ಜೀವರಕ್ಷಕ ಲಸಿಕೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವೆ…?

 ತುಮಕೂರು :

      ಕೋವಿಡ್ ಲಸಿಕೆಗೆ ಕೊರತೆ ಎದುರಾಗಿರುವ ಸಂದರ್ಭದಲ್ಲಿಯೇ ಖಾಸಗಿಯಾಗಿ ಲಸಿಕೆ ಸಿಗುವಂತಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೋವಿಡ್ ಸಂದರ್ಭದ ಕರ್ಮಕಾಂಡಗಳ ನಡುವೆ ಇದೂ ಒಂದು ದಂಧೆಯಾಗಿ ಮಾರ್ಪಟ್ಟಿರುವುದು ಅಸಹ್ಯ ಹುಟ್ಟಿಸುತ್ತಿದೆ.

      ಲಸಿಕೆ ಬಿಡುಗಡೆಯಾದ ಆರಂಭದಲ್ಲಿ ಜನ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆಗೆ ವ್ಯವಸ್ಥೆ ಮಾಡಲಾಯಿತು. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ದರ ನಿಗದಿ ಪಡಿಸಲಾಯಿತು. ಕ್ರಮೇಣ ದೇಶಾದ್ಯಂತ ಕೋವಿಡ್ ಲಸಿಕೆಯ ಅಲಭ್ಯತೆ ಹೆಚ್ಚತೊಡಗಿತು. ಒಂದು ಕಡೆ ಖಾಸಗಿಯಾಗಿ ಆಸ್ಪತ್ರೆಗಳಲ್ಲಿ ಲಸಿಕೆ ದೊರೆತರೆ ಸಾರ್ವಜನಿಕ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಡೋಸ್ ಇಲ್ಲದೆ ಜನತೆ ವಾಪಸ್ ಆಗುವಂತಹ ದೃಶ್ಯಗಳು ಹೆಚ್ಚಾಗತೊಡಗಿದವು. ಇದು ಇನ್ನೂ ಮುಂದುವರೆದಿದೆ.

ಕೊರೊನಾ ವೈರಾಣುವಿಗೆ ಔಷಧಿ ಇನ್ನೂ ಸಿಕ್ಕಿಲ್ಲದ ಈ ಸಂದರ್ಭದಲ್ಲಿ ಸದ್ಯದ ಜೀವರಕ್ಷಕವಾಗಿ ಲಸಿಕೆಯನ್ನೇ ಎಲ್ಲರೂ ಅವಲಂಬಿಸುತ್ತಿದ್ದಾರೆ. ಈ ಮಾಹಿತಿ ಸಾರ್ವತ್ರಿಕವಾಗುತ್ತಿದ್ದಂತೆಯೇ ಲಸಿಕೆ ಹಾಕಿಸಿಕೊಳ್ಳಲು ಜನ ಮುಂದೆ ಬರುತ್ತಿದ್ದಾರೆ. ಆದರೆ ಜನತೆಗೆ ತಕ್ಕ ಲಸಿಕೆ ಲಭ್ಯವಾಗದೆ ಇರುವುದು ವ್ಯವಸ್ಥೆಯ ವೈಫಲ್ಯಕ್ಕೂ ಕಾರಣವಾಗುತ್ತಿದೆ. ಕರ್ನಾಟಕ ರಾಜ್ಯ ಹೈಕೋರ್ಟ್ ಸೇರಿದಂತೆ ದೇಶದ ಹಲವು ಹೈಕೋರ್ಟ್‍ಗಳು ಲಸಿಕೆ ನೀಡುವಿಕೆಯಲ್ಲಿನ ತಾರತಮ್ಯದ ವಿರುದ್ಧ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿವೆ. ಲಸಿಕಾ ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವಂತಾದುದರ ವಿಷಯದ ಸೂಕ್ಷ್ಮತೆಯನ್ನು ಗಮನಿಸಬೇಕು.

      ನ್ಯಾಯಾಲಯಗಳು ಮಧ್ಯ ಪ್ರವೇಶಿಸಿದ ನಂತರವೆ ರಾಜ್ಯಗಳಿಗೆ ಲಸಿಕೆ ಡೋಸ್ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಗೆ ನೀಡಲು ಕಾರಣವಾಯಿತು ಎಂಬುದೂ ಸ್ಪಷ್ಟ. ಆದರೂ ಜನಸಂಖ್ಯೆಗೆ ಅನುಗುಣವಾಗಿ ಡೋಸ್ ಲಭ್ಯವಾಗುತ್ತಿಲ್ಲ. ಮೊದಲ ಹಂತದ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಸಾಧ್ಯವಾಗಿಲ್ಲ. ಲಸಿಕಾ ಅಭಿಯಾನ ಎಂಬುದು ಪ್ರಚಾರಕ್ಕಷ್ಟೇ ಸೀಮಿತವಾಗಿದ್ದು, 18 ರಿಂದ 45 ವರ್ಷದ ಒಳಗಿನ ಯುವ ಜನತೆಗೆ ಲಸಿಕೆ ಹಾಕಲು ಸಾಧ್ಯವಾಗಿಲ್ಲ. 45 ವರ್ಷ ಮೇಲ್ಪಟ್ಟವರಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ಹೀಗಿರುವಾಗ ಅಭಿಯಾನ ಎಂಬುದು ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಯಿತು. ಕರ್ನಾಟಕ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಈ ವಿಷಯಕ್ಕಾಗಿಯೆ.

ಗಾಬರಿ ಹುಟ್ಟಿಸುವ ಲಸಿಕಾ ಪ್ಯಾಕೇಜ್ :

ಇತ್ತೀಚಿನ ಕೆಲವು ದಿನಗಳಿಂದ ವರದಿಯಾಗುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ ಖಾಸಗಿಯಾಗಿ ಲಸಿಕೆ ಸಿಗುವಂತಹ ವ್ಯವಸ್ಥೆಗಳು ಹುಟ್ಟಿಕೊಂಡಿರುವುದು ಗಾಬರಿ ಮೂಡಿಸುತ್ತವೆ. ಅಸಹ್ಯವೂ ಉಂಟಾಗುತ್ತಿದೆ. ಹೈದ್ರಾಬಾದ್ ಹಾಗೂ ಮುಂಬೈನ ಕೆಲವು ಖಾಸಗಿ ರೆಸ್ಟೋರೆಂಟ್‍ಗಳಲ್ಲಿ ಲಸಿಕಾ ಪ್ಯಾಕೇಜ್ ಘೋಷಿಸಲಾಗಿದೆ. 2999 ರೂ.ಗಳಿಂದ 5000 ರೂ.ಗಳ ತನಕ ಲಸಿಕಾ ಪ್ಯಾಕೇಜ್ ಪ್ರಕಟಿಸಲಾಗಿದೆ.

      ಇಂತಹ ಕಡೆಗಳಲ್ಲಿ ಲಸಿಕೆ ಪಡೆದರೆ ಅಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆಯಲು ಕೊಠಡಿ, ಜೊತೆಗೆ ಉಪಾಹಾರ, ಊಟ ಇವೆಲ್ಲವೂ ಲಭ್ಯವಾಗಲಿದೆ. ಒಂದು ದಿನವಿಡೀ ವಿಶ್ರಾಂತಿ ಪಡೆಯುವುದಾದರೆ ಅದಕ್ಕಾಗಿಯೇ ಪ್ರತ್ಯೇಕ ಕೊಠಡಿ ಮೀಸಲು. ಬೆಳಗಿನ ಉಪಾಹಾರದಿಂದ ಹಿಡಿದು ರಾತ್ರಿ ಊಟದವರೆಗೆ ವ್ಯವಸ್ಥೆ ಇದೆ. ಈ ಪ್ಯಾಕೇಜ್‍ಗೆ 5000 ರೂ.ಗಳನ್ನು ನಿಗದಿ ಮಾಡಲಾಗಿದೆ. ಈ ಪ್ಯಾಕೇಜ್ ಪ್ರಕಟಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ಈಗ ಬಂದ್ ಆಗಿವೆ. ಲಾಕ್‍ಡೌನ್ ಇರುವ ಸಮಯದಲ್ಲಿ ಪಾರ್ಸಲ್‍ಗೆ ಮಾತ್ರವೆ ಅವಕಾಶ. ವಾಸ್ತವ ಸ್ಥಿತಿ ಹೀಗಿರುವಾಗ ನಗರಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳನ್ನು ತೆರೆದು ಅಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುತ್ತಿರುವುದಾದರೂ ಹೇಗೆ? ಒಂದು ಲಸಿಕೆ ಪಡೆಯಲು 3000 ರೂ.ಗಳಿಂದ 5000 ರೂ.ಗಳವರೆಗೆ ಖರ್ಚು ಮಾಡಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದವರು ಯಾರು? ಇದಕ್ಕೆ ಅವಕಾಶ ನೀಡಿದ್ದಾದರೂ ಹೇಗೆ..? ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಾಗಬೇಕಾದ ಈ ಲಸಿಕೆ ಪ್ರತಿದಿನ ಸಮರ್ಪಕವಾಗಿ ಅಲ್ಲಿ ಸಿಗುತ್ತಿಲ್ಲ. ಆದರೆ ಖಾಸಗಿಯಾಗಿ ಸಿಗುತ್ತಿರುವುದಾದರೂ ಹೇಗೆ?

      ಮುಂಬೈ, ಹೈದರಾಬಾದ್ ಹೈಟೆಕ್ ಸಿಟಿಗಳಲ್ಲಿ ಹೀಗೆ ಕೋವಿಡ್ ಲಸಿಕಾ ಪ್ಯಾಕೇಜ್ ಪ್ರಕಟಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ವ್ಯಾಪಕ ಟೀಕೆಗಳು ವ್ಯಕ್ತವಾದವು. ಕೂಡಲೆ ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯವು ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಸ್ಟಾರ್ ಹೋಟೆಲ್‍ಗಳಿಗೆ ಲಸಿಕೆ ಪ್ಯಾಕೇಜ್ ನೀಡಲು ಅವಕಾಶ ನೀಡಲಾಗಿಲ್ಲ ಮತ್ತು ಅಂತಹ ಯಾವುದೇ ವ್ಯವಸ್ಥೆಗಳಿದ್ದರೆ ಕೂಡಲೆ ನಿಲ್ಲಿಸಿ ಎಂದು ಸೂಚನೆ ಕೊಟ್ಟಿದೆ. ಸಾರ್ವಜನಿಕ ವಲಯದ ಪ್ರತಿರೋಧ ತಡೆಯಲು ಅಂತೂ ಸರ್ಕಾರ ಒಂದು ಹೇಳಿಕೆ ಬಿಡುಗಡೆ ಮಾಡಿತು. ಆದರೆ ಅನುಮತಿ ದೊರೆತದ್ದಾದರೂ ಹೇಗೆ..? ಈ ಬಗ್ಗೆ ತನಿಖೆ ಆಗಬೇಡವೇ..?

700 ರೂ. ಶಾಸಕರಿಗಂತೆ..

     ಮತ್ತೊಂದು ತೀರಾ ಅಸಹ್ಯ ಎನ್ನಿಸಬಹುದಾದ ಮತ್ತೊಂದು ಪ್ರಸಂಗವೊಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿಯೂ ಕಳೆದ ಎರಡು ದಿನಗಳಿಂದ ವ್ಯಾಪಕವಾಗಿ ಹರಿದಾಡುತ್ತಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಸಿಕೆ ಪಡೆಯಲು 900 ರೂ.ಗಳನ್ನು ನಿಗದಿಪಡಿಸಿದ್ದು, ಈ ಹಣದಲ್ಲಿ 700 ರೂ.ಗಳು ಶಾಸಕರಿಗೆ ಹೋಗುವ ಸಂಭಾಷಣೆ ಸಖತ್ ವೈರಲ್ ಆಗಿದೆ.

ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎನ್ನುವವರು ಲಸಿಕೆ ವಿಚಾರವಾಗಿ ಹೊಸಕೆರೆ ಹಳ್ಳಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆ ಮಾಡುತ್ತಾರೆ. ಆ ಸಿಬ್ಬಂದಿ ಜೊತೆ ಮಾತನಾಡುತ್ತಾ ನನಗೆ ಮತ್ತು ಮಗನಿಗೆ ಲಸಿಕೆ ಬೇಕಿತ್ತು ಎನ್ನುತ್ತಾರೆ. ನೋಂದಣಿ ಮಾಡಿಕೊಂಡು ಶುಲ್ಕ ಪಾವತಿಸಬೇಕಾದ ವಿಷಯದ ಬಗ್ಗೆ ಸಿಬ್ಬಂದಿ ಹೇಳುತ್ತಾರೆ. ಉಚಿತವಾಗಿ ದೊರೆಯುವ ಲಸಿಕೆಗೆ 900 ರೂ.ಗಳನ್ನು ಏಕೆ ನಿಗದಿಪಡಿಸಿದ್ದೀರಿ ಎಂಬ ಸಾಮಾಜಿಕ ಕಾರ್ಯಕರ್ತನ ಪ್ರಶ್ನೆಗೆ ಅದರಲ್ಲಿ 700 ರೂ.ಗಳು ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ಹೋಗುತ್ತದೆ. ಅವರೇ ಇಲ್ಲಿಗೆ ಲಸಿಕೆ ಕಳುಹಿಸಿಕೊಡುತ್ತಾರೆ ಎಂಬುದನ್ನು ಅಲ್ಲಿನ ಸಿಬ್ಬಂದಿ ಬಹಿರಂಗ ಪಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಾಗೂ ಮಾಧ್ಯಮಗಳಲ್ಲಿಯೂ ವರದಿಯಾಗಿರುವ ಸುದ್ದಿ.

     ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಇತರೆ ತಂಡದೊಂದಿಗೆ ಬಿಬಿಎಂಪಿ ಕೋವಿಡ್ ವಾರ್ ರೂಂನಲ್ಲಿ ನಡೆಯುತ್ತಿರುವ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆ ಎಳೆದದ್ದಾಗಿ ಹೆಮ್ಮೆಯಿಂದ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಈಗ ಅವರದ್ದೇ ತಂಡ ಲಸಿಕೆ ದಂಧೆಯಲ್ಲಿ ಸಿಲುಕಿಬಿಟ್ಟಿದೆ. ಸಮಾಜದಲ್ಲಿ ನೈತಿಕತೆಯ ಬಗ್ಗೆ ಮಾತನಾಡುವವರಿಂದಲೇ ಇಂತಹ ಹಗರಣಗಳು ಬಹಿರಂಗವಾದರೆ ಯಾರನ್ನು ನಂಬುವುದು..? ಅವರು ಮಾತನಾಡಲು ನೈತಿಕತೆಯಾದರೂ ಏನಿದೆ..?

ಪುಷ್ಟಿ ನೀಡುವ ಹೇಳಿಕೆಗಳು :

      ಲಸಿಕೆಯಲ್ಲಿ ತಾರತಮ್ಯ, ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಮಾರಿಕೊಳ್ಳುತ್ತಿರುವ ವಿಷಯದ ಬಗ್ಗೆ ವಿರೋಧ ಪಕ್ಷಗಳು ಈ ಹಿಂದಿನಿಂದಲೂ ಆರೋಪ ಮಾಡುತ್ತಲೇ ಬಂದಿವೆ. ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ದಂಧೆಯಲ್ಲಿ ಕೆಲವು ಶಾಸಕರೂ ಶಾಮೀಲಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಆರೋಪಗಳಿಗೆ ಪುಷ್ಟಿ ನೀಡುವಂತಹ ಪ್ರಸಂಗಗಳೇ ರಾಜ್ಯ ಮತ್ತು ದೇಶದ ವಿವಿಧ ಕಡೆಗಳಲ್ಲಿ ವರದಿಯಾಗುತ್ತಿರುವುದನ್ನು ನೋಡಿದರೆ ಲಸಿಕೆ ಸಾರ್ವಜನಿಕವಾಗಿ ಸಿಗುವ ಜೊತೆಯಲ್ಲಿಯೇ ಖಾಸಗಿಯಾಗಿಯೂ ಸಿಗುವಂತೆ ನೋಡಿಕೊಳ್ಳುವ, ಅಲ್ಲಿ ಕಮೀಷನ್ ಹೊಡೆಯುವ ತಂತ್ರಗಾರಿಕೆ ಇರಬಹುದೆ ಎಂಬ ಅನುಮಾನಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ.

      ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸರಿಯಾಗಿ ಲಸಿಕೆ ಸಿಗುತ್ತಿಲ್ಲ. ಕೆಲವು ಕಡೆ ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಮುಕ್ತಾಯವಾಗಿ, ಸಿಗದಿದ್ದರೆ ನಂತರ ವಾಪಸ್ ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಲಸಿಕೆ ಅಭಿಯಾನ ಹಾಗೂ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಜನಪ್ರತಿನಿಧಿಗಳು ಬೊಬ್ಬೆ ಹೊಡೆಯುವುದರಲ್ಲಿ ಏನಾದರೂ ಅರ್ಥ ಇದೆಯೇ..?

ಇನ್ನೂ ಸಿಗುತ್ತಿಲ್ಲ ಲಸಿಕೆ

      ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೆಪಕ್ಕಷ್ಟೆ ಕೋವಿಡ್ ಲಸಿಕೆ ಸರಬರಾಜಾಗುತ್ತಿದೆ. ಬಹಳಷ್ಟು ಹೋಬಳಿ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಲಸಿಕೆಗಾಗಿ ಕಾದು ವಾಪಸ್ಸಾಗುತ್ತಿರುವ ದೃಶ್ಯಗಳೇ ಕಂಡುಬರುತ್ತಿವೆ. ಇತ್ತೀಚೆಗೆ ಜನರಲ್ಲಿ ಲಸಿಕೆ ಬಗ್ಗೆ ಆಸಕ್ತಿ ಮೂಡುತ್ತಿದ್ದು, ಹಾಕಿಸಿಕೊಳ್ಳಲು ತೆರಳಿದರೂ ಲಸಿಕೆ ಲಭ್ಯವಾಗುತ್ತಿಲ್ಲ. ನಾಮಕಾವಸ್ಥೆಗೆ ಎಂಬಂತೆ ಒಂದಷ್ಟು ಡೋಸ್‍ಗಳನ್ನು ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತದೆ. 50 ರಿಂದ 100 ಜನ ಲಸಿಕೆ ಪಡೆದು ಬರುತ್ತಿದ್ದಾರೆ. ಒಂದು ಡೋಸ್‍ನಲ್ಲಿ 10 ಜನರಿಗೆ ಲಸಿಕೆ ಹಾಕಬಹುದು. ಹೀಗಾಗಿ ಹೆಚ್ಚು ಡೋಸ್ ಇಲ್ಲವಾದರೆ ದೂರದಿಂದ ಬಂದವರೂ ವಾಪಸ್ ಹೋಗಬೇಕು.

ಖಾಸಗಿ ಪರ ಹೆಚ್ಚಿದ ಪ್ರಚಾರ :

      ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳ ಖಾಸಗಿ ಆಸ್ಪತ್ರೆಗಳಲ್ಲಿ 900 ರೂ.ಗಳಿಂದ 1250 ರೂ.ಗಳತನಕ ಲಸಿಕೆ ದರ ನಿಗದಿಪಡಿಸಲಾಗಿದೆ. ಅಂತಹ ಕಡೆಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುವಂತೆ ಕೆಲವು ಸಚಿವರು, ಸಂಸದರು, ಶಾಸಕರು ಪ್ರಚಾರಕ್ಕೆ ಇಳಿದಿದ್ದಾರೆಂಬ ವದಂತಿಗಳು ಹರಿದಾಡುತ್ತಿವೆ. ಹಣ ಇರುವವರು, ಶ್ರೀಮಂತರನ್ನು ಗುರಿಯಾಗಿಸಿಕೊಂಡು ಹೀಗೆ ಲಸಿಕೆ ನೀಡುತ್ತಿರುವುದು ಒಂದು ದಂಧೆಯಾಗಿ ಮಾರ್ಪಟ್ಟಿರುವ ಆರೋಪಗಳಿವೆ. ಹೀಗಾದರೆ ಬಡವರು ಎಲ್ಲಿಗೆ ಹೋಗಬೇಕು? ಲಸಿಕೆಗಾಗಿ ಸರದಿ ಸಾಲಿನಲ್ಲಿ ಕಾಯಬೇಕೆ..? ಹೋಗಿ ಬರುವಾಗ ಪೊಲೀಸರ ಬೈಗುಳ ಅನುಭವಿಸಬೇಕೆ..? ಸಾರ್ವತ್ರಿಕವಾಗಿ ಲಸಿಕೆ ಲಭ್ಯವಾಗುವಂತೆ ಮಾಡಲು ಸಾಧ್ಯವಿಲ್ಲವೆ…?

5000 ರೂ.ಗಳವರೆಗೆ ಲಸಿಕಾ ಪ್ಯಾಕೇಜ್

      ಹೈದರಾಬಾದ್, ಮುಂಬೈನಂತಹ ದೊಡ್ಡ ನಗರಗಳಲ್ಲಿ ಇತ್ತೀಚೆಗೆ ಲಸಿಕಾ ಪ್ಯಾಕೇಜ್ ಹೆಸರಿನ ಬಹುದೊಡ್ಡ ದಂಧೆಯೇ ಆರಂಭವಾಗಿರುವ ಆರೋಪಗಳು ಕೇಳಿಬರುತ್ತಿವೆ. ಲಸಿಕೆ ಪಡೆದು ವಿಶ್ರಾಂತಿ ಪಡೆಯಲು ವಿಶೇಷ ಕೊಠಡಿ, ಅದಕ್ಕೆ ತಕ್ಕ ಉಪಾಹಾರ, ಊಟ ಇವೆಲ್ಲವೂ ಆ ಪ್ಯಾಕೇಜ್‍ನಲ್ಲಿದೆ. 2999 ರೂ.ಗಳಿಂದ 5000 ರೂ.ಗಳವರೆಗೆ ಪ್ಯಾಕೇಜ್ ಪ್ರಕಟಿಸಲಾಗಿದೆ. ಒಂದು ಕಡೆ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ಪಾರ್ಸಲ್‍ಗಷ್ಟೆ ಅವಕಾಶ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಅವುಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಇವೆಲ್ಲ ಹೇಗೆ ಸಾಧ್ಯ..?

ಲಸಿಕೆ ಪ್ಯಾಕೇಜ್: ಕೇಂದ್ರದ ಸ್ಪಷ್ಟನೆ

     ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಸ್ಟಾರ್ ಹೋಟೆಲ್‍ಗಳಲ್ಲಿ ಲಸಿಕೆ ಪ್ಯಾಕೇಜ್ ನೀಡಲಾಗುತ್ತಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ಹೋಟೆಲ್‍ಗಳು ಕೋವಿಡ್ ಲಸಿಕೆ ಪ್ಯಾಕೇಜ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂತಹ ಪ್ಯಾಕೇಜ್ ನೀಡಲು ಅವಕಾಶ ಕಲ್ಪಿಸಿಲ್ಲ. ಅಂತಹ ಎಲ್ಲ ಡ್ರೈವ್‍ಗಳನ್ನು (????) ತಕ್ಷಣವೇ ನಿಲ್ಲಿಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಅಲ್ಲದೆ, ಲಸಿಕೆಗಳನ್ನು ಮಾರಾಟ ಮಾಡಲು ಒಪ್ಪುವ ಹೋಟೆಲ್‍ಗಳು ಮತ್ತು ಖಾಸಗಿ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link