ತುಮಕೂರು : ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ತಲುಪಲಿ – ಡಿಸಿ

 ತುಮಕೂರು :

      ಕೋವಿಡ್ ಎರಡನೇ ಅಲೆ ಇಡೀ ರಾಜ್ಯವನ್ನೆ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದ ಅಸಂಘಟಿತ ವಲಯದ ಅನೇಕ ಕಾರ್ಮಿಕರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಇದನ್ನು ಮನಗಂಡ ಸರ್ಕಾರ ಅಸಂಘಟಿತ ಕಾರ್ಮಿಕರಿಗಾಗಿ ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜ್ ಅನ್ನು ವಂಚನೆಯಾಗದಂತೆ ಸಕಾಲಕ್ಕೆ ಅರ್ಹರಿಗೆ ವಿತರಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

      ಅವರಿಂದು ತಮ್ಮ ಕಚೇರಿಯಿಂದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ, ಕಾರ್ಮಿಕ ಮುಖಂಡರು, ಅಸಂಘಟಿತ ಕಾರ್ಮಿಕ ಮುಖಂಡರುಗಳೊಂದಿಗೆ ಜೂಮ್ ಸಭೆ ನಡೆಸಿ ಮಾತನಾಡುತ್ತಾ, ಜಿಲ್ಲೆಯಲ್ಲಿರುವ 11 ಅಸಂಘಟಿತ ಕಾರ್ಮಿಕ ವಲಯದ ಫಲಾನುಭವಿಗಳಿಗೆ ಕಡ್ಡಾಯವಾಗಿ ಈ ಕೋವಿಡ್ ಪರಿಹಾರ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ಪರಿಹಾರ ಸೌಲಭ್ಯ ಕುರಿತು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು, ಅರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ಇದುವರೆಗೂ ನೋಂದಣಿಯಾಗದೇ ಇರುವ ಅರ್ಹ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳುವಂತೆ ಕ್ರಮ ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಜಿಲ್ಲೆಯಲ್ಲಿರುವ ಅಸಂಘಟಿತ 11 ವಲಯಗಳ ಕಾರ್ಮಿಕರು ಸರ್ಕಾರದ ಈ ಪರಿಹಾರಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳ ಬೇಕೆಂದು ತಿಳಿಸಿದರು. ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ, ಅಲ್ಪಸಂಖ್ಯಾತ ಕಲ್ಯಣ ಇಲಾಖೆ ಜಿಲ್ಲಾ ಅಧಿಕಾರಿ ಶಬ್ಬಿರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಸೇರಿದಂತೆ ಎ.ಪಿ.ಎಂ.ಸಿ.ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರುಗಳು, ಕಾರ್ಮಿಕ ಮುಖಂಡರುಗಳು ಉಪಸ್ಥಿತರಿದ್ದರು.

ಉದ್ಯೋಗ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಸ್ಪಂದಿಸಬೇಕು :

      ಉದ್ಯೋಗ ಪ್ರಮಾಣ ಪತ್ರ ನೀಡುವಲ್ಲಿ ಇಲಾಖೆಗಳು ಸಹಕರಿಸುತ್ತಿಲ್ಲ. ಈ ಗೊಂದಲವನ್ನು ಪರಿಹಾರ ಮಾಡಬೇಕು ಎಂಬ ಕಾರ್ಮಿಕ ಮುಖಂಡರ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಹಿಂದೆ ಕೋವಿಡ್ ಪರಿಹಾರ ಪಡೆಯುವಾಗ ಸಂಬಂಧಿಸಿದ ಇಲಾಖೆಗಳು ನೀಡಿದ್ದ ಉದ್ಯೋಗ ಪ್ರಮಾಣ ಪತ್ರವನ್ನು ಈ ಬಾರಿಯೂ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಫಲಾನುಭವಿಗಳು, ಕಾರ್ಮಿಕ ಮುಖಂಡರುಗಳು ಸಹಾಯ ಕೋರಿ ಬಂದಾಗ ಕೂಡಲೇ ಸ್ಪಂದಿಸಿ ಉದ್ಯೋಗ ಪ್ರಮಾಣ ನೀಡುವ ವ್ಯವಸ್ಥೆಯಾಗಬೇಕು ಎಂದು ಅವರು ಸೂಚಿಸಿದರು.

ನಾಗರಿಕ ಸೇವಾ ಕೇಂದ್ರದಲ್ಲಿ ಹೆಚ್ಚು ಶುಲ್ಕ ಕೇಳಿದರೆ ಕ್ರಮ :

      ಕಾರ್ಮಿಕರಿಗೆ ನಾಗರಿಕ ಸೇವಾ ಕೇಂದ್ರಗಳಲ್ಲಿ ಪ್ರಮಾಣ ಪತ್ರಗಳನ್ನು ನೀಡುವಾಗ ದುಪ್ಪಟ್ಟು ಹಣ ಪಡೆಯದೆ ನಿಗದಿತ ಸೇವಾ ಶುಲ್ಕ ಮಾತ್ರ ಪಡೆಯಬೇಕು. ದುಪ್ಪಟ್ಟು ಹಣ ಪಡೆಯುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಸಂಘಟಿತ ವಲಯದ ಕಾರ್ಮಿಕರು ಯಾವುದೇ ಆಮಿಷಕ್ಕೆ ಒಳಗಾಗದೇ ದಲ್ಲಾಳಿಗಳ ನೆರವು ಪಡೆಯಬಾರದು. ಸರ್ಕಾರದ ನಿರ್ದೇಶನದಂತೆ ಸೇವಾ ಸಿಂಧು ಪೋರ್ಟಲ್ (http://sevasindhu.karnataka.gov.in)ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು. ತಾಲ್ಲೂಕು ಮಟ್ಟದ ಕಾರ್ಮಿಕ ನೀರಿಕ್ಷಕರು ಆಯಾ ತಾಲ್ಲೂಕಿನ ನಾಗರಿಕ ಸೇವಾ ಕೇಂದ್ರಗಳ ಮೇಲೆ ನಿಗಾವಹಿಸುವುದಲ್ಲದೆ ಇಲಾಖೆಯ ಸೌಲಭ್ಯಗಳ ಕುರಿತು ಕಾರ್ಮಿಕರಿಗೆ ಅರಿವು ಮೂಡಿಸಬೇಕು ಎಂದರು.

ಜು.31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ :

      ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾμï ಎಂ. ಆಲದಕಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಈವರೆಗೂ 93692 ಕಟ್ಟಡ ಕಾರ್ಮಿಕರು ಹಾಗೂ 11 ಅಸಂಘಟಿತ ವಲಯದ ಸುಮಾರು 8770 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಸರ್ಕಾರದ ಆದೇಶದನ್ವಯ ಜೂನ್ 7ರಿಂದ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಸಂಘಟಿತ 11 ವಲಯದ ಕಾರ್ಮಿಕರು ಸೇವಾಸಿಂಧು ಪೋರ್ಟಲ್‍ನಲ್ಲಿ ಜುಲೈ 31ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap