ತುಮಕೂರು :
18 ರಿಂದ 44 ವರ್ಷದೊಳಗಿನವರಿಗೆ ಮೇ 1 ರಿಂದ ಲಸಿಕೆ ಹಾಕುವುದಾಗಿ ಘೋಷಿಸಿ, ನಂತರದಲ್ಲಿ ವ್ಯಾಕ್ಸಿನ್ ಲಭ್ಯವಿಲ್ಲದೆ ಸ್ಥಗಿತಗೊಳಿಸಿ ಸರಕಾರ ಟೀಕೆಗೆ ಗುರಿಯಾದ ಘಟನೆ ಇನ್ನೂ ಮರೆಯಾಗುವ ಮುನ್ನವೇ ಸರಕಾರ ಮತ್ತೊಮ್ಮೆ ಇಂದಿನಿಂದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕುವುದಾಗಿ ಘೋಷಿಸಿದೆ. ಆದರೆ ಈ ಬಾರಿಯೂ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗದೆ ಅಭಿಯಾನ ಮತ್ತೆ ಎಲ್ಲಿ ಕುಂಠಿತಗೊಳ್ಳುವುದೋ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲೂ, ಅಧಿಕಾರಿಗಳಲ್ಲೂ ಮೂಡಿದೆ.
ಇದೇ ಕಾರಣಕ್ಕೆ ತುಮಕೂರು ಜಿಲ್ಲಾಡಳಿತ ಶುಕ್ರವಾರ ಕೋವಿಡ್ ಮುಂಚೂಣಿ ಕಾರ್ಯಕರ್ತರೆಂದು ಸರಕಾರ ಗುರುತಿಸಿರುವ ಸಂಬಂಧಿಸಿದ ಇಲಾಖಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಲಸಿಕಾ ಅಭಿಯಾನ ಮತ್ತೊಮ್ಮೆ ಟೀಕೆಗೆ ಗುರಿಯಾಗದಂತೆ ಸರಕಾರದ ನಿರ್ದೇಶನದಂತೆ ಎಚ್ಚರಿಕೆಯ ನಡೆಗೆ ಮುಂದಾಗಿದೆ.
ಪ್ರಮಾಣೀಕರಿಸುವುದು ಕಡ್ಡಾಯ:
ಕೋವಿಡ್ ನಿಗ್ರಹಕ್ಕೆ ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಇಲಾಖೆ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಗಳಾಗಿ ನಿಗದಿಪಡಿಸಿದ ದಿನಾಂಕಗಳಂದು ತಮ್ಮ ವ್ಯಾಪ್ತಿಯ ಕಾರ್ಯಕರ್ತರನ್ನು ಗುರುತಿಸಿ ಚಿಟಿಟಿexuಡಿe-3 ಅನುಬಂಧ ಪತ್ರದಲ್ಲಿ ಪ್ರಮಾಣೀಕರಿಸಿ ಅವರಿಗೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ವೈ.ಎಸ್.ಪಾಟೀಲ್ ಅವರು ಸೂಚಿಸಿ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲು ದಿನಾಂಕ ನಿಗದಿ ಮಾಡಿದ್ದಾರೆ.
ವಿಕಲಾಂಗರು, ಖೈದಿಗಳು,ಸ್ಮಶಾನ ಸಿಬ್ಬಂದಿಗೆ ಇಂದು: ಕೊರೋನಾ ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಲಾದ ಅಂಗವೈಕಲ್ಯ ಹೊಂದಿರುವ(ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬ ಆರೈಕೆದಾರರು, ಖೈದಿಗಳು, ಚಿತಾಗಾರ/ಸ್ಮಶಾನ/ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರಿಗೆ ಮೇ 22ರಂದು ಕೋವಿಡ್ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಲಸಿಕಾ ಲಭ್ಯತೆ ನೋಡಿಕೊಂಡು ಉಳಿದವರಿಗೆ:
ಮೇ 23, 24, 25ರಂದು ಲಸಿಕೆ ಲಭ್ಯತೆ ನೋಡಿಕೊಂಡು ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು, ಪ್ರಸ್ತುತ ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆಯ ಸಿಬ್ಬಂದಿ, ಬೀದಿ ಬದಿ ವ್ಯಾಪಾರ ಮಾಡುವವರು, ಭದ್ರತೆ ಮತ್ತು ಕಚೇರಿಗಳ ಹೌಸ್ ಕೀಪಿಂಗ್ ಸಿಬ್ಬಂದಿಗಳು, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರ / ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವವರು ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು (ಪೆಟ್ರೋಲ್ ಬಂಕ್, ಕರ್ಮಚಾರಿ ಒಳಗೊಂಡಂತೆ), ಔಷಧಿ ತಯಾರಿಸುವ ಕಂಪನಿಯ ಸಿಬ್ಬಂದಿಗಳು, ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳು, ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು (ಉದಾಹರಣೆ: ವೃದ್ಧಾಶ್ರಮ ವಾಸಿಗಳು, ನಿರ್ಗತಿಕರು), ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.)ಕೆಲಸಗಾರರಿಗೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಲಸಿಕೆ ಹಾಕಬೇಕೆಂದು ಡಿಸಿ ಸೂಚಿಸಿದ್ದಾರೆ.
ನಂತರ ಆದ್ಯತಾ ಗುಂಪುಗಳಿಗೆ:
ಮುಂಚೂಣಿ ಕಾರ್ಯಕರ್ತರ ಬಳಿಕ ಆದ್ಯತೆ ಗುಂಪುಗಳಾದ ಕಟ್ಟಡ ಕಾರ್ಮಿಕರು, ಟೆಲಕಾಮ್ ಮತ್ತು ಇಂಟರ್‍ನೆಟ್ ಸೇವಾದಾರರು, ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್ ಕೆಲಸಗಾರರು, ಚಿತ್ರೋದ್ಯಮದ ಉದ್ಯಮಿ/ ಕಾರ್ಯಕರ್ತರು/ಸಿಬ್ಬಂದಿ, ಅಡ್ವೊಕೇಟ್ ಗಳು, ಹೋಟೆಲ್ ಮತ್ತು ಆತಿಥ್ಯ ಸೇವಾದಾರರು, ಕೆ.ಎಂ.ಎಫ್ ,ರೈಲ್ವೆ, ಗಾಮೆರ್ಂಟ್ ಕಾರ್ಖಾನೆ, ಅರಣ್ಯ ಇಲಾಖೆ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಿಬ್ಬಂದಿ ಮತ್ತು ಕೆಲಸಗಾರರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಸ್ವಧಾರ್ ಗೃಹ ವಾಸಿಗಳು ಮತ್ತು ರಾಜ್ಯ ಮಹಿಳಾ ನಿಲಯ ವಾಸಿಗಳು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿಗಳಿಗೆ ಲಸಿಕಾಕರಣ ಮುಗಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿದೆ.
ಸರಕಾರ, ಜಿಲ್ಲಾಡಳಿತಗಳ ಈ ಕಸರತ್ತುಗಳ ನಡುವೆ ಸಾಕಷ್ಟು ಪ್ರಮಾಣದಲ್ಲಿ ವ್ಯಾಕ್ಸಿನ್ ಜಿಲ್ಲೆಗೆ ಲಭ್ಯವಾಗದಿದ್ದರೆ ಮತ್ತೆ ಶುರು ಮಾಡಿರುವ ಲಸಿಕೆ ಅಭಿಯಾನಕ್ಕೂ ಹಿನ್ನಡೆಯಾಗುವುದಂತೂ ಸ್ಪಷ್ಟ. ಮತ್ತೊಂದೆಡೆ ಅನುಬಂಧ 3 ರ ಪ್ರಮಾಣೀಕೃತ ಪತ್ರ ವ್ಯಾಕ್ಸಿನ್‍ಗೆ ಕಡ್ಡಾಯ ಮಾಡಿರುವುದು ಆ ಪತ್ರವನ್ನು ನೋಡಲ್ ಅಧಿಕಾರಿಗಳು ಸೂಕ್ತ ಸಮನ್ವಯ ಸಾಧಿಸದೆ ನೀಡದಿದ್ದರೆ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯಲು ತೊಂದರೆಯಾಗಲಿದೆ.
ಜಿಲ್ಲೆಯಲ್ಲಿ ಲಭ್ಯವಿರುವುದು 28,400 ಪ್ರಮಾಣದಷ್ಟು ವ್ಯಾಕ್ಸಿನ್ :
ರಾಜ್ಯ ಸರಕಾರ ಗುರುತಿಸಿರುವ 21 ಪ್ರಕಾರದ ಮುಂಚೂಣಿ ಕಾರ್ಯಕರ್ತರ ಸಂಖ್ಯೆಯೇ ಹತ್ತಿರ ಲಕ್ಷ ಸಮೀಪಿಸುತ್ತದೆ. ತುಮಕೂರು ನಗರವೊಂದರಲ್ಲೇ ಆಟೊರಿಕ್ಷಾ ಚಾಲಕರು 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಇನ್ನೂ ನ್ಯಾಯಾಂಗ, ಹೌಸ್‍ಕೀಪಿಂಗ್ ಭದ್ರತಾ ಸಿಬ್ಬಂದಿ, ಎಪಿಎಂಸಿ ಕೆಲಸಗಾರರು, ಕ್ಯಾಬ್ ಚಾಲಕರು ಹೀಗೆ ವಿವಿಧ ಮುಂಚೂಣಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇವರಿಗೆಲ್ಲ ಪ್ರಸ್ತುತ ಜಿಲ್ಲೆಯಲ್ಲಿ ಲಭ್ಯವಿರುವ 28400 ಪ್ರಮಾಣದಲ್ಲೇ ಲಸಿಕೆ ಹಾಕಲು ಸಾಧ್ಯವೇ? 45 ವರ್ಷ ಮೇಲ್ಪಟ್ಟವರಿಗೂ, 2ನೇ ಡೋಜ್ ನಿರೀಕ್ಷೆಯಲ್ಲಿರುವವರಿಗೆ ಲಸಿಕೆ ನೀಡಬೇಕು. ಹೆಚ್ಚು ವ್ಯಾಕ್ಸಿನ್ ಪೂರೈಕೆಯಾಗದಿದ್ದರೆ ಮುಂಚೂಣಿ ಕಾರ್ಯಕರ್ತರು, ಆದ್ಯತಾ ಗುಂಪುಗಳಿಗೆ ವ್ಯಾಕ್ಸಿನ್ ಹಾಕುವ ಕಾರ್ಯ ಪೂರ್ಣಗೊಳಿಸುವುದು ಕಷ್ಟವಾಗಲಿದೆ. ರಾಜ್ಯಕ್ಕೆ ಇಂದು 2 ಲಕ್ಷ ಡೋಜ್ ಲಸಿಕೆ ತರಿಸಿರುವುದಾಗಿ ಶುಕ್ರವಾರ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದು, ತುಮಕೂರಿನಂತಹ 27.82 ಲಕ್ಷ ಜನಸಂಖ್ಯೆಯುಳ್ಳ ದೊಡ್ಡ ಜಿಲ್ಲೆಯ ಮುಂಚೂಣಿ ಕಾರ್ಯಕರ್ತರು, ಆದ್ಯತಾ ಗುಂಪುಗಳಿಗೆ ಲಕ್ಷಕ್ಕೂ ಮಿಗಿಲಾಗಿ ಲಸಿಕೆ ಅವಶ್ಯಕತೆಯಿದೆ.
ಕೋವಿಡ್ ನಿಗ್ರಹಕ್ಕೆ ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಇಲಾಖೆ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಿದ್ದು, ನಿಗದಿಪಡಿಸಿದ ದಿನಾಂಕಗಳಂದು ತಮ್ಮ ವ್ಯಾಪ್ತಿಯ ಕಾರ್ಯಕರ್ತರನ್ನು ಗುರುತಿಸಿ ಚಿಟಿಟಿexuಡಿe-3 ಅನುಬಂಧ ಪತ್ರದಲ್ಲಿ ಪ್ರಮಾಣೀಕರಿಸಿ ಅವರಿಗೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿರುವೆ.
-ವೈ.ಎಸ್.ಪಾಟೀಲ್ ಜಿಲ್ಲಾಧಿಕಾರಿ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ