ತುಮಕೂರು :
ಕೋವಿಡ್ ಪರೀಕ್ಷೆ ಕಡಿಮೆಯಾಗುತ್ತಿದೆಯೇ…? ಇದು ಎಲ್ಲ ಕಡೆ ಕೇಳಿಬರುತ್ತಿರುವ ಮಾತು. ಜಿಲ್ಲೆ ಮಾತ್ರವಲ್ಲದೆ, ರಾಜ್ಯಾದ್ಯಂತ ಕೊರೊನಾ ಟೆಸ್ಟ್ ಪ್ರಮಾಣ ಕುಂಠಿತವಾಗುತ್ತಿರುವುದರ ಹಿಂದೆ ಯಾವ ಲೆಕ್ಕಾಚಾರಗಳಿವೆ ಎಂಬ ಮಾತು ಈಗ ಹೆಚ್ಚು ಚರ್ಚೆಗೆ ಒಳಗಾಗಿದೆ.
ತುಮಕೂರು ಜಿಲ್ಲೆಯ ಪರಿಸ್ಥಿತಿ ಈಗ ಹಿಂದಿನಂತಿಲ್ಲ. ಕಳೆದ ಬಾರಿಗೂ ಈ ಬಾರಿಗೂ ಅಜ-ಗಜ ಅಂತರ ಇದೆ. ಜಿಲ್ಲೆಯಲ್ಲಿ ಸರ್ಕಾರಿ 2 ಪ್ರಯೋಗಾಲಯ ಸೇರಿ ಒಟ್ಟು 6 ಕೋವಿಡ್ ಟೆಸ್ಟ್ ಪ್ರಯೋಗಾಲಯಗಳಿವೆ. 2020ರ ಸಮಯದಲ್ಲಿ ಈ ವ್ಯವಸ್ಥೆ ಇರಲಿಲ್ಲ. ಆಗ ರ್ಯಾಪಿಡ್ ಆಂಟಿಜನ್ ಟೆಸ್ಟ್‍ಗೆ ಹೆಚ್ಚು ಒತ್ತು ಕೊಡಲಾಗಿತ್ತು. ಎರಡನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಊಹೆಗೂ ಮೀರಿ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಆರ್‍ಟಿಪಿಸಿಆರ್ ಟೆಸ್ಟ್‍ಗೆ ಹೆಚ್ಚು ಒತ್ತು ನೀಡಲಾಗಿದೆ. ಹಿಂದೆಲ್ಲ ಪ್ರಯೋಗಾಲಯಗಳಿಗೆ ಕೋವಿಡ್ ಟೆಸ್ಟ್ ಪರೀಕ್ಷಾ ವರದಿಗಾಗಿ ಕಳುಹಿಸಿಕೊಟ್ಟು ಅದು ಬರುವ ತನಕ ನಿರೀಕ್ಷಿಸಲಾಗುತ್ತಿತ್ತು. ಈಗ ಹಾಗಿಲ್ಲ. ತುಮಕೂರು ನಗರ ಮಾತ್ರವಲ್ಲದೆ, ತಿಪಟೂರಿನಲ್ಲಿಯೂ ಕೋವಿಡ್ ಟೆಸ್ಟ್ ಪ್ರಯೋಗಾಲಯವಿದೆ. ಪ್ರಯೋಗಾಲಯ ಆರಂಭಿಸಲು ಸಿದ್ದತೆಗಳು ನಡೆದಿದ್ದು ಇನ್ನು ಕೆಲವೇ ದಿನಗಳಲ್ಲಿ ಶಿರಾದಲ್ಲಿಯೂ ಪ್ರಾರಂಭವಾಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚು ಪರೀಕ್ಷೆ ನಡೆಸಲು ಕೊರತೆಗಳಿಲ್ಲ. ಕಳೆದ ಬಾರಿಯ ಸಮಸ್ಯೆಗಳೂ ಇಲ್ಲ.
ಈ ವರ್ಷದ ಏಪ್ರಿಲ್ ಆರಂಭದಲ್ಲಿ ಕೊರೊನಾ ಎರಡನೇ ಅಲೆಯ ಭೀಕರತೆ ಈಗಿನಷ್ಟು ಇರಲಿಲ್ಲ. ಸೋಂಕು ಹೆಚ್ಚಳವಾಗುತ್ತಿದ್ದಂತೆ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಲು ಸರ್ಕಾರ ಒತ್ತು ನೀಡಿತು. ಪ್ರತಿದಿನ ಇಂತಿಷ್ಟು ಪರೀಕ್ಷೆ ನಡೆಸಲೇಬೇಕೆಂದು ಗುರಿ ನಿಗದಿಪಡಿಸಲಾಯಿತು. ಜಿಲ್ಲಾ ಮಟ್ಟದ ಆಸ್ಪತ್ರೆ ಹಾಗೂ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆಯ ಬಿರುಸಿನ ಚಟುವಟಿಕೆಗಳು ಆರಂಭವಾದವು. ಸಾರ್ವಜನಿಕ ಸ್ಥಳಗಳಲ್ಲಿಯೂ ಟೆಸ್ಟ್ ಅಭಿಯಾನ ಆರಂಭವಾಯಿತು. ತುಮಕೂರು ಮಹಾನಗರ ಪಾಲಿಕೆಯ ವಾರ್ಡ್‍ವಾರು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿಯೂ ಟೆಸ್ಟ್‍ಗಳು ಆರಂಭಗೊಂಡವು.
ಈ ವೇಳೆಗಾಗಲೇ ಸೋಂಕಿನ ತೀವ್ರತೆಯ ಬಿಸಿ ಮುಟ್ಟತೊಡಗಿತ್ತು. ಏಪ್ರಿಲ್ ಅಂತ್ಯದ ವೇಳೆಗೆ ಸೋಂಕು ಹಳ್ಳಿಹಳ್ಳಿಗಳನ್ನೂ ವ್ಯಾಪಿಸಿಬಿಟ್ಟಿತು. ಪರಿಣಾಮವಾಗಿ ನಗರ ಮಾತ್ರವಲ್ಲದೆ, ಪ್ರತಿ ತಾಲ್ಲೂಕುಗಳಿಂದಲೂ ಪಾಸಿಟಿವ್ ಪ್ರಕರಣಗಳು ಹೆಚ್ಚು ವರದಿಯಾಗತೊಡಗಿದವು. ಆಗ ಎದುರಾದದ್ದೇ ಹಾಸಿಗೆ ಸಮಸ್ಯೆ. ಪ್ರಕರಣಗಳು ಹೆಚ್ಚಿದಂತೆಲ್ಲಾ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಯಿತು. ಐದಾರು ಸಾವುಗಳಿಗೆ ಬೆಚ್ಚಿ ಬೀಳುತ್ತಿದ್ದ ಜಿಲ್ಲೆಯಲ್ಲಿ ಮೇ ನಂತರ ಎರಡಂಕಿ ದಾಟಿರುವುದು ಸೋಂಕು ಮತ್ತು ಅದರ ಹಿಂದಿನ ಸಾವುಗಳ ಚಿತ್ರಣ ತೆರೆದಿಟ್ಟಿದೆ. . ಸರ್ಕಾರಿ ಲೆಕ್ಕಾಚಾರಗಳ ಪ್ರಕಾರ ಸರಾಸರಿ ಪ್ರತಿದಿನ 15 ರಿಂದ 19 ಸಾವುಗಳನ್ನು ನಾವು ನೋಡುತ್ತಿದ್ದೇವೆ. ಆದರೆ ವಾಸ್ತವ ಬೇರೆಯದ್ದೇ ಇದೆ ಎಂಬುದು ಸಾರ್ವಜನಿಕರ ಅನಿಸಿಕೆ. ಪ್ರತಿದಿನ 20ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿದ್ದು ಇದನ್ನು ಮರೆಮಾಚಲಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಲೇ ಇವೆ.
ಯಾವಾಗ ಸೋಂಕುಗಳ ಸಂಖ್ಯೆ ಹಾಗೂ ಸಾವುಗಳ ವರದಿ ಹೆಚ್ಚು ಹೆಚ್ಚಾಗಿ ವರದಿಯಾಗಲ್ಪಟ್ಟವೋ ಆಗ ಜಿಲ್ಲಾಡಳಿತಕ್ಕೂ ತಲೆನೋವು ಶುರುವಾಯಿತು. ಆಮ್ಲಜನಕ ಸಹಿತ ಹಾಸಿಗೆಗಳ ವ್ಯವಸ್ಥೆಯ ಕೊರತೆ ಹಾಗೂ ಜೀವರಕ್ಷಕ ಔಷಧಗಳ ಹೊಂದಿಸುವಿಕೆ ಇತ್ಯಾದಿಗಳು ತಲೆನೋವಾಗಿ ಪರಿಣಮಿಸಿವೆ.
ಕೊರೊನಾ ವೈರಾಣು ದಿನೇ ದಿನೇ ಹಳ್ಳಿ ಹಳ್ಳಿಗಳಿಗೆ ವಕ್ಕರಿಸುತ್ತಿರುವುದರಿಂದ ಪಾಸಿಟಿವ್ ಪತ್ತೆಯಾಗುವವರ ಸಂಖ್ಯೆ ದ್ವಿಗುಣವಾಗುತ್ತಲೇ ಇದೆ. ಜಿಲ್ಲಾವಾರು ಅಂಕಿ ಅಂಶಗಳ ವರದಿಯನ್ನು ಗಮನಿಸಿದರೆ ಪ್ರತಿ ತಾಲ್ಲೂಕಿನಲ್ಲಿಯೂ ನೂರರ ಅಂಕೆ ದಾಟಿಯೇ ಮುಂದುವರೆದಿರುವುದು ಸ್ಪಷ್ಟ. ಕೆಲವು ತಾಲ್ಲೂಕುಗಳಲ್ಲಿ 300ರ ಮೇಲ್ಪಟ್ಟು ಪಾಸಿಟಿವ್ ವರದಿಗಳು ಬರುತ್ತಿವೆ. ಸೋಂಕಿತರ ಸಂಖ್ಯೆಯಂತೆಯೇ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಸಮಧಾನಕರ ಅಂಶವಾಗಿದ್ದರೂ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
ಪ್ರತಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆ ಇವೆಲ್ಲ ಕಡೆ ಕೋವಿಡ್ ಟೆಸ್ಟ್ ನಡೆಸಲಾಗುತ್ತದೆ. ಇವೆಲ್ಲವನ್ನೂ ಒಳಗೊಂಡರೆ ಪ್ರತಿದಿನ ಕನಿಷ್ಟ 5 ರಿಂದ 10 ಸಾವಿರದಷ್ಟು ಕೋವಿಡ್ mಸ್ಟ್ïಗಳಾದರೂ ಆಗಬೇಕು. ಈಗಿರುವ ವ್ಯವಸ್ಥೆಯಲ್ಲಿ ಇದೆಲ್ಲಾ ಸಾಧ್ಯವೇ..? ಆರಂಭದಲ್ಲಿ ಇದ್ದ ಕೋವಿಡ್ ತಪಾಸಣಾ ಪ್ರಕ್ರಿಯೆ ಇತ್ತೀಚೆಗೆ ವಿಳಂಬಗತಿ ಪಡೆಯುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಗಳು ಸಹಜವಾಗಿ ಕಾಡುತ್ತವೆ.
ಕೊರೊನಾ ಪರೀಕ್ಷೆ ಮತ್ತು ಸಾವಿನ ಲೆಕ್ಕಾಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಹಳಷ್ಟು ರಾಜಕೀಯ ಧುರೀಣರು ಹೇಳುತ್ತಲೇ ಬಂದಿದ್ದಾರೆ. ವೈರಸ್ ಅಲೆ ಕಡಿಮೆಯಾಗುವುದೆಂದರೆ ಪರೀಕ್ಷೆಗಳನ್ನು ನಡೆಸಿದಾಗ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾಗಬೇಕು. ವಾಸ್ತವದಲ್ಲಿ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವುದರ ಬದಲು ಹೆಚ್ಚಾಗುತ್ತಿದೆ. ಆದರೆ ಪರೀಕ್ಷೆ ಮತ್ತು ಸಾವಿನ ಲೆಕ್ಕಾಚಾರವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂಬ ಆರೋಪ ಸಿದ್ದರಾಮಯ್ಯ ಅವರದ್ದು.
ತುಮಕೂರು ಜಿಲ್ಲೆಯ ವಿಷಯಕ್ಕೆ ಬಂದರೆ ಇಲ್ಲಿಯೂ ಸುಳ್ಳು ಲೆಕ್ಕ ನೀಡಲಾಗುತ್ತಿದೆಯೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿವೆ. ಜಿಲ್ಲೆಯಲ್ಲಿ ಏಪ್ರಿಲ್‍ನಲ್ಲಿ 2325 ಮಂದಿ ಮರಣವಾಗಿದ್ದರೆ, ಆರೋಗ್ಯ ಇಲಾಖೆಯ ಪ್ರಕಾರ 69 ಮಂದಿ ಕೋವಿಡ್ ಸಾವು ಎಂದು ಹೇಳಲಾಗಿದೆ. ಇಲ್ಲಿ ಸಿಗುತ್ತಿರುವ ಅಂಕಿ ಅಂಶಗಳೆಲ್ಲ ಗೊಂದಲಮಯವಾಗಿವೆ.
ಮೇ ಆರಂಭದ ದಿನಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಮತ್ತಷ್ಟು ವ್ಯಾಪಕವಾಗಿದ್ದು, ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿದೆ. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳುಳ್ಳ ಮಂದಿ ಪ್ರತಿದಿನ ಸಿಗುತ್ತಿದ್ದಾರೆ. ಹಳ್ಳಿ ಹಳ್ಳಿಯೂ ಕೊರೊನಾ ಪೀಡಿತವಾಗಿದ್ದು, ಒಂದೊಂದು ತಾಲ್ಲೂಕಿನಲ್ಲಿಯೇ ಪ್ರತಿದಿನ 500ಕ್ಕೂ ಹೆಚ್ಚು ಮಂದಿ ರೋಗಿಗಳು ಪತ್ತೆಯಾಗುತ್ತಿದ್ದಾರೆಂದು ಹೇಳಲಾಗಿದೆ. ಸಾವುಗಳ ಸಂಖ್ಯೆಯೂ ಅಧಿಕವಾಗಿದೆ. ತಮ್ಮ ಊರ ಪಕ್ಕದಲ್ಲಿಯೇ ಸಾವು ಸಂಭವಿಸಿದ ವ್ಯಕ್ತಿಯ ಹೆಸರುಗಳು ಪಟ್ಟಿಯಲ್ಲಿ ಬರುತ್ತಿಲ್ಲ. ಹೀಗಾಗಿ ಗ್ರಾಮೀಣ ಜನರಲ್ಲಿಯೇ ಅಂಕಿ ಅಂಶಗಳ ಬಗ್ಗೆ ಗೊಂದಲವಿದೆ. ಕೋವಿಡ್ ತಪಾಸಣೆ ಮತ್ತು ಲೆಕ್ಕದಲ್ಲಿ ವ್ಯತ್ಯಾಸಗಳು ಇರುವ ಬಗ್ಗೆ ಗೊಂದಲಗಳು ಮುಂದುವರಿದೇ ಇದ್ದು, ಟೆಸ್ಟ್‍ಗಳ ಪ್ರಮಾಣ ನಿಖರವಾಗಿಲ್ಲ, ತಪಾಸಣೆ ಹೆಚ್ಚಳ ಮಾಡಬೇಕು, ಇಲ್ಲವಾದರೆ ಸೋಂಕು ಉಲ್ಬಣಿಸುತ್ತದೆ ಎನ್ನುವ ವಾದಗಳು ಹೆಚ್ಚುತ್ತಿವೆ.
ನಿತ್ಯ 6500 ಕೋವಿಡ್ ಟೆಸ್ಟ್
ಸರ್ಕಾರ ಸೂಚಿಸಿರುವ ನಿಗದಿ ಮೀರಿ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. 4000 ಆರ್ ಟಿಪಿಸಿಆರ್ ಟೆಸ್ಟ್, 1500 ರ್ಯಾಪಿಡ್ ಟೆಸ್ಟ್, ಗುರಿ ಹಾಕಿಕೊಂಡಿದ್ದು ಹೆಚ್ಚುವರಿಯಾಗಿ ನಿತ್ಯ 1000 ಟೆಸ್ಟ್ ನಡೆಸಲಾಗುತ್ತಿದೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಸರ್ಕಾರಿ ವ್ಯವಸ್ಥೆಯ 2 ಪ್ರಯೋಗಾಲಯಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಯ 2 ಟೆಸ್ಟ್ ಲ್ಯಾಬ್, ಹಾಗೂ ತುಮಕೂರು ನಗರದಲ್ಲಿ ಗುರ್ತಿಸಿರುವ 2 ಖಾಸಗಿ ಪ್ರಯೋಗಾಲಯ ಸೇರಿ ಒಟ್ಟು 6 ಲ್ಯಾಬ್ ಗಳಲ್ಲಿ ಕೋವಿಡ್ ಟೆಸ್ಟ್ ವರದಿ ಬರುತ್ತವೆ. ಹೀಗಾಗಿ ಕೋವಿಡ್ ಟೆಸ್ಟ ಪರೀಕ್ಷೆಗೆ ತೊಂದರೆ ಇಲ್ಲ. ತಿಪಟೂರಿನ ಲ್ಯಾಬ್ ನಲ್ಲಿ ಪ್ರತಿದಿನ 1200 ಕೋವಿಡ್ ಟೆಸ್ಟ್ ಮಾಡುವ ಸಾಮಥ್ರ್ಯವಿದೆ.
ಪರೀಕ್ಷಾ ವರದಿಯೂ ತಡವಾಗುತ್ತಿಲ್ಲ. 24 ರಿಂದ 36 ಗಂಟೆಯೊಳಗೆ ಪರೀಕ್ಷಾ ವರದಿ ತಲುಪುವಂತೆ ಮಾಡುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಕೆಲವೊಮ್ಮೆ 24 ಗಂಟೆಯೊಳಗೆ ಪರೀಕ್ಷಾ ವರದಿ ನೀಡಲಾಗಿದೆ. ಎಲ್ಲೋ ಕೆಲವೊಮ್ಮೆ ಮಾತ್ರ ವಿಳಂಬವಾಗಿರಬಹುದು. ಲಕ್ಷಣಗಳು ಕಂಡು ಬರುವ ಯಾರೇ ಇರಲಿ ಅವರೆಲ್ಲರನ್ನೂ ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರ್ ಟಿ ಪಿ ಸಿಆರ್ ಹಾಗೂ ರ್ಯಾಪಿಡ್ ಟೆಸ್ಟ್ ಎರಡನ್ನೂ ಮಾಡಲಾಗುತ್ತಿದೆ. ಇದರ ಜೊತೆಗೆ ಪ್ರಾಥಮಿಕ ಸಂಪರ್ಕಿತರನ್ನು ತಪಾಸಣೆಗೊಳಪಡಿಸಿ ಪರೀಕ್ಷಿಸುವ ಕಾರ್ಯವೂ ನಡೆಯುತ್ತಿದೆ. ಹೀಗೆ ನಡೆಸಲಾಗುತ್ತಿರುವುದರಿಂದಲೇ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದು. ನಿರೀಕ್ಷೆಗೂ ಮೀರಿ ಇಲ್ಲಿ ಪರೀಕ್ಷೆಗಳಾಗುತ್ತಿವೆ. ಪಾಸಿಟೀವ್ ಲಕ್ಷಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಟೆಸ್ಟ್ ಕಡಿಮೆಗೊಳಿಸಲಾಗಿದೆ ಎಂಬುದನ್ನು ಒಪ್ಪಲಾಗದು.
ಡಾ. ನಾಗೇಂದ್ರಪ್ಪ, ಡಿ,ಎಚ್,ಓ. ತುಮಕೂರು.
ಪಾಸಿಟಿವಿಟಿ ಹೆಚ್ಚಿರುವ ಕಡೆ ಪರೀಕ್ಷೆ ಅಗತ್ಯ :
ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.40ಕ್ಕಿಂತಲೂ ಹೆಚ್ಚಿದೆ. ಇನ್ನು ಕೆಲವು ಕಡೆ 35ಕ್ಕಿಂತಲೂ ಹೆಚ್ಚಿನ ಪ್ರಮಾಣದ ಪಾಸಿಟಿವಿಟಿ ಇದೆ. ಇವುಗಳಲ್ಲಿ ಶಿರಾ ಅತ್ಯಧಿಕ ಸ್ಥಾನ ಪಡೆದಿದೆ. ನಂತರದಲ್ಲಿ ಮಧುಗಿರಿ, ಗುಬ್ಬಿ, ತುಮಕೂರು ಸೇರಿವೆ. (ಇವೆಲ್ಲ 40ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರುವ ತಾಲ್ಲೂಕುಗಳು) ಕೊರಟಗೆರೆ, ಕುಣಿಗಲ್, ಪಾವಗಡ, ತಿಪಟೂರು ಮತ್ತು ತುರುವೇಕೆರೆಯಲ್ಲಿ ಶೇ.35 ರಿಂದ 38ರವರೆಗೆ ಪಾಸಿಟಿವಿಟಿ ಪ್ರಮಾಣ ಇದೆ. ಜಿಲ್ಲೆಯಲ್ಲಿ 121 ಗ್ರಾ.ಪಂ.ಗಳನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ. ಇಂತಹ ಸೂಕ್ಷ್ಮ ಮತ್ತು ಹೆಚ್ಚು ಪಾಸಿಟಿವಿಟಿ ಇರುವ ಪ್ರದೇಶಗಳಲ್ಲಿ ಕೋವಿಡ್ ಟೆಸ್ಟ್ ಪ್ರಮಾಣವೂ ಹೆಚ್ಚಾಗಬೇಕು. ಲಕ್ಷಣಗಳು ಇರುವವರನ್ನು ಆರಂಭದಲ್ಲಿಯೇ ಗುರುತಿಸಿ ಪ್ರತ್ಯೇಕಿಸಿದರೆ ಮನೆ ಮಂದಿಗೆ ಹರಡುವುದು ತಪ್ಪುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ