ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚಿದ ಬಾಲ್ಯ ವಿವಾಹಗಳು

 ತುಮಕೂರು : 

      ಕೊರೋನಾ ಲಾಕ್‍ಡೌನ್ ಅವಧಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಭರ್ಜರಿಯಾಗಿ ವಿವಾಹಗಳು ನಡೆದು ಹೋಗಿವೆ. ಈ ವಿವಾಹಗಳಲ್ಲಿ ಬಾಲ್ಯ ವಿವಾಹಗಳೂ ಸೇರಿಕೊಂಡಿರುವುದು ಆತಂಕಕಾರಿ ವಿಷಯ. ಲಾಕ್ ಡೌನ್ ಅವಧಿಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಇಲಾಖಾ ಅಂಕಿ ಅಂಶಗಳು ಹೇಳುತ್ತವೆ. ಇಲಾಖೆಗಳ ಗಮನಕ್ಕೆ ಬಾರದೆ, ಬಹಿರಂಗವಾಗದೆ ಗುಪ್ತ್ ಗುಪ್ತವಾಗಿ ನೆರವೇರಿರುವ ವಿವಾಹಗಳು ಎಷ್ಟಿವೆಯೋ..?

2020-21ನೇ ಸಾಲಿನಲ್ಲಿ 123 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಹಿಡಿಯಲಾಗಿತ್ತು. 7 ಪ್ರಕರಣಗಳಲ್ಲಿ ಎಫ್.ಐ.ಆರ್.ದಾಖಲಾಗಿದ್ದವು. 130 ಬಾಲ್ಯ ವಿವಾಹ ಪ್ರಕರಣಗಳು ಕಳೆz Àಸಾಲಿನಲ್ಲಿ ಜಿಲ್ಲೆಯಲ್ಲಿ ವರದಿಯಾಗಿದ್ದವು. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ 7, ಹಾಗೂ ಮೇ ತಿಂಗಳಲ್ಲಿ 9 ಪ್ರಕರಣ ಸೇರಿ ಒಟ್ಟು 16 ಪ್ರಕರಣಗಳು ವರದಿಯಾಗಿವೆ. ಲಾಕ್‍ಡೌನ್ ಅವಧಿಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಪ್ರಕರಣಗಳು ವರದಿಯಾದ ಕೂಡಲೇ ನಮ್ಮ ಇಲಾಖೆಯ ಅಧಿಕಾರಿಗಳು ಇತರೆ ಇಲಾಖೆಯವರ ಸಹಕಾರ ಪಡೆದು ತಡೆಗಟ್ಟುವ ಪ್ರಯತ್ನಗಳನ್ನು ಮುಂದುವರೆಸಲಾಗಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿರ್ದೇಶಕ ಎಸ್.ನಟರಾಜ್.
ಲಾಕ್‍ಡೌನ್ ಘೋಷಣೆಯಾಗುವುದಕ್ಕೂ ಮುನ್ನವೆ ವಿವಾಹಗಳು ನಿಗದಿಯಾಗಿದ್ದವು. ಹೇಳಿ ಕೇಳಿ ಬೇಸಿಗೆಯ ಬಿಡುವಿನ ಕಾಲವಾದ್ದರಿಂದ ಛತ್ರಗಳೆಲ್ಲ ಬುಕ್ ಆಗಿದ್ದವು. ಲಾಕ್‍ಡೌನ್ ಘೋಷಣೆಯಾಗಿ ನಿರ್ಬಂಧಗಳು ಹೆಚ್ಚಿದಂತೆಲ್ಲ ಛತ್ರಗಳಲ್ಲಿ ವಿವಾಹಗಳು ರದ್ದಾಗತೊಡಗಿದವು. ನಿಗದಿಯಾಗಿರುವ ವಿವಾಹ ಮುಂದೂಡಲು ಇಷ್ಟವಿಲ್ಲದವರು ತಮ್ಮ ತಮ್ಮ ಮನೆಯ ಬಳಿಯೇ ಸರಳವಾಗಿ ವಿವಾಹ ನೆರವೇರಿಸಿಕೊಂಡಿದ್ದಾರೆ. ಇವೆಲ್ಲ ಎರಡೂ ಕಡೆ ಒಪ್ಪಿ ಆಗಿರುವ ಸಮ್ಮತದ ವಿವಾಹಗಳು. ಇಂತಹ ವಿವಾಹಗಳಿಗೆ ಯಾರ ತಂಟೆತಕರಾರಿಲ್ಲ. ಕಷ್ಟಕಾಲದಲ್ಲಿ ಅಂತೂ ವಿವಾಹ ನೆರವೇರಿತಲ್ಲ ಎಂದು ದೂರದಿಂದಲೇ ಹರಸಿ ಹಾರೈಸಿದವರೇ ಹೆಚ್ಚು.

      ಆದರೆ ಆತಂಕ ಉಂಟಾಗಿರುವುದು ಅಪ್ರಾಪ್ತ ವಯಸ್ಸಿನ ವಿವಾಹಗಳ ಪ್ರಕರಣಗಳಲ್ಲಿ. ಲಾಕ್‍ಡೌನ್ ನಿಯಮಗಳೆ ಕೆಲವರಿಗೆ ವರದಾನವಾಗಿಬಿಟ್ಟವು. ಏಪ್ರಿಲ್ ತಿಂಗಳಿನಲ್ಲಿ 7 ಬಾಲ್ಯ ವಿವಾಹ ಪ್ರಕರಣಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಆ ವಿವಾಹಗಳನ್ನು ತಡೆ ಹಿಡಿದಿದ್ದಾರೆ. ಮೇ ತಿಂಗಳಿನಲ್ಲಿ 9 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಹಿಡಿಯಲಾಗಿದೆ.
ಕಳೆದ 2 ದಿನಗಳ ಹಿಂದೆ ಮಧುಗಿರಿಯಲ್ಲಿ ಬಾಲ್ಯ ವಿವಾಹವಾಗಿ ವಾಸ ಮಾಡಿಕೊಂಡಿದ್ದ ಅಪ್ರಾಪ್ತ ಜೋಡಿಯೊಂದು ಪತ್ತೆಯಾಗಿದ್ದು ಇಲಾಖೆಯ ಅಧಿಕಾರಿಗಳು ಈ ವಿವಾಹದ ಜಾಡು ಹಿಡಿದು ಹೊರಟಿದ್ದಾರೆ. ವಿವಾಹದ ಮಾಹಿತಿ ಬಂದಿರುವ ಪ್ರಕರಣಗಳಲ್ಲಿ ಅಧಿಕಾರಿಗಳು ಮತ್ತು ಅವರ ತಂಡ ಸ್ಥಳಕ್ಕೆ ತೆರಳಿ ಎಚ್ಚರಿಕೆ ನೀಡಿ ಬಂದಿದ್ದಾರೆ. ಮಚ್ಚಳಿಕೆ ಬರೆಸಿಕೊಂಡಿದ್ದಾರೆ. ಹೀಗಾಗಿ ಮದುವೆ ಮುಂದುವರೆಯಲು ಅವಕಾಶ ನೀಡಿಲ್ಲ. ಆದರೆ ಅಧಿಕಾರಿಗಳಿಗೆ ಗೊತ್ತಾಗದ ರೀತಿಯಲ್ಲಿ ಆಗಿರುವ ವಿವಾಹಗಳು ಎಷ್ಟೋ..?

      ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳಲ್ಲಿ ಹೆಚ್ಚು ಹೆಚ್ಚಾಗಿ ಬಾಲ್ಯ ವಿವಾಹಗಳು ನೆರವೇರುತ್ತಿರುವುದು ಕಂಡು ಬಂದಿದೆ. ಇದಕ್ಕೆ ಕಾರಣಗಳೂ ಉಂಟು. ಲಾಕ್‍ಡೌನ್ ಅವಧಿಯಲ್ಲಿ ವಿವಾಹವಾದರೆ ಹೆಚ್ಚು ಖರ್ಚು ಇರುವುದಿಲ್ಲ. ಅವರಿವರನ್ನು ಕರೆಯಬೇಕೆಂಬ ಉಸಾಬರಿ ಬೇಕಿಲ್ಲ, ಲಗ್ನಪತ್ರಿಕೆ ಪ್ರಿಂಟ್ ಮಾಡಿಸುವುದು, ಹಂಚುವ ತಾಪತ್ರಯ ಇಲ್ಲ, ಫೋಟೋ ವಿಡಿಯೋಗಳ ಖರ್ಚಿಲ್ಲ. ಇದೆಲ್ಲದಕ್ಕೂ ಮಿಗಿಲಾಗಿ ಈ ಸಮಯದಲ್ಲಿ ವಿವಾಹಗಳು ನಡೆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅಧಿಕಾರಿಗಳು ಬರುವುದಿಲ್ಲ ಎಂಬ ಜಾಣ್ಮೆಯ ಹೆಜ್ಜೆಗಳು ಬಾಲ್ಯ ವಿವಾಹಗಳಿಗೆ ಪ್ರೇರಣೆ ನೀಡಿವೆ.

      ಲಾಕ್‍ಡೌನ್ ಪರಿಣಾಮ ಹಳ್ಳಿಗಳಲ್ಲಿ ಸರಳ ವಿವಾಹಗಳು ಹೇಗೆ ನಡೆಯುತ್ತಿವೆಯೋ ಅದೇ ರೀತಿ ಇವು ಸಹ ನಡೆದು ಹೋಗಿವೆ. ಆದರೆ ತುಂಬಾ ಸರಳವಾಗಿ ವಿವಾಹ ನೆರವೇರಿಸಿಕೊಂಡಿರುವ ಪ್ರಕರಣಗಳೇ ಹೆಚ್ಚು. ಹೀಗಾಗಿ ಬಹಿರಂಗಗೊಳ್ಳಲು ಸಾಧ್ಯವಾಗಿಲ್ಲ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯ ಗ್ರಾಮ ಮಟ್ಟದಲ್ಲಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ತಂಡ ಇದೆ. ಆದರೆ ಇವರೆಲ್ಲ ಈಗ ಕೊರೊನಾ ವಾರಿಯರ್ಸ್‍ಗಳಾಗಿರುವುದರಿಂದ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಷ್ಟಕ್ಕೂ ಗ್ರಾಮ ಮಟ್ಟ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಈ ತಂಡ ನಾಮಕಾವಸ್ಥೆಗೆ ಎಂಬಂತಿದ್ದು, ಎಲ್ಲೆ ವಿವಾಹಗಳಾದರೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅಥವಾ ಮಕ್ಕಳ ಸಹಾಯವಾಣಿಗೆ ದೂರು ಹೋಗುತ್ತವೆ. ಸ್ಥಳೀಯವಾಗಿಯೇ ಕ್ರಮ ಕೈಗೊಳ್ಳಬಹುದಾದ ಅಧಿಕಾರವನ್ನು ಕೆಲವರಿಗೆ ನೀಡಿದ್ದರೂ ಸಹ ಅವರೆಲ್ಲ ಮೌನ ವಹಿಸುತ್ತಿರುವುದು, ಯಾವುದೋ ಒಂದು ಇಲಾಖೆಯ ಮೇಲೆ ಜವಾಭ್ದಾರಿ ಹೇರಿ ನಿರ್ಲಕ್ಷ್ಯ ವಹಿಸುತ್ತಿರುವುದು ಅಪ್ರಾಪ್ತ ವಿವಾಹಗಳು ಹೆಚ್ಚಲು ಕಾರಣ.

      ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಓಗಳು, ಗ್ರಾಪಂ. ಅಧ್ಯಕ್ಷರು, ಮುಖ್ಯೋಫಾಧ್ಯಾಯರು, ಕಂದಾಯ ಅಧಿಕಾರಿಗಳು, ಪೊಲೀಸರು ಇವರೆಲ್ಲರೂ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ತಂಡದ ಒಳಗೆ ಬರುತ್ತಾರೆ. ಆದರೆ ಕ್ರಮ ಜರುಗಿಸಬೇಕಾದ ವಿಷಯ ಬಂದಾಗ ಮಹಿಳಾ ಇಲಾಖೆ ಮೇಲೆ ಹೊಣೆಗಾರಿಕೆ ಹೊರಿಸುತ್ತಾರೆ. ಬಾಲ್ಯ ವಿವಾಹ ಪ್ರಕರಣಗಳ ಮಾಹಿತಿ ಗೊತ್ತಾದ ಕೂಡಲೇ ಸ್ಥಳೀಯವಾಗಿಯೇ ತಡೆಗಟ್ಟುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ಒಮ್ಮೆ ಕೇಸ್ ಬುಕ್ ಆಯಿತೆಂದರೆ ಅದರಿಂದ ಹೊರ ಬರುವುದು ತುಂಬಾ ಕಷ್ಟ. 2 ವರ್ಷಗಳವರೆಗೆ ಜೈಲು ಶಿಕ್ಷೆ, 1,00,000 ರೂ.ಗಳವರೆಗೆ ದಂಡ ತೆರಬೇಕಾದ ಕಠಿಣ ಕಾನೂನು ಇದೆ.

ಮಕ್ಕಳ ಭವಿಷ್ಯವೇ ಮೊಟಕು :

      ಶಾಲಾ ಕಾಲೇಜುಗಳಿಗೆ ರಜೆ ಇದೆ, ವಯಸ್ಸಿಗೆ ಬರುತ್ತಿರುವ ಮಕ್ಕಳನ್ನು ನೋಡಿ ಪೋಷಕರು ಗ್ರಾಮೀಣ ಪ್ರದೇಶದಲ್ಲಿ ಆತಂಕಕ್ಕೆ ಒಳಗಾಗುತ್ತಾರೆ. ಈ ಸಂದರ್ಭದಲ್ಲಿ ಅವಕಾಶ ಸಿಕ್ಕಿದರೆ ಸಾಕು ವಿವಾಹ ನೆರವೇರಿಸಲು ಮುಂದಾಗುತ್ತಾರೆ. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಬಡವರಷ್ಟೇ ಅಲ್ಲ, ಮಧ್ಯಮ ವರ್ಗದವರೂ ಸೇರಿದ್ದಾರೆ. ಜಿಲ್ಲೆಯ ಮಧುಗಿರಿ, ಪಾವಗಡ, ಗುಬ್ಬಿ, ಕುಣಿಗಲ್, ತಿಪಟೂರು ಭಾಗಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಿದ್ದು, ಇಲಾಖೆಯ ಅಧಿಕಾರಿಗಳು ಸಾಕಷ್ಟು ವಿವಾಹಗಳನ್ನು ತಡೆದಿದ್ದಾರೆ. 18 ವರ್ಷ ತುಂಬುವುದಕ್ಕೆ ಮುನ್ನವೆ ವಿವಾಹ ಮಾಡಿದರೆ ಅವರ ಶಿಕ್ಷಣದ ಜೊತೆಗೆ ಭವಿಷ್ಯವೇ ಮೊಟಕಾಗುತ್ತದೆ.
-ಎಸ್.ನಟರಾಜ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ

      ನಮ್ಮ ಕಾನೂನಿನ ಪ್ರಕಾರ ಗಂಡಿಗೆ 21 ಹಾಗೂ ಹೆಣ್ಣಿಗೆ 18 ವರ್ಷ ತುಂಬಿದರೆ ಮಾತ್ರ ವಿವಾಹವಾಗಲು ಅವಕಾಶವಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಬೆಳವಣಿಗೆ ದೃಷ್ಟಿಯಿಂದ ಬಾಲ್ಯ ವಿವಾಹ ನಿಷಿದ್ಧ. ಈ ಕಾಯ್ದೆಯನ್ನು ಕೋವಿಡ್ ಸಂದರ್ಭದಲ್ಲಿ ದುರುಪಯೋಗಪಡಿಸಿಕೊಂಡು ಯಾರಿಗೂ ಗೊತ್ತಾಗುವುದಿಲ್ಲವೆಂದು ದುಸ್ಸಾಹಸಕ್ಕೆ ಮುಂದಾದರೆ ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ.

-ವೈ.ಎಸ್.ಪಾಟೀಲ್, ಜಿಲ್ಲಾಧಿಕಾರಿಗಳು, ತುಮಕೂರು.

ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತದೆ

      ಬಾಲ್ಯ ವಿವಾಹ ಪ್ರಕರಣಗಳಲ್ಲಿ ದೂರು ದಾಖಲಾದರೆ ಅಪ್ರಾಪ್ತರನ್ನು ಬಾಲಮಂದಿರಕ್ಕೆ ಕಳುಹಿಸಿ ರಕ್ಷಣೆ ನೀಡುವ ವ್ಯವಸ್ಥೆ ಇದೆ. ಈಗ ಕೋವಿಡ್ ಇರುವ ಕಾರಣ ಬಾಲ ಮಂದಿರಕ್ಕೆ ಅಂತಹ ಪ್ರಕರಣಗಳನ್ನು ತರುತ್ತಿಲ್ಲ. ಪೋಷಕರಿಗೆ ಎಚ್ಚರಿಕೆ ನೀಡಿ ವಿವಾಹ ನಡೆಯದಂತೆ ತಡೆಗಟ್ಟಿ ಅವರ ಕುಟುಂಬಗಳಲ್ಲಿಯೇ ಅಪ್ರಾಪ್ತರನ್ನು ಬಿಟ್ಟು ಬರಲಾಗುತ್ತಿದೆ. ಪೋಷಕರು ಮುಚ್ಚಳಿಕೆ ನಿಬಂಧನೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.

-ವಾಸಂತಿ ಉಪ್ಪಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ.

ಲಾಕ್‍ಡೌನ್ ಸಮಯದಲ್ಲೇ ಹೆಚ್ಚು

      ಬಾಲ್ಯ ವಿವಾಹ ಪ್ರಕರಣಗಳು ಲಾಕ್‍ಡೌನ್ ಸಮಯದಲ್ಲೇ ಹೆಚ್ಚಾಗಿವೆ. ನಮ್ಮ ಮಕ್ಕಳ ಸಹಾಯವಾಣಿಗೆ ಬಂದಿರುವ ಒಟ್ಟು 27 ಕರೆಗಳ ಪೈಕಿ 19 ಬಾಲ್ಯ ವಿವಾಹ ಪ್ರಯತ್ನಗಳನ್ನು ಇಲಾಖಾಧಿಕಾರಿಗಳ ಸಹಯೋಗದೊಂದಿಗೆ ತಡೆಗಟ್ಟಲಾಗಿದೆ. ಈ ತಿಂಗಳಿನಲ್ಲಿ ಶಿರಾ ಮತ್ತು ಮಧುಗಿರಿ ಭಾಗದಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಬಾಲ್ಯ ವಿವಾಹದ ಯಾವುದೇ ಪ್ರಕರಣಗಳು ವರದಿಯಾದ ಕೂಡಲೇ ನಮ್ಮ ತಂಡವು ಮಕ್ಕಳ ರಕ್ಷಣಾ ಘಟಕ, ಮಹಿಳಾ ಇಲಾಖೆಯೊಂದಿಗೆ ಸಹಕರಿಸಿ ರಕ್ಷಣೆಗೆ ಪ್ರಯತ್ನಿಸುತ್ತಿದೆ. 1098 ಮಕ್ಕಳ ಸಹಾಯವಾಣಿಗೆ ಹೋಗುವ ಕರೆಗಳಲ್ಲಿ ತುಮಕೂರು ಜಿಲ್ಲೆಗೆ ಸಂಬಂದಪಟ್ಟ ಪ್ರಕರಣಗಳನ್ನು ನಮಗೆ ಮಾಹಿತಿ ರವಾನಿಸಲಾಗುತ್ತದೆ.

-ನರಸಿಂಹಮೂರ್ತಿ, ನಿರ್ದೇಶಕರು, ಅಭಿವೃದ್ಧಿ ಸಂಸ್ಥೆ (ಮಕ್ಕಳ ಸಹಾಯವಾಣಿ ಅನುಷ್ಠಾನ ಸಂಸ್ಥೆ)

– ಸಾ.ಚಿ. ರಾಜಕುಮಾರ

Recent Articles

spot_img

Related Stories

Share via
Copy link