ತುಮಕೂರು : ಜಿಲ್ಲೆ-ತಾಲ್ಲೂಕು ಕೇಂದ್ರಗಳಲ್ಲಿ ಆಪರೇಟರ್ ಗಳ ಅಭಾವ

 ತುಮಕೂರು : 

      ಕೊರೋನಾ ವೈರಸ್ ಸಮುದಾಯಕ್ಕೆ ಹರಡಿಕೊಂಡಿರುವ ಈ ದಿನಗಳಲ್ಲಿ ಆಸ್ಪತ್ರೆಗಳೆ ಪ್ರತ್ಯಕ್ಷ ದೇವರಾಗಿ ಪರಿಣಮಿಸಿವೆ. ಸೋಂಕು ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನೆ ದಿನೆ ಅಧಿಕವಾಗುತ್ತಿದೆ. ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ವ್ಯವಸ್ಥೆ ಸ್ಪಂದಿಸಲಾಗದಂತಹ ಪರಿಸ್ಥಿತಿ ಇದೆ. ಅಗತ್ಯಕ್ಕೆ ತಕ್ಕ ಸೌಲಭ್ಯಗಳ ಕೊರತೆ, ಸೌಲಭ್ಯಗಳಿದ್ದರೂ ಬಳಕೆ ಮಾಡಬೇಕಾದ ಸಿಬ್ಬಂದಿ ಕೊರತೆ, ತುರ್ತು ಬೇಕಾಗಿರುವ ಪರಿಕರಗಳು ಇಲ್ಲದೆ ಅಸಹಾಯಕ ಸ್ಥಿತಿ… ಹೀಗೆ ಒಂದಲ್ಲ ಒಂದು ಸಮಸ್ಯೆಗಳಿಂದ ಆರೋಗ್ಯ ಮತ್ತು ವೈದ್ಯಕೀಯ ವ್ಯವಸ್ಥೆ ನರಳುತ್ತಿದೆ.

ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಕೆಲವು ಕಡೆ ಆಕ್ಸಿಜನ್ ಕೊರತೆ ಇದೆ. ರೆಮ್‍ಡಿಸಿವಿರ್ ಅಂತೂ ದುಬಾರಿಯಾಗಿದ್ದು, ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಜೀವ ರಕ್ಷಕಗಳ ಕೊರತೆ ಮುಂದುವರೆದರೆ ಆರೋಗ್ಯ ತುರ್ತು ಪರಿಸ್ಥಿತಿಯ ಬಿಕ್ಕಟ್ಟು ಮತ್ತಷ್ಟು ಭೀಕರವಾಗಲಿದೆ.
ಇತರೆ ಸಮಸ್ಯೆಗಳು ಮತ್ತು ಕೊರತೆಯ ನಡುವೆ ವೆಂಟಿಲೇಟರ್ ಬೆಡ್‍ಗಳ ಸಮಸ್ಯೆಯೂ ಕಾಡುತ್ತಿದೆ. ಒಂದು ಕಡೆ ವೆಂಟಿಲೇಟರ್‍ಗಳ ಸಮಸ್ಯೆ ಮತ್ತೊಂದು ಕಡೆ ಅದನ್ನು ಆಪರೇಟ್ ಮಾಡುವ ತಜ್ಞರು ಮತ್ತು ಸಿಬ್ಬಂದಿಗಳ ಕೊರತೆ ಇದೆ. ಇದನ್ನು ನೀಗಿಸುವಲ್ಲಿ ಸರ್ಕಾರಗಳು ಪ್ರಯತ್ನಪಟ್ಟಿಲ್ಲ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಈಗ ಸರ್ಕಾರ ಅವುಗಳನ್ನು ಎಲ್ಲ ಆಸ್ಪತ್ರೆಗಳಿಗೆ ನೀಡಿದರೂ ನಿಭಾಯಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ತುಮಕೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿಯೂ ಸೋಂಕಿತರು ಹೆಚ್ಚಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಆಪರೇಟರ್‍ಗಳು ಇಲ್ಲದೆ ವೈದ್ಯರು ಮತ್ತು ನರ್ಸ್‍ಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ 29 ವೆಂಟಿಲೇಟರ್ :

      ತುಮಕೂರು ಜಿಲ್ಲಾ ಕೇಂದ್ರದ ಜಿಲ್ಲಾಸ್ಪತ್ರೆಯಲ್ಲಿ 29 ಆಕ್ಸಿಜನ್ ವೆಂಟಿಲೇಟರ್‍ಗಳಿವೆ. ಸದ್ಯಕ್ಕೆ ಇವೆಲ್ಲವೂ ಬಳಕೆಯಾಗುತ್ತಿದ್ದು, ಹೆಚ್ಚುವರಿ ರೋಗಿಗಳನ್ನು ಬೇರೆ ಕಡೆಗೆ ಕಳುಹಿಸಿಕೊಡುವ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿಯೂ ಸಹ ಆಪರೇಟರ್ ಮತ್ತು ಸಿಬ್ಬಂದಿಗಳ ಕೊರತೆ ಇದ್ದರೂ ಅದು ಹೊರಗೆ ಬರುತ್ತಿಲ್ಲ. ಇರುವ ಸಿಬ್ಬಂದಿಗಳನ್ನೇ ಹೊಂದಾಣಿಕೆ ಮಾಡಿಕೊಂಡು ವ್ಯವಸ್ಥಿತ ಪ್ರಯತ್ನಗಳನ್ನಂತೂ ಮಾಡಲಾಗುತ್ತಿದೆ.

      ಪ್ರತಿದಿನ ಮೂರು ಪಾಳೆಯಲ್ಲಿ ವೈದ್ಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಳಗಿನ ಪಾಳೆಯಲ್ಲಿ 3 ಮಂದಿ ವೈದ್ಯರು, ಮಧ್ಯಾಹ್ನ ಹಾಗೂ ರಾತ್ರಿ ಪಾಳೆಯದಲ್ಲಿ ತಲಾ 3 ಮಂದಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಓರ್ವ ಸೋಂಕಿತ ರೋಗ ಉಲ್ಬಣಗೊಂಡು ವೆಂಟಿಲೇಟರ್‍ಗೆ ಶಿಫ್ಟ್ ಆದಾಗ ಅಲ್ಲಿಂದ ಗುಣಮುಖರಾಗಿ ಹೊರಬರಲು ಕನಿಷ್ಠ 4 ದಿನಗಳಾದರೂ ಬೇಕು. ಕೆಲವೊಮ್ಮೆ 10 ದಿನಗಳಾದರೂ ಬೇಕಾಗಬಹುದು. ಅಲ್ಲಿಯವರೆಗೆ ಇತರೆ ಸೋಂಕಿತರು ಕಾಯಲೇಬೇಕು.

      ತಾಲ್ಲೂಕುವಾರು ಆಸ್ಪತ್ರೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಒಂದೊಂದು ತಾಲ್ಲೂಕು ಆಸ್ಪತ್ರೆಯಲ್ಲಿ 5 ರಿಂದ 10 ಆಕ್ಸಿಜನ್ ವೆಂಟಿಲೇಟರ್‍ಗಳು ಇರಬಹುದು. ಇನ್ನೂ ಹೆಚ್ಚಿನ ವೆಂಟಿಲೇಟರ್‍ಗಳು ಬೇಕೆಂದು ಒತ್ತಾಯ ಮಾಡಿದರೂ ಪ್ರಯೋಜನವಿಲ್ಲ. ಇರುವ ಆಕ್ಸಿಜನ್ ವೆಂಟಿಲೇಟರ್‍ಗಳ ಬಳಕೆಯೇ ಈಗ ಅಲ್ಲಿರುವ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಹೆಚ್ಚಿಗೆ ಬೇಕೆಂದರೆ ಅದರ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಎದುರಾಗಲಿದೆ.

      ಕಳೆದ ಬಾರಿ ಕೊರೊನಾ ಉಲ್ಬಣಿಸಿದ ಸಂದರ್ಭದಲ್ಲಿ ಜಿಲ್ಲೆಗೆ ಸುಮಾರು 200 ಆಕ್ಸಿಜನ್ ವೆಂಟಿಲೇಟರ್‍ಗಳನ್ನು ನೀಡಲಾಗಿತ್ತು. ತಾಲ್ಲೂಕುಗಳಿಗೂ ಹಂಚಿಕೆಯಾಗಿತ್ತು. ಆದರೆ ಇದರ ಬಳಕೆ ಮತ್ತು ನಿರ್ವಹಣೆಯ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಂಡುಬರುತ್ತಿಲ್ಲ.
ವೆಂಟಿಲೇಟರ್ ಆಪರೇಟ್ ಮಾಡುವ ಕೋರ್ಸ್ ಮುಗಿಸಿರುವ 6000 ಕ್ಕೂ ಹೆಚ್ಚು ತಜ್ಞರು ರಾಜ್ಯದಲ್ಲಿ ಇರುವುದಾಗಿ ತಿಳಿದು ಬಂದಿದೆ. ಕೋವಿಡ್ ವಾರಿಯರ್ಸ್‍ಗಳಾಗಿ ಕೆಲಸ ಮಾಡಲು ಅವರೆಲ್ಲ ಸಿದ್ಧರಿದ್ದರೂ ಹೊಸ ನೇಮಕಾತಿ ಮಾಡಲು ಸರ್ಕಾರ ಸಿದ್ಧವಿಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ. ಪರಿಣಾಮವಾಗಿ ವೆಂಟಿಲೇಟರ್ ಇದ್ದರೂ ಅವುಗಳು ಸಮರ್ಪಕವಾಗಿ ಬಳಕೆಯಾಗದ ಪರಿಸ್ಥಿತಿ ಇದೆ.

ಏನಿದು ವೆಂಟಿಲೇಟರ್..?

Why Ventilators May Not Be Working Well for COVID-19 Patients | Time

       ಇದಕ್ಕೆ ಕೃತಕ ಶ್ವಾಸ ಯಂತ್ರ ಎನ್ನಬಹುದು. ಮನುಷ್ಯನ ಉಸಿರಾಟದ ಕ್ರಿಯೆಯನ್ನು ಯಂತ್ರದಿಂದ ಮಾಡಿಸುವ ತಂತ್ರಜ್ಞಾನ. ಕೃತಕ ಉಸಿರಾಟದಲ್ಲಿ ಹಲವು ಬಗೆಗಳಿವೆ. ಪ್ರಥಮ ಚಿಕಿತ್ಸೆಯಲ್ಲಿ ಬಾಯಿಗೆ ಬಾಯಿಟ್ಟು ಶ್ವಾಸಕೋಶದವರೆಗೆ ಗಾಳಿ ಊದುವುದು, ಆಸ್ಪತ್ರೆಯಲ್ಲಾದರೆ ಬಾಯಿ ಮತ್ತು ಮೂಗನ್ನು ಆವರಿಸುವ ಮಾಸ್ಕ್ ಮೂಲಕ ಗಾಳಿ ಚೀಲದಿಂದ ಕೃತಕ ಉಸಿರಾಟ ನೀಡಲಾಗುತ್ತದೆ. ಆದರೆ ಶ್ವಾಸ ಕ್ರಿಯೆಗೆ ರೋಗಿಯ ದೇಹ ತುಂಬಾ ಅಸಮರ್ಥವಾಗಿದ್ದಲ್ಲಿ ದೀರ್ಘಕಾಲ ಕೃತಕ ಉಸಿರಾಟದ ಅವಶ್ಯಕತೆ ಇದ್ದಲ್ಲಿ ಆಗ ಸಹಾಯಕ್ಕೆ ಬರುವುದೇ ವೆಂಟಿಲೇಟರ್. ಶ್ವಾಸಕೋಶದ ಮೂಲಕ ಆಮ್ಲಜನಕ ರಕ್ತನಾಳ ಸೇರುತ್ತದೆ. ಶ್ವಾಸಕೋಶಕ್ಕೆ ಕೊರೊನಾ ವೈರಸ್ ಆಕ್ರಮಣ ಮಾಡಿದಾಗ ಅಲ್ಲಿನ ಕಾರ್ಯ ಸ್ಥಗಿತವಾಗುವುದರಿಂದ ಮತ್ತು ಶ್ವಾಸಕೋಶಕ್ಕೆ ಹಾನಿಯಾಗುವುದರಿಂದ ಯಂತ್ರದ ಮೂಲಕವೇ ಆಮ್ಲಜನಕ ಸರಬರಾಜು ಮಾಡುವ ಪ್ರಕ್ರಿಯೆ ಇದು.

      ತಲೆಗೆ ಪೆಟ್ಟಾಗಿ ತೊಂದರೆಯಾದಾಗ, ಪ್ಯಾರಾಲಿಸಿಸ್, ಉಸಿರಾಟದ ಕ್ರಿಯೆಯಲ್ಲಿ ತೊಂದರೆಯಾದಾಗ ಇನ್ನೂ ಕೆಲವು ಸಂದರ್ಭಗಳಲ್ಲಿ ಆಕ್ಸಿಜನ್ ವೆಂಟಿಲೇಟರ್‍ಗಳನ್ನು ಹಿಂದೆಯೂ ಬಳಕೆ ಮಾಡಲಾಗುತ್ತಿತ್ತು. ಸೀಮಿತ ಸಂದರ್ಭಗಳಿಗಷ್ಟೇ ಇದರ ಬಳಕೆ ಇದ್ದ ಕಾರಣ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‍ಗಳು ಖಾಲಿಯಾಗಿಯೇ ಇದ್ದವು. ಕೊರೊನಾ ವೈರಸ್‍ನಿಂದಾಗಿ ಇವುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ವೈರಸ್ ಉಲ್ಬಣಿಸಿದವರಿಗೆ ಇದು ಅನಿವಾರ್ಯವೂ ಕೂಡ.

      ವೆಂಟಿಲೇಟರ್‍ಗಳ ಬಳಕೆಯನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ದಿನದ 24 ಗಂಟೆಯೂ ನಿಗಾ ಇರಬೇಕು. ಕೇವಲ ಮೆಷಿನ್ ಇದ್ದರೆ ಸಾಕಾಗದು. ಅದನ್ನು ಬಳಕೆ ಮಾಡುವ ವೃತ್ತಿಪರರೂ ಮತ್ತು ಸಿಬ್ಬಂದಿಗಳ ಅಗತ್ಯ ಇರುತ್ತದೆ. ನಮ್ಮ ಶ್ರೀದೇವಿ ಆಸ್ಪತ್ರೆಯಲ್ಲಿ 600 ಹಾಸಿಗೆಗಳಿದ್ದು, 300 ಹಾಸಿಗೆಗಳನ್ನು ಕೊರೊನಾ ಚಿಕಿತ್ಸೆಗಾಗಿಯೇ ನೀಡಲಾಗಿದೆ. 25 ಬೆಡ್‍ಗಳನ್ನು ಆಕ್ಸಿಜನ್ ವೆಂಟಿಲೇಟರ್ ಬೆಡ್‍ಗಳಾಗಿ ಬಳಕೆ ಮಾಡಲಾಗುತ್ತಿದೆ. ಎಲ್ಲ ರೋಗಿಗಳಿಗೂ ವೆಂಟಿಲೇಟರ್‍ಗಳ ಅವಶ್ಯಕತೆ ಇರುವುದಿಲ್ಲ. 100 ಜನರಲ್ಲಿ ಶೇ.5 ರಿಂದ 10 ರಷ್ಟು ಮಂದಿಗೆ ಮಾತ್ರವೇ ಇದರ ಅಗತ್ಯತೆ ಇದ್ದು, ಕೆಲವರು ವಿನಾಕಾರಣ ಇಂತಹದ್ದೇ ಬೆಡ್ ಬೇಕು ಎಂದು ಹಂಬಲಿಸುತ್ತಾರೆ. ಇದು ಸರಿಯಲ್ಲ. ವೈದ್ಯರ ಸಲಹೆಯ ಮೂಲಕವೇ ಚಿಕಿತ್ಸಾ ವಿಧಾನಗಳನ್ನು ಪಾಲಿಸಬೇಕು ಎನ್ನುತ್ತಾರೆ ಶ್ರೀದೇವಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಎಂ.ಆರ್.ಹುಲಿನಾಯ್ಕರ್.

      ತುಮಕೂರು ಜಿಲ್ಲಾಸ್ಪತ್ರೆಯಲ್ಲಿ 29 ಆಕ್ಸಿಜನ್ ವೆಂಟಿಲೇಟರ್‍ಗಳಿವೆ. ಎಲ್ಲವೂ ಬಳಕೆಯಾಗುತ್ತಿವೆ. ಇರುವ ಸಿಬ್ಬಂದಿಯನ್ನೇ ಹೊಂದಾಣಿಕೆ ಮಾಡಿಕೊಂಡು ಕರ್ತವ್ಯಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಓರ್ವ ಸೋಂಕಿತನಿಗೆ ರೋಗ ಉಲ್ಬಣಿಸಿದಾಗ, ಉಸಿರಾಟದ ತೊಂದರೆ ಹೆಚ್ಚಾದಾಗ ಆಕ್ಸಿಜನ್ ವೆಂಟಿಲೇಟರ್ ನೀಡಬೇಕಾಗುತ್ತದೆ. ರಿಕವರಿ ಆಗಲು ಕನಿಷ್ಠ ಮೂರ್ನಾಲ್ಕು ದಿನಗಳು ಬೇಕಾಗುತ್ತವೆ. ಅವರು ಬಿಡುಗಡೆಯಾದ ನಂತರವೇ ಇತರರಿಗೆ ಅವಕಾಶ ಮಾಡಿಕೊಡಬೇಕು. ಇಲ್ಲಿ ಪ್ರತಿದಿನ ಮೂರು ಪಾಳಿಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

-ಡಾ.ಸುರೇಶ್‍ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕರು.

      ಸಾಧಾರಣ ಆಕ್ಸಿಜನ್ ಬೆಡ್‍ಗೂ, ವೆಂಟಿಲೇಟರ್ ಬೆಡ್‍ಗೂ ಸಾಕಷ್ಟು ವ್ಯತ್ಯಾಸವಿದೆ. ಸಾಧಾರಣ ಆಕ್ಸಿಜನ್ ಬೆಡ್ ರೋಗಿಗಳಾದಲ್ಲಿ 20 ಜನರಿಗೆ ನೀಡುವ ಆಮ್ಲಜನಕವನ್ನು ಎರಡು ವೆಂಟಿಲೇಟರ್‍ಗಳಿಗೆ ಬಳಕೆ ಮಾಡಬೇಕಾಗುತ್ತದೆ. ವೆಂಟಿಲೇಟರ್‍ಗಳ ದರವೂ ದುಬಾರಿ. 6 ರಿಂದ 10 ಲಕ್ಷ ರೂ.ಗಳಷ್ಟು ದರವಿದೆ. ಬಹುತೇಕ ಕಡೆ ವೆಂಟಿಲೇಟರ್‍ಗಳು ಇದ್ದರೂ ಅವುಗಳ ಬಳಕೆಗೆ ಸೂಕ್ತ ಹಾಗೂ ಸಮರ್ಪಕ ಆಪರೇಟರ್‍ಗಳು, ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ಇರುವ ವೆಂಟಿಲೇಟರ್‍ಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳುವುದರ ಜೊತೆಗೆ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಥವಾ ಬಳಕೆ ಮಾಡಬಹುದಾದ ಸಾಮಥ್ರ್ಯ ಇದೆಯೋ ಅಂತಹ ಕಡೆಗಳಿಗೆ ಆಕ್ಸಿಜನ್ ವೆಂಟಿಲೇಟರ್ ಸಹಿತ ಇತರೆ ಅಗತ್ಯ ಬಳಕೆಯ ಉಪಕರಣಗಳು ಲಭ್ಯವಿರುವಂತಾಗಬೇಕು. ಆರೋಗ್ಯ ಭಾಗ್ಯ (ಎಬಿಆರ್‍ಕೆ) ಯೋಜನೆಯಡಿ ಬರುವ ರೋಗಿಗಳಿಗೆ ಒತ್ತು ನೀಡಿದಂತೆಯೇ ಇತರೆ ಸಾಮಾನ್ಯ ರೋಗಿಗಳ ಕಡೆಗೂ ಸರ್ಕಾರ ಒತ್ತು ನೀಡಬೇಕು. ರೋಗ ಎಲ್ಲರಿಗೂ ಬರುತ್ತಿದ್ದು, ಇಲ್ಲಿ ತಾರತಮ್ಯ ಇಲ್ಲದಂತೆ ಎಲ್ಲ ಅರ್ಹರಿಗೂ ಚಿಕಿತ್ಸೆ ಸಿಗುವಂತಾದರೆ ಈ ಒತ್ತಡ ಮತ್ತು ಅಸಮಾಧಾನ ಕಡಿಮೆಯಾಗಬಹುದು. ಸರ್ಕಾರ ಈ ಬಗ್ಗೆಯೂ ಚಿಂತಿಸಬೇಕು.

-ಡಾ.ಎಂ.ಆರ್.ಹುಲಿನಾಯ್ಕರ್, ಮುಖ್ಯಸ್ಥರು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ.

      ಕೊರೊನಾ ಸೋಂಕು ಕಾಣಿಸಿಕೊಂಡ ಎಲ್ಲರಿಗೂ ಬೆಡ್, ಆಮ್ಲಜನಕ, ರೆಮ್‍ಡಿಸಿವಿರ್ ಬೇಕಾಗಿಲ್ಲ. ಉಸಿರಾಟದ ತೊಂದರೆಯಿಂದ ನರಳುತ್ತಿರುವವರು, ರೋಗ ಉಲ್ಬಣಿಸಿದವರಿಗಷ್ಟೇ ಆಕ್ಸಿಜನ್ ವೆಂಟಿಲೇಟರ್ ಅಗತ್ಯತೆ ಇದೆ. ಕೆಲವರು ಅನಗತ್ಯವಾಗಿ ಆಕ್ಸಿಜನ್ ಬೆಡ್ ಹಾಗೂ ವೆಂಟಿಲೇಟರ್‍ಗಳು ಬೇಕೆಂದು ಬೇಡಿಕೆ ಇಡುವ ಪ್ರವೃತ್ತಿ ಹೆಚ್ಚುತ್ತಿದೆ. ವೈದ್ಯರ ಸಲಹೆಯಂತೆ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕೇ ಹೊರತು ತಾವೇ ನಿರ್ಧರಿಸಬಾರದು ಎನ್ನುತ್ತಾರೆ ತಜ್ಞ ವೈದ್ಯರುಗಳು. ಸರ್ಕಾರಿ ಆಸ್ಪತ್ರೆಯ ಸೌಲಭ್ಯ ಖಾಸಗಿ ಆಸ್ಪತ್ರೆಗಳಲ್ಲಿಯೂ ಇದೆ. ಅಲ್ಲಿಂದ ಶಿಫಾರಸ್ಸು ಆಗಿಬರುವ, ಆರೋಗ್ಯಭಾಗ್ಯ ಯೋಜನೆ ಮೂಲಕ ರವಾನಿಸುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿಯೂ ಸರ್ಕಾರಿ ವೆಚ್ಚದಲ್ಲಿಯೇ ಚಿಕಿತ್ಸೆ ನೀಡಬೇಕು. ಇದಕ್ಕಾಗಿಯೇ ಕೆಲವು ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸಾ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link