ಮನೆ ಮನೆಗೂ ಸೋಂಕು ಅಂಟಿಸುತ್ತಿದ್ದಾರೆ ಕೊರೋನಾ ಪೀಡಿತರು

 ತುಮಕೂರು :

      ಕೊರೋನಾ ಮೊದಲ ಅಲೆಯ ಆರ್ಭಟದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳು ಬಹುತೇಕ ಸುರಕ್ಷಿತವಾಗಿದ್ದವು. ಅಲ್ಲಲ್ಲಿ ಕೆಲವೊಂದು ಗ್ರಾಮಗಳನ್ನು ಹೊರತುಪಡಿಸಿದರೆ ಉಳಿದಂತೆ ಗ್ರಾಮೀಣ ಪ್ರದೇಶಗಳನ್ನು ಸೋಂಕು ಅಷ್ಟಾಗಿ ಬಾಧಿಸಿರಲಿಲ್ಲ.  ಅಷ್ಟರ ಮಟ್ಟಿಗೆ ಕೋವಿಡ್ ನಿಯಂತ್ರಣದಲ್ಲಿತ್ತು. ಎರಡನೆ ಅಲೆ ನಗರವನ್ನೂ ಮೀರಿಸಿ ಹಳ್ಳಿಗಳಿಗೆ ವ್ಯಾಪಿಸುತ್ತಿದೆ. ದಿನೆ ದಿನೆ ಏರಿಕೆಯಾಗುತ್ತಿರುವ ಕೋವಿಡ್ ವರದಿಗಳನ್ನು ಗಮನಿಸಿದರೆ ಗ್ರಾಮಾಂತರ ಪ್ರದೇಶದ ಕೋವಿಡ್ ಭೀಕರತೆ ದಂಗುಬಡಿಸುತ್ತದೆ.

      ಏಪ್ರಿಲ್ ಆರಂಭದಲ್ಲಿ ಗ್ರಾಮೀಣ ಪ್ರದೇಶಗಳು ಸುರಕ್ಷಿತವಾಗಿಯೇ ಇದ್ದವ್ಲು. ಯುಗಾದಿ ಹಬ್ಬಕ್ಕಾಗಿ ನಗರದಿಂದ ಊರಿಗೆ ಹೋದವರು ಹಾಗೂ ಅದಾದ ಒಂದು ವಾರದಲ್ಲಿ ಲಾಕ್‍ಡೌನ್ ಘೋಷಣೆಯ ಕಾರಣ ಬೆಂಗಳೂರಿನಿಂದ ಹಳ್ಳಿ ತಲುಪಿದವರಿಂದಲೇ ಕೋವಿಡ್ ಸೋಂಕು ಉಲ್ಬಣಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಹಳ್ಳಿಗಳು ಸುರಕ್ಷಿತ ಎಂದು ನಗರ ಬಿಟ್ಟು ತೆರಳಿದವರು ಹಳ್ಳಿ ಹಳ್ಳಿಗಳಲ್ಲೂ ಕೋವಿಡ್ ಬೀಜ ಬಿತ್ತಿಬಿಟ್ಟಿದ್ದಾರೆ. ಇದು ಪಾರ್ಥೇನಿಯಂ ಕಳೆಯೋಪಾದಿಯಲ್ಲಿ ಹಳ್ಳಿಯಿಂದ ಹಳ್ಳಿಗೆ, ಮನೆಯಿಂದ ಮನೆಗೆ ಹರಡುತ್ತಲೇ ಇದೆ.

      ಪ್ರತಿ ತಿಂಗಳು ಕೈಗೊಂದಿಷ್ಟು ಕಾಸು ಸಿಗಲಿದೆ ಎಂಬ ಖುಷಿಯಲ್ಲಿ ಬೆಂಗಳೂರು ಸೇರಿರುವವರೇ ಹೆಚ್ಚು. ಕಾಫಿ, ಟೀ ಅಂಗಡಿ, ಸ್ಟಾಲ್, ಹೋಟೆಲ್, ಗಾರ್ಮೆಂಟ್ಸ್, ಎಂ.ಎನ್.ಸಿ. ಕಂಪನಿಗಳು ಹೀಗೆ ನಾನಾ ತರಹದ ವಹಿವಾಟಿನ ಉದ್ಯೋಗದ ಕಚೇರಿಗಳಲ್ಲಿ ದುಡಿಯುತ್ತಿದ್ದಾರೆ. ಇವರೆಲ್ಲ ತಮ್ಮ ಕೆಲಸದ ಸ್ಥಳದಲ್ಲಿ ಸಾಮೂಹಿಕವಾಗಿ ಜನರ ಜೊತೆ ಸಂಪರ್ಕ ಇಟ್ಟುಕೊಂಡವರೆ. ಇವರಲ್ಲಿ ಒಬ್ಬ ಸೋಂಕಿತ ಹಳ್ಳಿ ತಲುಪಿದರೂ ಸಾಕು ಇಡೀ ಹಳ್ಳಿಯೇ ಸೋಂಕಿಗೆ ಒಳಗಾಗುತ್ತದೆ. ಈಗ ಆಗಿರುವುದು ಇದೆ. ಕಳೆದ 15 ದಿನಗಳ ಇತ್ತೀಚಿನ ವರದಿ ಮತ್ತು ಗ್ರಾಮೀಣ ಪ್ರದೇಶಗಳ ಚಿತ್ರವಣವನ್ನು ಗಮನಿಸಿದರೆ ಸೋಂಕು ಇಲ್ಲದ ಹಳ್ಳಿಗೂ ಈಗ ಸೋಂಕು ತಗುಲುತ್ತಿರುವುದು ಆತಂಕ ತಂದಿಟ್ಟಿದೆ.
ತುಮಕೂರು ಜಿಲ್ಲೆಯಲ್ಲಿ 121 ಗ್ರಾಮ ಪಂಚಾಯತಿಗಳು ಹಾಟ್‍ಸ್ಪಾಟ್ ಕೇಂದ್ರಗಳೆಂದು ಜಿಲ್ಲಾಡಳಿತ ಗುರುತಿಸಿದೆ. ವಾರ ವಾರಕ್ಕೂ ಈ ಅಂಕಿ ಅಂಶ ಬದಲಾಗುತ್ತಿದೆ. ಏಪ್ರಿಲ್ ಅಂತ್ಯಕ್ಕೆ ಕೇವಲ 67 ಗ್ರಾಮ ಪಂಚಾಯತಿಗಳು ಹಾಟ್‍ಸ್ಪಾಟ್ ಆಗಿದ್ದವು. ಈ ಸಂಖ್ಯೆ 121ಕ್ಕೆ ತಗುಲಿದ್ದು, ಇನ್ನು ಕೆಲವೇ ದಿನಗಳಲ್ಲಿ 130 ದಾಟುವ ಲಕ್ಷಣಗಳಿವೆ. ತುಮಕೂರು ಜಿಲ್ಲೆಯ ಪರಿಸ್ಥಿತಿ ಬಿಗಡಾಯಿಸುತ್ತಿರುವ ಗಂಭೀರ ಲಕ್ಷಣ ಇದು.

ಗ್ರಾಮೀಣ ಜನರ ನಿರ್ಲಕ್ಷ್ಯ :

      ನಾವು ಹಳ್ಳಿಗಳಲ್ಲಿ ಇದ್ದೇವೆ, ರಾಗಿ ಮುದ್ದೆ, ರೊಟ್ಟಿ, ಸೊಪ್ಪು, ಕಾಳು ತಿಂದುಕೊಂಡು ಗಟ್ಟಿಮುಟ್ಟಾಗಿದ್ದೇವೆ, ನಮಗೆ ಕೊರೊನಾ ಸೋಂಕು ಹತ್ತಿರವೂ ಸುಳಿಯಲ್ಲ ಎನ್ನುತ್ತಿದ್ದರು ಗ್ರಾಮೀಣರು. ಗುಂಪುಗೂಡುತ್ತಿದ್ದರು. ಮಾರ್ಗಸೂಚಿಗಳಂತೂ ಲೆಕ್ಕವೇ ಇಲ್ಲ. ಇದರ ಪರಿಣಾಮವನ್ನು ಈಗ ಅನುಭವಿಸಬೇಕಾಗಿದೆ. ಇಂದಿಗೂ ಸಹ ಹೋಬಳಿ ಮಟ್ಟದಲ್ಲಿ ಮಧ್ಯಾಹ್ನದ ನಂತರವೂ ಅಂಗಡಿಗಳು ತೆರೆಯುತ್ತಿರುವುದನ್ನು ನೋಡಿದರೆ, ಅಲ್ಲೆಲ್ಲ ಸಹಜ ಸ್ಥಿತಿಯಲ್ಲೇ ವಹಿವಾಟು ನಡೆಯುತ್ತಿರುವುದನ್ನು ನೋಡಿದರೆ ಕೊರೋನಾ ಸದ್ಯಕ್ಕಂತೂ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಂಡು ಬರುತ್ತಿಲ್ಲ. ಗುಂಪುಗೂಡಿ ಟೀ ಕುಡಿಯುವ, ಹರಟೆ ಹೊಡೆಯುವ ಅಭ್ಯಾಸಗಳು ಮುಂದುವರೆದಿವೆ. ತಮ್ಮ ಜೊತೆಯಲ್ಲಿ ಮಾತನಾಡುತ್ತಿರುವ ವ್ಯಕ್ತಿಗಳಲ್ಲೇ ಸೋಂಕು ಅಡಗಿದೆ ಎಂಬುದು ಗ್ರಾಮೀಣರಿಗೆ ತಿಳಿಯುತ್ತಲೇ ಇಲ್ಲ. ಕೆಲವೇ ದಿನಗಳಲ್ಲಿ ಒಬ್ಬರಿಗೆ ಜ್ವರ ಕಾಣಿಸಿಕೊಂಡು ಆನಂತರ ಇತರರಿಗೂ ಹರಡುತ್ತಿರುವುದು ಹೆಚ್ಚಾಗುತ್ತಿದೆ.

     ಸೋಂಕು ಹೆಚ್ಚಳದ ನಡುವೆ ಸಾವು ನೋವುಗಳು ಹೆಚ್ಚುತ್ತಿರುವುದರಿಂದ ಈಗಷ್ಟೇ ಗ್ರಾಮೀಣರು ಭಯಕ್ಕೆ ಸಿಲುಕಿರುವುದು ಕಂಡು ಬರುತ್ತಿದೆ. ಆರಂಭದಲ್ಲಿಯೇ ಎಚ್ಚರಿಕೆ ವಹಿಸಿ ಗುಂಪುಗೂಡದೆ, ಹೋಬಳಿ ಮತ್ತು ತಾಲ್ಲೂಕು ಕೇಂದ್ರಗಳಿಂದ ದೂರವೆ ಉಳಿದಿದ್ದರೆ ಪರಿಸ್ಥಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ. 

ಲಸಿಕೆ ಪಡೆಯಲು ಹಿಂದೇಟು :

      ಲಸಿಕಾ ಅಭಿಯಾನ ಆರಂಭವಾದಾಗ ಗ್ರಾಮೀಣ ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಕೆಲವು ಗ್ರಾಮಗಳಿಗೆ ಲಸಿಕಾ ತಂಡ ತೆರಳಿದಾಗ ಊರನ್ನೇ ಬಿಟ್ಟು ಹೋಗಿರುವ ಉದಾಹರಣೆಗಳಿವೆ. ಶೇಕಡಾವಾರು ಲಸಿಕೆ ಪಡೆದಿರುವ ಪ್ರಮಾಣ ಗಮನಿಸಿದಾಗ ಗ್ರಾಮೀಣರ ಸಂಖ್ಯೆ ತುಂಬಾ ಕಡಿಮೆ ಇದೆ. ಲಸಿಕೆಯ ಮಹತ್ವದ ಬಗ್ಗೆ ತಿಳಿಯುವ ವೇಳೆಗೆ ಲಸಿಕೆ ಕೊರತೆ ಉಂಟಾಗಿರುವುದು, ನಗರ ವಾಸಿಗಳು ಇದರ ಪ್ರಯೋಜನ ಪಡೆಯುತ್ತಿರುವುದು ವಾಸ್ತವ. ಗ್ರಾಮೀಣ ಜನತೆ ಲಸಿಕೆ ಪಡೆಯುವ ಆಸಕ್ತಿ ಮೂಡುವ ವೇಳೆಗಾಗಲೇ ಲಸಿಕೆಯೇ ಇಲ್ಲದಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಕೋವಿಡ್ ನಿಯಮಗಳು ಲೆಕ್ಕಕ್ಕಿಲ್ಲ :

      ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು, ಸ್ವಚ್ಛತೆ ಕಾಪಾಡುವ ಪ್ರಮುಖ ಮೂರು ಅಂಶಗಳಿಂದ ಕೊರೊನಾ ತಡೆಗಟ್ಟಬಹುದು ಎಂದು ಸರ್ಕಾರ, ತಜ್ಞರು ಸೇರಿದಂತೆ ಎಲ್ಲರೂ ಸಾರಿ ಸಾರಿ ಹೇಳುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಮೂರೂ ಪಾಲನೆಯಾಗುತ್ತಿಲ್ಲ. ಹಳ್ಳಿಗಳಲ್ಲಿ ಮಾಸ್ಕ್ ಧರಿಸುತ್ತಿಲ್ಲ. ಅಂತರ ಕಾಪಾಡುವ ಗೋಜಿಗೂ ಹೋಗುತ್ತಿಲ್ಲ. ಅರಳಿಕಟ್ಟೆಯ ಕೆಳಗೆ, ದೇವಸ್ಥಾನದ ಬಳಿ, ಟೀ ಅಂಗಡಿಗಳ ಹತ್ತಿರ ಗುಂಪು ಗುಂಪಾಗಿ ಸೇರುವ ಪ್ರವೃತ್ತಿ ಈಗಲೂ ಮುಂದುವರಿದಿದೆ.

      ತೋರಿಕೆಗೋ ಇಲ್ಲವೆ ಪೊಲೀಸರು ದಂಡ ವಿಧಿಸುತ್ತಾರೆಂಬ ಭಯದಿಂದಲೋ ಕಾಟಾಚಾರಕ್ಕೆಂಬಂತೆ ಮಾಸ್ಕ್ ಧರಿಸಿ ಹೊರಗೆ ಬರುತ್ತಿದ್ದು, ಈ ಮಾಸ್ಕ್‍ಗಳನ್ನು ತೊಳೆದು ಅದೆಷ್ಟು ದಿನಗಳಾಗಿವೆಯೋ..! ಕೊಳಕು ಮಾಸ್ಕನ್ನೇ ಧರಿಸಿ, ಅದರಲ್ಲೂ ಮೂಗಿನಿಂದ ಕೆಳಕ್ಕೆ ಹಾಕಿಕೊಳ್ಳುತ್ತಾ ಓಡಾಡುವ ಮಂದಿಯೇ ಹೆಚ್ಚಿನದಾಗಿ ಕಂಡುಬರುತ್ತಿದ್ದಾರೆ. ಯಾರಾದರು ಎಚ್ಚರಿಸಿದಾಗ ಮಾತ್ರ ಮಾಸ್ಕ್ ಸರಿಪಡಿಸಿಕೊಳ್ಳುತ್ತಾರೆ. ಇನ್ನು ಸ್ವಚ್ಛತೆಯ ವಿಷಯದಲ್ಲಂತೂ ಕೇಳುವುದೇ ಬೇಡ.

ಜ್ವರ, ಕೆಮ್ಮು ಬಂದರೆ ನಿರ್ಲಕ್ಷ್ಯ :

      ಕೆಮ್ಮು, ನೆಗಡಿ, ಜ್ವರ ಇವೆಲ್ಲ ಗ್ರಾಮೀಣರಿಗೆ ಸಾಮಾನ್ಯ ಕಾಯಿಲೆಗಳು. ಬೇವಿನ ಚಕ್ಕೆ, ತುಳಸಿ ರಸ, ಇತ್ಯಾದಿ ಕಷಾಯದ ಮೂಲಕವೇ ಗುಣಪಡಿಸಿಕೊಳ್ಳುತ್ತಿದ್ದ ಪರಂಪರೆ ಗ್ರಾಮೀಣರಿಗೆ ರೂಢಿಗತ. ಆದರೆ ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಇತ್ತೀಚಿನ ವರ್ಷಗಳಲ್ಲಿ ಜ್ವರ ಹೆಚ್ಚು ಕಾಣಿಸಿಕೊಂಡರೆ ಆಸ್ಪತ್ರೆಗಳಿಗೆ ಹೋಗುತ್ತಿದ್ದರು. ಈಗ ಕೋವಿಡ್ ಭಯದಿಂದ ಆಸ್ಪತ್ರೆಯತ್ತ ಸುಳಿಯಲು ಹೆದರುತ್ತಿದ್ದಾರೆ. ಸ್ವಯಂ ವೈದ್ಯ ಪ್ರವೃತ್ತಿಗೆ ಮುಂದಾಗುತ್ತಿದ್ದಾರೆ. ಕಾಯಿಲೆ ಉಲ್ಬಣಿಸಿದಾಗ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದು, ಕೋವಿಡ್ ಪಾಸಿಟಿವ್ ವರದಿಯಿಂದಾಗಿ ದಾಖಲಾಗಲು ಮುಂದಾಗುವ, ಬೆಡ್‍ಗಾಗಿ ಪರದಾಡುವ ಪರಿಸ್ಥಿತಿಗಳು ಸಾಮಾನ್ಯವಾಗುತ್ತಿವೆ. ಈ ವೇಳೆಗಾಗಲೇ ಪಾಸಿಟಿವ್ ವ್ಯಕ್ತಿ ತನ್ನ ಹತ್ತಿರದ ಹಲವಾರು ಜನರಿಗೆ ಸೋಂಕು ಅಂಟಿಸಿರುತ್ತಾನೆ. ಪ್ರಮುಖವಾಗಿ ಇತರರಿಗೆ ಹರಡಲು ಇದೂ ಒಂದು ಕಾರಣ.

      ಇನ್ನು ಕೆಲವರು ಮನೆಯಲ್ಲಿಯೇ ಹೋಂ ಕ್ವಾರಂಟೈನ್‍ಗೆ ಒಳಗಾಗುತ್ತಿದ್ದಾರೆ. ಈ ಪ್ರಕ್ರಿಯೆ ಮಾರ್ಗಸೂಚಿಗಳ ಅರಿವಲ್ಲ. ಯಾರೋ ಹೇಳಿದ್ದನ್ನು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಯನ್ನು ಆಧರಿಸಿ ತಮಗೆ ತಾವೇ ಕ್ವಾರಂಟೈನ್‍ಗೆ ಒಳಗಾಗಲು ಪ್ರಯತ್ನಿಸುತ್ತಾರೆ. ಆದರೆ ಅದು ಅಷ್ಟು ಸುಲಭವಲ್ಲ. ಪ್ರತ್ಯೇಕವಾಗಿ ತೋಟದ ಮನೆಯಲ್ಲಿ ಇರುವವರು, ಮನೆಗಳಲ್ಲಿ ಪ್ರತ್ಯೇಕ ಕೊಠಡಿ ಇರುವವರಿಗೆ ಇದು ಸಾಧ್ಯ. ಆದರೆ ಬಹಳಷ್ಟು ಜನ ಕುಟುಂಬದ ಇತರೆ ಸದಸ್ಯರೊಂದಿಗೆ ಇರುವಾಗ ಹೋಂ ಕ್ವಾರಂಟೈನ್ ಕಷ್ಟಸಾಧ್ಯ.
ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಜನ ಸೋಂಕು ಇರುವುದು ಅರಿವಾದರೂ ಗುಟ್ಟು ರಟ್ಟು ಮಾಡುವುದಿಲ್ಲ. ಯಾರಿಗೂ ಗೊತ್ತಾಗದಿರಲಿ ಎಂದು ಲಕ್ಷಣಗಳ ಬಗ್ಗೆ ಹೇಳಿಕೊಳ್ಳುವುದಿಲ್ಲ. ಹೀಗೆ ರೋಗವನ್ನು ಮುಚ್ಚಿಟ್ಟುಕೊಳ್ಳುವುದರಿಂದಲೇ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ.

ಅಧಿಕಾರಿಗಳ ನಿರ್ಲಕ್ಷ್ಯ :

     ನಗರ ಪ್ರದೇಶಗಳಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಾಗುತ್ತಿಲ್ಲ. ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ನಿಗಾ ವಹಿಸಿದ್ದರೆ ಪರಿಸ್ಥಿತಿ ಇಷ್ಟು ಕೈಮೀರುತ್ತಿರಲಿಲ್ಲ. ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುವಂತಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕೈಗೊಂಡ ನಿರ್ಬಂಧಗಳೇನು ಎಂಬುದು ತಿಳಿಯುತ್ತಲೇ ಇಲ್ಲ. 

ಆರೋಗ್ಯದ ಬಗ್ಗೆ ನಿರ್ಲಕ್ಷ್ಯ:

      ನಗರಗಳಿಗಿಂತ ಹೆಚ್ಚಾಗಿ ಗ್ರಾಮೀಣ ವಾಸಿಗಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಕುಡಿಯುವ ನೀರಿನ ಅನೈರ್ಮಲ್ಯ ಸೇರಿದಂತೆ ಹಲವು ವಿಷಯಗಳು ಇದಕ್ಕೆ ಪೂರಕವಾಗುತ್ತಿವೆ. ಈ ಕಾರಣಕ್ಕಾಗಿಯೇ ಹಳ್ಳಿಗಳಲ್ಲಿ ಕೆಲವೊಮ್ಮೆ ಮಲೇರಿಯಾ, ಚಿಕುನ್ ಗನ್ಯಾ, ಡೆಂಗ್ಯು ಮತ್ತಿತರ ಕಾಯಿಲೆಗಳು ಸಾಂಕ್ರಾಮಿಕವಾಗಿ ಹರಡಿಬಿಡುತ್ತವೆ. ಈಗ ಬೇಸಿಗೆಯಿಂದ ಮಳೆಗಾಲಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಹಲವು ರೋಗಗಳು ವಕ್ಕರಿಸುವ ಸಾಧ್ಯತೆಗಳಿವೆ. ಈಗಾಗಲೇ ಹಲವು ಗ್ರಾಮೀಣರು ರೋಗರುಜಿನಗಳಿಗೆ ಒಳಗಾಗಿದ್ದಾರೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರ ಆರೋಗ್ಯ ಕಾಪಾಡುವ ಕಾರ್ಯಕ್ರಮಗಳತ್ತ ಗಮನ ಹರಿಸುವ ಅನಿವಾರ್ಯತೆ ಇದೆ. ಕೆಲವು ಇಲಾಖೆಗಳು ದಿನವಿಡಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಕೆಲವು ಇಲಾಖೆಗಳ ಅಧಿಕಾರಿ ನೌಕರರು ಮನೆಯಲ್ಲಿ ಕುಳಿತಿದ್ದಾರೆ. ಇಂತಹವರನ್ನು ಬಳಸಿಕೊಂಡು ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ಕಡೆಗೆ ಆಡಳಿತಗಳು ಹೆಚ್ಚು ಗಮನ ಹರಿಸಬೇಕು.

ಮಾಂಸ ಖರೀದಿ… ವಿವಾಹಗಳು :

      ಕೊರೊನಾ ನಿಯಂತ್ರಣಕ್ಕೆಂದೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದರ ಮುಖ್ಯ ಉದ್ದೇಶ ಜನರ ಗುಂಪುಗೂಡುವಿಕೆಯನ್ನು ನಿಯಂತ್ರಿಸುವುದು. ವೈರಾಣು ಸುಲಭವಾಗಿ ಬಾಯಿ ಹಾಗೂ ಮೂಗಿನ ಮೂಲಕ ಶ್ವಾಸಕೋಶ ಸೇರುವುದರಿಂದ ಪರಸ್ಪರ ದೈಹಿಕ ಅಂತರ ಕಾಪಾಡುವುದೇ ಈಗಿನ ಮುಖ್ಯ ಉದ್ದೇಶ. ಆದರೆ ಇವೆಲ್ಲವನ್ನೂ ಗಾಳಿಗೆ ತೂರಲಾಗುತ್ತಿದೆ.

ಜಾತ್ರೆ, ಹಬ್ಬ ಹರಿದಿನಗಳು ಸ್ಥಗಿತಗೊಂಡಿರಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಹ ಕೆಲವು ಹಬ್ಬ, ಹಬ್ಬದೂಟ ಹಿಂದಿನಂತೆಯೇ ಮುಂದುವರೆದಿದೆ. ಸಾಮೂಹಿಕವಾಗಿ ಹಬ್ಬದ ಆಚರಣೆಗಳು ಇಲ್ಲದೆ ಹೋದರೂ ಮನೆ ಮನೆಗಳಲ್ಲಿ ಆಚರಣೆ ನಡೆದೆ ಇದೆ.
ಕೆಲವು ಮನೆಗಳಲ್ಲಿ ಹಬ್ಬದೂಟ ಅಥವಾ ವಿಶೇಷ ಅಡುಗೆ ತಯಾರಿಸಿದಾಗ ಇತರೆ ಬಂಧುಗಳನ್ನು, ಪಕ್ಕದ ಮನೆಯವರನ್ನು ಆಹ್ವಾನಿಸುವುದು ರೂಢಿ. ಈಗಾಗಲೇ ಬೆಂಗಳೂರಿನಿಂದ ಬಂದು ಊರು ಸೇರಿಕೊಂಡಿರುವ ಜನರಿಗೆ ಒಂದೇ ತರಹದ ಊಟ ಹಿಡಿಸುತ್ತಿಲ್ಲ. ವಿಶೇಷ ಅಡುಗೆಗಳ ಕಡೆಗೆ ಹೆಚ್ಚು ಆಸಕ್ತಿ. ಹೀಗಾಗಿ ಕರೆದವರ ಮನೆಗೆ ಹೋಗುವ, ಗುಂಪು ಗುಂಪಾಗಿ ಊಟ ಮಾಡುವ ಪ್ರವೃತ್ತಿಗಳಿಂದ ಸೋಂಕು ಬಹುಬೇಗನೆ ಹರಡುತ್ತಿದೆ.

ನಿಲ್ಲದ ಮಾಂಸ ಖರೀದಿ :

      ನಗರ ಪ್ರದೇಶಗಳಂತೆಯೇ ಗ್ರಾಮೀಣ ಜನರು ಮಾಂಸಕ್ಕಾಗಿ ಮುಗಿ ಬೀಳುತ್ತಿರುವುದು ನಿಂತಿಲ್ಲ. ಹೋಬಳಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಚಿಕನ್ ಸೆಂಟರ್, ಮಾಂಸ ಮಾರಾಟದ ಅಂಗಡಿಗಳಿಗೆ ಬೆಳ್ಳಂಬೆಳಿಗ್ಗೆ ದೌಡಾಯಿಸುತ್ತಿದ್ದಾರೆ. 10 ಗಂಟೆಯ ಒಳಗೆ ಅಲ್ಲಿಂದ ಹೊರಬರಬೇಕು. ಅದಕ್ಕಾಗಿ ಎಲ್ಲರೂ ಅಂಗಡಿಗಳ ಮುಂದೆ ಮುಗಿಬೀಳುತ್ತಿದ್ದಾರೆ. ಮಾಂಸಕ್ಕಾಗಿ ಹೀಗೆ ಗುಂಪುಗೂಡುವುದನ್ನು ತಡೆಯಲು ಸಾಧ್ಯವಾಗಿಲ್ಲ.

ಕೊರೊನಾ ಹಬ್ಬ :

      ಈ ಹಿಂದೆ ಪ್ಲೇಗ್‍ನಂತಹ ಮಹಾಮಾರಿ ರೋಗಗಳು ಬಂದಾಗ ರೋಗ ವಾಸಿಯಾಗಲು ಅದರ ಹೆಸರಿನಲ್ಲೇ ಹಬ್ಬ ಮಾಡುತ್ತಿದ್ದರು. ಈಗಲೂ ಜಿಲ್ಲೆಯ ಕೆಲವು ಕಡೆ ಕೊರೊನಾ ಅಜ್ಜಿ ಹಬ್ಬ ಆಚರಿಸಿರುವ ವರದಿಗಳು ಬಂದಿವೆ. ವೈಜ್ಞಾನಿಕ ಕಾಲಘಟ್ಟದಲ್ಲಿ ಇಂದಿಗೂ ಜನತೆ ಮೂಢನಂಬಿಕೆಗಳ ಮೊರೆ ಹೋಗುತ್ತಿದ್ದಾರೆ. ಕೊರೊನಾ ಅಜ್ಜಿ ಹಬ್ಬವನ್ನು ಆಚರಿಸುವ ಮೂಲಕ ಗುಂಪುಗೂಡುವುದು ಹೆಚ್ಚಿದರೆ ಆ ಊರಿಗೆ ಅಪಾಯ.

ಗ್ರಾಮ ಪಂಚಾಯತಿಗಳ ನಿರ್ಲಕ್ಷ್ಯ :

      ತುಮಕೂರು ಜಿಲ್ಲೆಯಲ್ಲಿ 121 ಗ್ರಾಮ ಪಂಚಾಯತಿಗಳು ಕೊರೊನಾ ಹಾಟ್‍ಸ್ಪಾಟ್‍ಗಳಾಗಿ ಗುರುತಿಸಲ್ಪಟ್ಟಿವೆ. ಇನ್ನು ಕೆಲವೇ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಪರಿಸ್ಥಿತಿ ಹೀಗಿದ್ದರೂ ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ, ಮಾರ್ಗಸೂಚಿ ಹಾಗೂ ನಿರ್ಬಂಧಗಳನ್ನು ಪಾಲಿಸುವಂತೆ ಕ್ರಮ ಕೈಗೊಳ್ಳುವ ಪ್ರಯತ್ನಗಳು ತಾಲ್ಲೂಕು ಆಡಳಿತ, ಹೋಬಳಿ ಮತ್ತು ಗ್ರಾಮ ಪಂಚಾಯತಿಗಳಿಂದ ಆಗಿಲ್ಲದೆ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗ್ರಾಮ ಪಂಚಾಯತಿಗಳು ಕೊರೊನಾ ನಿರ್ಬಂಧಕ್ಕೆ ಹೆಚ್ಚು ಗಮನ ಹರಿಸಬೇಕಿತ್ತು. ಆದರೆ ಹಣವಿಲ್ಲ ಎಂಬ ಸಬೂಬು ಹೇಳಿ ಪಂಚಾಯತಿಗಳು ಕೈಚೆಲ್ಲಿ ಕುಳಿತಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕೊರೊನಾ ಕಾರಣಕ್ಕೆ ಬೇರೆಲ್ಲ ಕೆಲಸ ಕಾರ್ಯಗಳು ಸ್ಥಗಿತಗೊಂಡಿರುವಾಗ ಹೋಬಳಿ ವ್ಯಾಪ್ತಿಯಲ್ಲಿ ಪಂಚಾಯತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೊರೊನಾ ನಿಯಂತ್ರಣಕ್ಕೆ ಕಾಳಜಿ ವಹಿಸಬಹುದಿತ್ತು. ಸೀಮಿತವಾಗಿ ಸಭೆಗಳನ್ನು ನಡೆಸಿ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಬಹುದಿತ್ತು.
 

ವರದಿ ವಿಳಂಬದಿಂದ ಅನಾಹುತ :

      ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡುಬಂದಾಗ ಗ್ರಾಮೀಣ ಪ್ರದೇಶಗಳಲ್ಲಿ ರೂಢಿಗತವಾಗಿ ಇರುವ ನಿರ್ಲಕ್ಷ್ಯವೇ ಈಗಲೂ ಮನೆಮಾಡಿದೆ. ಸಾಂಪ್ರದಾಯಿಕ ಕಷಾಯಗಳ ಮೊರೆ ಹೋಗುವವರ ಸಂಖ್ಯೆ ಈಗ ಮತ್ತಷ್ಟು ಹೆಚ್ಚಿದೆ. ಆದರೆ ಸೋಂಕು ಲಕ್ಷಣ ಮಿತಿಮೀರಿದಾಗ ಮಾತ್ರವೇ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಕೋವಿಡ್ ತಪಾಸಣೆ ಮಾಡಿಸಿದರೆ ಅದರ ವರದಿ ಬರುವುದು ವಾರವಾದರೂ ಆಗಬಹುದು. ಈ ವೇಳೆಗಾಗಲೇ ಸೋಂಕಿತ ವ್ಯಕ್ತಿ ತನ್ನ ಸುತ್ತಮುತ್ತಲ ವ್ಯಕ್ತಿಗಳಿಗೆಲ್ಲಾ ಹರಡಿರುತ್ತಾರೆ. ಸೋಂಕು ಮಿತಿಮೀರಿದಾಗ ಆತನನ್ನು ಉಳಿಸಿಕೊಳ್ಳುವುದು ಕಷ್ಟ, ಜೊತೆಗೆ ತಾನು ಸಾಯುವ ವೇಳೆಗೆ ಹತ್ತಾರು ಜನರಿಗೆ ರೋಗ ಅಂಟಿಸಿ ಹೋಗಿರುತ್ತಾನೆ. ಇದೂ ಎಲ್ಲ ಕಡೆ ಕಂಡುಬರುತ್ತಿರುವ ವಾಸ್ತವ ಚಿತ್ರಣ.

ಕೋವಿಡ್‍ ಬಗ್ಗೆ ಅರಿವು ಮೂಡಿಸಲಿ :

      ಕೊರೊನಾ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ, ಕೈಕಾಲು ನೋವು ಈ ರೀತಿಯ ಲಕ್ಷಣಗಳೇನಾದರೂ ಕಂಡು ಬಂದರೆ ನಿರ್ಲಕ್ಷಿಸದೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಪರೀಕ್ಷಿಸಿಕೊಳ್ಳುವುದು. ಹಾಗೊಂದು ವೇಳೆ ಕೋವಿಡ್ ಪಾಸಿಟಿವ್ ಬಂದರೆ ಎದೆಗುಂದದೆ ಧೈರ್ಯದಿಂದ ಎದುರಿಸಬೇಕು. ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ಈ ಬಗ್ಗೆ ಸರಿಯಾದ ಅರಿವಿಲ್ಲದೆ ಇರುವುದರಿಂದ ರೋಗ ಉಲ್ಬಣಿಸುತ್ತಿದ್ದು, ತಾ.ಪಂ. ಹಾಗೂ ಗ್ರಾಪಂ ಅಧಿಕಾರಿಗಳು ಪ್ರತಿ ಗ್ರಾಮದಲ್ಲೂ ಕೋವಿಡ್ ಸಭೆಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಇಲ್ಲದೆ ಹೋದರೆ ಪ್ರತಿ ಗ್ರಾಮಗಳಲ್ಲೂ ಕೋವಿಡ್ ರೋಗಿಗಳ ಸಂಖ್ಯೆ ಉಲ್ಬಣಗೊಳ್ಳುವುದಲ್ಲದೆ, ಸಾವುಗಳು ಕೂಡಾ ಸಂಭವಿಸಲಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚರ ವಹಿಸುವ ಅಗತ್ಯವಿದೆ.

ಜರಿಯುವುದು ಬೇಡ :

      ಕೋವಿಡ್ ರೋಗಕ್ಕೆ ತುತ್ತಾದವರನ್ನು ಜರಿಯದೆ ಅವರ ಬಗ್ಗೆ ಕರುಣೆ ತೋರಿಸಿ. ಯಾವುದೇ ಕಾರಣಕ್ಕೂ ಅವರನ್ನು ಹೀಯಾಳಿಸಬೇಡಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ. ರೋಗಕ್ಕೆ ತುತ್ತಾದವರನ್ನು ಈ ರೀತಿ ಜರಿದರೆ ಅವರುಗಳ ಮನಸ್ಸು ಕೆಡುವುದಲ್ಲದೆ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಆದ್ದರಿಂದ ಯಾರೊಬ್ಬರೂ ಕೋವಿಡ್ ರೋಗಿಗಳ ಬಗ್ಗೆ ಅಸಡ್ಡೆ ತೋರದೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರೆ ಅವರಲ್ಲಿ ಚೈತನ್ಯ ಮೂಡುವುದಲ್ಲದೆ, ಆರೋಗ್ಯವೂ ಸುಧಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap