ತುಮಕೂರು :
ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಾಗಲು ಸೋಂಕು ಲಕ್ಷಣವುಳ್ಳವರು ಹಿಂದೇಟು ಹಾಕುತ್ತಿದ್ದಾರೆ. ಮನೆಯಲ್ಲಿಯೇ ಐಸೋಲೇಷನ್‍ಗೆ ಒಳಗಾಗಲು ಪ್ರಯತ್ನಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಅಂಟಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೋನಾ ಹೆಮ್ಮಾರಿ ಮನೆ ಮನೆಗೂ ವ್ಯಾಪಿಸುತ್ತಿದೆ. ಸೋಂಕಿತರ ಸಂಪರ್ಕಗಳ ಚೈನ್ ಲಿಂಕ್ ತಪ್ಪಿಸಲಾಗದ ಕಾರಣ ನಗರಗಳಿಗಿಂತ 2ನೇ ಅಲೆಯಲ್ಲಿ ಗ್ರಾಮಗಳೇ ಹೆಚ್ಚು ಟಾರ್ಗೆಟ್ ಆಗಿವೆ.
ಸೋಂಕು ಪ್ರಸರಣದ ತೀವ್ರತೆ ಹೆಚ್ಚಾದ ನಂತರ ಈಗ ಪ್ರತಿ ತಾಲ್ಲೂಕುಗಳಲ್ಲಿಯೂ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 17 ಕೋವಿಡ್ ಸೆಂಟರ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಮತ್ತಷ್ಟು ಸೆಂಟರ್‍ಗಳನ್ನು ತೆರೆಯಲು ಸ್ಥಳ ಹುಡುಕಾಟ ನಡೆದಿದೆ. ಸದ್ಯಕ್ಕೆ ಈಗ ಕೇರ್ ಸೆಂಟರ್‍ಗಳಿಗೆ ಬರವಿಲ್ಲ, ಆದರೆ ಅಲ್ಲಿಗೆ ಸೋಂಕು ಲಕ್ಷಣ ಇರುವವರನ್ನು ಕರೆ ತರುವುದೇ ಒಂದು ದೊಡ್ಡ ಸವಾಲಾಗಿದೆ.
ಪಾರಂಪರಿಕ ಔಷಧೋಪಚಾರ, ಈಗಾಗಲೇ ಚಾಲ್ತಿಯಲ್ಲಿರುವ ಕಷಾಯ, ಮಾತ್ರೆಗಳನ್ನು ನುಂಗಿದರೆ ಕೊರೋನಾ ಓಡಿ ಹೋಗುತ್ತದೆ ಎನ್ನುವ ಗ್ರಾಮೀಣರ ಅತಿಯಾದ ನಂಬಿಕೆಗಳೇ ಕೆಲವೊಮ್ಮೆ ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಇರಬಹುದು, ಅದೆಷ್ಟೊ ಜನ ಇಂತಹ ಕ್ರಮಗಳಿಂದಾಗಿಯೇ ಗುಣಮುಖರಾಗಿರಬಹುದು. ಆದರೆ ಅದು ಸಾರ್ವತ್ರಿಕವಲ್ಲ ಎಂಬುದು ಮನವರಿಕೆಯಾಗಬೇಕು. ಆರಂಭದಲ್ಲಿ ಲಕ್ಷಣಗಳನ್ನು ಮುಚ್ಚಿಟ್ಟು ರೋಗ ಉಲ್ಬಣಿಸಿದಾಗ ಆಸ್ಪತ್ರೆಗಳ ಕಡೆಗೆ ಹೋಗುವುದರಿಂದ ಆರೋಗ್ಯ ಮತ್ತು ವೈದ್ಯಕೀಯ ವ್ಯವಸ್ಥೆ ಕೈ ಚೆಲ್ಲಿಬಿಡುತ್ತಿದೆ. ಇಂತಿಷ್ಟು ದಿನಗಳು ಕೇರ್ ಸೆಂಟರ್‍ನಲ್ಲಿಯೇ ಉಳಿಯಬೇಕಲ್ಲ ಎಂಬ ಅಸಡ್ಡೆ, ಅಲ್ಲಿಯವರೆಗೆ ಮನೆ ಕೆಲಸಗಳು, ಕೃಷಿ ಚಟುವಟಿಕೆ ಸ್ಥಗಿತಗೊಳ್ಳುವ ಆತಂಕ ಇತ್ಯಾದಿಗಳ ಜೊತೆ ಆರೈಕೆ ಕೇಂದ್ರಗಳಲ್ಲಿ ವ್ಯವಸ್ಥೆ ಸರಿಯಿಲ್ಲ, ನೋಡಿಕೊಳ್ಳುವುದಿಲ್ಲ ಮೊದಲಾದ ವದಂತಿಗಳಿಂದಾಗಿಯೇ ಬಹಳಷ್ಟು ಜನ ಕೇರ್ ಸೆಂಟರ್‍ಗಳಿಗೆ ದಾಖಲಾಗಲು ಹಿಂಜರಿಯುತ್ತಿದ್ದಾರೆ. ಗ್ರಾಮೀಣ ಜನರಲ್ಲಿರುವ ಇಂತಹ ಹಲವು ಹತ್ತು ಆತಂಕಗಳು ಹಾಗೂ ಭಯವನ್ನು ನಿವಾರಿಸಿ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಸ್ಥಳೀಯ ಮಟ್ಟದಿಂದಲೇ ಆಗಬೇಕು. ಈ ವಿಷಯದಲ್ಲಿ ವೈಫಲ್ಯಗಳೇ ಢಾಳಾಗಿ ಕಾಣಿಸುತ್ತಿವೆ.
ಗ್ರಾಮ ಮಟ್ಟದಲ್ಲಿ ಕಾರ್ಯಪಡೆ :
ಗ್ರಾಮೀಣ ಭಾಗದಲ್ಲಿ ಸೋಂಕು ತಡೆಗಟ್ಟಲು ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಮಟ್ಟದ ಕಾರ್ಯಪಡೆ ರಚಿಸಿದೆ. ಸೋಂಕು ಹರಡುವುದನ್ನು ತಡೆಗಟ್ಟುವ, ಸಾಂಕ್ರಾಮಿಕ ರೋಗಕ್ಕೆ ತುತ್ತಾಗ ಬಹುದಾದ ದುರ್ಬಲ ವರ್ಗದವರನ್ನು ಹೋಂ ಕ್ವಾರಂಟೈನ್ ಮತ್ತು ಸೋಂಕಿತರನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಿರುವ ಬಗ್ಗೆ ನಿಗಾವಹಿಸಲೆಂದೇ ಗ್ರಾಮ ಪಂಚಾಯತಿ ಹೆಲ್ಪ್ ಡೆಸ್ಕ್ ಗಳನ್ನು ರಚಿಸಲಾಗಿದೆ. ಗ್ರಾಮ ಪಾಂಚಾಯತ್‍ಗಳು ಸಮುದಾಯ ಸಹಾಯವಾಣಿಗಳಾಗಿ ಕಾರ್ಯನಿರ್ವಹಿಸಲು ದಿನಾಂಕ 28 ಏಪ್ರಿಲ್ 2021 ರ ಆದೇಶದಲ್ಲಿ ತಿಳಿಸಲಾಗಿದೆ.
ನಗರ ಪ್ರದೇಶದಿಂದ ಹಿಂದಿರುಗುವ ವಲಸೆ ಕಾರ್ಮಿಕರು, ಮಹಿಳಾ ಕಾರ್ಮಿಕರಿಗೆ ಮತ್ತು ದುರ್ಬಲ ವರ್ಗದವರಿಗೆ ಊಟ, ಮಾಸ್ಕ್, ಮತ್ತು ಸ್ಯಾನಿಟೈಸರ್ ಗಳನ್ನು ಒದಗಿಸುವ ಹೊಣೆಗಾರಿಕೆಯನ್ನು ಗ್ರಾ.ಪಂ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಯ ಹೆಗಲಿಗೆ ಹಾಕಲಾಗಿದೆ. ವಿಶೇಷವಾಗಿ ನಿರ್ಗತಿಕರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ ಮಹಿಳೆಯರಿಗೆ, ಸ್ವಯಂ ಸೇವಕರಿಗೆ ಅವಶ್ಯ ಸೌಲಭ್ಯಗಳನ್ನು ಒದಗಿಸಲು ಸೊಚಿಸಿದೆ. ಗ್ರಾಮ ಪಂಚಾಯಿತಿ ಸಮುದಾಯ ಸಹಾಯವಾಣಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಕ್ರಮ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ಸ್ವಚ್ಚತಾ ಪರಿಕರಗಳ ನಿರ್ವಹಣೆಗೆ 14 ನೇ ಹಣಕಾಸು ಆಯೋಗದ ಉಳಿಕೆ ಅನುದಾನ ಮತ್ತು 15 ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.
ವಾಸ್ತವವಾಗಿ ಪಂಚಾಯತ್ ಗಳಲ್ಲಿ 14 ನೇ ಹಣಕಾಸು ವ್ಯವಸ್ಥೆಯಲ್ಲಿ ಅನುದಾನವೇ ಉಳಿದಿಲ್ಲ, ಮಾರ್ಚ ವೇಳೆಗಾಗಲೇ ಈ ಅನುದಾವೆಲ್ಲ ಬರಿದಾಗಿದೆ . ಏನಿದ್ದರೂ 15 ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಳ್ಳಬೇಕು. ಕರ್ನಾಟಕ ಸರ್ಕಾರವು 2020 ರಲ್ಲಿ ಕೋವಿಡ್ ಮೊದಲ ಅಲೆ ಎದುರಾದಾಗಲೇ ಕಾರ್ಯಪಡೆ ರಚಿಸಿತ್ತು. ಪ್ರತಿ ಗ್ರಾ.ಪಂ.ಗೆ 20, 000 ರೂ.ಗಳನ್ನು ನೀಡುವುದಾಗಿ ಹೇಳಿತ್ತು. ಆದರೆ ಕೋವಿಡ್ ನಿರ್ವಹಣಾ ವೆಚ್ಚ 20,000 ರೂ, ಗಳು ಇನ್ನೂ ಕೆಲವು ಪಂಚಾಯತ್ ಗಳಿಗೆ ತಲುಪಿಯೇ ಇಲ್ಲ ಎಂಬ ಆರೋಪಗಳಿವೆ. ಈ ವರ್ಷ ಪಂಚಾಯತ್ ಗಳಿಗೆ 50,000 ರೂ,ಗಳನ್ನು ಸರ್ಕಾರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು ಅದು
ಯಾವಾಗ ತಲುಪುವುದೋ..?
ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಿಸುಮಾರು 8 ರಿಂದ 15 ಗ್ರಾಮಗಳು ಒಳಪಡುತ್ತವೆ. ಇದು ಆಯಾ ಗ್ರೇಡ್‍ಗಳ ಪಂಚಾಯತ್ ವ್ಯಾಪ್ತಿ ಅವಲಂಬಿಸಿದೆ. ಬಹುತೇಕ ಎಲ್ಲ ಕೆಲಸ ಕಾರ್ಯಗಳಿಗೂ 14 ನೇ ಹಣಕಾಸು ಆಯೋಗವನ್ನೆ ಬಳಸಿಕೊಳ್ಳ ಲಾಗುತ್ತದೆ. ಸರ್ಕಾರದ, ಜಿಲ್ಲಾ ಆಡಳಿತದ ಯಾವುದೇ ಸುತ್ತೋಲೆ ಬಂದರೂ 14 ನೇ ಹಣಕಾಸು ಬಳಸಿಕೊಳ್ಳಿ ಎಂಬ ಉಲ್ಲೇಖ ಇರುತ್ತದೆ. ಇದರೊಳಗೆ ಈಗ ಕೋವಿಡ್ ನಿರ್ವಹಣೆಯನ್ನೂ ಸೇರಿಸಲಾಗಿದೆ. ಆದರೆ ಕೊರೋನಾ ಸಂದಿಗ್ಧ ಕಾಲದಲ್ಲಿ 15 ನೇ ಹಣಕಾಸು ಸ್ವಲ್ಪ ಮಟ್ಟಿಗೆ ನೆರವಿಗೆ ಬರಬಹುದು.
ಸೋಂಕು ಪ್ರಸರಣದ ಲಿಂಕ್ ಕಡಿತವಾಗುತ್ತಿಲ್ಲ :
ಕೆಲವು ಗ್ರಾಮಗಳಲ್ಲಿ ಮನೆ ಮಂದಿಯೆಲ್ಲಾ ಸೋಂಕಿಗೆ ಒಳಗಾಗಿದ್ದಾರೆ. ಒಬ್ಬರಿಂದ ಒಬ್ಬರಿಗೆ ಬಹುಬೇಗ ಹೆಡಿಬಿಟ್ಟಿದೆ. ಕೋವಿಡ್ ಲಕ್ಷಣ ಗೊತ್ತಾದ ಕೂಡಲೇ ಜನ ಅದನ್ನು ಬಹಿರಂಗ ಪಡಿಸುತ್ತಿಲ್ಲ. ಹಿಂಜರಿಯುತ್ತಿದ್ದಾರೆ. ಮನೆಯಲ್ಲಿಯೇ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ಅವರಾರೂ ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ, ಅಂತಹ ವ್ಯವಸ್ಥೆಗಳೂ ಇಲ್ಲ. ಹೀಗಾಗಿ ಸೋಂಕು ಇರುವ ಮಂದಿ ಮನೆ ಮಂದಿಗೆಲ್ಲಾ ಹರಡುತ್ತಿದ್ದಾರೆ, ಆ ಮನೆಯವರು ಊರಿಗೇ ಹರಡುತ್ತಿದ್ದಾರೆ. ಇದನ್ನು ಮೊದಲು ತಪ್ಪಿಸಬೇಕು. ರೋಗ ಲಕ್ಷಣ ಗೊತ್ತಾದ ಕೂಡಲೇ ಕೋವಿಡ್ ಸೆಂಟರ್‍ಗೆ ದಾಖಲಾಗಬೇಕು. ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಮುಖಂಡರು ಎಲ್ಲರೂ ಸೇರಿ ಈ ತಿಳುವಳಿಕೆ ಮೂಡಿಸಬೇಕು. ಆಗ ಮಾತ್ರ ಹಳ್ಳಿಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ತರಬಹುದು. ಮುಖ್ಯವಾಗಿ ಸೋಂಕಿತರ ಸಂಪರ್ಕದ ಲಿಂಕ್ ತಪ್ಪಬೇಕು.
-ವೀರಣ್ಣ ಸಿದ್ದಾಪುರ, ಅಧ್ಯಕ್ಷರು, ಸಿದ್ದಾಪುರ ಗ್ರಾ.ಪಂ. ಮಧುಗಿರಿ ತಾ.
ಜಾಗೃತಿ ಮೂಡಿಸುವಲ್ಲಿ ವೈಫಲ್ಯ
ಗ್ರಾಮ ಮಟ್ಟದ ಕಾರ್ಯಪಡೆ 2020 ರಲ್ಲಿಯೇ ರಚನೆಯಾಗಿವೆ. ಇದನ್ನು ಮುಂದುವರಿಸಿ ಪರಿಷ್ಕøತ ಆದೇಶ ಹೊರಬಿದ್ದಿದೆ. ಗ್ರಾಮಗಳಲ್ಲಿ ಹೆಚ್ಚು ಜನ ಒಂದು ಕಡೆ ಸೇರದಂತೆ ಎಚ್ಚರಿಕೆ ವಹಿಸುವುದು ಕಾರ್ಯಪಡೆಯ ಮುಖ್ಯ ಉದ್ದೇಶಗಳಲ್ಲಿ ಒಂದು. ಮದುವೆ ಸಮಾರಂಭ, ಜಾತ್ರೆ, ಹಬ್ಬದ ಸಿರಿ ಇತ್ಯಾದಿ ಹೆಸರಿನಲ್ಲಿ ಜನತೆ ಒಂದುಕಡೆ ಸೇರುತ್ತಿದ್ದು ಇದನ್ನು ನಿಯಂತ್ರಣ ಮಾಡುವ ಹೊಣೆಗಾರಿಕೆಯನ್ನು ಮೇ ಆರಂಭದಲ್ಲಿಯೇ ನೀಡಬೇಕಿತ್ತು. ಆದರೆ ಸರ್ಕಾರ ನಾಮಕಾವಸ್ಥೆಗೆ ಎಂಬಂತೆ ಕಾರ್ಯಪಡೆ ರಚಿಸಿ ಅದನ್ನು ಗ್ರಾ.ಪಂ ಹೆಗಲಿಗೆ ಹಾಕಿ ಕುಳಿತಿರುವಂತಿದೆ. ಗ್ರಾ.ಪಂ. ಅಧ್ಯಕ್ಷ ಸೇರಿ ಒಟ್ಟು 10 ಮಂದಿ ಕಾರ್ಯಪಡೆ ತಂಡದಲ್ಲಿದ್ದಾರೆ. ತಂಡದ ಈ ಸದಸ್ಯರೆಲ್ಲ ಕಾರ್ಯಾಚರಣೆಗೆ ಇಳಿದರೆ ಗ್ರಾಮ ಮಟ್ಟದಲ್ಲಿ ಸೋಂಕು ನಿಯಂತ್ರಣ ಕಷ್ಟಕರವೇನಲ್ಲ. ಆಶಾ ಕಾರ್ಯಕರ್ತೆಯರ ರೀತಿ ಇತರರೂ ಸಹಕರಿಸುವಂತಹ ವಾತಾವರಣ ಗ್ರಾಮ ಮಟ್ಟದಲ್ಲಿ ಮೂಡಬೇಕು.
-ಸಾ.ಚಿ.ರಾಜಕುಮಾರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ