ತುಮಕೂರು : ಗ್ರಾಮಗಳಲ್ಲಿ ಬೇರುಬಿಟ್ಟ ಅಕ್ರಮ ಮದ್ಯದ ಜಾಲ!!

ತುಮಕೂರು : 

      ಕಳೆದ ವಾರ ಮಧುಗಿರಿ ತಾಲ್ಲೂಕಿನ ಗ್ರಾಮವೊಂದರ ಮೇಲೆ ದಾಳಿ ನಡೆಸಿದ್ದ ಅಬಕಾರಿ ಅಧಿಕಾರಿಗಳ ತಂಡ 216 ಲೀಟರ್‍ನಷ್ಟು ಮದ್ಯ, 46 ಲೀಟರ್‍ನಷ್ಟು ಬೀಯರ್ ವಶಪಡಿಸಿಕೊಂಡಿದ್ದರು. ಇದರ ಮೌಲ್ಯ 1 ಲಕ್ಷ ರೂ.ಗಳೆಂಬುದು ಅಂದಾಜು. ಮತ್ತೊಂದು ಕಡೆ ಇದೇ ರೀತಿ ದಾಳಿ ನಡೆಸಿ ಸುಮಾರು 74,248 ರೂ.ಗಳಷ್ಟು ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಈ ಮಾಹಿತಿ ಮಾಧ್ಯಮಗಳಲ್ಲಿಯೂ ಪ್ರಕಟವಾಯಿತು. ಇಡೀ ಜಿಲ್ಲೆಯಲ್ಲಿ ಈ ಇಲಾಖೆಯವರಿಗೆ ಈ ಎರಡು ಪ್ರದೇಶಗಳನ್ನು ಬಿಟ್ಟರೆ ಮತ್ತೆಲ್ಲಿಯೂ ಅಕ್ರಮ ಮದ್ಯ ವಹಿವಾಟು ನಡೆಯುತ್ತಿರುವುದು ತಿಳಿದಿಲ್ಲವೆ? ಈ ಕೆಲವೇ ಒಂದೆರಡು ಅಂಗಡಿಗಳ ಮೇಲೆ ದಾಳಿ ನಡೆಸಿದ್ದರ ಉದ್ದೇಶವಾದರೂ ಏನು..?

      ಲಾಕ್‍ಡೌನ್ ಘೋಷಣೆಯಾಗಿ ತಿಂಗಳಾಂತ್ಯದಲ್ಲಿದ್ದೇವೆ. ಹಳ್ಳಿ ಹಳ್ಳಿಗಳಲ್ಲಿಯೂ ಈಗ ಯಥೇಚ್ಛವಾಗಿ ಮದ್ಯ ದೊರೆಯುತ್ತಿದೆ. ನಗರಗಳಲ್ಲಿ ಅಷ್ಟು ಸುಲಭವಾಗಿ ದಕ್ಕದ ಮದ್ಯ ಈಗ ಹಳ್ಳಿಗಳಲ್ಲಿಯೇ ದೊರಕುತ್ತಿದೆ ಎಂಬ ಆರೋಪಗಳಿವೆ. ಅಷ್ಟಕ್ಕೂ ದರವೂ ಸಹ ದುಪ್ಪಟ್ಟಾಗಿದೆ. ಅಂದರೆ ಎಂಆರ್‍ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ, ದ್ವಿಗುಣ ದರಕ್ಕೆ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳೇಕೆ ಮೌನ ವಹಿಸಿದ್ದಾರೆ? ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಸಿಬ್ಬಂದಿಗೂ ಪಾಲು ಇರಲೇಬೇಕಲ್ಲವೆ? ಅಬಕಾರಿ ಇಲಾಖೆಯ ಜೊತೆಗೆ ಸಂಬಂಧಿಸಿದ ಇತರೆ ಇಲಾಖೆಯವರೂ ಇದಕ್ಕೆ ಹೊಣೆಗಾರರು.

      ಪಾವಗಡ, ಮಧುಗಿರಿ ಮತ್ತು ಶಿರಾದ ಗಡಿ ಭಾಗಗಳಲ್ಲಿ ಯಥೇಚ್ಛವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ದೂರುಗಳು ಬಹಳ ಹಿಂದಿನಿಂದಲೂ ಕೇಳಿಬರುತ್ತಿವೆ. ಆ ಭಾಗಗಳಲ್ಲಿ ನಡೆಯುವ ಕೆಲವು ಸಭೆಗಳಲ್ಲಿ ಸಂಘಟನೆಗಳ ಮುಖಂಡರೆ ಧ್ವನಿ ಎತ್ತುತ್ತಾ ಬಂದಿದ್ದಾರೆ. ತಕ್ಷಣಕ್ಕೆ ಎಂಬಂತೆ ಸಾರ್ವಜನಿಕರ ಕಣ್ಣೊರೆಸುವ ಸಲುವಾಗಿ ಒಂದೆರಡು ಕಡೆ ದಾಳಿಯಾಗಿ ಮದ್ಯ ವಶಪಡಿಸಿಕೊಳ್ಳುವ ಸುದ್ದಿಗಳು ಪತ್ರಿಕೆಯಲ್ಲಿ ವರದಿಯಾಗುತ್ತವೆ. ನಂತರ ಅದೇ ಹಳೆ ಕಥೆ. ಇದರಲ್ಲಿಯೆ ಹಣ ಮಾಡಿಕೊಳ್ಳುವವರಿದ್ದಾರೆ.

      ಒಂದು ಕಡೆ ದಾಳಿಯಾದರೆ ಸಾಕು ಆ ಮಾಹಿತಿ ಮತ್ತೊಂದು ಕಡೆಗೆ ಹೋಗುತ್ತದೆ. ಕಪ್ಪ ಕಾಣಿಕೆ ಸಲ್ಲಿಕೆಯಾಗುತ್ತದೆ. ಇದೊಂದು ಚೈನ್‍ಲಿಂಕ್ ವ್ಯವಸ್ಥೆ. ಭಾಗಿದಾರರು ಹಲವಾರು ಮಂದಿ. ಹೀಗಾಗಿ ಈ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಸಾಧ್ಯವಾಗದಂತಹ ವ್ಯೂಹ ರಚಿಸಿಕೊಂಡಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೆಲ್ಲ ದಾಳಿ ಮಾಡುವ ಕೆಲವು ಇಲಾಖೆಯವರು ಇಂತಹ ವಿಷಯಗಳಲ್ಲಿ ಏನೂ ಗೊತ್ತಿಲ್ಲದವರಂತೆ ಮೌನ ವಹಿಸುತ್ತಾರೆ. ಇದಕ್ಕೆ ಕಾರಣ ಇರಲೇಬೇಕಲ್ಲವೆ..?

      ಹಳ್ಳಿಗಳ ಕಡೆ ಇಂತಹದ್ದೆ ಮದ್ಯ ಬೇಕೆಂದೇನೂ ಇಲ್ಲ. ಆದರೆ ಕಡಿಮೆ ಬೆಲೆಗೆ ಮದ್ಯವಂತೂ ಸಿಗಲ್ಲ. ಏನಿದ್ದರೂ 50 ರೂ.ಗಳ ದರದ ಮೇಲೆಯೆ ವ್ಯಾಪಾರ. ಅದು 100 ರಿಂದ ಹಿಡಿದು 200 ರೂ.ಗಳ ತನಕ ಮಾರಾಟವಾಗುತ್ತದೆ. ಒಂದು ಬಾಟಲ್‍ನಲ್ಲಿ ಹಲವರು ಷೇರ್ ಮಾಡಿಕೊಳ್ಳುವವರೂ ಇದ್ದಾರೆ. ಕೆಲವು ಸ್ಯಾಚೆಟ್‍ಗಳೂ ಇವೆ. ಓಬಿ, ಬಿಬಿ, ರಾಜಾ, ಎಂಸಿ ರಮ್, ವಿಸ್ಕಿ, ಬ್ರಾಂದಿ ಹೀಗೆ ನಾನಾ ತರಹದ ವೈನ್‍ಗಳು ಸಿಗುತ್ತಿದ್ದು, ಕೆಲವರು ಬ್ರಾಂಡ್‍ಗಳಿಗೆ ಹೊಂದಿಕೊಂಡು ಬಿಟ್ಟಿದ್ದಾರೆ.

      ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕೂಲಿ ಕಾರ್ಮಿಕರು, ದೈನಂದಿನ ವ್ಯವಹಾರದ ಚಟುವಟಿಕೆಗಳಲ್ಲಿ ತೊಡಗಿರುವವರು, ನಿರುದ್ಯೋಗಿಗಳು, ಉದ್ಯೋಗದಿಂದ ವಂಚಿತರಾಗಿ ಬಂದಿರುವವರು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಳ್ಳಿಗೆ ಮರಳಿರುವ ನಗರ ವಾಸಿಗಳು ಹೀಗೆ ಹಲವು ರೀತಿಯ ಜನರಿದ್ದಾರೆ. ಕೃಷಿ ಕಾಯಕದಲ್ಲಿ ನಿಷ್ಠೆ ಹೊಂದಿರುವವರು ಮದ್ಯದ ಅಂಗಡಿಗಳತ್ತ ಹೋಗುವುದು ಕಡಿಮೆ. ಆದರೆ ಇತರೆ ದುಡಿಮೆಗಳಲ್ಲಿ ತೊಡಗಿಕೊಂಡಿರುವವರು ಇಂತಹ ಚಟಗಳಿಗೆ ಒಳಗಾಗುತ್ತಿದ್ದಾರೆ. ಹೇಳಿ-ಕೇಳಿ ಈಗ ಲಾಕ್‍ಡೌನ್ ಇರುವುದರಿಂದ ಪೊಲೀಸರು, ಅಬಕಾರಿ ಇಲಾಖೆಯವರು ಅತ್ತ ಸುಳಿಯಲಾರರು. ಇದರಿಂದಾಗಿ ಬಹುತೇಕರು ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ವ್ಯಸನಿಗಳಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಂಘದಿಂದ ಸನ್ಯಾಸಿ ಕೆಟ್ಟ ಎಂಬಂತೆ ಯುವಕರ ಹಾಗೂ ಕೂಲಿ ಕಾರ್ಮಿಕರ ಗುಂಪು ಮದ್ಯದ ಚಟಕ್ಕೆ ದಾಸರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ.

     ಇದಕ್ಕೆ ಪೂರಕವಾಗಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿರುವುದು. ಮನೆಗಳಲ್ಲಿಯೇ ಮದ್ಯ ಮಾರುತ್ತಾರೆಂದರೆ ಅದಕ್ಕಿಂತ ನೀಚಕೃತ್ಯ ಮತ್ತೊಂದಿದೆಯೆ? ಹೇಳಲು ಒಂದು ಅಂಗಡಿಯ ಅಥವಾ ವ್ಯವಹಾರದ ಹೆಸರು. ಆದರೆ ಅದರೊಳಗೆ ಮದ್ಯದ ಘಮಲು ಇದೆ ಎಂಬುದು ಅಲ್ಲಿರುವವರಿಗೆ ಗೊತ್ತು. ಇದು ಇಲಾಖೆಯವರಿಗೂ ತಿಳಿದ ವಿಷಯ. ಆದರೆ ಒಂದು ರೀತಿಯ ಒಳ ಒಪ್ಪಂದ ಇಲ್ಲಿ ಎದ್ದು ಕಾಣುತ್ತದೆ.

      ಅಬಕಾರಿ ಇಲಾಖೆಯವರಿಗೆ ಹಳ್ಳಿಗಳಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟದ ಚಟುವಟಿಕೆಗಳು ಗೊತ್ತಿಲ್ಲವೆಂದಲ್ಲ. ಎಲ್ಲವೂ ಅವರ ಮೂಗಿನಡಿಯಲ್ಲಿಯೇ ನಡೆಯುತ್ತಿವೆ. ಆದರೆ ಈ ಅಕ್ರಮ ದಂಧೆಗಳಿಗೆ ಅವರ ಕುಮ್ಮಕ್ಕೂ ಮತ್ತು ಸಹಕಾರ ಇರುವುದರಿಂದ ಎಲ್ಲವೂ ರಾಜಾರೋಷವಾಗಿ ನಡೆದು ಹೋಗುತ್ತಿದೆ. ಯಾರಾದರೂ ದೂರಿದರೆ ಮಾತ್ರ ನೆಪ ಮಾತ್ರಕ್ಕೆ ದಾಳಿ ಮಾಡುವ ಪ್ರಸಂಗಗಳು ಅಲ್ಲಲ್ಲಿ ಕಂಡುಬರುತ್ತಿವೆ.

ಇತ್ತೀಚೆಗೆ ಜಿಲ್ಲೆಯ ಒಂದೆರಡು ಕಡೆ ಅಬಕಾರಿ ದಾಳಿ ನಡೆದಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರ ಹಿಂದೆಯೂ ಕೆಲವು ತಂತ್ರಗಾರಿಕೆಗಳಿವೆ. ಒಂದು ಕಡೆ ದಾಳಿ ಮಾಡುವ ಮೂಲಕ ಇತರರಿಗೆ ಎಚ್ಚರಿಕೆ ಕೊಡುವುದು, ನಮ್ಮನ್ನು ನೋಡಿಕೊಳ್ಳಿ ಎಂಬ ಸಂದೇಶ ರವಾನಿಸುವುದು ಇದರ ಹಿಂದಿನ ತಂತ್ರಗಾರಿಕೆಗಳಲ್ಲಿ ಒಂದು. ಇಂತಹ ದಾಳಿಗಳು ಪ್ರಾಮಾಣಿಕವಾಗಿ ಇದ್ದರೆ ಇಷ್ಟೊತ್ತಿಗಾಗಲೆ ಅದೆಷ್ಟೋ ಅಕ್ರಮ ಮದ್ಯದಂಗಡಿಗಳನ್ನು ಮುಚ್ಚಿಸಬಹುದಿತ್ತು. ಎಷ್ಟು ಅಕ್ರಮ ಅಂಗಡಿಗಳನ್ನು ಮುಚ್ಚಿಸಿದ್ದಾರೆ? ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಇಲಾಖೆ ಬಹಿರಂಗಪಡಿಸಲು ಸಿದ್ಧವಿದೆಯೇ?

ಕಳ್ಳಾಟಗಳಿಗೆ ಇಲಾಖೆಯವರೆ ಕುಮ್ಮಕ್ಕು

      ಜಿಲ್ಲೆಯಲ್ಲಿ ಇರುವ ಅಧಿಕೃತ ಮದ್ಯದ ಅಂಗಡಿಗಳು ಸರಾಸರಿ 360ನ್ನು ದಾಟುವುದಿಲ್ಲ. ಆದರೆ ಪ್ರತಿ ತಾಲ್ಲೂಕಿನಲ್ಲಿಯೂ ಒಂದು ಸಾವಿರಕ್ಕೂ ಅಧಿಕ ಅಕ್ರಮ ಮದ್ಯದಂಗಡಿಗಳು ಸಿಗುತ್ತವೆ. ಊರ ಹೊರಗಿನ ಅಂಗಡಿಗಳು, ಪೆಟ್ಟಿಗೆ ಅಂಗಡಿಗಳು ಹಾಗೂ ಕೆಲವು ಮನೆಗಳಲ್ಲಿಯೇ ಕದ್ದೂ-ಮುಚ್ಚಿ ವ್ಯವಹಾರ ನಡೆಯುತ್ತದೆ. ಈ ಕಳ್ಳಾಟ ಇಲಾಖೆಯವರಿಗೂ ಗೊತ್ತು. ಇಲಾಖೆಯಲ್ಲಿರುವವರೆ ಈ ಅಕ್ರಮ ಆಟಗಳ ರೂವಾರಿಗಳೂ ಆಗಿದ್ದಾರೆ. ಮಾಹಿತಿ ನೀಡುವ, ಸಲಹೆ ನೀಡುವ, ಬಚಾವ್ ಆಗಲು ಬೇಕಾದ ಮಾರ್ಗೋಪಾಯ ಹೇಳಿಕೊಡುವ ಮಂದಿ ಇರುವುದರಿಂದಲೆ ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಅಂಗಡಿಗಳು ತಲೆಎತ್ತುತ್ತಿವೆ. ಜನ ಇದರಿಂದ ಸತ್ತರೆಷ್ಟು, ಇದ್ದರೆಷ್ಟು ಇವರ ಹೊಟ್ಟೆ ದಪ್ಪಗಾಗಬೇಕಷ್ಟೆ.

ಕೌಟುಂಬಿಕ ಜಗಳ ಹೆಚ್ಚಳ

      ನಗರದಲ್ಲಿದ್ದವರು ಹಳ್ಳಿ ಸೇರಿಕೊಂಡಿದ್ದಾರೆ. ಒಂದಿಷ್ಟು ಹಣ ಇಟ್ಟುಕೊಂಡವರು ಜೂಜು, ಮದ್ಯ ಇತ್ಯಾದಿಗಳಿಗೆ ಖರ್ಚು ಮಾಡುತ್ತಿದ್ದಾರೆ. ಈ ಚಾಳಿಗೆ ಬಿದ್ದ ಹಲವರು ಈಗಾಗಲೇ ಜೇಬು ಖಾಲಿ ಮಾಡಿಕೊಂಡಿದ್ದಾರೆ. ಮುಂದೇನು ಎಂಬ ಚಿಂತೆ ಅವರಲ್ಲಿದೆ. ದುಡಿಯಲು ಉದ್ಯೋಗವಿಲ್ಲ, ಮನೆಯಲ್ಲಿ ಸುಮ್ಮನೆ ಇರಲು ಆಗುತ್ತಿಲ್ಲ. ಮಾನಸಿಕ ತಳಮಳ ಏರುಪೇರಾಗಿ ಕುಟುಂಬದವರ ಮೇಲೆ ಸಿಟ್ಟು ಮಾಡಿಕೊಳ್ಳುವ, ಜಗಳ ತೆಗೆದು ಮನೆಯ ಶಾಂತಿಯನ್ನೇ ಕದಡುವ ಪ್ರಸಂಗಗಳು ಹೆಚ್ಚುತ್ತಿವೆ. ಗ್ರಾಮಗಳಲ್ಲಿ ಇರುವ ಇತರೆ ನಿರುದ್ಯೋಗಿಗಳು, ಕೂಲಿ ಕಾರ್ಮಿಕರಿಗೆ ನಗರ ಪ್ರದೇಶಗಳಲ್ಲಿ ಕೆಲಸವಿಲ್ಲದೆ ಇರುವುದರಿಂದ ಅವರೂ ಪರಿತಪಿಸುತ್ತಿದ್ದಾರೆ. ಆರ್ಥಿಕ ಜಂಜಾಟಗಳು ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಹಳ್ಳಿ ಹಳ್ಳಿಗಳಲ್ಲಿ ತಲೆ ಎತ್ತಿರುವ ಅಕ್ರಮ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸದೆ ಹೋದರೆ ಬಹಳಷ್ಟು ಕುಟುಂಬಗಳು ನರಕಕ್ಕೆ ಸಿಲುಕುತ್ತವೆ.

      ಅಧಿಕಾರಿಗಳ ಮೆಚ್ಚಿಸಲಿಕ್ಕೋ, ಇಲ್ಲವೆ ತಿಂಗಳಿಗೆ ಇಂತಿಷ್ಟು ಕೇಸ್ ಕೊಡಬೇಕೆಂಬ ನಿಯಮದಿಂದಲೋ ಅಬಕಾರಿ ಇಲಾಖೆಯವರು ಕೆಲವು ಕಡೆ ರೈಡ್ ಮಾಡುವ ಮೂಲಕ ಅಧಿಕಾರಿಗಳು ಕೈ ತೊಳೆದು ಕೊಳ್ಳುತ್ತಾರೆ. ಜನಪ್ರತಿನಿಧಿಗಳಿಂದ ಇಲ್ಲವೆ ತಮ್ಮ ಮೇಲಧಿಕಾರಿಗಳಿಂದಲೋ ಒತ್ತಡ ಬಂದರೆ ನಾಮಕಾವಸ್ಥೆಗೆಂಬಂತೆ ಕೇಸು ದಾಖಲಿಸಿ ಅವರನ್ನು ಬಚಾವ್ ಮಾಡುವ ತಂತ್ರವೂ ಇವರಲ್ಲಿದೆ.
ಲಾಕ್‍ಡೌನ್ ಸಮಯದಲ್ಲಂತೂ ಗ್ರಾಮಾಂತರ ಪ್ರದೇಶದ ಜನರಿಗೆ ಸುಗ್ಗಿಯೋ ಸುಗ್ಗಿ. ಈ ಸಮಯದಲ್ಲಿ ಎಲ್ಲೂ ಹೊರಗಡೆ ಹೋಗುವಂತಿಲ್ಲ ಎಂಬ ಸತ್ಯವನ್ನರಿತು ಬೆಳಗ್ಗೆಯಿಂದ ಸಂಜೆಯವರೆಗೂ ಕುಡಿತಕ್ಕೆ ಎಷ್ಟು ಬೇಕೋ ಅಷ್ಟು ಹಣವನ್ನು ಹೇಗಾದರೂ ಸಂಪಾದಿಸಿಕೊಂಡು ಬಿಡುತ್ತಾರೆ. ಆಗೊಮ್ಮೆ ಹಣವಿಲ್ಲದಿದ್ದರೆ ಮನೆಯವರಿಗೆ ಚಿತ್ರಹಿಂಸೆ ನೀಡಿಯಾದರೂ ಅವರಿಂದ ಹಣ ಪಡೆದು ಕುಡಿತದ ಚಟಕ್ಕೆ ವಿನಿಯೋಗಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap