟು ದೊಡ್ಡ ಮೈದಾನ ಹೊಂದಿರುವುದು ರಾಜ್ಯದಲ್ಲಿ ತುಮಕೂರು ಮತ್ತು ದಾವಣಗೆರೆ ಮಾತ್ರ. ಈ ಜಾಗ ತುಮಕೂರಿನ ಕೇಂದ್ರ ಸ್ಥಾನದಲ್ಲಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾರ್ವಜನಿಕ ಸಮಾರಂಭ ಆಯೋಜನೆಗೆ ಅನುಕೂಲವಾಗಿದೆ. ಇಲ್ಲಿ ವ್ಯವಸ್ಥಿತ ಕ್ರೀಡಾ ಸುಮುಚ್ಛಾಯ ಮಾಡಬೇಕು ಎಂಬುದು ಕ್ರೀಡಾಪಟುಗಳ ಆಶಯವಾಗಿತ್ತು. ಇದೊಂದೇ ಮೈದಾನದಲ್ಲಿ ಏಕಕಾಲದಲ್ಲಿ ಹತ್ತಾರು ಕ್ರೀಡೆಗಳನ್ನು ಆಯೋಜನೆ ಮಾಡಲು ಸುವ್ಯವಸ್ಥಿತಿ ಕ್ರೀಡಾಂಗಣಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ನಗರದ ಕ್ರೀಡಾಪಟುಗಳು ಹೆಚ್ಚು ತರಬೇತಿ ಪಡೆದು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕೀರ್ತಿ ತರುವಂತೆ ಹೇಳಿದರು.
ಕಾಲೇಜು ಮೈದಾನದಲ್ಲಿ ಸ್ವಾರ್ಟ್ ಸಿಟಿಯಿಂದ 4 ಖೋಖೋ ಕ್ರೀಡಾಂಗಣ, 2 ಕಬ್ಬಡ್ಡಿ ಮೈದಾನ, ಒಂದೊಂದು ವಾಲಿಬಾಲ್ ಹಾಗೂ ಬಾಲ್‍ಬ್ಯಾಡ್ಮಿಂಟನ್ ಕೋರ್ಟ್‍ಗಳು, 3 ಕ್ರಿಕೆಟ್ ಪ್ರಾಕ್ಟೀಸ್ ಪಿಚ್‍ಗಳನ್ನು ಸ್ಮಾರ್ಟ್‍ಸಿಟಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಫುಟ್‍ಬಾಲ್, ಅಥ್ಲೆಟಿಕ್ ಟ್ರಾಕ್ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಲಾಗಿದೆ. ಮೈದಾನದ ಪೂರ್ವ ಭಾಗದಲ್ಲಿ ಕ್ರೀಡಾಂಗಣಗಳ ನಿರ್ಮಾಣ ಮಾಡಲಾಗುತ್ತದೆ. ಈ ಭಾಗದ ಕಾಂಪೌಂಡಿಗೆ ಹೊಂದಿಕೊಂಡಂತೆ ಚಾವಣಿ ಒಳಗೊಂಡ ಒಂದು ಸಾವಿರ ಜನ ಕುಳಿತು ಕ್ರೀಡೆ ವೀಕ್ಷಿಸಲು ಅನುಕೂಲವಾಗವಂತಹ ಗ್ಯಾಲರಿ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಜಿ ಪ್ಲಸ್ 1 ಪೆವಿಲಿಯನ್ ಗ್ಯಾಲರಿ, ಬಾಲಕ, ಬಾಲಕಿಯರ ಉಡುಪು ಬದಲಾವಣೆ ಕೊಠಡಿ, ಕ್ರೀಡಾ ಸಲಕರಣೆ ಸಂಗ್ರಹಣೆಗಾಗಿ 3 ಮಳಿಗೆಗಳು ಸೇರಿ 432.76 ಲಕ್ಷ ರೂ. ವೆಚ್ಚದಲ್ಲಿ ಈ ಎಲ್ಲವನ್ನೂ ನಿರ್ಮಾಣ ಮಾಡಲಾಗುತ್ತದೆ.
ಕಾಲೇಜು ಮೈದಾನಕ್ಕೆ ಸಾರ್ವಜನಿಕರ ಅನಗತ್ಯ ಪ್ರವೇಶ ತಡೆಯಲು ಮೈದಾನದ ಸುತ್ತ ವಿಧಾನಸೌಧ ಮಾದರಿಯಲ್ಲಿ 2 ಮೀಟರ್ ಎತ್ತರದ ಗ್ರಿಲ್ ಕಾಂಪೌಂಡ್ ಅನ್ನು 119.88 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.
ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಹಾಗೂ ಆಕರ್ಷಕ ಪ್ರವೇಶ ದ್ವಾರವನ್ನು 101.36 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಲೇಜು ಮೈದಾನದಲ್ಲಿ ಮೂರು ಪ್ರವೇಶ ದ್ವಾರಗಳಿವೆ. ಬಿ.ಹೆಚ್.ರಸ್ತೆಯಿಂದ, ಡಾ.ರಾಧಾಕೃಷ್ಣ ರಸ್ತೆಯಿಂದ ಹಾಗೂ ಸಿಎಸ್‍ಐ ಲೇಔಟ್ ಕಡೆಯಿಂದ ಮತ್ತೊಂದು ಪ್ರವೇಶ ದ್ವಾರ ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರವೇಶ ದ್ವಾರವು ಭದ್ರತಾ ಕೊಠಡಿಯೊಂದಿಗೆ 6 ಮಿಟರ್ ಉದ್ದದ ಎಂ.ಎಸ್.ಗೇಟ್ ಹಾಗೂ ಪಾದಚಾರಿಗಳಿಗೆ ವಿಕೇಡ್ ಗೇಟ್ ಮಾಡಲಾಗುತ್ತದೆ.
ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾ ರಂಗ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ಕ್ರೀಡಾ ಕ್ಲಬ್‍ಗಳ ಪದಾಧಿಕಾರಿಗಳ ಹಾಗೂ ಕ್ರೀಡಾಪಟುಗಳ ಬಹು ವರ್ಷಗಳ ಬೇಡಿಕೆಯಾಗಿತ್ತು. ಅದು ಈಗ ಸ್ಮಾರ್ಟ್ ಸಿಟಿ ಯೋಜನೆಗಳ ಮೂಲಕ ಕಾರ್ಯಗತವಾಗುವ ಹಾದಿಯಲ್ಲಿದೆ ಎಂದು ಕ್ರೀಡಾಪಟುಗಳು ಹರ್ಷವ್ಯಕ್ತಪಡಿಸಿದ್ದಾರೆ.
ದೊಡ್ಡ ಕೊಡುಗೆ :
ಇಲ್ಲಿ ಖೋಖೋ, ಕಬಡ್ಡಿ, ಬಾಲ್‍ಬ್ಯಾಡ್ಮಿಂಟನ್, ವಾಲಿಬಾಲ್, ಕ್ರಿಕೆಟ್, ಫುಟ್‍ಬಾಲ್ ಮತ್ತಿತರ ಕ್ರೀಡೆಗಳಿಗೆ ಮೈದಾನ ಸಿದ್ಧ ಮಾಡಲಾಗುತ್ತಿದೆ. ಅಲ್ಲದೆ, ಹಿರಿಯ ನಾಗರೀಕರಿಗೆ ಓಪನ್ ಜಿಮ್, ಕ್ರೀಡಾಪಟುಗಳಿಗೆ ಜಿಮ್, ವಾಕಿಂಗ್ ಪಾಥ್, ಪ್ರೇಕ್ಷಕರ ಗ್ಯಾಲರಿ ಎಲ್ಲವನ್ನೂ ವ್ಯವಸ್ಥಿತವಾಗಿ ರೂಪಿಸಲು ಯೋಜನೆ ತಯಾರಿಸಲಾಗಿದೆ. ಕಾಮಗಾರಿ ಮುಗಿದ ನಂತರ ಇದು ತುಮಕೂರು ಕ್ರೀಡಾ ಚಟುವಟಿಕೆಗಳಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ರಾಕ್‍ಲೈನ್ ಯೂತ್ ಕ್ಲಬ್‍ನ ರಾಕ್‍ಲೈನ್ ರವಿಕುಮಾರ್ ಸಂತಸ ವ್ಯಕ್ತಪಡಿಸಿದರು.
ಬಹು ವರ್ಷಗಳ ಬೇಡಿಕೆ
ತುಮಕೂರಿನಲ್ಲಿ ಕ್ರೀಡಾಪಟುಗಳು ಅಭ್ಯಾಸ ಮಾಡಲು ಯೋಗ ಕ್ರೀಡಾಂಗಣಗಳಿರಲಿಲ್ಲ. ಈ ಮೂಲಕ ಆ ಕೊರತೆ ನಿವಾರಣೆಯಾಗುತ್ತದೆ. ಕೊರೊನಾ ಶುರುವಾದಾಗಿನಿಂದ ನಗರದಲ್ಲಿ ಸಾರ್ವಜನಿಕರು ವಾಕಿಂಗ್ ಮಾಡಲೂ ಜಾಗವಿಲ್ಲದಂತಾಗಿದೆ. ಅಮಾನಿಕೆರೆ ಉದ್ಯಾನವನ, ವಿಶ್ವವಿದ್ಯಾಲಯ ಕ್ಯಾಂಪಸ್, ಎಸ್‍ಐಟಿ, ಎಸ್‍ಎಸ್‍ಐಟಿ ಕ್ಯಾಂಪಸ್, ಪೊಲೀಸ್ ಗ್ರೌಂಡ್‍ಗಳಲ್ಲೂ ವಾಕಿಂಗ್ ಮಾಡಲು ಬರುವ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆದಿರುವ ಕ್ರೀಡಾ ಕಾಮಗಾರಿಗಳು ಸ್ವಾಗತಾರ್ಹ ಎಂದು ಹಿರಿಯ ಕ್ರೀಡಾಪಟು ಎನ್.ನರಸಿಂಹರಾಜು ಹೇಳಿದರು.
ಕ್ರೀಡಾ ಉತ್ತೇಜನ ಸ್ವಾಗತಾರ್ಹ :
ತುಮಕೂರು ನಗರದಲ್ಲಿ ಕ್ರೀಡೆಗಳ ಉತ್ತೇಜನಕ್ಕೆ ಇಂತಹ ವ್ಯವಸ್ಥೆ ಅಗತ್ಯವಿತ್ತು. ಇನ್ನು ಮುಂದೆ ಈ ಮೈದಾನದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆಸಲು ಅನುಕೂಲವಾಗಲಿದೆ. ಮುಂದಿನ 150 ವರ್ಷಗಳ ದೂರದೃಷ್ಟಿಯೊಂದಿಗೆ ಇಲ್ಲಿ ಕ್ರೀಡಾಂಗಣಗಳನ್ನು ಸಿದ್ಧಗೊಳಿಸಬೇಕು ಎಂದು ವಿವೇಕಾನಂದ ಕ್ರೀಡಾ ಸಂಘದ ಧನಿಯಾಕುಮಾರ್ ಹೇಳಿದರು.
1960ರಲ್ಲಿ ಇದೇ ಕಾಲೇಜು ಮೈದಾನದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು. ಅದಾಗಿ ಅನೇಕ ಟೂರ್ನಿಗಳು ಅನಾನುಕೂಲದ ನಡುವೆಯೂ ಇಲ್ಲಿ ನಡೆದವು. ಇನ್ನು ಮುಂದೆ ವ್ಯವಸ್ಥಿತವಾಗಿ ಕ್ರೀಡಾಕೂಟ ಆಯೋಜಿಸಲು ಅವಕಾಶವಿದೆ ಎಂದು ಕ್ರೀಡಾ ತರಬೇತುದಾರ ಪ್ರದೀಪ್‍ಕುಮಾರ್ ಅಭಿಪ್ರಾಯಪಟ್ಟರು.
ನಗರದ ಹಿರಿಯ ಕ್ರೀಡಾಪಟುಗಳೂ, ತರಬೇತುದಾರರಾಗಿರುವ ಎ.ಎನ್.ಪ್ರಭಾಕರ್, ಎಸ್.ಡಿ.ರಾಜಶೇಖರ್, ಎಂ.ಹೆಚ್.ರಾಜು ಮತ್ತಿತರರು ಕಾಲೇಜು ಮೈದಾನದ ಕ್ರೀಡಾ ರಂಗ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿ, ಎಲ್ಲಾ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಂಡು, ಕ್ರೀಡಾ ಚಟುವಟಿಕೆಗಳಿಗೆ ಮುಕ್ತವಾಗಲಿ ಎಂದು ಆಶಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
