ತುಮಕೂರು
ತುಮಕೂರು ಲೋಕಸಭಾ ಚುನಾವಣೆ-2019 ಚುನಾವಣಾ ಮತದಾನವು ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದ್ದು, ಶೇ. 77.03 ರಷ್ಟು ಮತದಾನವಾಗಿದೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 78.12, ತಿಪಟೂರು ಶೇ.80.27, ತುರುವೇಕೆರೆ ಶೇ.80, ತುಮಕೂರು ನಗರ ಶೇ.65.42, ತುಮಕೂರು ಗ್ರಾಮಾಂತರ ಶೇ.81.87, ಕೊರಟಗೆರೆ ಶೇ.79.67, ಗುಬ್ಬಿ ಶೇ.80.29 ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.74.38 ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿರುವ 2684 ಮತಕೇಂದ್ರಗಳಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಚುನಾವಣಾ ಮತದಾನವು ನಿಧಾನಗತಿಯಲ್ಲಿ ಪ್ರಾರಂಭವಾಗಿ ತದನಂತರ ಮಧ್ಯಾಹ್ನ 12 ಗಂಟೆಯ ನಂತರ ಬಿರುಸಿನಿಂದ ನಡೆಯಿತು. ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ನಡೆಯಿತು.
ಬೆಳಿಗ್ಗೆ ಮತದಾನ ಆರಂಭವಾದ ಸಮಯದಲ್ಲಿ ಜಿಲ್ಲೆಯ ಅಲ್ಲಲ್ಲಿ ಇವಿಎಂ ಮತಯಂತ್ರಗಳಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿತ್ತು. ಇದಕ್ಕೆ ತಕ್ಷಣವೇ ಬಿಇಎಲ್ ಇಂಜಿನಿಯರ್‍ಗಳ ತಂಡ ಧಾವಿಸಿ ಸಮಸ್ಯೆಯನ್ನು ಪರಿಹರಿಸಿ, ಸುಗಮವಾಗಿ ಮತದಾನ ನಡೆಯಲು ಅವಕಾಶ ಮಾಡಿಕೊಟ್ಟಿತು.
ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಪ್ರತಿ ಮತಗಟ್ಟೆಗಳಲ್ಲಿ ಮಹಿಳಾ ಮತ್ತು ಪುರುಷ ಮತದಾರರು ಪ್ರತ್ಯೇಕವಾದ ಸಾಲುಗಳಲ್ಲಿ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿರುವ ದೃಶ್ಯ ಕಂಡು ಬಂತು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಓಬಳಾಪುರ, ಜಟ್ಟಿ ಅಗ್ರಹಾರ, ಹುಲಿಕುಂಟೆ, ಪುರವರ, ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಡಿಗೇನಹಳ್ಳಿ, ಮಧುಗಿರಿ ಪಟ್ಟಣದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು, ಶಿರಾ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಗ್ಗೆರೆ, ಕೊಟ್ಟನಹಳ್ಳಿ, ದೊಡ್ಡನಾರವಂಗಲ, ಗೌಡಿಹಳ್ಳಿ, ಬೆಳ್ಳಾವಿ; ಗುಬ್ಬಿ ವಿಧಾನಸಭಾ ಕ್ಷೇತ್ರದ ಗುಬ್ಬಿ, ಚೇಳೂರು, ಕೊಡಿಯಾಲ, ಕೆ.ಜಿ. ಟೆಂಪಲ್, ಸಿ.ಎಸ್.ಪುರ, ಗುಬ್ಬಿ ಪಟ್ಟಣದ ಸರ್ಕಾರಿ ಶಾಲೆಯ ಮತಗಟ್ಟೆ ಸೇರಿದಂತೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕ ಮತದಾರರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಿ, ಸ್ವಯಂ ಸೇವಕರ ಮೂಲಕ ಸುಗಮ ಮತದಾನಕ್ಕೆ ಜಿಲ್ಲಾಡಳಿತ ಅನುಕೂಲ ಕಲ್ಪಿಸಿದ್ದು, ಮತದಾರರಿಂದ ಪ್ರಶಂಸೆಗೆ ಒಳಗಾಯಿತು.
ಗಮನ ಸೆಳೆದ ಸಖಿ ಮತಗಟ್ಟೆ:-
ಕೇವಲ ಮಹಿಳಾ ಸಿಬ್ಬಂದಿಗಳೇ ನಿರ್ವಹಿಸುವ ಬಲೂನ್‍ಗಳಿಂದ ಶೃಂಗಾರಗೊಂಡ 22 “ಸಖಿ” ಮತಗಟ್ಟೆಗಳು ಹೆಚ್ಚು ಆಕರ್ಷಣೀಯವಾಗಿ ಮತದಾರರ ಗಮನ ಸೆಳೆದವು. ಅಲ್ಲದೆ ಸಖಿ ಮತಗಟ್ಟೆಯ ಮುಂಭಾಗದಲ್ಲಿದ್ದ ನೀರು ಮತ್ತು ಅರಣ್ಯ ಉಳಿಸಿ ಸಂದೇಶವುಳ್ಳ ಕಮಾನುಗಳು ಮತದಾರರ ಗಮನವನ್ನು ತನ್ನೆಡೆ ಸೆಳೆಯುತ್ತಿದ್ದವು.
ಚುನಾವಣಾ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಭದ್ರತೆಯನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿತ್ತು. ಜಿಲ್ಲೆಯಲ್ಲಿ 536 ಸೂಕ್ಷ್ಮ ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಗೋವಾ ರಾಜ್ಯದ 2 ಅರ್ಮಡ್ ಪೊಲೀಸ್ ಸಿಬ್ಬಂದಿ ಹಾಗೂ ರಾಜ್ಯದ ಪೊಲೀಸ್ ಸಿಬ್ಬಂದಿಗಳು ಭದ್ರತೆಯನ್ನು ಒದಗಿಸಿದ್ದರು. ಒಟ್ಟಾರೆ ಜಿಲ್ಲೆಯಲ್ಲಿ 4100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಶಾಂತಿಯುತ ಮತದಾನಕ್ಕೆ ರಕ್ಷಣೆ ಒದಗಿಸಿದ್ದರು.
ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 803006 ಪುರುಷ, 804874 ಮಹಿಳೆಯರು, ಇತರೆ 120 ಒಟ್ಟು 1608000 ಮತದಾರರಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಜಿಲ್ಲೆಯ ಶಿರಾ ಹಾಗೂ ಪಾವಗಡ ವಿಧಾನ ಸಭಾ ವ್ಯಾಪ್ತಿಯಲ್ಲಿ 210651 ಪುರುಷರು, 200199 ಮಹಿಳೆಯರು, 17 ಇತರೆ ಮತದಾರರು ಸೇರಿದಂತೆ ಒಟ್ಟು 410867 ಮತದಾರರಿದ್ದರು. ಅದೇ ರೀತಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 96670 ಪುರುಷರು, 94228 ಮಹಿಳೆಯರು, ಇತರೆ 15 ಮಂದಿ ಸೇರಿದಂತೆ ಒಟ್ಟು 190913 ಮತದಾರರಿದ್ದರು.
ಇಂದು ಚುನಾವಣಾ ಮತದಾನ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ. ಮುಂಬರುವ ಮೇ 23ರಂದು ತುಮಕೂರು ನಗರದ ಬಿ.ಹೆಚ್. ಮುಖ್ಯರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.