5 ದಿನದಲ್ಲಿ ಬುಗುಡನಹಳ್ಳಿ ಕೆರೆ ಅರ್ಧದಷ್ಟು ತುಂಬುವ ವಿಶ್ವಾಸ!!

 ತುಮಕೂರು : 

      ಗೊರೂರು ಜಲಾಶಯದಿಂದ ಹೇಮಾವತಿ ನೀರು ಹರಿದು ಬರುತ್ತಿದ್ದು, ಬುಗುಡನಹಳ್ಳಿ ಕೆರೆ ತಲುಪಿದೆ. ಈ ಹಿನ್ನೆಲೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಮಹಾನಗರ ಪಾಲಿಕೆ ಮೇಯರ್ ಮತ್ತು ಸದಸ್ಯರೊಂದಿಗೆ ಬೆಳಗ್ಗೆ ಬುಗುಡನಹಳ್ಳಿ ಕೆರೆಕೋಡಿ ವೀಕ್ಷಿಸಿದರು.

ಕೋವಿಡ್ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು, ಈ ವಿಷಮ ಪರಿಸ್ಥಿತಿಯಲ್ಲಿ ವಾಟರ್ ಟ್ಯಾಂಕರ್ ಮೂಲಕ ನೀರನ್ನು ವಾರ್ಡ್‍ಗಳಿಗೆ ನೀಡುವುದು ಮತ್ತಷ್ಟು ಕಷ್ಟ ಸಾಧ್ಯವೇ ಆಗಿತ್ತು. ಇನ್ನು ಕೆಲವು ದಿನಗಳು ಇದೇ ಪರಿಸ್ಥಿತಿ ಮುಂದುವರೆದಿದ್ದರೆ ತುಮಕೂರು ನಗರಕ್ಕೆ ನೀರು ಹರಿಸುವುದು ಕಷ್ಟಕರವಾಗಿತ್ತು. ಈ ಸಮಯದಲ್ಲಿ ನೀರು ಹರಿದಿರುವುದು ಹಲವು ಸಂಕಷ್ಟಗಳನ್ನು ಪರಿಹರಿಸಿದಂತಾಗಿದೆ.

      ತುಮಕೂರು ನಗರದ ನೀರಿನ ಸಮಸ್ಯೆ ಬಿಗಡಾಯಿಸುವ ಸಂಬಂಧ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಸಚಿವರುಗಳ ಗಮನ ಸೆಳೆದಿದ್ದರು. ನಮ್ಮ ಈ ಕಷ್ಟವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿದ ತಕ್ಷಣವೇ ತುಮಕೂರು ನಗರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಗೂರೂರು ಜಲಶಾಯದಿಂದ ಬುಗುಡನಹಳ್ಳಿ ಕೆರೆಗೆ ನೀರನ್ನು ಹರಿಸಿದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರಿಗೆ ತುಮಕೂರು ನಗರದ ಜನತೆಯ ಪರವಾಗಿ ಹಾಗೂ ತುಮಕೂರು ಮಹಾನಗರಪಾಲಿಕೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದ್ದಾರೆ.

      ಬುಗುಡನಹಳ್ಳಿ ಕೆರೆಗೆ ನೀರು ಹರಿಸಲು ಸಹಕರಸಿದ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಗೋಪಾಲಯ್ಯ ಜಿ.ಎಸ್. ಬಸವರಾಜ್ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈಪ್ರಕಾಶ್ ಅವರಿಗೆ ಶಾಸಕರು ಅಭಿನಂದನೆ ತಿಳಿಸಿದರು.

      ತುಮಕೂರು ನಗರ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ ಮಾತನಾಡಿ ಬುಗುಡನಹಳ್ಳಿಗೆ ನೀರು ಹರಿಸುತ್ತಿರುವುದು ತುಂಬ ಸಂತಸದ ವಿಷಯ. ಒಂದು ರೀತಿಯಲ್ಲಿ ತುಮಕೂರು ನಗರದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

     ತುಮಕೂರು ಮಹಾನಗರಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ ಶಾಸಕರು ಹಾಗೂ ಪಾಲಿಕೆ ಸದಸ್ಯರು ಒಟ್ಟಾಗಿ ತುಮಕೂರು ನಗರದ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಶ್ರಮಿಸುತ್ತೇವೆ ಎಂದರು.

      ಈ ಸಂದರ್ಭದಲ್ಲಿ ತುಮಕೂರು ಮಹಾನಗರಪಾಲಿಕೆಯ ಮೇಯರ್ ಬಿ.ಜಿ ಕೃಷ್ಣಪ್ಪ, ಉಪಮೇಯರ್ ನಾಜೀಮಾಬಿ, ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಯಾಜ್ ಅಹಮದ್, ಪಾಲಿಕೆ ಸದಸ್ಯರಾದ ನಳಿನ ಇಂದ್ರಕುಮಾರ್, ಮಂಜುನಾಥ್, ಲಕ್ಷ್ಮೀನರಸಿಂಹರಾಜು, ದೀಪಶ್ರೀ ಮಹೇಶ್‍ಬಾಬು, ಗಿರಿಜಾ ಧನಿಯಾಕುಮಾರ್, ರೂಪಶ್ರೀ ಶೆಟ್ಟಳ್ಳಯ್ಯ, ಶಿವರಾಂ, ಮಂಜುಳ ಆದರ್ಶ್, ಚಂದ್ರಕಲಾ ಪುಟ್ಟರಾಜು, ವಿಷ್ಣುವರ್ಧನ್, ಸಿ.ಎನ್.ರಮೇಶ್, ನಾಮಿನಿ ಸದಸ್ಯರಾದ ಮೋಹನ್, ಶಿವರಾಜು, ವಿಶ್ವನಾಥ್, ತ್ಯಾಗರಾಜಸ್ವಾಮಿ, ನರಸಿಂಹಸ್ವಾಮಿ, ಪಾಲಿಕೆ ಆಯುಕ್ತರಾದ ರೇಣುಕಾ, ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.

      ಪ್ರಸ್ತುತ ಬುಗುಡನಹಳ್ಳಿ ಕೆರೆಗೆ 400ಕ್ಕೂ ಹೆಚ್ಚು ಪ್ರಮಾಣದ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದ ಭಾಗದಲ್ಲಿ ಮಳೆಯಾಗಿರುವುದರಿಂದ ಆ ಭಾಗಕ್ಕೆ ನೀರಿನ ಸಮಸ್ಯೆ ಇಲ್ಲ. ಇದೇ ಪ್ರಮಾಣದ ನೀರು ಹರಿದು ಬಂದರೆ ಇನ್ನು 5 ದಿನಗಳಲ್ಲಿ ಕೆರೆ ಅರ್ಧ ಭಾಗ ತುಂಬುತ್ತದೆ. ಹೇಮಾವತಿ ನಾಲಾ ವಲಯ 900 ಕ್ಯೂಸೆಕ್ಸ್ ನೀರು ಹರಿಯುವ ಸಾಮಥ್ರ್ಯವಿದ್ದು, ಅಷ್ಟು ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ನಾಲೆಯ ನೀರು ಹರಿದು ಬರುವ ಭಾಗದಲ್ಲಿ ಯಾವುದೇ ಅಡೆತಡೆ-ಹರಿವು ಇಲ್ಲದೆ ಹೋದರೆ ಬೇಗನೆ ಕೆರೆಗೆ ನೀರು ತುಂಬಲಿದೆ.

-ಜಿ.ಬಿ.ಜ್ಯೋತಿಗಣೇಶ್, ಶಾಸಕರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link