ಅಕ್ರಮ ಮದ್ಯ ಮಾರಾಟ : ವಸೂಲಿ ಬಾಜಿಯಲ್ಲಿ ಅಬಕಾರಿ ಅಧಿಕಾರಿಗಳು

 ತುಮಕೂರು : 

      ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಎಲ್ಲೋ ಕೆಲವು ಕಡೆ ನಾಮಕಾವಸ್ಥೆಗೆ ದಾಳಿ ಮಾಡಿದಂತೆ ಪ್ರಚಾರ ಗಿಟ್ಟಿಸಿಕೊಂಡು ಇತರರಿಗೆ ಎಚ್ಚರಿಕೆ ಕೊಡುವ, ಆ ಮೂಲಕ ವಸೂಲಿ ಬಾಜಿಯಲ್ಲಿ ನಿರತರಾಗಿರುವ ಬಗ್ಗೆ ವ್ಯಾಪಕ ದೂರುಗಳು ದಟ್ಟವಾಗಿವೆ.

      ಲಾಕ್‍ಡೌನ್ ಸಮಯದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟದ ದಂಧೆ ಕಣ್ಣಿಗೆ ಕಾಣಿಸುತ್ತಿದ್ದರೂ ತಮಗೆ ಏನೂ ಗೊತ್ತಿಲ್ಲದಂತೆ ಈ ಅಧಿಕಾರಿಗಳು ನಿದ್ರೆಗೆ ಜಾರಿದ್ದು, ಇವರ ಈ ನಿರ್ಲಕ್ಷ್ಯತನವೇ ಗ್ರಾಮೀಣ ಸಮುದಾಯದ ಕುಟುಂಬಗಳನ್ನು ಬೀದಿಪಾಲು ಮಾಡುತ್ತಿವೆ. ಕುಡಿತದ ಚಟಕ್ಕೆ ಬೀಳುತ್ತಿರುವ ಯುವ ಜನಾಂಗ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವ ದುರಂತ ಚಿತ್ರಣಗಳು ಕಂಡುಬರುತ್ತಿವೆ. ಇಷ್ಟಾದರೂ ಲಜ್ಜೆಗೆಟ್ಟ ಅಧಿಕಾರಿಗಳು ಮಾಮೂಲು ವಸೂಲಾತಿಯಲ್ಲಿಯೇ ನಿರತರಾಗಿ ಹಳ್ಳಿಗಳ ನೆಮ್ಮದಿ ಹಾಳು ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

      ಎಂತಹದ್ದೇ ಕಷ್ಟ ಬರಲಿ ಕೆಲವರಿಗೆ ಎಣ್ಣೆ ಇರಲೇಬೇಕು. ಒಂದು ಹೊತ್ತು ಊಟ ಬಿಟ್ಟರೂ ಪರ್ವಾಗಿಲ್ಲ ಮದ್ಯದ ನಶೆ ಏರಲೇಬೇಕು. ಇದೀಗ ಕೋವಿಡ್ ಸಂಕಷ್ಟದ ಕಾಲ. ಕಳೆದ ಬಾರಿಯಂತೆಯೇ ಎಲ್ಲ ಕಡೆ ಲಾಕ್‍ಡೌನ್ ಇದೆ. ವ್ಯಾಪಾರ ವಹಿವಾಟುಗಳು ಬಂದ್ ಆಗಿವೆ. ಆದರೆ ಮದ್ಯಕ್ಕಂತೂ ಬರವಿಲ್ಲ.

ನಿಗದಿತ ಅವಧಿಯಲ್ಲಿ ಮದ್ಯದ ಅಂಗಡಿಗಳಿಂದ ಪಾರ್ಸೆಲ್ ಒಯ್ಯಲು ಅವಕಾಶ ಕಲ್ಪಿಸಲಾಗಿದೆ. ನಗರ ಪ್ರದೇಶಗಳಲ್ಲಿ ಇದು ಕೆಲವು ವರ್ಗಗಳಿಗೆ ನುಂಗಲಾರದ ತುತ್ತಾಗಿದೆ. ವಿದ್ಯಾವಂತ, ನಾಗರಿಕ ಸಮುದಾಯದಲ್ಲಿ ಇರುವ ಮಂದಿ ಕುಡಿತವನ್ನು ಅನಿವಾರ್ಯವಾಗಿ ಬಿಟ್ಟಿರುವುದುಂಟು. ಮನೆಯಿಂದ ಹೊರಗೆ ಬಾರ್‍ಗಳಿಗೆ ಹೋಗಿ ನಶೆ ತೀರಿಸಿಕೊಂಡು ಬರುತ್ತಿದ್ದವರು ಈಗ ಮಮ್ಮಲ ಮರುಗುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಯಾವುದೇ ಅಡೆತಡೆಗಳಿಲ್ಲ. ಬಾಟೆಲ್ ಸಿಕ್ಕಿದರೆ ಸಾಕು ಎಲ್ಲಿ ಬೇಕಾದರೂ ಸ್ವಚ್ಛಂದವಾಗಿ ಮದ್ಯ ಸೇವನೆ ಮಾಡಬಹುದು. ಇದು ಅವರುಗಳಿಗೆ ಹೇಳಿ ಮಾಡಿಸಿದ ಕಾಲ. ಬಹಳಷ್ಟು ಜನ ನಗರದಿಂದ ಹಳ್ಳಿಗೆ ಹೋಗಿದ್ದು, ಅವರೆಲ್ಲರಿಗೆ ಮದ್ಯಪಾನ ಮಾಡಲು ಹೇಳಿ ಮಾಡಿಸಿದಂತ ತಾಣಗಳಾಗುತ್ತಿವೆ ಗ್ರಾಮಗಳು. ಹಿಂದೆಯೂ ಇತ್ತು, ಈಗಲೂ ಇದೆ. ಆದರೆ ಹಿಂದಿಗಿಂತ ಮದ್ಯ ಮಾರಾಟ ಮತ್ತು ದಂಧೆ ಈಗ ಹೆಚ್ಚಳವಾಗಿರುವುದು ಅಷ್ಟೆ ಸತ್ಯ.

      ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ರೀತಿಯ ಅಂಗಡಿಗಳು ತೆರೆಯಲ್ಪಟ್ಟಿವೆ. ಕಿರಾಣಿ ಅಂಗಡಿಗಳಿಂದ ಹಿಡಿದು ಬೀಡಿ ಬೆಂಕಿಪೊಟ್ಟಣ ಮಾರುವ ಶೆಡ್‍ಗಳ ತನಕ ಅಂಗಡಿಗಳು ತಲೆಎತ್ತಿವೆ. ಇನ್ನು ಕೆಲವು ಕಡೆ ಮನೆಗಳೇ ಹೋಟೆಲ್‍ಗಳಾಗಿವೆ. ಇಂತಹ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿ ನಡೆಯುತ್ತಿದೆ. ಆ ಊರಿನ ಅಷ್ಟೆ ಅಲ್ಲ, ಸುತ್ತಮುತ್ತಲಿನ ಜನರಿಗೂ ಇದರ ಅರಿವಿದೆ. ಹಿಂದೆಲ್ಲ ರಾತ್ರಿವೇಳೆ ಮಾತ್ರವೆ ಇಂತಹ ಅಂಗಡಿಗಳಿಗೆ ಕದ್ದು ಮುಚ್ಚಿ ನುಗ್ಗಿ ಹೋಗಿ ಬರುತ್ತಿದ್ದವರು ಈಗ ದಿನದ ವ್ಯವಹಾರ ರೂಢಿಸಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕೂಲಿ ಕಾರ್ಮಿಕರು, ದೈನಂದಿನ ವ್ಯವಹಾರದ ಚಟುವಟಿಕೆಗಳಲ್ಲಿ ತೊಡಗಿರುವವರು, ನಿರುದ್ಯೋಗಿಗಳು, ಉದ್ಯೋಗದಿಂದ ವಂಚಿತರಾಗಿ ಬಂದಿರುವವರು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಳ್ಳಿಗೆ ಮರಳಿರುವ ನಗರ ವಾಸಿಗಳು ಹೀಗೆ ಹಲವು ರೀತಿಯ ಜನರಿದ್ದಾರೆ. ಕೃಷಿ ಕಾಯಕದಲ್ಲಿ ನಿಷ್ಠೆ ಹೊಂದಿರುವವರು ಮದ್ಯದ ಅಂಗಡಿಗಳತ್ತ ಹೋಗುವುದು ಕಡಿಮೆ. ಆದರೆ ಇತರೆ ದುಡಿಮೆಗಳಲ್ಲಿ ತೊಡಗಿಕೊಂಡಿರುವವರು ಇಂತಹ ಚಟಗಳಿಗೆ ಒಳಗಾಗುತ್ತಿದ್ದಾರೆ. ಹೇಳಿಕೇಳಿ ಈಗ ಲಾಕ್‍ಡೌನ್ ಇರುವುದರಿಂದ ಪೊಲೀಸರು, ಅಬಕಾರಿ ಇಲಾಖೆಯವರು ಅತ್ತ ಸುಳಿಯಲಾರರು. ಇದರಿಂದಾಗಿ ಬಹುತೇಕರು ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ವ್ಯಸನಿಗಳಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಂಘದಿಂದ ಸನ್ಯಾಸಿ ಕೆಟ್ಟ ಎಂಬಂತೆ ಯುವಕರ ಹಾಗೂ ಕೂಲಿ ಕಾರ್ಮಿಕರ ಗುಂಪು ಮದ್ಯದ ಚಟಕ್ಕೆ ದಾಸರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ.

      ಇದಕ್ಕೆ ಪೂರಕವಾಗಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿರುವುದು. ಮನೆಗಳಲ್ಲಿಯೇ ಮದ್ಯ ಮಾರುತ್ತಾರೆಂದರೆ ಅದಕ್ಕಿಂತ ನೀಚಕೃತ್ಯ ಮತ್ತೊಂದಿದೆಯೇ. ಹೇಳಲು ಒಂದು ಅಂಗಡಿಯ ಅಥವಾ ವ್ಯವಹಾರದ ಹೆಸರು. ಆದರೆ ಅದರೊಳಗೆ ಮದ್ಯದ ಘಮಲು ಇದೆ ಎಂಬುದು ಅಲ್ಲಿರುವವರಿಗೆ ಗೊತ್ತು. ಇದು ಇಲಾಖೆಯವರಿಗೂ ತಿಳಿದ ವಿಷಯ. ಆದರೆ ಒಂದು ರೀತಿಯ ಒಳ ಒಪ್ಪಂದ ಇಲ್ಲಿ ಎದ್ದು ಕಾಣುತ್ತದೆ.

ಅಬಕಾರಿ ಇಲಾಖೆಯವರಿಗೆ ಹಳ್ಳಿಗಳಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟದ ಚಟುವಟಿಕೆಗಳು ಗೊತ್ತಿಲ್ಲವೆಂದಲ್ಲ. ಎಲ್ಲವೂ ತಮ್ಮ ಮೂಗಿನಡಿಯಲ್ಲಿಯೇ ನಡೆಯುತ್ತಿವೆ. ಆದರೆ ಈ ಅಕ್ರಮ ದಂಧೆಗಳಿಗೆ ಅವರ ಕುಮ್ಮಕ್ಕೂ ಮತ್ತು ಸಹಕಾರ ಇರುವುದರಿಂದ ಎಲ್ಲವೂ ರಾಜಾರೋಷವಾಗಿ ನಡೆದು ಹೋಗುತ್ತಿದೆ. ಯಾರಾದರೂ ದೂರಿದರೆ ಮಾತ್ರ ನೆಪಮಾತ್ರಕ್ಕೆ ದಾಳಿ ಮಾಡುವ ಪ್ರಸಂಗಗಳು ಅಲ್ಲಲ್ಲಿ ಕಂಡುಬರುತ್ತಿವೆ.

ಇತ್ತೀಚೆಗೆ ಜಿಲ್ಲೆಯ ಒಂದೆರಡು ಕಡೆ ಅಬಕಾರಿ ದಾಳಿ ನಡೆದಿರುವುದನ್ನು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರ ಹಿಂದೆಯೂ ಕೆಲವು ತಂತ್ರಗಾರಿಕೆಗಳಿವೆ. ಒಂದು ಕಡೆ ದಾಳಿ ಮಾಡುವ ಮೂಲಕ ಇತರರಿಗೆ ಎಚ್ಚರಿಕೆ ಕೊಡುವುದು, ನಮ್ಮನ್ನು ನೋಡಿಕೊಳ್ಳಿ ಎಂಬ ಸಂದೇಶ ರವಾನಿಸುವುದು ಇದರ ಹಿಂದಿನ ತಂತ್ರಗಾರಿಕೆಗಳಲ್ಲಿ ಒಂದು. ಇಂತಹ ದಾಳಿಗಳು ಪ್ರಾಮಾಣಿಕವಾಗಿ ಇದ್ದರೆ ಇಷ್ಟೊತ್ತಿಗಾಗಲೇ ಅದೆಷ್ಟೋ ಅಕ್ರಮ ಮದ್ಯದಂಗಡಿಗಳನ್ನು ಮಚ್ಚಿಸಬಹುದಿತ್ತು. ಎಷ್ಟು ಅಕ್ರಮ ಅಂಗಡಿಗಳನ್ನು ಮುಚ್ಚಿಸಿದ್ದಾರೆ, ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಇಲಾಖೆ ಬಹಿರಂಗಪಡಿಸಲು ಸಿದ್ಧವಿದೆಯೇ.?

ಗಡಿ ಭಾಗದಿಂದ ಆಂಧ್ರಕ್ಕೆ ಪೂರೈಕೆ :

      ಆಂಧ್ರ ಪ್ರದೇಶದಲ್ಲಿ ಮದ್ಯದ ಬೆಲೆ ಕರ್ನಾಟಕಕ್ಕಿಂತ ಹೆಚ್ಚಳ. ಇಲ್ಲಿ ಸಿಗುವ ಕೆಲವು ಮದ್ಯ ಅಲ್ಲಿ ಸಿಗಲಾರದು. ಹೀಗಾಗಿ ಗಡಿ ಭಾಗದ ಪಾವಗಡ, ಮಡಕಶಿರಾ, ಮಿಡಿಗೇಶಿ ಭಾಗಗಳಲ್ಲಿ ಅಕ್ರಮವಾಗಿ ಜಿಲ್ಲೆಗೆ ನುಸುಳಿ ಮದ್ಯಪಾನ ಮಾಡಿ ಹೋಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಸಮಯ ಮೀಸಲಿಟ್ಟಿರುವುದನ್ನು ಗಮನಿಸುವ ಆಂಧ್ರದ ಕಡೆಯವರು ಆ ಸಮಯ ನೋಡಿಕೊಂಡು ಇತ್ತ ದ್ವಿಚಕ್ರ ವಾಹನಗಳಲ್ಲಿ ನುಸುಳುತ್ತಿದ್ದಾರೆ. ಎಷ್ಟು ಬೇಕೋ ಅಷ್ಟು ಕುಡಿದು ಕದ್ದೂಮುಚ್ಚಿ ತಮ್ಮ ಊರುಗಳಿಗೆ ಕೊಂಡೊಯ್ಯುತ್ತಿದ್ದಾರೆ.

ದುಬಾರಿ ಬೆಲೆಗೆ ಮದ್ಯ ಮಾರಾಟ :

      ಲಾಕ್‍ಡೌನ್ ಇರುವ ಕಾರಣ ನಗರ ಪ್ರದೇಶಗಳಲ್ಲಿ ರಾತ್ರಿವೇಳೆ ಬಾರ್‍ಗಳು ಸ್ಥಗಿತಗೊಂಡಿವೆ. ಕುಡಿತದ ಚಟ ಹತ್ತಿಸಿಕೊಂಡಿದ್ದವರಿಗೆ ತಡೆಯಲಾಗುತ್ತಿಲ್ಲ. ಇಂತಹವರಲ್ಲಿ ಕೆಲವರು ಕಳ್ಳದಾರಿ ಹುಡುಕಿಕೊಂಡಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಅಕ್ರಮ ಮದ್ಯದಂಗಡಿಗಳಿಗೆ ತೆರಳಿ ನಶೆ ಏರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮದ್ಯದ ಕಿಕ್ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಬೇಡಿಕೆ ಹೆಚ್ಚಳವಾಗುತ್ತಿರುವುದನ್ನು ಮನಗಂಡ ಮದ್ಯ ಸರಬರಾಜುಗಾರರು ಡಬಲ್ ರೇಟ್‍ಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಹೋದರೆ ಮದ್ಯ ಸಿಗಲಾರದು. ಲಾಕ್‍ಡೌನ್ ಇರುವ ಕಾರಣ ಕದ್ದೂಮುಚ್ಚಿ ಹೆಚ್ಚಿಗೆ ಹಣ ಕೊಟ್ಟು ತಂದಿದ್ದೇವೆ, ಬೇಕಾದರೆ ತೆಗೆದುಕೊಳ್ಳಿ ಎಂಬ ಮಾತುಗಳು ಬರುತ್ತಿರುವುದರಿಂದ ಕೇಳಿದಷ್ಟು ಹಣ ತೆತ್ತು ಕುಡಿದು ಬರುತ್ತಿದ್ದಾರೆ. ಅಬಕಾರಿ ಇಲಾಖೆಗೆ ಇದೆಲ್ಲ ಗೊತ್ತಿದ್ದರೂ ಏನೂ ಗೊತ್ತಿಲ್ಲದವರಂತೆ ಮೌನವಾಗಿರುವುದೇಕೆ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

     1. ಅಕ್ರಮ ಮದ್ಯ ಮಾರಾಟಗಾರರಿಗೆ ಅವರ ಮನೆ ಬಳಿಗೆಯೇ ಮದ್ಯ ಸಪ್ಲೈ ಆಗುತ್ತದೆ. ಇದಕ್ಕೆಂದೇ ಒಂದು ತಂಡವಿದೆ. ಈ ತಂಡದವರು ಎಲ್ಲೆಲ್ಲಿ ಅಕ್ರಮ ಮದ್ಯದಂಗಡಿಗಳಿವೆ ಎಂಬ ಸುಳಿವರಿತು, ಅವರಿಗೆ ಯಾವ ಸಮಯದಲ್ಲಾದರೂ ಬಂದು ಮದ್ಯ ಸಪ್ಲೈ ಮಾಡಿ ಹೋಗುತ್ತಾರೆ. ಆಗೊಮ್ಮೆ ಇವರೇನಾದರೂ ಸಿಕ್ಕಿ ಬಿದ್ದರೆ ಕೂಡಲೇ ಇವರ ಆಪ್ತ ರಕ್ಷಕರಿಗೆ ಫೋನಾಯಿಸಿ ಅವರಿಂದ ಬಚಾವ್ ಆಗುತ್ತಾರೆ.

2.ಅಕ್ರಮ ಮದ್ಯ ಮಾರಾಟಗಾರರಿಗೆ ಅಬಕಾರಿ ಇಲಾಖೆಯ ಸಿಬ್ಬಂದಿಯೇ ಶ್ರೀರಕ್ಷೆ. ಇವರುಗಳು ದಾಳಿ ಮಾಡುವುದಕ್ಕಿಂತಲೂ ಮುಂಚಿತವಾಗಿ ಅಕ್ರಮ ಮದ್ಯ ಮಾರಾಟಗಾರರಿಗೆ ಮೊದಲೇ ಮಾಹಿತಿ ಸಿಕ್ಕಿರುತ್ತದೆ. ಇವರು ಬರುತ್ತಾರೆಂಬ ಸುಳಿವರಿತ ಅಕ್ರಮ ಮದ್ಯ ಮಾರಾಟಗಾರರು ತಮ್ಮ ಬಳಿ ಇರುವ ಮದ್ಯವನ್ನು ಎಲ್ಲಾದರೂ ಬೇರೆ ಕಡೆ ಬಚ್ಚಿಟ್ಟು ಬರುತ್ತಾರೆ. ದಾಳಿಯ ನಂತರ ಏನೂ ಸಿಗದಿದ್ದಾಗ ದಾಳಿ ಮಾಡಲು ಬಂದವರು ಬರಿಗೈಲಿ ಹಿಂದಿರುತ್ತಾರೆ.

3. ಅಧಿಕಾರಿಗಳ ಮೆಚ್ಚಿಸಲಿಕ್ಕೋ, ಇಲ್ಲವೆ ತಿಂಗಳಿಗೆ ಇಂತಿಷ್ಟು ಕೇಸ್  ಕೊಡಬೇಕೆಂಬ ನಿಯಮದಿಂದಲೋ ಅಬಕಾರಿ ಇಲಾಖೆಯವರು ಕೆಲವು ಕಡೆ ರೈಡ್ ಮಾಡುವ ಮೂಲಕ ಅಧಿಕಾರಿಗಳು ಕೈ ತೊಳೆದು ಕೊಳ್ಳುತ್ತಾರೆ. ಜನಪ್ರತಿನಿಧಿಗಳಿಂದ ಇಲ್ಲವೆ ತಮ್ಮ ಮೇಲಧಿಕಾರಿಗಳಿಂದಲೋ ಒತ್ತಡ ಬಂದರೆ ನಾಮಕಾವಸ್ಥೆಗೆಂಬಂತೆ ಕೇಸು ದಾಖಲಿಸಿ ಅವರನ್ನು ಬಚಾವ್ ಮಾಡುವ ತಂತ್ರವೂ ಇವರಲ್ಲಿದೆ.

4 ಲಾಕ್‍ಡೌನ್ ಸಮಯದಲ್ಲಂತೂ ಗ್ರಾಮಾಂತರ ಪ್ರದೇಶದ ಜನರಿಗೆ ಸುಗ್ಗಿಯೋ ಸುಗ್ಗಿ. ಈ ಸಮಯದಲ್ಲಿ ಎಲ್ಲೂ ಹೊರಗಡೆ ಹೋಗುವಂತಿಲ್ಲ ಎಂಬ ಸತ್ಯವನ್ನರಿತು ಬೆಳಗ್ಗೆಯಿಂದ ಸಂಜೆಯವರೆಗೂ ಕುಡಿತಕ್ಕೆ ಎಷ್ಟು ಬೇಕೋ ಅಷ್ಟು ಹಣವನ್ನು ಹೇಗಾದರೂ ಸಂಪಾದಿಸಿಕೊಂಡು ಬಿಡುತ್ತಾರೆ. ಆಗೊಮ್ಮೆ ಹಣವಿಲ್ಲದಿದ್ದರೆ ಮನೆಯವರಿಗೆ ಚಿತ್ರಹಿಂಸೆ ನೀಡಿಯಾದರೂ ಅವರಿಂದ ಹಣ ಪಡೆದು ಕುಡಿತದ ಚಟಕ್ಕೆ ವಿನಿಯೋಗಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link