ತುಮಕೂರು :
ಜೂ.7ರಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಶುರುವಾಗಿದ್ದು, ಮತ್ತೆ ನೋಂದಣಿ ಕಚೇರಿಯತ್ತ ಜನ ಆಗಮಿಸಲಾರಂಭಿಸಿದ್ದಾರೆ.
ಆಸ್ತಿ ಮಾರಾಟ ನೋಂದಣಿ, ಇಸಿ, ಅಗ್ರಿಮೆಂಟ್, ಟ್ರಸ್ಟ್, ಮದುವೆ ನೋಂದಣಿ ಮತ್ತಿತರ ನೋಂದಣಿ ಕಾರ್ಯಕ್ಕೆ ಜನತೆ ಬರಲಾರಂಭಿಸಿದ್ದು, ಜನರನ್ನು ಕಚೇರಿಯೊಳಕ್ಕೆ ಬಿಡದೆ ಕಂಪ್ಯೂಟರ್ ಆಪರೇಟರ್‍ಗಳನ್ನೇ ಕಿಟಕಿ ಮುಂಭಾಗ ಸಾಲಾಗಿ ಕೂರಿಸಿ, ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಿ ಜನ ಕಿಟಕಿಯ ಮೂಲಕವೇ ನೋಂದಣಿ ಪ್ರಕ್ರಿಯೆ ಪೂರೈಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಸ್ಟ್ಯಾಂಪ್‍ವೆಂಡರ್‍ಗಳು ಸಹ ಹೊರಗಡೆ ಪತ್ರ ತಯಾರಿ ಮೊದಲಾದ ತಮ್ಮ ಕಾರ್ಯನಿರ್ವಹಣೆ ಆರಂಭಿಸಿದ್ದು, ಕಳೆದ ಮೇ 7ರಿಂದ ಜೂ.7ರವರೆಗೆ ಒಂದು ತಿಂಗಳ ಕಾಲ ನೋಂದಣಿ ಕಚೇರಿ ಸ್ಥಗಿತದಿಂದ ಉಂಟಾಗಿದ್ದ ಕೋಟ್ಯಾಂತರ ರೂ. ಬೊಕ್ಕಸ ನಷ್ಟವನ್ನು ಮತ್ತೆ ತುಂಬುವ ಪ್ರಕ್ರಿಯೆ ಶುರುವಾಗಿದೆ.
ತುಮಕೂರು ಉಪನೋಂದಣಿ ಕಚೇರಿಯಿಂದ ಸೋಮವಾರ 39 ನೋಂದಣಿ ಪ್ರಕ್ರಿಯೆಯಿಂದ 11,40,870 ರೂ. ಆದಾಯ ಬಂದಿದ್ದು, ಮಂಗಳವಾರ 20 ನೋಂದಣಿಯಿಂದ 3,76,205 ರೂ. ಆದಾಯ ಬಂದಿದೆ. ಅಂತೆಯೇ ಬುಧವಾರ 44 ಡಾಕ್ಯುಮೆಂಟ್ ರಿಜಿಸ್ಟರ್ ಆಗಿದ್ದು 12,97,045 ಆದಾಯ ಸಂಗ್ರಹವಾಗಿದೆ, ಒಂದು ವಿವಾಹ ನೋಂದಣಿಯೂ ನಡೆದಿದೆ. ಲಾಕ್‍ಡೌನ್ ಪೂರ್ವ ಸಾಮಾನ್ಯ ದಿನಗಳಲ್ಲಿ ತುಮಕೂರಿನಲ್ಲಿ ದಿನವೊಂದಕ್ಕೆ ಸರಾಸರಿ 30 ರಿಂದ 50 ಲಕ್ಷದವರೆಗೆ ನೋಂದಣಿ ರಾಜಸ್ವ ಸಂಗ್ರಹವಾಗುತ್ತಿತ್ತು. ಏಪ್ರಿಲ್ 26ರಂದು ಆ ತಿಂಗಳಲ್ಲೇ ಗರಿಷ್ಠ 64 ನೋಂದಣಿಯಾಗಿ 52.58 ಲಕ್ಷ ಆದಾಯ ಸರಕಾರಕ್ಕೆ ಸಂದಾಯವಾಗಿತ್ತು. 2020-21ನೇ ಸಾಲಿನಲ್ಲಿ ಜಿಲ್ಲೆಯ 166 ಕೋಟಿ ಟಾರ್ಗೆಟ್ ನೀಡಲಾಗಿದ್ದು, ಅದಕ್ಕೂ ಮೀರಿ ಆದಾಯ ಸಂಗ್ರಹವಾಗಿದೆ. ಈ ಬಾರಿ ಇನ್ನೂ ಟಾರ್ಗೆಟ್ ನಿಗದಿಯಾಗಿಲ್ಲ ಎಂದು ಹಿರಿಯ ಉಪನೋಂದಣಾಧಿಕಾರಿ ಸುಭಾಷ್ ಹೊಸಹಳ್ಳಿ ಉಪನೋಂದಣಾಧಿಕಾರಿಗಳಾದ ಎಸ್.ಎಂ. ಪ್ರಗತಿ ಹಾಗೂ ಧನಲಕ್ಷ್ಮೀ ಪ್ರಜಾಪ್ರಗತಿಗೆ ಮಾಹಿತಿ ನೀಡಿದ್ದಾರೆ.
2019-20ನೇ ಸಾಲಿಗೆ ಜಿಲ್ಲೆಯಲ್ಲಿ ನೋಂದಣಿಯಿಂದ ಸರಕಾರಕ್ಕೆ ಬಂದ ಆದಾಯ
ಒಂದು ತಿಂಗಳು ಮುಚ್ಚಿದ್ದ ಉಪನೋಂದಣಾಧಿಕಾರಿ ಕಚೇರಿ ಜೂ.7ರಿಂದ ಪ್ರಾರಂಭವಾಗಿದ್ದು, ಸೋಮವಾರದಿಂದ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲೇ ಆರಂಭವಾಗಿದೆ. ಕಚೇರಿಯೊಳಕ್ಕೆ ಜನ ಅಧಿಕ ಸಂಖ್ಯೆಯಲ್ಲಿ ಬರುವುದನ್ನು ನಿಯಂತ್ರಿಸಲು ಕಿಟಕಿ ಸಾಲಿಗೆ ಕಂಪ್ಯೂಟರ್ ಆಪರೇಟರ್‍ಗಳನ್ನು ಕೂರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಬೇಕೆಂದು ಸೂಚಿಸಲಾಗಿದೆ. ಲಾಕ್‍ಡೌನ್ ಇರುವ ಕಾರಣಕ್ಕೆ ಸಾಮಾನ್ಯ ದಿನಗಳಂತೆ ನೋಂದಣಿ ಪ್ರಕ್ರಿಯೆಗೆ ಹೆಚ್ಚು ಜನ ಬರುತ್ತಿಲ್ಲ.
-ಎಸ್.ಎಂ.ಪ್ರಗತಿ, ಉಪನೋಂದಣಾಧಿಕಾರಿ.